ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಆನ್‌ಲೈನ್‌ ಜೂಜು ನಿಷೇಧ ಜಾರಿ

Last Updated 6 ಅಕ್ಟೋಬರ್ 2021, 16:25 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್‌ ಜೂಜು ನಿಷೇಧಿಸುವುದಕ್ಕೆ ಪೂರಕವಾಗಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಂದಿರುವ ತಿದ್ದುಪಡಿಗಳಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸೋಮವಾರ ಅಂಕಿತ ಹಾಕಿದ್ದಾರೆ. ಮಂಗಳವಾರದಿಂದಲೇ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದೆ.

ಹಣವನ್ನು ಪಣವಾಗಿರಿಸಿ ಆನ್‌ಲೈನ್‌ ಮೂಲಕ ಆಡುವ ಎಲ್ಲ ಬಗೆಯ ಜೂಜುಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಅಧಿಕಾರ ನೀಡಲು ಮತ್ತು ಜೂಜು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ವಿಧಾನ ಮಂಡಲದ ಕಳೆದ ಅಧಿವೇಶನದಲ್ಲಿ ಅಂಗೀಕಾರ ಪಡೆಯಲಾಗಿತ್ತು.

ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಒಪ್ಪಿಗೆ ಪಡೆದಿದ್ದ ಮಸೂದೆಯನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು. ರಾಜ್ಯಪಾಲರು ಸೋಮವಾರ ತಿದ್ದುಪಡಿ ಮಸೂದೆಗೆ ಅಂಗೀಕಾರ ಹಾಕಿದ್ದಾರೆ. ರಾಜ್ಯಪತ್ರದಲ್ಲಿ ಮಂಗಳವಾರ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

ನ್ಯಾಯಾಲಯದಲ್ಲಿ ಪ್ರಶ್ನೆ: ಆನ್‌ಲೈನ್‌ ಜೂಜು ನಿಷೇಧದ ಹೆಸರಿನಲ್ಲಿ ಕೌಶಲ ಆಧಾರಿತ ಆನ್‌ಲೈನ್‌ ಗೇಮ್‌ಗಳನ್ನೂ ನಿಷೇಧಿಸಲಾಗಿದೆ. ತಮಿಳುನಾಡು ಸರ್ಕಾರ ರೂಪಿಸಿದ್ದ ಇಂತಹ ಕಾಯ್ದೆಯನ್ನು ಮದ್ರಾಸ್‌ ಹೈಕೋರ್ಟ್‌ ರದ್ದುಗೊಳಿಸಿದೆ. ಕರ್ನಾಟಕದ ಕಾಯ್ದೆಯನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಆಲ್‌ ಇಂಡಿಯಾ ಗೇಮಿಂಗ್‌ ಫೆಡರೇಷನ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಲ್ಯಾಂಡ್‌ ಲ್ಯಾಂಡರ್ಸ್‌ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ಕಾನೂನಿನ ಪ್ರಕಾರ ಆನ್‌ಲೈನ್‌ ಗೇಮ್‌ಗಳನ್ನು ನಿರ್ಬಂಧಿಸುವಂತೆ ನಮ್ಮ ಸದಸ್ಯ ಕಂಪನಿಗಳಿಗೆ ಸೂಚಿಸಿದ್ದೇವೆ. ನಿಷೇಧದಿಂದ ಕೌಶಲ ಆಧಾರಿತ ಗೇಮಿಂಗ್‌ ವಹಿವಾಟಿಗೆ ಧಕ್ಕೆಯಾಗಿದೆ. ಆದರೆ, ವಿದೇಶಗಳಿಂದ ಜೂಜು ನಡೆಸುವವರು ಇಲ್ಲಿ ರಾರಾಜಿಸುತ್ತಿದ್ದಾರೆ’ ಎಂದಿದ್ದಾರೆ.

‘ಕೌಶಲ ಆಧಾರಿತ ಆನ್‌ಲೈನ್‌ ಗೇಮ್‌ಗಳನ್ನೂ ನಿಷೇಧಿಸಿರುವುದು ದುರದೃಷ್ಟಕರ ಬೆಳವಣಿಗೆ. ನವೋದ್ಯಮಗಳ ನೆಚ್ಚಿನ ತಾಣವಾದ ಕರ್ನಾಟಕದಲ್ಲಿ ಗೇಮಿಂಗ್‌ ಆಧಾರಿತ ಹಲವು ಉದ್ದಿಮೆಗಳು ಸ್ಥಾಪನೆಯಾಗಿವೆ. ಈಗ ಕರ್ನಾಟಕ ಪೊಲೀಸ್‌ ಕಾಯ್ದೆಯ ತಿದ್ದುಪಡಿ ಜಾರಿಯಾಗಿರುವುದರಿಂದ ಈ ಉದ್ಯಮದಲ್ಲಿ ತೊಡಗಿರುವ ಎಲ್ಲರಿಗೂ ತೊಂದರೆಯಾಗಿದೆ’ ಎಂದು ದಿ ಆನ್‌ಲೈನ್‌ ರಮ್ಮಿ ಫೆಡರೇಷನ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮೀರ್‌ ಬಾರ್ಡೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT