ಶನಿವಾರ, ಆಗಸ್ಟ್ 13, 2022
26 °C
ತೈಲ ಹೊರತೆಗೆಯಲು ಸ್ಪಂದಿಸದ ಹಡಗಿನ ಮಾಲೀಕ * ಆತಂಕದಲ್ಲಿ ಮೀನುಗಾರರು

ಮಂಗಳೂರು: ಮುಳುಗಿದ ಹಡಗಿನಿಂದ ತೈಲ ಸೋರಿಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಉಳ್ಳಾಲ ಬಟ್ಟಪ್ಪಾಡಿ ಸಮೀಪ ಅರಬ್ಬೀ ಸಮುದ್ರದಲ್ಲಿ ಮುಳುಗಿರುವ ಎಂ.ವಿ. ಪ್ರಿನ್ಸೆಸ್‌ ಮಿರಾಲ್‌ ಹಡಗಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆ ಆಗಿರುವ ಆತಂಕ ಎದುರಾಗಿದೆ. ಈ ಬೆಳವಣಿಗೆಯಿಂದ ಜಿಲ್ಲೆಯ ಮೀನುಗಾರು ಕಳವಳಗೊಂಡಿದ್ದಾರೆ.

ಉಳ್ಳಾಲ, ಸೋಮೇಶ್ವರ, ಪಣಂಬೂರು, ಸುರತ್ಕಲ್‌ ಪ್ರದೇಶಗಳಲ್ಲಿ ಅರಬ್ಬೀ ಸಮುದ್ರದಲ್ಲಿ ಹಾಗೂ ಕಡಲ ಕಿನಾರೆಗಳಲ್ಲಿ ತೈಲದ ಅಂಶಗಳು ಕಾಣಿಸಿಕೊಂಡಿವೆ. ಕಪ್ಪು ಜಿಡ್ಡಿನ ಪದಾರ್ಥ ಕಾಲುಗಳಿಗೆ ಅಂಟುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

'ಹಡಗಿನ ಡರ್ಟಿ ವಾಟರ್ ಟ್ಯಾಂಕಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ವಲಯದ ಸುತ್ತಮುತ್ತಲಿನ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

‘ಹಡಗಿನಿಂದ ತೈಲ ಸೋರಿಕೆ ಆಗಿಲ್ಲ. ಆತಂಕ ಪಡುವ ಸ್ಥಿತಿ ಇಲ್ಲ’ ಎಂದು ಜಿಲ್ಲಾಡಳಿತ ಹೇಳುತ್ತಿದೆ.

‘ಪ್ರಿನ್ಸೆಸ್ ಮಿರಾಲ್‌ ಹಡಗಿನಿಂದ ತೈಲ ಸೋರಿಕೆ ಆಗಿಲ್ಲ. ಒಂದು ವೇಳೆ ತೈಲ ಸೋರಿಕೆ ಆದರೆ ಅದನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿರಬೇಕು ಎಂಬ ಉದ್ದೇಶದಿಂದ ಅಣಕು ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ’ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಗಳು ತಿಳಿಸಿವೆ. 

ಹಡಗಿನಲ್ಲಿ ಒಟ್ಟು 220 ಟನ್‌ಗಳಷ್ಟು ತೈಲ ಇದೆ. ಇದನ್ನು ಹೊರಗೆ ತೆಗೆಯುವುದಕ್ಕೆ ಹಡಗಿನ ಮಾಲೀಕರು ಜಿಲ್ಲಾಡಳಿತ ಹಾಗೂ ಕರಾವಳಿ ರಕ್ಷಣಾ ಪಡೆಯ ಜೊತೆ ಸಹಕರಿಸುತ್ತಿಲ್ಲ. ತೈಲ ಸೋರಿಕೆಯಿಂದ ಹೆಚ್ಚಿನ ಅಪಾಯ ಸಂಭವಿಸದಂತೆ ನಿಗಾ ಇಡಲು ಗುಜರಾತಿನ ಪೋರಬಂದರ್‌ನಿಂದ ಸಮುದ್ರ ಮಾಲಿನ್ಯ ನಿಯಂತ್ರಣ ನೌಕೆ ‘ಸಮುದ್ರ ಪಾವಕ್‌’ ಮಂಗಳೂರಿಗೆ ತಲುಪಿದೆ. ಆದರೆ, ಹಡಗು ಮುಳುಗಡೆ ಆಗಿರುವ ಪ್ರದೇಶವು ಕಡಲ ಕಿನಾರೆಗೆ ಹತ್ತಿರದಲ್ಲಿದೆ. ಹಾಗಾಗಿ  ಸಮುದ್ರ ಪಾವಕ್‌ ಕೂಡಾ ಮುಳುಗಡೆ ಆದ ಸ್ಥಳವನ್ನು ತಲುಪುವುದಕ್ಕೂ ಸಮಸ್ಯೆ ಆಗುತ್ತಿದೆ.

ಮುಳುಗಡೆಯಾಗಿರುವ ಹಡಗಿನ ಸುತ್ತಲೂ ತೈಲ ಹೀರಿಕೊಳ್ಳುವುದಕ್ಕೆ ತೇಲುವ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಸೋರಿಕೆಯಾದ ತೈಲವು ಅರಬ್ಬೀ ಸಮುದ್ರವನ್ನು ಸೇರುವ ನೇತ್ರಾವತಿ ಹಾಗೂ ಫಲ್ಗುಣಿ ನದಿಗಳಿಗೆ ಸೇರುವುದನ್ನು ತಪ‍್ಪಿಸಲು ಅಳಿವೆಬಾಗಿಲಿನಲ್ಲಿ ತೇಲುವ ಶೋಧಕಗಳನ್ನು ಅಳವಡಿಸಲಾಗಿದೆ.

‘ಪ್ರಿನ್ಸೆಸ್‌ ಮಿರಾಲ್‌ ಹಡಗಿನಿಂದ ತೈಲ ಸೋರಿಕೆ ಮೇಲೆ  ಕರಾವಳಿ ರಕ್ಷಣಾ ಪಡೆಯ ಹಡಗುಗಳು ಹಾಗೂ ಮೂರು ವಿಮಾನಗಳು ನಿಗಾ ವಹಿಸಿವೆ. ತೈಲ ಸೋರಿಕೆ ಉಂಟಾದರೆ, ಅದನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲಾಡಳಿತದ ಸಿಬ್ಬಂದಿಗೂ ತರಬೇತಿ ನೀಡಿದ್ದೇವೆ’ ಎಂದು ಕರಾವಳಿ ರಕ್ಷಣಾ ಪಡೆಯ ಡಿಐಜಿ ವೆಂಕಟೇಶ್‌ ‘ಪ್ರಜಾವಾಣಿ‘ಗೆ ತಿಳಿಸಿದರು. 

 

’ತೈಲ ಸೋರಿಕೆ ಆದರೆ ಮೀನುಗಾರಿಕೆಗೂ ಹಾನಿ‘

‘ಪ್ರಿನ್ಸೆಸ್‌ ಮಿರಾಲ್‌ ಹಡಗಿನಿಂದ ತೈಲ ಸೋರಿಕೆ ಅದರೆ ಖಂಡಿತಾ ಅದರಿಂದ ಜಿಲ್ಲೆಯಲ್ಲಿ ಮೀನುಗಾರಿಕೆ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರ್ಸೀನ್‌ ಬೋಟ್‌ ಹಾಗೂ ಟ್ರಾಲ್‌ ಬೋಡ್‌ಗಳು ಸೇರಿ 1300ಕ್ಕೂ ಅಧಿಕ ದೋಣಿಗಳು ಮೀನುಗಾರಿಕೆಯಲ್ಲಿ ತೊಡಗಿವೆ. ಇವರೆಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಸದ್ಯಕ್ಕೆ ತೈಲ ಸೋರಿಕೆ ಆಗಿಲ್ಲ. ಒಂದು ವೇಳೆ ತೈಲ ಸೋರಿಕೆ ಆದರೂ ಅದರಿಂದ ಅಪಾಯ ಆಗುವುದನ್ನು ತಡೆಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಮೀನುಗಾರರೂ ಈ ಭರವಸೆಯನ್ನೇ ನಂಬಿಕೊಂಡಿದ್ದಾರೆ’ ಎಂದರು.

ಮುಳುಗಡೆಯಾದ ಹಡಗಿನಿಂದ ತೈಲ ಸೋರಿಕೆ ಆಗಿಲ್ಲ. ಹಡಗಿನ ಮಾಲೀಕರು ತೈಲ ತೆರವುಗೊಳಿಸುವ ಕಾರ್ಯಕ್ಕೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ
-ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು