ಗುರುವಾರ , ಮೇ 6, 2021
31 °C
ಯವಕಪಾಡಿಯಲ್ಲಿ 2 ವರ್ಷಗಳಿಗೊಮ್ಮೆ ನಡೆಯುವ ಆಚರಣೆ

ವಿಜೃಂಭಣೆಯ ಪನ್ನಂಗಾಲ ತಮ್ಮೆ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಸಮೀಪದ ಯವಕಪಾಡಿ ಗ್ರಾಮದಲ್ಲಿ ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುವ ಪನ್ನಂಗಾಲ ತಮ್ಮೆ ದೇವಿಯ ಉತ್ಸವ ಕಂಡು ಭಕ್ತರು ಹರ್ಷಗೊಂಡರು.

ಉತ್ಸವದ ಆರಂಭದಲ್ಲಿ ಗ್ರಾಮದ ಅಂಜಪರವಂಡ ಕುಟುಂಬದ ಐನ್ ಮನೆಯಿಂದ ಭಂಡಾರ ಪೆಟ್ಟಿಗೆಯನ್ನು ದೇವಾಲಯಕ್ಕೆ ತರಲಾಯಿತು. ಪನ್ನಂಗಾಲ ತಮ್ಮೆ ದೇವಾಲಯದಲ್ಲಿ ಪೂಜೆ, ಅಭಿಷೇಕ, ಸಾಂಪ್ರದಾಯಿಕ ಆಚರಣೆಗಳು ನೆರವೇರಿದವು.

ಶ್ರದ್ಧಾಭಕ್ತಿಯಿಂದ ಓಲೆಗರಿಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ಹಬ್ಬದಲ್ಲಿ ಬಳಸಲಾಯಿತು. ಈ ಕೊಡೆಯಲ್ಲಿ ಪನ್ನಂಗಾಲ ತಮ್ಮೆ ದೇವಿ ನೆಲೆಸಿದ್ದು, ಅಣ್ಣನಾದ ಇಗ್ಗುತ್ತಪ್ಪ ಮನೆಗೆ ತಂಗಿಯನ್ನು ಕರೆತರುವ ಪದ್ದತಿಯನ್ನು ಉತ್ಸವದ ರೂಪದಲ್ಲಿ ಆಚರಿಸಲಾಗುತ್ತಿದೆ.

ಅಣ್ಣನನ್ನು (ಇಗ್ಗುತ್ತಪ್ಪ) ಬಿಟ್ಟು ಹೋಗಲು ಮನಸ್ಸಿಲ್ಲದ ತಂಗಿಯು ಮಾರ್ಗ ಮಧ್ಯೆ ಸಿಗುವ ಭತ್ತದ ಗದ್ದೆಯಿಂದ ಹಿಂತಿರುಗಿ ಹೋಗಲು ಯತ್ನಿಸುವ ದೃಶ್ಯ ಭಕ್ತಿಭಾವದಿಂದ ಕೂಡಿದ್ದು, ಭಕ್ತರನ್ನು ರೋಮಾಂಚನಗೊಳಿಸಿತು. ಸೋಮವಾರ ಮಧ್ಯಾಹ್ನ ಪಾಡಿ ಇಗ್ಗುತ್ತಪ್ಪ ದೇವಾಲಯ ಸಮೀಪದ ಅಮ್ಮಂಗೇರಿಯಿಂದ ಬಿದಿರಿನ ಹೊಸ ಕೊಡೆಯನ್ನು ಪನ್ನಂಗಾಲ ತಮ್ಮೆ ದೇವಾಲಯ ಸಮೀಪದ ಗದ್ದೆಗೆ ಸಾಂಪ್ರದಾಯಿಕ ರೀತಿಯಲ್ಲಿ ತರಲಾಯಿತು.

ಹರಕೆಯ ಎತ್ತುಗಳೊಂದಿಗೆ ದೇವಾಲಯಕ್ಕೆ ಭಕ್ತರು ಆಗಮಿಸಿದಾಗ ದೇವರ ಮೂರ್ತಿ ಹಾಗೂ ಕೊಡೆ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಭಕ್ತರು ತಲೆಗೆ ಕತ್ತಿಯಿಂದ ಹೊಡೆದುಕೊಂಡು ಆವೇಶಭರಿತರಾಗಿ ನರ್ತಿಸಿದರು.

ಯವಕಪಾಡಿ ಗ್ರಾಮದ ಅಂಜಪರವಂಡ, ಕರ್ತಂಡ, ಐರೀರ, ಅಪ್ಪಾರಂಡ ಕುಟುಂಬಸ್ಥರು ಪರಿಶಿಷ್ಟ ಜಾತಿಯ ಒಂಬತ್ತು ಕುಡಿಗಳು ಹಾಗೂ ಒಂದು ಕುಡಿಯರ ಕುಟುಂಬದವರ ಉಸ್ತುವಾರಿಯಲ್ಲಿ ಕೊಡೆ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಸಂಜೆ ದೇವರ ಜಳಕ ಹಾಗೂ ರಾತ್ರಿ ಕರಿಚೌಂಡಿ ಬಾರಣೆ ನಡೆಯಿತು. ಕುರುಂದ ಆಟ ಹಾಗೂ ವಿವಿಧ ಪೂಜಾ ಕಾರ್ಯಗಳೊಂದಿಗೆ ಎರಡು ದಿನಗಳ ಪನ್ನಂಗಾಲ ತಮ್ಮೆ ಉತ್ಸವ ಮಂಗಳವಾರ ಕೊನೆಗೊಳ್ಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.