ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಸಿಜನ್‌ ಸಾಗಣೆ ಟ್ಯಾಂಕರ್‌ ಮುಕ್ತ ಸಂಚಾರ

ಡಿಆರ್‌ಡಿಓ ಮಾರ್ಗದರ್ಶನದಲ್ಲಿ ಆಕ್ಸಿಜನ್‌ ಉತ್ಪಾದಿಸುವ ಹೊಸ ಘಟಕಗಳ ಸ್ಥಾಪನೆ
Last Updated 20 ಏಪ್ರಿಲ್ 2021, 20:23 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕಾರಣದಿಂದ ತುರ್ತು ಅಗತ್ಯವಾದ ಆಕ್ಸಿಜನ್‌ ಸಿಲಿಂಡರ್‌ಗಳ ಸಾಗಣೆಗೆ ಯಾವುದೇ ತೊಂದರೆ ಆಗದಂತೆ ಆರ್‌ಟಿಓ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಸೂಚಿಸಿದರು.

ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿದ ಅವರು, ‘ಟೋಲ್‌ ಗೇಟ್‌ಗಳಲ್ಲಿ ಆಕ್ಸಿಜನ್‌ ವಾಹನಗಳು ತಾಸುಗಟ್ಟಲೆ ಕಾಯುವಂತೆ ಆಗಬಾರದು. ಅಂಥ ವಾಹನಗಳಿಗೆ ಕೋವಿಡ್‌ ತುರ್ತು ಸೇವೆ ವಾಹನದ ಸ್ಟಿಕರ್‌ ನೀಡಿ, ಆಂಬುಲೆನ್ಸ್‌ ರೀತಿ ಮುಕ್ತ ಸಂಚಾರಕ್ಕೆ ಅವಕಾಶ ನೀಡುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

‘ಡಿಆರ್‌ಡಿಓ ಮಾರ್ಗದರ್ಶನದಲ್ಲಿ ಆಕ್ಸಿಜನ್‌ ಉತ್ಪಾದಿಸುವ ಹೊಸ ಘಟಕಗಳ ಸ್ಥಾಪನೆಗೆ ಉತ್ತರ ಪ್ರದೇಶದಲ್ಲಿ 5-6 ದಿನಗಳಲ್ಲಿ ಅನುಮತಿ ನೀಡಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹೊಸ ಘಟಕಗಳ ಸ್ಥಾಪನೆಗೆ ಪರವಾನಗಿ ನೀಡಲಾಗುವುದು. ಯೂನಿವರ್ಸಲ್‌ ಏರ್‌ ಪ್ರಾಡಕ್ಟ್‌ ಕಂಪನಿ ಹೊಸ ಘಟಕ ಆರಂಭಿಸಲು ಅನುಕೂಲವಾಗುವಂತೆ ವಿದ್ಯುತ್‌ ಸಂಪರ್ಕ ಹಾಗೂ ಇನ್ನಿತರ ಪರವಾನಗಿ ನೀಡುವ ಸಂಬಂಧ ಸಭೆಯಲ್ಲೇ ನಿರ್ದೇಶನ ನೀಡಲಾಗಿದೆ’ ಎಂದರು.

‘ಬೆಂಗಳೂರು ನಗರಕ್ಕೆ 330 ಟನ್‌ ಆಕ್ಸಿಜನ್‌ ಪೂರೈಕೆ ಆಗುತ್ತಿದ್ದು, ಮಂಗಳವಾರದಿಂದ ಹೆಚ್ಚುವರಿ 40 ಟನ್‌ ಹೆಚ್ಚುವರಿ ಆಕ್ಸಿಜನ್‌ ಪೂರೈಕೆ ಆಗುತ್ತಿದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚು ಆಕ್ಸಿಜನ್‌ ಪೂರೈಕೆ ಮಾಡುವಂತೆ ಜಿಂದಾಲ್‌ ಕಂಪನಿಗೆ ಸೂಚಿಸಲಾಗಿದೆ. ಮೆಡಿಕಲ್‌ ಆಕ್ಸಿಜನ್‌ ಪೂರೈಕೆಗಾಗಿ ಕೈಗಾರಿಕಾ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಉಪಯೋಗಿಸಲು ಅನುಮತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಿಂದಲೂ ಹೆಚ್ಚುವರಿ ಆಕ್ಸಿಜನ್‌ ಪೂರೈಕೆ ಸಾಧ್ಯವಾಗಲಿದೆ’ ಎಂದು ಹೇಳಿದರು.

‘ರಾಜ್ಯಕ್ಕೆ ದಿನಕ್ಕೆ 400 ಟನ್ ಆಕ್ಸಿಜನ್ ಪೂರೈಕೆ ಮಾಡಲು ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪನಿ ಒಪ್ಪಿಕೊಂಡಿದೆ’ ಎಂದು ಗಣಿ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು.

ಜೆಎಸ್‌ಡಬ್ಲ್ಯೂ ಸ್ಟೀಲ್ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೋವಲ್, ‘ನಮ್ಮ ಕಂಪನಿಗಳ ಬದ್ಧತೆ ಕರ್ನಾಟಕದ ಕಡೆಗೆ. ಬೇಡಿಕೆ ಎದುರಾದರೆ ನಾವು ಹೆಚ್ಚು ಆಮ್ಲಜನಕವನ್ನು ಪೂರೈಸಲು ಸಿದ್ಧ’ ಎಂದು ಅವರು ತಿಳಿಸಿದರು.

ಜೆಎಸ್‌ಡಬ್ಲ್ಯೂ ಹಿರಿಯ ಉಪಾಧ್ಯಕ್ಷ ಮಂಜುನಾಥ ಪ್ರಭು, ‘ನಾವು ಸಸಾಸರಿ 240ರಿಂದ 350 ಟನ್‌ ಆಕ್ಸಿಜನ್‌ ಉತ್ಪಾದಿಸುತ್ತೇವೆ, ಕೆಲವೊಮ್ಮೆ 400 ಟನ್‌ ದಾಟುತ್ತದೆ. ಈ ಪೈಕಿ, 120 ಟನ್‌ ಬೇರೆ ರಾಜ್ಯಗಳಿಗೆ ಪೂರೈಕೆ ಆಗುತ್ತಿದೆ. 300 ಟನ್‌ ಉತ್ಪಾದಿಸಿದಾಗ 75ರಿಂದ 80 ಟನ್‌ ಬೇರೆ ರಾಜ್ಯಗಳಿಗೆ ಹೋಗುತ್ತದೆ. ಇತರ ರಾಜ್ಯಗಳಿಗೆ ಪೂರೈಸದಂತೆ ನಿರ್ದೇಶನವೇನೂ ಇಲ್ಲ’ ಎಂದರು.

ಬೆಂಗಳೂರು ಮೂಲದ ಭರೂಕಾ ಗ್ಯಾಸ್‌ ಕಂಪನಿಯ ವ್ಯವ ಸ್ಥಾಪಕ (ಉತ್ಪಾದನೆ) ಸುಬ್ರಮಣಿ ಗೋವಿಂದ ಸ್ವಾಮಿ, ‘ನಮ್ಮಲ್ಲಿ ಉತ್ಪಾದನೆಯಾದ ಶೇ 80ರಷ್ಟು ಆಕ್ಸಿಜನ್‌ ಸರ್ಕಾರದ ಅಗತ್ಯ ಗಳಿಗೆ ತಕ್ಕಂತೆ ವೈದ್ಯಕೀಯ ಬಳಕೆಗೆ ಪೂರೈಕೆ ಆಗುತ್ತಿದೆ. ಶೇ 20ರಷ್ಟು ಮಾತ್ರ ಕೈಗಾರಿಕೆಗಳಿಗೆ ಬಳಕೆ ಆಗುತ್ತಿದೆ’ ಎಂದರು.

ರಾಜ್ಯದಲ್ಲಿದೆ 7 ಘಟಕ, 56 ವಿತರಕರು

ದ್ರವೀಕೃತ ಆಕ್ಸಿಜನ್‌ ಉತ್ಪಾದಿಸುವ ಏಳು ಘಟಕಗಳು ಮತ್ತು 56 ವಿತರಕರು ರಾಜ್ಯದಲ್ಲಿದ್ದಾರೆ. ಘಟಕಗಳು– ಭರೂಕಾ ಗ್ಯಾಸ್‌ (65 ಟನ್‌), ಪ್ರಾಕ್ಸೈರ್‌ ಕೊಪ್ಪಳ (65 ಟನ್‌), ಪ್ರಾಕ್ಸೈರ್‌ ಬಳ್ಳಾರಿ (160 ಟನ್‌). ಏರ್‌ ವಾಟರ್‌ ಇಂಡಿಯಾ (92 ಟನ್‌), ಬಳ್ಳಾರಿ ಆಕ್ಸಿಜನ್‌ (80 ಟನ್). ಯುನಿವರ್ಸಲ್‌ ಏರ್‌ (50 ಟನ್‌). ಜೆಎಸ್‌ಡಬ್ಲ್ಯೂ (300 ಟನ್‌).

ರಾಜ್ಯದಲ್ಲಿ 45 ಆಕ್ಸಿಜನ್‌ ಸಾಗಣೆ ಟ್ಯಾಂಕರ್‌ಗಳಿದ್ದು, ಅವುಗಳ ಒಟ್ಟು ಸಾಗಣೆ ಸಾಮರ್ಥ್ಯ 484 ಟನ್‌. ಇದೀಗ ನೈಟ್ರೋಜನ್‌ ಸಾಗಿಸುವ 33 ಟ್ಯಾಂಕರ್‌, ಆರ್ಗೋನ್ ಸಾಗಿಸುವ 16 ಟ್ಯಾಂಕರ್‌ಗಳಿಗೆ ಆಕ್ಸಿಜನ್‌ ಪೂರೈಕೆಯ ಪರವಾನಗಿ ನೀಡಲಾಗಿದೆ. ಅಲ್ಲದೆ, ರಾಜ್ಯಕ್ಕೆ ಪೂರೈಸುವ ಆಕ್ಸಿ ಜನ್‌ ಪ್ರಮಾಣ ಹೆಚ್ಚಿಸುವಂತೆ ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿರುವ ರಾಜ್ಯ ಸರ್ಕಾರ, ಆಕ್ಸಿಜನ್‌ ಹಂಚಿಕೆ ಹೆಚ್ಚಿಸುವಂತೆ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT