ಗುರುವಾರ , ಸೆಪ್ಟೆಂಬರ್ 23, 2021
26 °C
ಅಂತರ, ಮಾಸ್ಕ್‌ ಧರಿಸುವುದನ್ನು ಮರೆತಿದ್ದ ನೂರಾರು ಜನ ಬೆಂಬಲಿಗರು

ಆರಗ ಜ್ಞಾನೇಂದ್ರ ಕಚೇರಿ ಪೂಜೆ: ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಉಲ್ಲಂಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧಿಕೃತ ಕಚೇರಿಯ ಪೂಜೆ ವಿಕಾಸಸೌಧದಲ್ಲಿ ಶುಕ್ರವಾರ ನಡೆದಿದ್ದು, ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಲೆಕ್ಕಿಸದೇ  ನೂರಾರು ಮಂದಿ ಪಾಲ್ಗೊಂಡಿದ್ದರು.

ಹೆಚ್ಚಿನವರು ದೈಹಿಕ ಅಂತರ, ಮಾಸ್ಕ್‌ ಧರಿಸುವುದನ್ನೇ ಮರೆತಿದ್ದರು. ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು, ಹಿರಿಯ ಐಪಿಎಸ್‌ ಅಧಿಕಾರಿಗಳು, ಸಿಬ್ಬಂದಿಯೂ ಕಾರ್ಯಕ್ರಮದಲ್ಲಿ ಹಾಜರಿದ್ದರು.

ನಾಗರ ಪಂಚಮಿ ಹಬ್ಬದ ದಿನವಾದ ಶುಕ್ರವಾರ ಸಚಿವರ ಪೈಕಿ ಹಲವರು ತಮ್ಮ ಅಧಿಕೃತ ಕಚೇರಿಗಳ ಪೂಜೆ ನೆರವೇರಿಸಿದರು. ಆ ಪೈಕಿ ಗೃಹ ಸಚಿವರ ಕಚೇರಿ ಪೂಜೆಯ ಕಾರ್ಯಕ್ರಮದಲ್ಲಿ ಜನರು ಕಿಕ್ಕಿರಿದು ಸೇರಿದ್ದರು.

ಆರಗ ಜ್ಞಾನೇಂದ್ರ ಅವರು ಪ್ರತಿನಿಧಿಸುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಜನರು ಕಚೇರಿಗೆ ಬಂದು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಅವರ ಅಭಿಮಾನಿಗಳು, ಬೆಂಬಲಿಗರೂ ಕಾರ್ಯಕ್ರಮದಲ್ಲಿದ್ದರು.

ಗೃಹ ಸಚಿವರ ಬೆಂಬಲಿಗರು ಮತ್ತು ಅಭಿಮಾನಿಗಳು ಅಂತರ ಕಾಯ್ದುಕೊಳ್ಳದೇ ಸಚಿವರೊಂದಿಗೆ ಫೋಟೊ ಸೆರೆಹಿಡಿಯುತ್ತಿದ್ದ ದೃಶ್ಯ ಕಂಡುಬಂತು. ಹಲವರು ಮಾಸ್ಕ್‌ ಧರಿಸದೇ ಗುಂಪುಗೂಡಿ ಫೋಟೊ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು.

ಆಹ್ವಾನ ನೀಡಿರಲಿಲ್ಲ: ಕಚೇರಿ ಪೂಜೆ ವೇಳೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಕಚೇರಿ ಪೂಜೆಯಲ್ಲಿ ಭಾಗವಹಿಸುವಂತೆ ನಾನು ಯಾರಿಗೂ ಆಹ್ವಾನ ನೀಡಿರಲಿಲ್ಲ’ ಎಂದರು.

‘ಪೂಜೆ ನೆರವೇರಿಸಿ ಕಚೇರಿ ಪ್ರವೇಶಿಸಿದ್ದೇನೆ. ಗೃಹ ಇಲಾಖೆ ಮಲಗದಂತೆ ನೋಡಿಕೊಳ್ಳುತ್ತೇನೆ. ಪೊಲೀಸ್‌ ಇಲಾಖೆ ಎಚ್ಚರವಾಗಿದ್ದು, ಜನರು ನೆಮ್ಮದಿಯಿಂದ ನಿದ್ರಿಸುವ ವಾತಾವರಣ ರಾಜ್ಯದಲ್ಲಿರುವಂತೆ ಕೆಲಸ ಮಾಡುತ್ತೇನೆ’ ಎಂದರು.

‘ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಅವರ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ತನಿಖೆ ಬಹು ಆಯಾಮಗಳಲ್ಲಿ ನಡೆಯುತ್ತಿದೆ. ಎರಡರಿಂದ ಮೂರು ದಿನಗಳಲ್ಲಿ ಸ್ಪಷ್ಟ ಮಾಹಿತಿ ಲಭ್ಯವಾಗಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು