ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಸಿಎಂ ಪ್ರಕರಣ: ವಿಧಾನ ಪರಿಷತ್‌ನಲ್ಲಿ ಗದ್ದಲ

Last Updated 22 ಸೆಪ್ಟೆಂಬರ್ 2022, 16:04 IST
ಅಕ್ಷರ ಗಾತ್ರ

ಬೆಂಗಳೂರು: ‘ಪೇಸಿಎಂ’ ಪೋಸ್ಟರ್‌ ಪ್ರಕರಣ ಗುರುವಾರ ವಿಧಾನಪರಿಷತ್‌ನಲ್ಲಿ ಕೋಲಾಹಲ ಸೃಷ್ಟಿಸಿತು. ಗದ್ದಲ, ಧರಣಿ ನಡುವೆಯೇ ಪ್ರಶ್ನೋತ್ತರ ಮತ್ತು ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆಯಲಾಯಿತು. ಸಭಾಪತಿಗಳ ಧೋರಣೆ ಖಂಡಿಸಿ ಕಾಂಗ್ರೆಸ್‌ ಸದಸ್ಯರು ಪೀಠಕ್ಕೆ ಮುತ್ತಿಗೆ ಹಾಕಿ, ಧಿಕ್ಕಾರ ಹಾಕಿದರು.

ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್‌ ಸದಸ್ಯರು ‘ಶೇ 40ರ ಸರ್ಕಾರ’ ಎನ್ನುವ ಮಾಸ್ಕ್‌ಗಳನ್ನು ಧರಿಸಿ ಸಭಾಪತಿ ಪೀಠದ ಮುಂದೆ ಧರಣಿ ನಡೆಸಿದರು. ತಮ್ಮ ಪಕ್ಷದ ಸಾಮಾಜಿಕ ಜಾಲತಾಣ ಘಟಕದ ಇಬ್ಬರು ಕಾರ್ಯಕರ್ತರನ್ನು ಬಂಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ಜತೆಗೆ, ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿ ಪ್ರದರ್ಶಿಸಿದರು.

‘ಸರ್ಕಾರ ಏಕಪಕ್ಷೀಯವಾಗಿ ನಡೆದುಕೊಂಡಿದೆ. ಮಧ್ಯರಾತ್ರಿ ಮನೆಗೆ ತೆರಳಿ ಅಮಾಯಕರನ್ನು ಬಂಧಿಸಲಾಗಿದೆ. ಅವರೇನು ಭಯೋತ್ಪಾದಕರಾ? ಬಿಜೆಪಿಯವರು ಸಹ ಕಾಂಗ್ರೆಸ್ ನಾಯಕರ ಪೋಸ್ಟರ್‌ಗಳನ್ನು ಅಂಟಿಸಿದ್ದರೂ ಕ್ರಮಕೈಗೊಂಡಿಲ್ಲ. ಎಲ್ಲರಿಗೂ ಒಂದೇ ಕಾನೂನು. ನಿಮಗೆ ದಮ್‌ ಇದ್ದರೆ ಕ್ರಮಕೈಗೊಳ್ಳಿ’ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದರು.

ಇದಕ್ಕೆ ಪ್ರತಿಯಾಗಿ ಎದ್ದು ನಿಂತ ಬಿಜೆಪಿ ಸದಸ್ಯರು, ‘ಕಾಂಗ್ರೆಸ್‌ನವರು ಹೇಡಿಗಳು’ ಎಂದು ಟೀಕಿಸಿದರು.‘ನೀವು ರಣಹೇಡಿಗಳು. ಇಡಿ, ಸಿಬಿಐ ದುರ್ಬಳಕೆ ಮಾಡಿಕೊಳ್ಳುವ ಹೇಡಿಗಳು’ ಎಂದು ಕಾಂಗ್ರೆಸ್‌ ಸದಸ್ಯರು ವಾಗ್ದಾಳಿ ನಡೆಸಿದರು.

ಗದ್ದಲ ಉಂಟಾಗಿದ್ದರಿಂದ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಅವರು ಸದನದ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಕಲಾಪ ಮತ್ತೆ ಆರಂಭವಾದಾಗಲೂ ಧರಣಿ ಮುಂದುವರಿಯಿತು. ಆಗ ಬಿಜೆಪಿ ಸದಸ್ಯರು ಕಾಂಗ್ರೆಸ್‌ ಅವಧಿಯಲ್ಲಿನ ಭ್ರಷ್ಟಾಚಾರದ ಆರೋಪಗಳ ಫಲಕಗಳನ್ನು ಪ್ರದರ್ಶಿಸಿದರು.

‘ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಪೋಸ್ಟರ್‌ಗಳನ್ನು ಅಂಟಿಸಿರುವ ಬಗ್ಗೆ ದೂರುಗಳನ್ನು ನೀಡಿದರೆ ಸರ್ಕಾರ ಕ್ರಮಕೈಗೊಳ್ಳುತ್ತದೆ. ಮುಖ್ಯಮಂತ್ರಿ ಅವರ ಚಾರಿತ್ರ್ಯವಧೆ ನೋಡಿಕೊಂಡು ಸುಮ್ಮನೆ ಕೂರಬೇಕಾ?’ ಎಂದು ಕಾನೂನು ಸಚಿವಜೆ.ಸಿ. ಮಾಧುಸ್ವಾಮಿ ಪ್ರಶ್ನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಶೇ 40 ಏಕೆ? ಶೇ 100ರವರೆಗೂ ಚರ್ಚೆಗೂ ಸಿದ್ಧ. ಪ್ರಶ್ನೋತ್ತರಕ್ಕೆ ಅಡ್ಡಿಪಡಿಸಿ ಧರಣಿ ಮಾಡಬೇಡಿ’ ಎಂದರು.

ಆರೋಪ–ಪ್ರತ್ಯಾರೋಪಗಳ ಗದ್ದಲದ ಮಧ್ಯೆಯೇ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆಗೂ ಯಾವುದೇ ರೀತಿ ಚರ್ಚೆ ಇಲ್ಲದೆಯೇ ಧ್ವನಿಮತದ ಮೂಲಕ ಅನುಮೋದನೆ ಪಡೆಯಲಾಯಿತು.

ಸಭಾಪತಿ ಧೋರಣೆಗೆ ಕಾಂಗ್ರೆಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಹಾಕಿದರಲ್ಲದೇ, ಸಭಾಪತಿ ಪೀಠಕ್ಕೆ ಮುತ್ತಿಗೆ ಹಾಕಿ ಸುತ್ತುವರಿದರು. ತಕ್ಷಣವೇ ಮಾರ್ಷಲ್‌ಗಳು ಸಭಾಪತಿ ರಕ್ಷಣೆ ಧಾವಿಸಿದರು.

ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್‌ ರಾಠೋಡ್‌, ಜೆಡಿಎಸ್‌ನ ಮರಿತಿಬ್ಬೇಗೌಡ, ಕಾಂಗ್ರೆಸ್‌ನ ಸುನೀಲ್‌ಗೌಡ ಪಾಟೀಲ ಅವರು ಕುರ್ಚಿಗಳ ಮೇಲೆ ನಿಂತು ಧಿಕ್ಕಾರ ಕೂಗಿ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT