ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ನಿಂದನೆ ಕಾನೂನು ಪ್ರಶ್ನಿಸಿ ಪಿಐಎಲ್‌

ಕೇಂದ್ರಕ್ಕೆ ನೋಟಿಸ್‌ ಜಾರಿಗೆ ಆದೇಶ
Last Updated 12 ಜನವರಿ 2021, 16:26 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಂಗ ನಿಂದನೆ ಕಾಯ್ದೆ–1971ರ ಸೆಕ್ಷನ್‌ 2(ಸಿ)(ಐ)ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಿರಿಯ ಪತ್ರಕರ್ತರಾದ ಎನ್‌. ರಾಮ್‌, ಕೃಷ್ಣಪ್ರಸಾದ್‌, ಕೇಂದ್ರದ ಮಾಜಿ ಸಚಿವ ಅರುಣ್‌ ಶೌರಿ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಪ್ರಶಾಂತ್‌ ಭೂಷಣ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ವಿಚಾರಣೆ ಆರಂಭಿಸಿರುವ ಹೈಕೋರ್ಟ್‌, ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡುವಂತೆ ಮಂಗಳವಾರ ಆದೇಶಿಸಿದೆ.

‘ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್‌ 2(ಸಿ) (ಐ) ಸಂವಿಧಾನದ 14 ಮತ್ತು 19ನೇ ವಿಧಿಗಳಿಗೆ ವಿರುದ್ಧವಾಗಿದೆ. ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಮತ್ತು ಅಭಿಪ್ರಾಯ ರೂಪಿಸುವವರು ಈ ಸೆಕ್ಷನ್‌ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳಿಂದ ಆತಂಕಗೊಂಡಿದ್ದಾರೆ. ನ್ಯಾಯಾಂಗ ನಿಂದನೆ ಕಾಯ್ದೆ, ಅದರಲ್ಲೂ ವಿಶೇಷವಾಗಿ ಸೆಕ್ಷನ್‌ 2(ಸಿ)(ಐ)ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ನಾವೆಲ್ಲರೂ ಆಗಾಗ ಎದುರಿಸುತ್ತಿದ್ದೇವೆ’ ಎಂದು ಅರ್ಜಿದಾರರು ಹೇಳಿದ್ದಾರೆ.

ಸಂವಿಧಾನದ 19ನೇ ವಿಧಿಯ (1)(ಎ) ಉಪ ವಿಧಿಯ ಅಡಿಯಲ್ಲಿ ದತ್ತವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್‌ 2(ಸಿ)(ಐ) ಉಲ್ಲಂಘಿಸುತ್ತದೆ. ಸಂವಿಧಾನದ ವಿಧಿ 19(2)ರ ವ್ಯಾಪ್ತಿಗೂ ಸೇರುವುದಿಲ್ಲ. ‘ನ್ಯಾಯಾಂಗವನ್ನು ನಿಂದಿಸಿದ’ ಆರೋಪವು ವಸಾಹತುಶಾಹಿ ಕಲ್ಪನೆಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶ ಕಲ್ಪಿಸುವ ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ನ್ಯಾಯಾಂಗದಲ್ಲಿ ಈ ರೀತಿಯ ಕ್ರಮಕ್ಕೆ ಅವಕಾಶ ಇರುವುದಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

‘ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್‌ 2(ಸಿ)(ಐ)ಗೆ ಸಮಗ್ರವಾಗಿ ನಿಯಮಗಳನ್ನು ರಚಿಸಬೇಕು. ಸಹಜ ನ್ಯಾಯ ತತ್ವಗಳ ಉಲ್ಲಂಘನೆ ಆಗದಂತೆ ಹಾಗೂ ಯಾವುದೇ ನ್ಯಾಯಾಧೀಶರು ಸ್ವೇಚ್ಛಾಚಾರದಿಂದ ಈ ಅಧಿಕಾರವನ್ನು ಬಳಸಲು ಅವಕಾಶವಾಗದಂತೆ ನಿಯಮಗಳನ್ನು ರೂಪಸಿಬೇಕಿದೆ. ಈ ಸೆಕ್ಷನ್‌ ಅನ್ನು ಸಂವಿಧಾನಕ್ಕೆ ವಿರುದ್ಧವಾದುದು ಎಂದು ಘೋಷಿಸಬೇಕು. ಉನ್ನತ ನ್ಯಾಯಾಲಯಗಳಲ್ಲಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸುವಾಗ ಸಹಜ ನ್ಯಾಯ ತತ್ವಗಳ ಪಾಲನೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲೂ ನಿಯಮಗಳನ್ನು ರಚಿಸಬೇಕು’ ಎಂದು ಕೋರಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ, ಸಾಲಿಸಿಟರ್‌ ಜನರಲ್‌ ಅವರಿಗೆ ನೋಟಿಸ್‌ ಜಾರಿಗೆ ಆದೇಶಿಸಿತು. ಎನ್‌. ರಾಮ್‌, ಅರುಣ್‌ ಶೌರಿ ಮತ್ತು ಪ್ರಶಾಂತ್‌ ಭೂಷಣ್‌ 2020ರ ಆಗಸ್ಟ್‌ನಲ್ಲಿ ಇದೇ ಕೋರಿಕೆಯುಳ್ಳ ಅರ್ಜಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದರು. ಅರ್ಜಿ ಇತ್ಯರ್ಥಪಡಿಸಿದ್ದ ಸುಪ್ರೀಂಕೋರ್ಟ್‌, ಪುನಃ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಅವಕಾಶವನ್ನು ಮುಕ್ತವಾಗಿ ಇರಿಸಿತ್ತು. ಈ ಮೂವರೂ ಮಂಗಳವಾರದ ವಿಚಾರಣೆ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT