ಭಾನುವಾರ, ಅಕ್ಟೋಬರ್ 2, 2022
21 °C

ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕೆನ್ನುತ್ತಿದ್ದಾರೆ: ಸಿಎಂ ಕೆಸಿಆರ್ ಹೇಳಿಕೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ವಿಕಾರಾಬಾದ್ (ತೆಲಂಗಾಣ): ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿಕೊಳ್ಳಬೇಕು ಎಂಬ ಅರ್ಥದಲ್ಲಿ ಉದ್ಧಟತನದ ಮಾತನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆಡಿರುವುದು ವರದಿಯಾಗಿದೆ.

‘ರಾಯಚೂರು ಜಿಲ್ಲೆಯ ಜನ ತಮ್ಮನ್ನು ತೆಲಂಗಾಣಕ್ಕೆ ಸೇರಿಸಿಕೊಳ್ಳಿ ಎಂದು ನನ್ನನ್ನು ಒತ್ತಾಯಿಸುತ್ತಿದ್ದಾರೆ’ ಎಂದು ಕೆಸಿಆರ್ ವಿಕಾರಾಬಾದ್‌ನಲ್ಲಿ ಬುಧವಾರ ಹೇಳಿದ್ದಾರೆ.

2016 ರಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಕಾರಾಬಾದ್ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕಚೇರಿ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ.

‘ಬಿಜೆಪಿ ಧ್ವಜಗಳಿಗೆ ಮೋಸ ಹೋಗಬೇಡಿ. ತೆಲಂಗಾಣದಲ್ಲಿ ನಡೆಯುತ್ತಿರುವ ಕಲ್ಯಾಣ ಕಾರ್ಯಕ್ರಮಗಳನ್ನು ನೋಡಿ ರಾಯಚೂರು ಗಡಿ ಜನ ತೆಲಂಗಾಣ ರಾಜ್ಯ ಸೇರಬೇಕು ಎನ್ನುತ್ತಿದ್ದಾರೆ’ ಎಂದು ಕೆಸಿಆರ್ ಹೇಳಿದ್ದಾರೆ.

ಕೆಸಿಆರ್ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ಕರ್ನಾಟಕ ಸಿಎಂ ಬೊಮ್ಮಾಯಿ ಅವರು ಈ ಬಗ್ಗೆ ಏನೂ ಹೇಳದಿರುವುದು ದುರಾದೃಷ್ಟಕರ ಎಂದು ಟ್ವೀಟ್ ಮಾಡಿದ್ದಾರೆ.

ಹಾಗೆಯೇ ಕೆಸಿಆರ್ ಮಗ, ಸಚಿವ ಕೆ.ಟಿ ರಾಮಾರಾವ್ ಅವರು, ‘ರಾಯಚೂರು ಬಿಜೆಪಿ ಶಾಸಕ ಡಾ. ಶಿವರಾಜ ಪಾಟೀಲ ರಾಯಚೂರನ್ನು ತೆಲಂಗಾಣದ ಜೊತೆ ವಿಲೀನ ಮಾಡಬೇಕೆಂದು ಕೇಳಿಕೊಂಡಿದ್ದಾರೆ’ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದರು.

ಡಾ.ಶಿವರಾಜ ಪಾಟೀಲ ಅವರು ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೇಳಿದ್ದರು. ಈಗ ಅದೇ ವಿಡಿಯೊ ಇಟ್ಟುಕೊಂಡು ಟಿಆರ್‌ಎಸ್‌ನವರು ರಾಯಚೂರು ತೆಲಂಗಾಣಕ್ಕೆ ಸೇರಬೇಕು ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ.

ಇನ್ನು ಇದೇ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೆಸಿಆರ್, ಪ್ರಧಾನಿ ನರೇಂದ್ರ ಮೋದಿ ತೆಲಂಗಾಣದ ಶತ್ರು ಎಂದು ಘೋಷಣೆ ಮಾಡಿದ್ದಾರೆ.

ರಾಯಚೂರು ಜಿಲ್ಲೆ ಬಹುಪಾಲು ವಿಕಾರಾಬಾದ್ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿದೆ. 2014 ರಲ್ಲಿ ತೆಲಂಗಾಣ ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಅಂದಿನಿಂದ ಕೆಸಿಆರ್‌ ಅವರ ಟಿಆರ್‌ಎಸ್ ಪಕ್ಷ ಆ ರಾಜ್ಯದಲ್ಲಿ ಅಧಿಕಾರದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು