ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಶಿಕ್ಷಣ: ಕಲಿತದ್ದನ್ನೆಲ್ಲ ಮರೆತ ವಿಶೇಷ ಮಕ್ಕಳು

Last Updated 7 ಆಗಸ್ಟ್ 2021, 21:59 IST
ಅಕ್ಷರ ಗಾತ್ರ

ಮೈಸೂರು: ‘ವಿಶೇಷ ಮಕ್ಕಳು, ಅದರಲ್ಲೂ ಶ್ರವಣದೋಷವುಳ್ಳ ಮಕ್ಕಳು ಕಲಿತಿದ್ದನ್ನೆಲ್ಲ ಮರೆತಿದ್ದಾರೆ. ಅವರಿಗೆ ಅದನ್ನೆಲ್ಲ ನೆನಪಿಸಿ ಮುಂದಿನ ಪಾಠಗಳನ್ನು ಹೇಳಿಕೊಡಬೇಕಾದ ಸನ್ನಿವೇಶ ಎದುರಾಗಿದೆ’ ಎಂದು ನಗರದ ಇನ್‌ಸ್ಟಿಟ್ಯೂಟ್‌ ಆಫ್ ಮದರ್ ಅಂಡ್ ಡೆಫ್ ಚೈಲ್ಡ್‌ನ ಆಪ್ತ ಸಮಾಲೋಚಕಿ ‍ಪರಿಮಳಾಮೂರ್ತಿ ವಿಷಾದಿಸುತ್ತಾರೆ.

ವಿಶೇಷ ಮಕ್ಕಳಿಗೆ ತಾಯಂದಿರ ಮೂಲಕ ತರಬೇತಿ ನೀಡಿ ಮುಖ್ಯವಾಹಿನಿಯ ಶಾಲೆಗಳಿಗೆ ಕಳುಹಿಸುವ ಅಪರೂಪದಶಾಲೆ ಇದಾಗಿದೆ. ಈ ಶಾಲೆಯ ವಿಶೇಷ ಮಕ್ಕಳಿಗೆ, ಅವರು ಕಲಿತಿದ್ದನ್ನು ಮತ್ತೆ ಕಲಿಸುವುದೇ ಶಿಕ್ಷಕರು ಮತ್ತು ಪೋಷಕರಿಗೆ ದೊಡ್ಡ ಸವಾಲಾಗಿದೆ. ವಿವಿಧ ಜಿಲ್ಲೆಗಳ 26 ತಾಯಂದಿರು ತಮ್ಮ ವಿಶೇಷ ಮಕ್ಕಳೊಂದಿಗೆ ಶಾಲೆಯ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.

‘ಸಾಮೂಹಿಕ ಕಲಿಕೆಯಿಂದ ಬಹುಬೇಗ ಮಕ್ಕಳು ಮುಖ್ಯವಾಹಿನಿಗೆ ಬರುತ್ತಾರೆಯೇ ಹೊರತು, ಆನ್‌ಲೈನ್‌ನ ಏಕಾಂಗಿ ಕಲಿಕೆಯಿಂದಲ್ಲ. ಕೋವಿಡ್ ವಿಶೇಷ ಮಕ್ಕಳ ಕಲಿಕೆಯನ್ನೇ ಕಿತ್ತುಕೊಂಡಿದ್ದು ಆರ್ಥಿಕ ನಷ್ಟಕ್ಕಿಂತ ದೊಡ್ಡ ನಷ್ಟ’ ಎಂಬುದು ಪರಿಮಳಾ ಅವರ ಪ್ರತಿಪಾದನೆ.

’ಮಕ್ಕಳಿಗೆ ಶ್ರವಣದೋಷ ಪರಿಹರಿಸುವ ಸಾಧನ (ಹಿಯರಿಂಗ್‌ ಏಡ್‌) ಅಳವಡಿಸುವ ಪ್ರಕ್ರಿಯೆಯೂ ಸರಾಗವಾಗಿ ನಡೆಯದೇ, ತಾಯಂದಿರು ಮಕ್ಕಳಿಗೆ ಕಲಿಸುವುದು ಕಷ್ಟಕರವಾಗಿದೆ’ ಎಂದರು.

ವಿಶೇಷ ಮಕ್ಕಳ ಪೋಷಕರಿಗೆ ಲಸಿಕೆ ಹಾಕಬೇಕು ಎಂಬ ನಿಯಮವನ್ನು ಮುಂಚಿತವಾಗಿಯೇ ಸರ್ಕಾರ ಜಾರಿಗೊಳಿಸಬೇಕಿತ್ತು. ಹಾಗೆ ಮಾಡದೇ ಇದ್ದುದರಿಂದ ಅವರ ಶಿಕ್ಷಣಕ್ಕೆ ತೊಡಕಾಗಿತ್ತು. ವಯಸ್ಕ ವಿಶೇಷ ಮಕ್ಕಳ ಪೋಷಕರಿಗೆ ಮೊದಲು ಲಸಿಕೆ ನೀಡಿ, ಎಳೆಯ ವಿಶೇಷ ಮಕ್ಕಳ ಪೋಷಕರನ್ನು ನಿರ್ಲಕ್ಷಿಸಿದ್ದರಿಂದ, ಕಲಿಕೆಗೆ ತೊಂದರೆಯಾಯಿತು ಎಂಬ ಅಭಿಪ್ರಾಯವೂ ಇದೆ.

***

ಮಗು ಮತ್ತು ನಾನು ಕುಟುಂಬದಿಂದ ದೂರವಾಗಿ ಲಾಕ್‌ಡೌನ್‌ ಸಮಯದಲ್ಲಿ ಹಾಸ್ಟೆಲ್‌ನಲ್ಲೇ ಉಳಿದುಕೊಂಡೆವು. ಮಗುವಿನ ಕಲಿಕೆಗೆ ಹಿನ್ನಡೆಯಾಗಿದೆ. ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ

-ವೀಣಾ ಬಿರಾದಾರ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT