ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳಿಗೆ ಬೇಡವಾದ ಆಸ್ಪತ್ರೆ ಚಿಕಿತ್ಸೆ!

ಸೋಂಕಿತರ ಸಂಖ್ಯೆ ಹೆಚ್ಚಿದರೂ ಹಾಸಿಗೆಗಳು ಖಾಲಿ: ಸರ್ಕಾರಿ ಆಸ್ಪತ್ರೆಗಳ ಮೇಲಿನ ಭಾರ ಇಳಿಕೆ
Last Updated 7 ಸೆಪ್ಟೆಂಬರ್ 2020, 1:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರು ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗಲು ಹಿಂದೇಟು ಹಾಕಲಾರಂಭಿಸಿದ್ದಾರೆ. ಇದರಿಂದಾಗಿ ಶೇ 50ರಷ್ಟು ಹಾಸಿಗೆಗಳು ಖಾಲಿ ಉಳಿದಿವೆ.

ನಗರದಲ್ಲಿ ಜುಲೈ ಮೊದಲ ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯತ್ತ ಮುಖಮಾಡಿದ್ದರಿಂದ ಕೋವಿಡ್ ಆಸ್ಪತ್ರೆಗಳಾದ ವಿಕ್ಟೋರಿಯಾ ಹಾಗೂ ಬೌರಿಂಗ್‌ನಲ್ಲಿ ಬಹುತೇಕ ಹಾಸಿಗೆಗಳು ಭರ್ತಿಯಾಗಿತ್ತು. ಹೀಗಾಗಿ ಆರೋಗ್ಯ ಇಲಾಖೆಯು 12 ಸರ್ಕಾರಿ ಆಸ್ಪತ್ರೆಗಳನ್ನು ಗುರುತಿಸಿ, ಅಲ್ಲಿ ಕೋವಿಡ್ ಚಿಕಿತ್ಸೆ ಪ್ರಾರಂಭಿಸಿತು. ಅಷ್ಟಾಗಿಯೂ ಅನೇಕ ರೋಗಿಗಳು ಹಾಸಿಗೆಗಳು ಸಿಗದಿದ್ದರಿಂದ ಹಜ್ ಭವನ, ಶ್ರೀ ಶ್ರೀ ರವಿಶಂಕರ ಗುರೂಜಿ ಆಶ್ರಮ, ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) ಸೇರಿದಂತೆ ನಗರದ ವಿವಿಧೆಡೆ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಖಾಸಗಿ ಆಸ್ಪತ್ರೆಗಳಿಗೆ ಕೂಡ ದರ ನಿಗದಿಪಡಿಸಿ, ಚಿಕಿತ್ಸೆಗೆ ಅವಕಾಶ ನೀಡಲಾಯಿತು.

ನಗರದಲ್ಲಿ 73 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ, ಶೇ 50ರಷ್ಟು ಹಾಸಿಗೆಗಳನ್ನು ಸರ್ಕಾರ ಶಿಫಾರಸು ಮಾಡುವ ರೋಗಿಗಳಿಗೆ ಮೀಸಲಿಡಲು ಆರೋಗ್ಯ ಇಲಾಖೆ ಸೂಚಿಸಿತು. ಈ ನಡುವೆ, ಜುಲೈ ಮೊದಲ ವಾರದಲ್ಲಿ ಮನೆ ಆರೈಕೆಗೆ ಅವಕಾಶ ನೀಡಲಾಯಿತು. ಇದರಿಂದಾಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುವವರ ಸಂಖ್ಯೆ ಇಳಿಕೆಯತ್ತ ಮುಖಮಾಡಿತು. ಇದೀಗ ಮನೆ ಆರೈಕೆಯ ಅವಕಾಶವನ್ನು ಕೋವಿಡೇತರ ಕಾಯಿಲೆ ಇರುವವರು ಹಾಗೂ 60 ವರ್ಷದ ಒಳಗಿನವರಿಗೆ ವಿಸ್ತರಿಸಲಾಗಿದೆ.

ಆಸ್ಪತ್ರೆಗಳ ಮೇಲಿನ ಭಾರ ಇಳಿಕೆ: ಸದ್ಯ ನಗರದಲ್ಲಿ 39 ಸಾವಿರಕ್ಕೂ ಅಧಿಕ ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಆಸ್ಪತ್ರೆಗಳು ಹಾಗೂ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿರುವ 13,337 ಹಾಸಿಗೆಗಳ ಪೈಕಿ 6,060 ಹಾಸಿಗೆಗಳು ಖಾಲಿ ಇವೆ.

‘ಬಹುತೇಕ ಕೋವಿಡ್ ರೋಗಿಗಳಿಗೆ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿಲ್ಲ. ಅಂತಹವರು ಹೆಚ್ಚಾಗಿ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಬೆಂಗಳೂರು ನಗರ ಜಿಲ್ಲಾ ಶಸ್ತ್ರಚಿಕಿತ್ಸಕಡಾ. ಅನ್ಸರ್ ಅಹಮದ್ ತಿಳಿಸಿದರು.

‘ಪ್ರಾರಂಭಿಕ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದವು. ಈಗ ಬಹುತೇಕ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ಆರಂಭಿಸಿವೆ. ಇದರಿಂದಾಗಿ ಹಾಸಿಗೆಗಳು ಖಾಲಿ ಉಳಿಯುತ್ತಿವೆ’ ಎಂದು ಹೇಳಿದರು.

ಎಲ್ಲ ಬಗೆಯ ಚಿಕಿತ್ಸೆ ಪ್ರಾರಂಭ

ಕೋವಿಡ್‌ ಆಸ್ಪತ್ರೆಗಳು ಹಾಗೂ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಬಗೆಯ ಚಿಕಿತ್ಸೆಗಳನ್ನು ಮೊದಲಿನಂತೆಯೇ ಪ್ರಾರಂಭಿಸಲುಆರೋಗ್ಯ ಇಲಾಖೆ ಮುಂದಾಗಿದೆ.

‘ಕೋವಿಡ್ ಆಸ್ಪತ್ರೆ ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಮಸ್ಯೆಯಾಗದಂತೆ ಚಿಕಿತ್ಸೆಗಳು ಹಾಗೂ ಶಸ್ತ್ರಚಿಕಿತ್ಸೆಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ಆಸ್ಪತ್ರೆಗೆ ಬಂದವರಿಗೆ ಆ್ಯಂಟಿಜೆನ್ ಪರೀಕ್ಷೆ ನಡೆಸಲಾಗುತ್ತದೆ. ವ್ಯಕ್ತಿಗೆ ಸೋಂಕು ತಗುಲಿಲ್ಲ ಎನ್ನುವುದು ಖಚಿತವಾದಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

***

ಕೋವಿಡ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದ್ದು, ಇದು ಸಾಮಾನ್ಯ ಸೋಂಕು ಎನ್ನುವುದು ಅರಿವಿಗೆ ಬಂದಿದೆ. ಹೀಗಾಗಿ ಆಸ್ಪತ್ರೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ

– ಡಾ.ಜಿ.ಎ.ಶ್ರೀನಿವಾಸ್ಜಿ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT