ಬುಧವಾರ, ಅಕ್ಟೋಬರ್ 5, 2022
26 °C

ಚಿಕ್ಕಮಗಳೂರು: ಅಪಘಾತದಲ್ಲಿ ಯುವತಿ ಮೆದುಳು ನಿಷ್ಕ್ರೀಯ– 9 ಜನರಿಗೆ ಜೀವದಾನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನಗರದ ಎಐಟಿ ವೃತ್ತದ ಸಮೀಪ ಬಸ್‌ ಇಳಿಯುವಾಗ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಮಿದುಳು ನಿಷ್ಕ್ರಿಯಗೊಂಡಿದ್ದ ಯುವತಿ ರಕ್ಷಿತಾ ಬಾಯಿ (17) ಅವರ ಅಂಗಾಂಗಳನ್ನು ತೆಗೆದು, ಅಗತ್ಯ ಇದ್ದವರಿಗೆ ಜೋಡಣೆಗೆ ರವಾನಿಸಲಾಯಿತು.

ರಕ್ಷಿತಾ ಅವರ ಅಂಗಾಂಗ ದಾನಕ್ಕೆ ಪೋಷಕರ ಸಮ್ಮತಿ ಪಡೆದು ಜಿಲ್ಲಾಸ್ಪತ್ರೆಯಲ್ಲಿ ಪ್ರಕ್ರಿಯೆ ನಡೆಸಲಾಯಿತು. ತಜ್ಞರ ತಂಡವು ಬೆಳಿಗ್ಗೆ 8 ರಿಂದ ಮಧ್ಯಾಹ್ನದ 1 ಗಂಟೆವರೆಗೆ ಅಂಗಾಂಗಳನ್ನು ತೆಗೆಯುವ ಪ್ರಕ್ರಿಯೆ ನಡೆಸಿದರು.

ಜೀವನ ಸಾರ್ಥಕ ಸಂಸ್ಥೆಯಿಂದ (ಸ್ಟೇಟ್‌ ಆರ್ಗನ್‌ ಅಂಡ್‌ ಟಿಶ್ಯು ಟ್ರಾನ್ಸ್‌ಪ್ಲಾಂಟೇಷನ್‌ ಆರ್ಗನೈಸೆಷನ್‌– ಎಸ್‌ಒಟಿಟಿಒ) ಮಾಹಿತಿ, ಮಾರ್ಗದರ್ಶನ ಪಡೆದು ಅಗತ್ಯವಿರುವವರ  ಜೋಡಣೆಗೆ ಸಂಬಂಧಪಟ್ಟ ಆಸ್ಪತ್ರೆಗಳಿಗೆ ಅಂಗಾಂಗಳನ್ನು ರವಾನಿಸಲಾಯಿತು.

ಹೃದಯವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೆಲಿಕಾಪ್ಟರ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಒಯ್ಯಲಾಯಿತು. ಯಕೃತ್ತನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಹಾಗೂ ಮೂತ್ರಕೋಶವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕಳಿಸಲಾಯಿತು. ಆಂಬುಲೆನ್ಸ್‌ ಸಂಚಾರಕ್ಕೆ ಜಿರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಕಣ್ಣುಗಳನ್ನು ತೆಗೆಯಲಾಗಿದೆ.

‘ಅಂಗಾಂಗ ತೆಗೆಯುವ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಈ ಪ್ರಕ್ರಿಯೆ ನಡೆಸಿದ ರಾಜ್ಯದ ಪ್ರಥಮ ಜಿಲ್ಲಾಸ್ಪತ್ರೆ ಇದು’ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಿ.ಮೋಹನ್‌ ಕುಮಾರ್‌ ತಿಳಿಸಿದರು.

‘ಹೃದಯವನ್ನು 9 ವರ್ಷದ ವ್ಯಕ್ತಿಗೆ ಜೋಡಿಸಲು ಒಯ್ದಿದ್ದಾರೆ. ಈಗ ತೆಗೆದಿರುವ ಹೃದಯ, ನೇತ್ರ, ಮೂತ್ರ ಕೋಶ, ಯಕೃತ್ತನ್ನು ಒಟ್ಟು ಒಂಬತ್ತು ಮಂದಿಗೆ ಜೋಡಿಸಲು ಅವಕಾಶ ಇದೆ. ಶ್ವಾಸಕೋಶ ಜೋಡಣೆಗೆ ವ್ಯಕ್ತಿಯ ರಕ್ತ ಗುಂಪು, ದೈಹಿಕ ಅವಯವ ಹೊಂದಾಣಿಕೆಯಾಗಲ್ಲ ಎಂದು ಆಸ್ಪತ್ರೆಯವರು ಮಾಹಿತಿ ನೀಡಿದ್ದರಿಂದ ಆ ಅಂಗ ತೆಗೆಯಲಿಲ್ಲ’ ಎಂದು ಅವರು ಮಾಹಿತಿ ನೀಡಿದರು. 

ಮೃತದೇಹ ಹಸ್ತಾಂತರ, ಅಂತಿಮ ದರ್ಶನ
ಅಂಗಾಂಗ ತೆಗೆದ ಬಳಿಕ ಯುವತಿಯ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು. ಯುವತಿ ಓದುತ್ತಿದ್ದ ನಗರದ ಬಸವನಹಳ್ಳಿಯ ಪಿಯು ಕಾಲೇಜಿನ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಾರ್ವಜನಿಕರು, ವಿದ್ಯಾರ್ಥಿಗಳು, ಸಿಬ್ಬಂದಿ ಅಂತಿಮ ದರ್ಶನ ಪಡೆದರು. ಕಂಬನಿ ಮಿಡಿದರು.

ರಕ್ಷಿತಾ ಅವರು ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡ್ಯದವರು. ಶೇಖರ್‌ ನಾಯಕ್‌ ಮತ್ತು ಲಕ್ಷ್ಮಿ ಬಾಯಿ ದಂಪತಿ ಪುತ್ರಿ. ನಗರ ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ.  ಇದೇ 18ರಂದು ಎಐಟಿ ವೃತ್ತದ ಸಮೀಪದಲ್ಲಿ ಬಸ್‌ನಿಂದ ಇಳಿಯುವಾಗ ಅಪಘಾತ ಸಂಭವಿಸಿತ್ತು. ಅವರು ತೀವ್ರವಾಗಿ ಗಾಯಗೊಂಡಿದ್ದರು.

ಕೋಟ್‌
‘ಪುತ್ರಿಯ ಸಾವಿನಿಂದಾಗಿ ತೀವ್ರ ದುಃಖವಾಗಿದೆ. ಅಂಗಾಂಗ ದಾನ ಮೂಲಕ ಸ್ವಲ್ಪ ಸಾರ್ಥಕತೆ ಭಾವ ಮೂಡಿದೆ’
–ಲಕ್ಷ್ಮಿಬಾಯಿ, ಯುವತಿ ತಾಯಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು