ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ಅವಧಿಯ ದೂರವಾಣಿ ಕದ್ದಾಲಿಕೆ ಪ್ರಕರಣ: ವಿಚಾರಣೆಗೆ ನಕಾರ

ನಿಲುವು ಬದಲಿಸಿದ ಬಿಎಸ್‌ವೈ?
Last Updated 7 ಜನವರಿ 2021, 21:56 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದಿದ್ದ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಹಿರಿಯ ಐಪಿಎಸ್‌ ಅಧಿಕಾರಿಯೂ ಸೇರಿದಂತೆ ನಾಲ್ವರು ಪೊಲೀಸ್‌ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದು ಸಂದೇಹಗಳಿಗೆ ಕಾರಣವಾಗಿದೆ.

ಪ್ರಕರಣದ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿರುವ ಸಿಬಿಐ, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರ ಶ್ರೇಣಿಯ ಒಬ್ಬ ಐಪಿಎಸ್‌ ಅಧಿಕಾರಿ ಮತ್ತು ರಾಜ್ಯ ಪೊಲೀಸ್ ಸೇವೆಯ ಮೂವರು ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ನವೆಂಬರ್‌ ಅಂತ್ಯದಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಆದರೆ, ಒಂದೂವರೆ ತಿಂಗಳಿನಿಂದ ಪ್ರಸ್ತಾವವನ್ನು ಬಾಕಿ ಇರಿಸಿಕೊಂಡಿರುವ ಸರ್ಕಾರ, ಈಗ ಅಡ್ವೊಕೇಟ್‌ ಜನರಲ್‌ ಅವರಿಂದ ಕಾನೂನು ಸಲಹೆ ಕೋರಿದೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಐಪಿಎಸ್‌ ಅಧಿಕಾರಿ ಮತ್ತು ಇತರ ಮೂವರು ಪೊಲೀಸ್‌ ಅಧಿಕಾರಿಗಳು ಸೇರಿಕೊಂಡು ಅಕ್ರಮವಾಗಿ ದೂರವಾಣಿ ಕದ್ದಾಲಿಕೆ ನಡೆಸಿರುವುದು ಸಿಬಿಐ ತನಿಖೆಯಲ್ಲಿ ದೃಢಪಟ್ಟಿದೆ. ಅಧಿಕಾರಿಗಳ ಬಳಿಯಲ್ಲೇ ತನಿಖಾ ತಂಡ ಸಾಕ್ಷ್ಯಗಳನ್ನು ಪತ್ತೆಮಾಡಿದೆ. ನಾಲ್ವರ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಅಡಿಯಲ್ಲಿ ಅನುಮತಿ ಕೋರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದು ಗೃಹ ಇಲಾಖೆ, ಮುಖ್ಯಮಂತ್ರಿ ಕಚೇರಿಯವರೆಗೂ ತಲುಪಿತ್ತು. ಕೆಲವು ದಿನಗಳ ಹಿಂದೆ ಅಡ್ವೊಕೇಟ್‌ ಜನರಲ್‌ ಕಚೇರಿಗೆರವಾನೆ ಆಗಿದೆ’ ಎಂದು ಮೂಲಗಳು ಖಚಿತಪಡಿಸಿವೆ.

ರಾಜಕೀಯ ಒತ್ತಡದ ಕಾರಣದಿಂದ ಈ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧಆರೋಪಪಟ್ಟಿ ಸಲ್ಲಿಸಲು ಅನುಮತಿ ನಿರಾಕರಿಸುವ ತೀರ್ಮಾನಕ್ಕೆ ಬರಲಾಗಿದೆ. ಈ ಕಾರಣಕ್ಕಾಗಿಯೇ ಕಡತವನ್ನು ಅಡ್ವೊಕೇಟ್‌ ಜನರಲ್‌ ಕಚೇರಿಗೆ ರವಾನಿಸಲಾಗಿದೆ. ಅವರ ಸಲಹೆ ಆಧರಿಸಿ ಸಿಬಿಐ ಕೋರಿಕೆಯನ್ನು ತಿರಸ್ಕರಿಸುವ ನಿರ್ಧಾರವನ್ನು ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮುಂದಾಗಿದ್ದಾರೆ ಎಂಬ ಮಾಹಿತಿ ಸಚಿವಾಲಯದ ಮೂಲಗಳಿಂದ ಹೊರಬಿದ್ದಿದೆ.ಈ ವಿಚಾರದ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಯಾವುದೇ ಪ್ರತಿಕ್ರಿಯೆ ಅಥವಾ ಮಾಹಿತಿ ನೀಡಲು ನಿರಾಕರಿಸಿದರು.

ತನಿಖೆಗೆ ಆದೇಶಿಸಿದ್ದ ಬಿಎಸ್‌ವೈ: 2019ರ ಆಗಸ್ಟ್‌ನಲ್ಲಿ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಹುದ್ದೆಗೆ ನೇಮಕಗೊಂಡಿದ್ದ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಮತ್ತು ಇತರ ವ್ಯಕ್ತಿಯೊಬ್ಬರ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕು ಕೆಲವು ದಿನಗಳ ಬಳಿಕ ಬಹಿರಂಗಗೊಂಡಿತ್ತು. ಸಿಸಿಬಿ ಡಿಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು.

ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ನ ತಾಂತ್ರಿಕ ನೆರವು ಕೇಂದ್ರದ ಅಧಿಕಾರಿಗಳೇ ದೂರವಾಣಿ ಕದ್ದಾಲಿಕೆಯಲ್ಲಿ ಭಾಗಿಯಾಗಿದ್ದರು ಎಂಬ ಅಂಶ ತನಿಖೆಯಲ್ಲಿ ಬಯಲಿಗೆ ಬಂದಿತ್ತು. ಹಿಂದಿನ ಕಮಿಷನರ್‌ ಆಗಿದ್ದ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಅವರ ನಿರ್ದೇಶನದಂತೆ ದೂರವಾಣಿ ಕದ್ದಾಲಿಕೆ ನಡೆಸಿರುವುದಾಗಿ ಕಿರಿಯ ಪೊಲೀಸ್‌ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದರು.

2018ರ ಆಗಸ್ಟ್‌ 2ರಿಂದ 2019ರ ಆ. 19ರ ಅವಧಿಯವರೆಗೂ ನಡೆದಿರಬಹುದಾದ ದೂರವಾಣಿ ಕದ್ದಾಲಿಕೆಯ ಸಮಗ್ರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ 2019ರ ಆ.19ರಂದು ಪ್ರಕಟಿಸಿತ್ತು. ಸಿಬಿಐ ಎಸಿಯು–5ನೇ ಘಟಕದ ವಿಶೇಷ ತನಿಖಾ ತಂಡ 2019ರ ಆ.30ರಂದು ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿತ್ತು.

ತನಿಖೆಯ ಅವಧಿಯಲ್ಲಿ ಅಲೋಕ್‌ ಕುಮಾರ್ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ಮಾಡಿ, ಶೋಧ ನಡೆಸಲಾಗಿತ್ತು. ಆರೋಪಿತ ಅಧಿಕಾರಿಗಳನ್ನು ಸುದೀರ್ಘ ಅವಧಿಯವರೆಗೆ ವಿಚಾರಣೆಯನ್ನೂ ನಡೆಸಲಾಗಿತ್ತು. ದೂರವಾಣಿ ಕದ್ದಾಲಿಕೆ ನಡೆಸಿರುವುದಕ್ಕೆ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಸಿಬಿಐ, ಆರೋಪಪಟ್ಟಿಯನ್ನೂ ಸಿದ್ಧಪಡಿಸಿಕೊಂಡಿದೆ ಎಂಬ ಮಾಹಿತಿ ಲಭಿಸಿದೆ.

ಪ್ರಭಾವಿ ರಾಜಕಾರಣಿಗಳ ಒತ್ತಡ?:

ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡದಂತೆ ರಾಜ್ಯದ ಪ್ರಭಾವಿ ರಾಜಕಾರಣಿಗಳ ಕುಟುಂಬವೊಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿದೆ. ಅದಕ್ಕೆ ಮಣಿದಿರುವ ಮುಖ್ಯಮಂತ್ರಿ ಅನುಮತಿ ನಿರಾಕರಣೆಗೆ ಮುಂದಾಗಿದ್ದಾರೆ ಎಂಬ ಸುದ್ದಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಈ ಪ್ರಕರಣದಲ್ಲಿ ಹಿಂದಿನ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದ ಸಚಿವರು, ಶಾಸಕರು, ಪ್ರಭಾವಿ ರಾಜಕಾರಣಿಗಳು ಮತ್ತು ಕೆಲವು ಮಠಾಧೀಶರ ದೂರವಾಣಿಗಳನ್ನೂ ಕದ್ದಾಲಿಕೆ ಮಾಡಲಾಗಿದೆ. ಈ ಸಂಗತಿಗಳು ಹೊರಬರದಂತೆ ತಡೆಯಲು ವಿಚಾರಣೆಗೆ ತಡೆ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT