ಗುರುವಾರ , ಜನವರಿ 28, 2021
15 °C
ಹಿತ್ತಾಳೆ ರಿಂಗ್ ಹಾಕಲು ಪುರಾತತ್ವ ಇಲಾಖೆ ಸಿದ್ಧತೆ

ಪಟ್ಟದಕಲ್ಲು: ಬಿರುಕುಬಿಟ್ಟ ವಿಜಯಸ್ತಂಭ

ವೆಂಕಟೇಶ್‌ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಇಲ್ಲಿನ ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲಿನಲ್ಲಿರುವ ಚಾಲುಕ್ಯರ ಕಾಲದ ವಿಜಯಸ್ತಂಭ ಬಿರುಕು ಬಿಟ್ಟಿದೆ. ಅದು ಹೋಳಾಗಿ ಕೆಳಗೆ ಬೀಳದಂತೆ ತಡೆಯಲು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ತಾತ್ಕಾಲಿಕವಾಗಿ ಬೆಲ್ಟ್ ಹಾಕಿದೆ. ದೀರ್ಘಕಾಲದ ಸಂರಕ್ಷಣೆಗೆ ಹಿತ್ತಾಳೆಯ ರಿಂಗ್ ಹಾಕಲು ಸಿದ್ಧತೆ ನಡೆಸಿದೆ.

ವಿಜಯಸ್ತಂಭ ಕ್ರಿ.ಶ.730 ರಿಂದ 742ರ ಅವಧಿಯಲ್ಲಿ ನಿರ್ಮಾಣ ವಾಗಿದೆ. ಚಾಲುಕ್ಯ ಚಕ್ರವರ್ತಿ 2ನೇ ವಿಕ್ರಮಾದಿತ್ಯ ಕಂಚಿಯ ಪಲ್ಲವ ರೊಡನೆ ಸತತ ಮೂರನೇ ಬಾರಿಗೆ ಯುದ್ಧದಲ್ಲಿ ಗೆದ್ದ ನೆನಪಿಗೆ ಆತನ ಮಹಾರಾಣಿಯರಾದ ಲೋಕಮಹಾದೇವಿ ಹಾಗೂ ತ್ರೈಲೋಕ ಮಹಾದೇವಿ ಪಟ್ಟದಕಲ್ಲಿನಲ್ಲಿ ಲೋಕೇಶ್ವರ (ಈಗಿನ ವಿರೂಪಾಕ್ಷ ಗುಡಿ) ಹಾಗೂ ತ್ರೈಲೋಕೇಶ್ವರ (ಮಲ್ಲಿಕಾರ್ಜುನ) ದೇವಸ್ಥಾನಗಳನ್ನು ನಿರ್ಮಿಸಿದರು ಎಂಬ ಉಲ್ಲೇಖ ಈ ವಿಜಯಸ್ತಂಭದಲ್ಲಿ ಇದೆ.

‘ಇದೊಂದು ಶಿಲಾ ಶಾಸನ ಆಗಿದ್ದು, ದೇವಾಲಯದ ಸಂಕೀರ್ಣದಲ್ಲಿ ಎತ್ತರದ ಪೀಠದ ಮೇಲೆ ಇದೆ. ಅದರಲ್ಲಿ ಶಿವಶುದಶ್ಯಾನಾರ್ಯ ಎಂದು ಉಲ್ಲೇಖಿಸಲಾಗಿದೆ’ ಎಂದು ಪಟ್ಟದಕಲ್ಲಿನ ಪ್ರವಾಸಿ ಮಾರ್ಗದರ್ಶಿ ಚಂದ್ರು ಕಟಗೇರಿ ಹೇಳುತ್ತಾರೆ.

ಚೆನ್ನೈನಿಂದ ತಜ್ಞರ ತಂಡ: 1,200 ವರ್ಷಗಳಷ್ಟು ಹಳೆಯದಾದ ವಿಜಯಸ್ತಂಭದ ಶಿಲೆ ನಿರಂತರವಾಗಿ ಮಳೆ–ಗಾಳಿ, ಬಿಸಿಲಿಗೆ ಸಿಲುಕಿ ಸಾಮರ್ಥ್ಯ ಕಳೆದುಕೊಂಡು ಅಪಾಯದಂಚಿನಲ್ಲಿದೆ. ಅದರ ಸಂರಕ್ಷಣೆಗೆ ಮೊದಲು ರಾಸಾಯನಿಕ ಉಪಚಾರ (ಕೆಮಿಕಲ್ ಟ್ರೀಟ್‌ಮೆಂಟ್) ಮಾಡಲಾಗುವುದು. ನಂತರ ಹಿತ್ತಾಳೆಯ ರಿಂಗ್‌ ಹಾಕಿ ಭದ್ರಪಡಿಸಲಾಗುತ್ತಿದೆ. ಈ ಕಾರ್ಯಕ್ಕೆ ಚೆನ್ನೈನಿಂದ ತಜ್ಞರ ತಂಡ ಬರಲಿದೆ.

ಈಗಾಗಲೇ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ಧಾರವಾಡ ವೃತ್ತದ ಸೂಪರಿಟೆಂಡೆಂಟ್ ವಿಠ್ಠಲ ಎಸ್. ಬಡಿಗೇರ ‘ಪ್ರಜಾವಾಣಿ’ ಗೆ ತಿಳಿಸಿದರು.

ಸಮಿತಿ ರಚನೆಗೆ ನಿರ್ಧಾರ

ಕಳೆದ ಎರಡು ಮಳೆಗಾಲದಲ್ಲಿ ಮಲಪ್ರಭಾ ನದಿ ಪ್ರವಾಹದ ಸೆಳವಿಗೆ ಪಟ್ಟದಕಲ್ಲಿನ ಸ್ಮಾರಕಗಳು ಸಿಲುಕಿದ್ದವು. ವಾರಗಟ್ಟಲೇ ಜಲಾವೃತವಾಗಿದ್ದವು. ಇದರಿಂದ ಸ್ಮಾರಕಗಳಿಗೆ ಏನಾದರೂ ಧಕ್ಕೆ ಆಗಿದೆಯೇ ಎಂಬುದರ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆಗೆ ಎಎಸ್‌ಐ ನಿರ್ಧರಿಸಿದೆ ಎಂದು ವಿಠ್ಠಲ ಎಸ್. ಬಡಿಗೇರ ತಿಳಿಸಿದರು.

ವಿಜಯಸ್ತಂಭ ಎತ್ತರದ ಪೀಠದಲ್ಲಿದೆ. ಹೀಗಾಗಿ ಪ್ರವಾಹದ ಸೆಳವಿಗೆ ಪೀಠ ಮಾತ್ರ ಸಿಲುಕಿತ್ತು. ಶಿಲಾಸ್ತಂಭ ಸುರಕ್ಷಿತವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು