ಮಂಗಳವಾರ, ಜೂನ್ 15, 2021
27 °C

ಶ್ರಮಿಕರ ಅವಮಾನಿಸುವ ಪ್ಯಾಕೇಜ್‌: ಜನಾಗ್ರಹ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಜನರಿಗಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬುಧವಾರ ಪ್ರಕಟಿಸಿರುವ ಪ್ಯಾಕೇಜ್‌ ನಿರಾಶಾದಾಯಕ ಮತ್ತು ದುಡಿಯುವ ವರ್ಗದ ಜನರನ್ನು ಅವಮಾನಿಸುವಂತಿದೆ ಎಂದು ಜನಾಗ್ರಹ ಆಂದೋಲನ ಟೀಕಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಜನಾಗ್ರಹ ಆಂದೋಲನದ ಮಾವಳ್ಳಿ ಶಂಕರ್‌, ಕೆ.ಎಲ್‌. ಅಶೋಕ್‌, ಸಸಿಕಾಂತ್‌ ಸೆಂಥಿಲ್‌, ಸ್ವರ್ಣಾ ಭಟ್, ಚಾಮರಸ ಮಾಲಿಪಾಟೀಲ್‌, ಯೂಸೂಫ್‌ ಕನ್ನಿ, ಎಚ್‌.ಆರ್‌. ಬಸವರಾಜಪ್ಪ, ಯಾಸೀನ್‌ ಮಲ್ಪೆ ಮತ್ತು ನೂರ್‌ ಶ್ರೀಧರ್‌, ‘ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಯಾವ ಕಾರ್ಯಕ್ರಮವನ್ನೂ ಮುಖ್ಯಮಂತ್ರಿ ಪ್ರಕಟಿಸಿಲ್ಲ. ಇದು ನೆರವಿನ ಪ್ಯಾಕೇಜ್‌ ಎಂದು ಕರೆಯುವುದಕ್ಕೂ ಅನರ್ಹವಾಗಿದೆ’ ಎಂದು ಹೇಳಿದ್ದಾರೆ.

ಎಲ್ಲ ಜನರ ಕೋವಿಡ್‌ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು. ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೆ ತಲಾ ₹ 5,000 ನೆರವು ನೀಡಬೇಕು. ದುಡಿಯುವ ವ್ಯಕ್ತಿಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ ₹ 25,000 ಮತ್ತು ಇತರ ಎಲ್ಲ ಸಣ್ಣ ರೈತರಿಗೆ ತಲಾ ₹ 10,000 ಪರಿಹಾರ ನೀಡಬೇಕು. ಸಾಲ ಮರುಪಾವತಿಯನ್ನು ಮೂರು ತಿಂಗಳ ಕಾಲ ಮುಂದೂಡಬೇಕು. ಕಿರು ಹಣಕಾಸು ಸಂಸ್ಥೆಗಳಿಂದ ಪಡೆದಿರುವುದು ಸೇರಿದಂತೆ ಎಲ್ಲ ಸಾಲದ ಕೊರೊನಾ ಅವಧಿಯ ಕಂತುಗಳನ್ನು ಸರ್ಕಾರವೇ ಭರಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಉಪನ್ಯಾಸಕರಿಗೂ ನೆರವು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು