ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ, ಒಕ್ಕಲಿಗ ಮೀಸಲಾತಿ ಸದ್ಯಕ್ಕಿಲ್ಲ

ವರದಿ ಸಲ್ಲಿಕೆಗೆ ಇನ್ನಷ್ಟು ಕಾಲಾವಕಾಶ ಬೇಕು: ಜಯಪ್ರಕಾಶ ಹೆಗ್ಡೆ ಸ್ಪಷ್ಟನೆ
Last Updated 15 ಮಾರ್ಚ್ 2023, 20:48 IST
ಅಕ್ಷರ ಗಾತ್ರ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಮತ್ತು ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಬೇಡಿಕೆಗಳು ಸದ್ಯಕ್ಕೆ ಈಡೇರುವ ಲಕ್ಷಣಗಳಿಲ್ಲ. ಈ ಸುಳಿವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ನೀಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಪಟ್ಟಿಗೆ ಸೇರಿಸುವ ಸಂಬಂಧದ ಪ್ರಕ್ರಿಯೆ ಅಧ್ಯಯನದ ಹಂತದಲ್ಲಿದೆ. ರಾಜ್ಯದಾದ್ಯಂತ 27 ಸಾರ್ವಜನಿಕ ಸಭೆಗಳನ್ನು ನಡೆಸಿ ಅಹವಾಲು ಸಂಗ್ರಹಿಸಲಾಗಿದೆ. ಅದೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಜತೆಗೆ ಈ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ ನಡೆಯಬೇಕು. ಆದ್ದರಿಂದ ತರಾತುರಿಯಲ್ಲಿ ವರದಿ ನೀಡಲು ಸಾಧ್ಯವಿಲ್ಲ’ ಎಂದರು.

‘ಗಡಿಬಿಡಿಯಲ್ಲಿ ವರದಿ ನೀಡಿದರೆ ನ್ಯಾಯಾಲಯದಲ್ಲಿ ವಜಾಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಮಗ್ರವಾಗಿ ಅಧ್ಯಯನ ನಡೆಸಿಯೇ ವರದಿ ನೀಡುವುದು ಸೂಕ್ತ. ಈ ವರದಿ ಸಿದ್ಧಪಡಿಸಲು ಕಾಲಮಿತಿ ನಿಗದಿ ಮಾಡಿಕೊಳ್ಳಲು ಆಗುವುದಿಲ್ಲ. ಇಂತಹ ವಿಷಯಗಳಲ್ಲಿ ಆತುರ ಇರಬಾರದು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ವಿರೋಧಿಸಿಯೂ ಅಹವಾಲು ಸಲ್ಲಿಕೆಯಾಗಿವೆ. ಅವುಗಳನ್ನೂ ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಬೇಡಿಕೆ ಮನವಿ ಸಂಬಂಧ ಚರ್ಚೆಗೆ ಸಮುದಾಯದ ಮುಖಂಡರನ್ನು ಆಹ್ವಾನಿಸಲಾಗಿತ್ತು. ದಾಖಲೆಗಳ ಸಂಗ್ರಹಕ್ಕೆ ಅವರು ಸಮಯ ಕೇಳಿದ್ದಾರೆ. ಈ ಎಲ್ಲಾ ಅಂಶಗಳಿಂದ ಅಂತಿಮ ವರದಿ ಸಲ್ಲಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ ಎಂದು ವಿವರಿಸಿದರು.

‘ಪಂಚಮಸಾಲಿ ಸಮುದಾಯಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌ನಲ್ಲಿ ಮಧ್ಯಂತರ ವರದಿ ಸಲ್ಲಿಸಲಾಯಿತು. ಅದಕ್ಕೆ ಸರ್ಕಾರದಿಂದ ಒತ್ತಡ ಇರಲಿಲ್ಲ, ಆಯೋಗದ ಮೇಲೆ ಸರ್ಕಾರ ಒತ್ತಡ ಹೇರಲು ಆಗುವುದಿಲ್ಲ. ಅವಶ್ಯ ಇದ್ದಿದ್ದರಿಂದ ಮಧ್ಯಂತರ ವರದಿ ನೀಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಮೀಸಲಾತಿಗೆ 133 ಮನವಿ: ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಸೇರ್ಪಡೆಗೆ 133 ಮನವಿಗಳು ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಸಿ 34 ವರದಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅಯಾ ಸಮುದಾಯಗಳು ವಾಸವಿರುವ ಸ್ಥಳಗಳಿಗೇ ತೆರಳಿ ಸ್ಥಿತಿಗತಿ ಅಧ್ಯಯನ ನಡೆಲಾಗಿದೆ. 57 ಮನವಿಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು, 42 ಮನೆಗಳ ವರದಿ ಬಾಕಿ ಇದೆ ಎಂದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಜಾತಿ ಪ್ರಮಾಣಪತ್ರ ವಿತರಿಸುವಾಗಲೇ ಅಲೆಮಾರಿ ಎಂದು ನಮೂದಿಸಲು ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಎಲ್ಲಾ ಸಮುದಾಯಗಳಿಗೂ ಜಾತಿ ಪ್ರಮಾಣಪತ್ರ ನೀಡಬಹುದು ಎಂದೂ ತಿಳಿಸಲಾಗುತ್ತಿದೆ. ಅನಾಥ ಮಕ್ಕಳಿಗೆ ಮೀಸಲಾತಿ ನೀಡುವ ಬಗ್ಗೆಯೂ ವರದಿ ನೀಡಲಾಗಿದೆ ಎಂದು ವಿವರಿಸಿದರು.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸದ್ಯ 900ಕ್ಕೂ ಹೆಚ್ಚು ಜಾತಿಗಳಿವೆ. ಪ್ರವರ್ಗ 3ಬಿ(ಎ)ನಲ್ಲಿ ವೀರಶೈವ ಲಿಂಗಾಯತ ಸಮುದಾಯವಿದ್ದು, 3ಬಿ(ಬಿ)ನಲ್ಲಿ 24 ಸಮುದಾಯಗಳಿದ್ದವು. ಇನ್ನೂ 22 ಉಪಜಾತಿಗಳನ್ನು ಸೇರ್ಪಡೆ ಮಾಡಲು ಶಿಫಾರಸು ಮಾಡಲಾಗುವುದು ಎಂದರು.

ನೌಕರರ ಜಾತಿ: ಶೇ 50ರಷ್ಟು ಮಾತ್ರ ಮಾಹಿತಿ
‘ಸರ್ಕಾರಿ ಉದ್ಯೋಗದಲ್ಲಿ ಜಾತಿವಾರು ಎಷ್ಟು ಜನ ಇದ್ದಾರೆ, ಹುದ್ದೆಗಳ ದರ್ಜೆ, ಆ ಸಮುದಾಯಗಳ ಶೈಕ್ಷಣಿಕ ಮಟ್ಟದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದ್ದು, ಶೇ 50ರಷ್ಟು ಮಾಹಿತಿ ಮಾತ್ರ ಲಭ್ಯವಾಗಿದೆ’ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

ವಿವಿಧ ಇಲಾಖೆಗಳು ಮತ್ತು ವಿಶ್ವವಿದ್ಯಾಲಯಗಳಿಂದ ಮಾಹಿತಿ ಕೋರಲಾಗಿದೆ. ಈ ಮಾಹಿತಿ ದೊರೆತರೆ ಆ ಸಮುದಾಯಗಳ ಸ್ಥಿತಿಗತಿ ಅಧ್ಯಯನ ಸುಲಭವಾಗುತ್ತದೆ. ಈ ಮಾಹಿತಿ ಕ್ರೋಡೀಕರಿಸಲು ಬಿಇಎಲ್‌ ಸಹಕಾರದಲ್ಲಿ ಸಾಫ್ಟ್‌ವೇರ್ ಕೂಡ ಸಿದ್ಧಪಡಿಸಲಾಗುತ್ತಿದೆ. ಎಂಟು ತಿಂಗಳಿಂದ ಹಲವು ಬಾರಿ ಪತ್ರ ಬರೆದರೂ ಮಾಹಿತಿ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಸದಸ್ಯ ಕಾರ್ಯದರ್ಶಿಗೆ ನೋಟಿಸ್
ಈ ಹಿಂದಿನ ಅವಧಿಯಲ್ಲಿ ಆಯೋಗ ಸಿದ್ಧಪಡಿಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ’ಗೆ(ಜಾತಿಗಣತಿ) ಸಹಿ ಹಾಕದ ಅಂದಿನ ಸದಸ್ಯ ಕಾರ್ಯದರ್ಶಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಜಯಪ್ರಕಾಶ ಹೆಗ್ಡೆ ಹೇಳಿದರು.

‘ಹಿಂದಿನ ಅಧ್ಯಕ್ಷ ಕಾಂತರಾಜು ಅವರು ಖುದ್ದು ವರದಿ ಸಲ್ಲಿಸಿದ್ದರೂ ಸ್ವೀಕೃತವಾಗಿಲ್ಲ. ಸದಸ್ಯ ಕಾರ್ಯದರ್ಶಿ ಸಹಿ ಹಾಕುವುದೇ ಇದಕ್ಕೆ ಕಾರಣ. ವರದಿಯನ್ನು ಏನು ಮಾಡಬೇಕು, ಮತ್ತೆ ವರದಿ ಸಿದ್ಧಪಡಿಸಬೇಕೆ ಎಂಬ ಸ್ಪಷ್ಟನೆಯನ್ನು ಸರ್ಕಾರದಿಂದಲೂ ಕೇಳಲಾಗಿದೆ’ ಎಂದರು.

‘ಪಂಚಮಸಾಲಿ ಕಡೆಗಣಿಸಿದರೆ ಚುನಾವಣೆಯಲ್ಲಿ ತಕ್ಕ ಪಾಠ’
ಬೆಂಗಳೂರು: ‘
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಬಗ್ಗೆ ಸರ್ಕಾರ ತನ್ನ ನಿಲುವು ಪ್ರಕಟಿಸದಿದ್ದರೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಆ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಧೋರಣೆಯಿಂದ ನೊಂದು ನಮ್ಮ ಸಮುದಾಯದವರು ಚುನಾವಣೆಗೆ ಸ್ಫರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. 52 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಗುರುವಾರ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಆರ್‌ಎಸ್‌ಎಸ್‌ ಮುಖಂಡರು ಮೀಸಲಾತಿ ಕಲ್ಪಿಸುವಂತೆ ಸೂಚಿಸಿದ್ದರೂ ರಾಜ್ಯಸರ್ಕಾರ ನಮ್ಮ ತಾಳ್ಮೆ ಪರೀಕ್ಷಿಸುತ್ತಿದೆ. ಬೇಡಿಕೆ ಈಡೇರಿಸದಿದ್ದರೆ ಡಾ.ಬಿ.ಆರ್‌. ಅಂಬೇಡ್ಕರ್‌ ನೀಡಿದ ಸಂವಿಧಾನದ ಪ್ರಕಾರ ಸಮುದಾಯದ ಜನರಲ್ಲಿ ಮತದಾನದ ಜಾಗೃತಿ ಮಾಡುತ್ತೇವೆ. 224 ಕ್ಷೇತ್ರಕ್ಕೆ ತೆರಳಿ ಬಿಜೆಪಿ ಸರ್ಕಾರ ಮೀಸಲಾತಿ ನೀಡದಿರುವ ಬಗ್ಗೆ ಜನರಿಗೆ ತಿಳಿಸುವ ಮೂಲಕ ಹೋರಾಟ ಮಾಡುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT