ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನಲಾಗಿ ಹರಿದ ಕನ್ನಡ ಪ್ರೇಮ...

Last Updated 1 ನವೆಂಬರ್ 2022, 20:49 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರವನ್ನು ಸಣ್ಣಗೆ ಆವರಿಸಿದ್ದ ಕಾರ್ತೀಕ ಮಾಸದ ಹಿತವಾದ ಚಳಿ, ಶರದೃತುವಿನಲ್ಲೂ ಸುರಿದ ವರ್ಷಧಾರೆ, ಕಣ್ಣು ಹಾಯಿಸಿದ ಕಡೆಯೆಲ್ಲಾ ಕನ್ನಡದ ಬಾವುಟಗಳ ಶೃಂಗಾರ, ಕೆಂಪೇಗೌಡ ರಸ್ತೆ ಸೇರಿ ಅಲ್ಲಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರ ಹೊತ್ತ ಮೆರವಣಿಗೆಗಳು, ಬಾಜಾ ಭಜಂತ್ರಿಯ ಅಬ್ಬರ, ಸಂತೋಷದಲ್ಲಿ ಹೆಣ್ಣು–ಗಂಡುಗಳ ಕುಣಿತ, ಮೆಟ್ರೊ ರೈಲುಗಳಲ್ಲಿ ವಿಧಾನಸೌಧದತ್ತ ಧಾವಿಸುತ್ತಿದ್ದ ಅಭಿಮಾನಿಗಳಿಂದ ನಾಡದೇವಿಗೆ,ನಟ ಪುನೀತ್‌ ರಾಜ್‌ಕುಮಾರ್‌ಗೆ ಭರಪೂರ ಗೌರವ, ಸಿಂಗಾರಗೊಂಡ ಸಿಟಿ ಬಸ್‌ಗಳು, ಕಾರುಗಳು, ರಿಕ್ಷಾಗಳು, ದ್ವಿಚಕ್ರ ವಾಹನಗಳು; ಹೋಟೆಲು, ಕಚೇರಿಗಳಲ್ಲಿ ಮಾರ್ದನಿಸುತ್ತಿದ್ದ ನೆಲ–ಜಲ ಅಭಿಮಾನ ಪ್ರತೀಕದ ಭಾವಗೀತೆಗಳ ಅನುರಣನ...!

ಮಂಗಳವಾರ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಎಲ್ಲೆಡೆ ಕಂಡುಬಂದ ಹಬ್ಬದ ವಾತಾವರಣವಿದು. ಹಳದಿ, ಕೆಂಪು ಬಣ್ಣದ ಅಂಗಿ–ಪ್ಯಾಂಟ್ ತೊಟ್ಟ ಪುರುಷರು, ರವಿಕೆ–ಸೀರೆ ಉಟ್ಟು ಕಂಗೊಳಿಸುತ್ತಿದ್ದ ಮಹಿಳೆಯರು, ಹೊದ್ದ ಶಾಲು, ಹೂವಿನ ಹಾರಗಳಲ್ಲೂ ಇದೇ ವರ್ಣ ಸಂಯೋಜನೆಯ ಝಲಕುಗಳನ್ನು ಪ್ರದರ್ಶಿಸುತ್ತಾ ಕನ್ನಡತನದ ಹೆಮ್ಮೆ ಮೆರೆದ ಸಂಘಟನೆಗಳ ಯುವಪಡೆಯ ಉತ್ಸಾಹಕ್ಕೆ ಎಣೆ ಇರಲಿಲ್ಲ.

ಸಾರ್ವತ್ರಿಕ ರಜೆ ಹಾಗೂ ಇನ್ನೂ ದಸರಾ ದೀಪಾವಳಿಯ ರಿಯಾಯ್ತಿಗಳು ಚಾಲ್ತಿಯಲ್ಲಿದ್ದ ಕಾರಣ ಮೈಸೂರು ಬ್ಯಾಂಕ್‌, ಅವೆನ್ಯೂ ರಸ್ತೆ, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ಬಸವನಗುಡಿ, ಜಯನಗರದಂತಹ ಸಾಂಪ್ರದಾಯಿಕ ಮಾರುಕಟ್ಟೆಪ್ರದೇಶಗಳಲ್ಲಿ ಗ್ರಾಹಕರ ಖರೀದಿ ಭರಾಟೆಯೂ ಹೆಚ್ಚಿತ್ತು.

ಅತ್ತ ಮತ್ತೊಂದು ತುದಿಯಲ್ಲಿ ಕಾರ್ಲ್ ಝಾಯೀಸ್ ಇಂಡಿಯಾ ಪ್ರೈ. ಲಿಮಿಟೆಡ್ಸಾಫ್ಟ್‌ವೇರ್‌ ಕಂಪನಿಯ ಸಿಬ್ಬಂದಿ, ನೌಕರರು, ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ಮಾಡಿ, ಸಿಹಿ ಅಂಚಿ, ಬೊಮ್ಮಸಂದ್ರ ಜಿಗಣಿ ಲಿಂಕ್ ರಸ್ತೆಯನ್ನು ಸ್ವಚ್ಛಗೊಳಿಸಿದರು. ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಶಟ್ಟಿ, ಅತಿಥಿಗಳಾದ ಡಾ. ರಾಮಮೂರ್ತಿ ಶುಕ್ಲಾ, ಸುದರ್ಶನ್ ರಾಮಯ್ಯ, ಸತ್ಯಾಧರ ಮಿಶ್ರಾ, ಮನೋಜ್ ಶರ್ಮಾ, ಹರ್ಷಾ, ಮಹೇಶ್, ಮಂಜು, ಸತೀಶ್ ಬಣ ಈ ಅರ್ಥಪೂರ್ಣ ಕಾರ್ಯಕ್ಕೆ ಸಾಕ್ಷಿಯಾಯಿತು.

ಸಾರ್ವಜನಿಕರಿಗೆ ಸಿಹಿ ಹಂಚಿಕೆ, ಲಘು ಫಲಾಹಾರ ವಿತರಣೆಯಂತಹ ಹತ್ತಾರು ಕಾರ್ಯಕ್ರಮಗಳಿಗೆ ಶ್ರೀಗಣೇಶ ರೂಪವಾಗಿ ಖ್ಯಾತ ನಟ ಎಚ್.ಜಿ.ದತ್ತಾತ್ರೇಯ (ದತ್ತಣ್ಣ) ಅವರುಬಸವನಗುಡಿಯ ಯೂನಿಯನ್‌ ಅಂಡ್‌ ಸರ್ವೀಸ್‌ ಕ್ಲಬ್‌ ಆವರಣದಲ್ಲಿ ಕನ್ನಡಕ್ಕಾಗಿ
ನಡೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಬೆಳಗಿನ ಚುಮುಚುಮು ಚಳಿಯಲ್ಲಿ
ಕನ್ನಡಾಭಿಮಾನಿಗಳು ಎರಡು ಕಿ.ಮೀ ದೂರ ನಡೆದು ಸ್ವಾತಂತ್ರ್ಯ ಪೂರ್ವದಲ್ಲಿ ಹೋರಾಟಗಾರರ ಪ್ರಭಾತ ಫೇರಿ ನೆನಪಿಸಿದರು. ಕೆಲವಡೆ ಧೋ ಎಂದು ಸುರಿದ ಮಳೆ ಸಂಜೆಯ ಆರ್ಕೆಸ್ಟ್ರಾ, ಮನರಂಜನೆ ಕಾರ್ಯಕ್ರಮಗಳಿಗೆ ಕೊಂಚ ಅಡ್ಡಿಯುಂಟು ಮಾಡಿದರೂ ರಾಜ್ಯೋತ್ಸವದ ರಂಗು ವರ್ಣರಂಜಿತ ದೀಪಗಳ ಝಗಮಗದಲ್ಲಿ ನಾವೀನ್ಯಪೂರ್ಣ
ವಾಗಿಯೇ ಕಂಗೊಳಿಸಿತು.

‘ಪ‍್ರಾಚೀನ ಲಿಪಿಗಳಲ್ಲಿ ಕನ್ನಡವೂ ಒಂದು’

ಬೆಂಗಳೂರು:‘ಹಿಂದೆ ಸಂಸ್ಕೃತಕ್ಕೂ ಲಿಪಿ ಇರಲಿಲ್ಲ, ಸಂಸ್ಕೃತ ಶಾಸನಗಳು ಸಹ ಮುಖ್ಯ ಕನ್ನಡದಲ್ಲೇ ಬರೆಯಲ್ಪಟ್ಟಿವೆ. ಕೇಂದ್ರ ಸರ್ಕಾರ ಮಾನ್ಯ ಮಾಡಿರುವ ಶಾಸ್ತ್ರೀಯ ಭಾಷೆಗಳಲ್ಲಿ ಪ್ರಾಚೀನ ಭಾಷೆ ಮತ್ತು ಲಿಪಿಯನ್ನು ಹೊಂದಿರುವ ಭಾಷೆ ಕನ್ನಡ’ ಎಂದು ಸಾಹಿತಿ ಪಿ.ವಿ.ನಾರಾಯಣ ಅಭಿಪ್ರಾಯಪಟ್ಟರು.

ನಗರ ಜಿಲ್ಲಾ ಕಸಾಪ ವತಿಯಿಂದ ಲಾಲ್‌ಬಾಗ್‌ ಪಶ್ಚಿಮ ದ್ವಾರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,‘ಮೊದಲ ತೀರ್ಥಂಕರರು ತಮ್ಮ ಪುತ್ರಿ ಬ್ರಾಹ್ಮಿಗೆ ಅಕ್ಷರ ಕಲಿಸಿದರೆಂದು ಪಂಪ ಬರೆದಿದ್ದಾನೆ. ಬ್ರಾಹ್ಮಿ ಬರೆದ ಅಕ್ಷರಗಳೇ ಬ್ರಾಹ್ಮಿ ಲಿಪಿಯಾಗಿದೆ’ ಎಂದು ವಿಶ್ಲೇಷಿಸಿದರು.

ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎಲ್. ಹರ್ಷ, ಡಾ. ಹಂ.ಗು. ರಾಜೇಶ್, ನಾಗರಾಜಸ್ವಾಮಿ, ಮಾಗಡಿ ಗಿರೀಶ್, ಇಂದಿರಾ ಶರಣ, ವಿಜಯಲಕ್ಷ್ಮಿ ಸತ್ಯಮೂರ್ತಿ, ಎಸ್.ತಿಮ್ಮಯ್ಯ, ಸಿ. ಮುನಿಕೃಷ್ಣ, ಪರಿಸರ ರಾಮಕೃಷ್ಣ ಮತ್ತು ವಿವಿಧ ವಿಧಾನಸಭಾ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT