ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ, ಬೀದರ್‌ ಜಿಲ್ಲೆಗಳಲ್ಲಿ ತೀವ್ರ ಕೊರತೆ

ಪೂರೈಕೆ ಇದ್ದರೂ ಆಮ್ಲಜನಕ ದಾಸ್ತಾನಿನದ್ದೇ ಸಮಸ್ಯೆ
Last Updated 4 ಮೇ 2021, 3:59 IST
ಅಕ್ಷರ ಗಾತ್ರ

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಹಲವೆಡೆ ಆಮ್ಲಜನಕ ಪೂರೈಕೆಯ ಸಮಸ್ಯೆ ತೀವ್ರವಾಗಿದೆ. ಉತ್ಪಾದನೆ ಇದ್ದರೂ ಅದನ್ನು ದಾಸ್ತಾನು ಮಾಡಿಕೊಳ್ಳುವ ವ್ಯವಸ್ಥೆಬಹುತೇಕ ಕಡೆಇಲ್ಲ.

ಕಲಬುರ್ಗಿಯ ಜಿಮ್ಸ್‌ ಆಸ್ಪತ್ರೆ (20 ಕೆ.ಎಲ್‌) ಹಾಗೂ ಬಸವೇಶ್ವರ ಆಸ್ಪತ್ರೆ (6 ಕೆ.ಎಲ್‌) ಹೊರತುಪಡಿಸಿ ಜಿಲ್ಲೆಯ ಯಾವ ಆಸ್ಪತ್ರೆಯಲ್ಲಿಯೂ ಆಮ್ಲಜನಕ ದಾಸ್ತಾನು ಮಾಡಿಕೊಳ್ಳುವ ವ್ಯವಸ್ಥೆ ಇಲ್ಲ.ಈ ಭಾಗದಬಹುದೊಡ್ಡ ಆಸ್ಪತ್ರೆ ಇಎಸ್‌ಐಸಿಯಲ್ಲಿಯೂ ಆಮ್ಲಜನಕ ಘಟಕ ಇಲ್ಲ. ಈಗಷ್ಟೇ ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿದೆ.

ಸದ್ಯ ಜಿಲ್ಲಾಡಳಿತದ ಬಳಿ 68 ಜಂಬೊ ಸಿಲಿಂಡರ್‌ಗಳು ಮಾತ್ರ ಇವೆ. ಆದರೆ, ತತ್‌ಕ್ಷಣಕ್ಕೆ 450 ಸಿಲಿಂಡರ್‌ಗಳ ಅವಶ್ಯಕತೆ ಇದೆ. ಸಿಲಿಂಡರ್‌ಗಳನ್ನು ತುಂಬಿಸಿಕೊಂಡು ಆಸ್ಪತ್ರೆಗಳಿಗೆ ಪೂರೈಕೆ ಮಾಡುವ ಸಂದರ್ಭದಲ್ಲಿಯೇ ರೋಗಿಗಳು ಕೊನೆಯುಸಿರೆಳೆಯುತ್ತಿರುವ ಘಟನೆಗಳು ವರದಿಯಾಗಿವೆ.

ಬೇಡಿಕೆ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತ ಬಳ್ಳಾರಿಯಿಂದ ಟ್ಯಾಂಕರ್ ಮೂಲಕ ಆಮ್ಲಜನಕವನ್ನು ತರಿಸಿಕೊಂಡು ಹಂಚಿಕೆ ಮಾಡುತ್ತಿದೆ. ಆದರೆ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಆಮ್ಲಜನಕ ಬೇಡಿಕೆ ಹಾಗೂ ಪೂರೈಕೆಯ ಮಧ್ಯೆ ಅಗಾಧ ಅಂತರ ಕಂಡು ಬರುತ್ತಿದೆ. ನಗರದ ಕಾರ್ಖಾನೆಯೊಂದು ಆಮ್ಲಜನಕವನ್ನು ಉತ್ಪಾದನೆ ಮಾಡಿ ಹೆಚ್ಚಿನ ಬೆಲೆಗೆ ಮಹಾರಾಷ್ಟ್ರಕ್ಕೆ ಮಾರಾಟ ಮಾಡಿಕೊಳ್ಳುತ್ತಿದೆ ಎಂಬ ಆರೋಪವೂ ಇದೆ.

ಆಮ್ಲಜನಕ ಹೊತ್ತ ಟ್ಯಾಂಕರ್ ಬಂದರೆ ಅದನ್ನು ವಿವಿಧ ಸಿಲಿಂಡರ್‌ಗಳಿಗೆ ತುಂಬಿಸಲು ಗಂಟೆಗಟ್ಟಲೇ ಸಮಯ ಹಿಡಿಯುತ್ತದೆ.

‘ನಮ್ಮ ಆಸ್ಪತ್ರೆಗೆ ನಿತ್ಯ 200 ಸಿಲಿಂಡರ್ ಅಗತ್ಯವಿದ್ದು, ಅದರ ‍ಪೈಕಿ 100 ಸಿಲಿಂಡರ್‌ಗಳು ರಾಯಚೂರಿನಿಂದ ಬರುತ್ತಿದ್ದವು. ಅವು ಸ್ಥಗಿತಗೊಂಡಿದ್ದು, ಸ್ಥಳೀಯ ಉತ್ಪಾದಕರಿಂದ ಪಡೆಯಬೇಕಿದೆ. ಆದರೆ, ಇಲ್ಲಿ 50 ಸಿಲಿಂಡರ್‌ಗಳು ಮಾತ್ರ ಸಿಗುತ್ತಿವೆ’ ಎಂದು ನಗರದ ಪ್ರಮುಖ ಖಾಸಗಿ ಆಸ್ಪತ್ರೆಯೊಂದರ ಮುಖ್ಯಸ್ಥರು ಹೇಳಿದರು.

ಬೀದರ್‌ ಜಿಲ್ಲೆಯಲ್ಲಿ ಬೇಡಿಕೆಯ ಶೇ 35ರಷ್ಟು ಸಿಲಿಂಡರ್‌ಗಳು ಮಾತ್ರ ಪೂರೈಕೆಯಾಗುತ್ತಿವೆ.

ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ 1 ಸಾವಿರ ಟನ್‌ ಆಮ್ಲಜನಕ ಉತ್ಪಾದಿಸುವ 4 ಬೃಹತ್ ಕಾರ್ಖಾನೆಗಳು ಇವೆ. ಜಿಲ್ಲಾ ಆಸ್ಪತ್ರೆಯಲ್ಲಿ 6 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಟ್ಯಾಂಕರ್ ಅಳವಡಿಸಲಾಗಿದೆ. ಜಿಲ್ಲೆಗೆ ಅಗತ್ಯವಾಗಿರುವಷ್ಟು ಸಿಲಿಂಡರ್‌ಗಳನ್ನು ತುಂಬಿಸಿಕೊಂಡು ಉಳಿದದ್ದನ್ನು ಮಾರಾಟ ಮಾಡಲಾಗುತ್ತಿದೆ.

ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT