ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2ಎ’ಗೆ ಪಂಚಮಸಾಲಿ ಸೇರ್ಪಡೆಗೆ ವಿರೋಧ

ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ನೇತೃತ್ವದಲ್ಲಿ ಹಕ್ಕೊತ್ತಾಯ
Last Updated 21 ಆಗಸ್ಟ್ 2021, 21:17 IST
ಅಕ್ಷರ ಗಾತ್ರ

ತುಮಕೂರು: ಹಿಂದುಳಿದ ಪ್ರವರ್ಗ 2ಎಗೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆಮಾಡಿ, ಮೀಸಲಾತಿ ಕಲ್ಪಿಸಬಾರದು. ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಜನರ ಮುಂದಿಡಬೇಕು ಎಂದು ಅತಿ ಹಿಂದುಳಿದ ವರ್ಗಗಳ ಸಮುದಾಯದ ಮುಖಂಡರು ಒಮ್ಮತದಿಂದ ಒತ್ತಾಯಿಸಿದರು.

ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ನೇತೃತ್ವದಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗಗಳ ಜಾಗೃತಿ ಸಭೆಯಲ್ಲಿ ಮಾತನಾಡಿದ ಮುಖಂಡರು, ‘ಸದಾಶಿವ ಆಯೋಗದ ವರದಿಯಲ್ಲಿ ಒಳಮೀಸಲಾತಿ ಪ್ರಸ್ತಾಪಿಸಿ
ರುವ ಮಾದರಿಯಲ್ಲಿ ಹಿಂದುಳಿದ ವರ್ಗಗಳಿಗೂ ಒಳಮೀಸಲಾತಿ ನೀಡಬೇಕು. ಕೆಲವೇ ಸಮುದಾಯ ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದು, ಹಿಂದುಳಿದವರಲ್ಲಿ ಅತಿ ಹಿಂದುಳಿದವರಿಗೂ ಸಾಮಾಜಿಕ ನ್ಯಾಯ ವ್ಯವಸ್ಥೆ ಜಾರಿಯಾಗಬೇಕು’ ಎಂಬ ಹಕ್ಕೊತ್ತಾಯ ಮಂಡಿಸಿದರು.

ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ, ‘ಸರ್ಕಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡುವ ಬದಲು ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿಸಲಾಗುತ್ತಿದೆ. ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ, ಉದ್ಯೋಗ ಸಿಗದಂತೆ ಮಾಡುವ ಕುತಂತ್ರದ ಭಾಗವಾಗಿ ಹೊರ ಗುತ್ತಿಗೆ ವ್ಯವಸ್ಥೆ ಜಾರಿಗೆ ತರಲಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಶೇ 3ರಷ್ಟು ಇರುವ ಒಂದು ಸಮುದಾಯ ಶೇ 10ರಷ್ಟು ಮೀಸಲಾತಿ ಪಡೆದುಕೊಂಡಿದೆ. ಹಿಂದುಳಿದ ನಿರ್ಲಕ್ಷ್ಯಿತ ಸಮುದಾಯಗಳಿಗೆ ಮೀಸಲಾತಿ ಸಿಗುತ್ತಿಲ್ಲ. ಹಿಂದುಳಿದ ವರ್ಗಗಳಲ್ಲೂ ಕೆಲವೇ ಜಾತಿಗಳು ಮೀಸಲಾತಿ ಲಾಭ ಪಡೆದುಕೊಳ್ಳುತ್ತಿವೆ’ ಎಂದು ಆರೋಪಿಸಿದರು. ಸ್ಥಳೀಯ ಸಂಸ್ಥೆಗಳ ಮೀಸಲಾತಿ ವಿಧಾನವನ್ನು ವಿಧಾನಸಭೆ, ಲೋಕಸಭೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೌರವ ಸಲಹೆಗಾರ ಸಿ.ಎಸ್.ದ್ವಾರಕಾನಾಥ್, ‘ಎಲ್ಲಾ ರೀತಿಯಲ್ಲೂ ಬಲಿಷ್ಠವಾಗಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬಾರದು. ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಇಲ್ಲದೆ ಮತ್ತೊಂದು ಸಮಿತಿಯಿಂದ ವರದಿ ಪಡೆದು ಸೇರಿಸುವುದು ಸರಿಯಲ್ಲ.ಪ್ರಬಲ ಸಮುದಾಯ 2ಎ ಮೀಸಲಾತಿ ವ್ಯಾಪ್ತಿಗೆ ಬಂದರೆ ಅಲ್ಲಿರುವ ಹಿಂದುಳಿದ ವರ್ಗಗಳ ಜನರ ಗತಿ ಏನಾಗಬೇಕು’ ಎಂದು ಪ್ರಶ್ನಿಸಿದರು.

ಸದಾಶಿವ ಆಯೋಗದ ವರದಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗಿದೆ. ಅದೇ ಮಾದರಿಯಲ್ಲಿ ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದವರಿಗೆ ಮೀಸಲಾತಿ ಸಿಗಬೇಕಾದರೆ ಜಾತಿಗಳ ಒಳ ವರ್ಗೀಕರಣ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು, ‘ನಾನು ಅಧ್ಯಕ್ಷನಾಗಿದ್ದ ಸಮಯ
ದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಸಿದ್ಧಪಡಿಸಲಾಯಿತು. ಸರ್ಕಾರ
ಬದಲಾಗಿ ಅಧಿಕಾರದಲ್ಲಿ ಮುಂದುವರಿಯುವ ಅವಕಾಶ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ವರದಿ
ಯನ್ನು ಆಯೋಗದ ಸದಸ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಅದನ್ನು ಮುಖ್ಯಮಂತ್ರಿ ಪಡೆದುಕೊಂಡು ಜನರ ಮುಂದಿಡಬೇಕು’ ಎಂದು ಒತ್ತಾಯಿಸಿದರು.

ಚಿತ್ರ ನಟ ‘ಮುಖ್ಯಮಂತ್ರಿ’ ಚಂದ್ರು, ‘ವೈಜ್ಞಾನಿಕ ಆಧಾರದ ಮೇಲೆ ಹಿಂದುಳಿದ ಜಾತಿಗಳನ್ನು ವರ್ಗೀಕರಿಸಿ ಮೀಸಲಾತಿ ಕಲ್ಪಿಸಿಲ್ಲ. ಪಂಚಮಸಾಲಿ ಸಮುದಾಯದ ಮೇಲೆ ನಮಗೆ ದ್ವೇಷವಿಲ್ಲ. ಅವರು ಕೇಳಿದ ತಕ್ಷಣ 2ಎಗೆ ಸರಿಸುವುದು ಸರಿಯಲ್ಲ. ಜಾತಿ ಗಣತಿ ಬಹಿರಂಗಪಡಿಸಿ, ಯಾರಿಗೆಲ್ಲ ಮೀಸಲಾತಿ ಸಿಕ್ಕಿದೆ ಎಂಬುದನ್ನು ಅಧ್ಯಯನ ನಡೆಸಿ ಮುಂದೆ ನಿರ್ಧಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ‘2ಎಗೆ ಪ್ರಬಲ ಜಾತಿಯನ್ನು ಸೇರಿಸಿ ಮೀಸಲಾತಿ ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ. ಅರ್ಹತೆ ಇಲ್ಲದೆ ಮೀಸಲಾತಿ ಸೌಲಭ್ಯ ಕಲ್ಪಿಸುವುದು ಸರಿಯಲ್ಲ.ಪ್ರಬಲ ಜಾತಿಯವರು ಹಿಂದುಳಿದ ವರ ಮೀಸಲಾತಿ ಕಿತ್ತುಕೊಳ್ಳಲು ಬಿಡಬಾರದು’ ಎಂದು ಒತ್ತಾಯಿಸಿದರು.

ವೇದಿಕೆ ಮುಖಂಡರಾದ ವಿ.ಆರ್.ಸುದರ್ಶನ್, ರಮೇಶ್, ಸುಬ್ಬಣ್ಣ, ಎಲ್.ಎ.ಮಂಜುನಾಥ್, ಯಲ್ಲಪ್ಪ, ವೆಂಕಟೇಶಗೌಡ, ರುದ್ರಪ್ಪ, ಲಕ್ಕಪ್ಪ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT