ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

99 ವರ್ಷಗಳ ಹಿಂದೆ ಕೋವಿಡ್‌ಗಿಂತಲೂ ಭೀಕರವಾಗಿ ಕಾಡಿತ್ತು ಪ್ಲೇಗ್‌

ರೋಗದ ಹೊಡೆತಕ್ಕೆ ಶೇ 7.46ರಷ್ಟು ಕುಸಿತ ಕಂಡಿದ್ದ ಕಲ್ಯಾಣ ಕರ್ನಾಟಕ ಭಾಗದ ಜನಸಂಖ್ಯೆ!
Last Updated 10 ಆಗಸ್ಟ್ 2020, 4:30 IST
ಅಕ್ಷರ ಗಾತ್ರ

ಕಲಬುರ್ಗಿ: ಸರಿಯಾಗಿ 99 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ‘ಪ್ಲೇಗ್‌’ ಕೂಡ ಆಗಿನ ಹೈದರಾಬಾದ್‌ ಕರ್ನಾಟಕ ಭಾಗ ತಲ್ಲಣಿಸುವಂತೆ ಮಾಡಿತ್ತು. ಸ್ಪ್ಯಾನಿಷ್‌ ಫ್ಲ್ಯೂ ಎಂದೇ ಹೇಳುವ ಈ ಸೋಂಕಿನ ಕಾರಣ ಜನಸಂಖ್ಯಾ ಪ್ರಮಾಣದಲ್ಲಿ ಶೇ 7.46ರಷ್ಟು ‘ಕುಸಿತ’ ಕಂಡಿತ್ತು!

1921ರಲ್ಲಿ ನಡೆದ ಜನಗಣತಿಯ ದಾಖಲೆಗಳೇ ಇದನ್ನು ದೃಢಪಡಿಸಿವೆ. ಆಗ ಈ ಭಾಗವು ಸಂಪೂರ್ಣ ನಿಜಾಮ ಆಡಳಿತಕ್ಕೆ ಒಳಪಟ್ಟಿತ್ತು. 1911ರ ಗಣತಿಯಲ್ಲಿ ಹೈದರಾಬಾದ್‌ ರಾಜ್ಯದ ಜನಸಂಖ್ಯೆ 1.35 ಕೋಟಿ ಇತ್ತು. ಆದರೆ, ಭೀಕರ ಸೋಂಕಿನಿಂದ ಉಂಟಾದ ಸಾವಿನ ಪರಿಣಾಮ, 1921ರಲ್ಲಿ ಈ ರಾಜ್ಯದ ಜನಸಂಖ್ಯೆ 1.33 ಕೋಟಿ‌ ಕುಸಿಯಿತು. ಇದರ ವ್ಯಾಪ್ತಿಗೇ ಒಳಪಟ್ಟಿದ್ದ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶ ಜನಸಂಖ್ಯೆ 1911ರಲ್ಲಿ 21.7 ಲಕ್ಷ ಇತ್ತು. 1921ರ ಗಣತಿಯಲ್ಲಿ 20 ಲಕ್ಷಕ್ಕೆ ಕುಸಿಯಿತು.

ಗಮನಾರ್ಹವೆಂದರೆ, ಒಟ್ಟಾರೆ ನಿಜಾಮ‌ ಸಾಮ್ರಾಜ್ಯದಲ್ಲಿ ಶೇ 1.09 ಕುಸಿತ ಕಂಡಿದ್ದರೆ; ಕೇವಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕುಸಿತದ ಪ್ರಮಾಣ ಶೇ 7.46ರಷ್ಟಿದೆ. ಅಂದರೆ; ಪ್ಲೇಗ್‌ನಿಂದ ಕೂಡ ಅತ್ಯಂತ ಹೆಚ್ಚು ಸಾವು ಸಂಭವಿಸಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲೇ. 1900ರಿಂದ 1921ರವರೆಗಿನ ಎರಡು ದಶಕಗಳ ಅವಧಿಯಲ್ಲಿ ನಿಜಾಮನ ಆಡಳಿತ ವ್ಯಾಪ್ತಿಯಲ್ಲೇ ಪ್ಲೇಗ್‌, ಮಲೇರಿಯಾ, ಕಾಲರಾ ಸೋಂಕು ಹಾಗೂ ಕ್ಷಾಮದ ಕಾರಣ 10 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.ಈ ಪೈಕಿ 1918-19ರಲ್ಲಿ ಸೋಂಕಿನಿಂದ ಸತ್ತವರ ಸಂಖ್ಯೆ 3.5 ಲಕ್ಷ ಎಂದು ಆಗಿನ ಜನಗಣತಿ ಅಂಶಗಳು ಹೇಳುತ್ತವೆ.

ದಾಖಲಾದ ‘ಕ್ಷಾಮಯುಗ’: 1804ರ ಆರಂಭದಿಂದ 1910ರ ಅಂತ್ಯದವರೆಗೆ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ‘ಕ್ಷಾಮ ಮತ್ತು ಸಾಂಕ್ರಾಮಿಕ ಯುಗ’ ಎಂದು ಕರೆಯಲಾಗಿದೆ. ಈ ಪ್ರದೇಶವು 1804, 1819, 1825, 1833, 1854, 1876, 1881, 1897, 1899 ಮತ್ತು 1900ರ ದಶಕಗಳಲ್ಲಿ ಭೀಕರವಾದ ಕ್ಷಾಮ ಎದುರಿಸಿದೆ. ಅದರಲ್ಲೂ 1833ರಲ್ಲಿ ‘ಗುಲ್ಬರ್ಗ’ದಲ್ಲಿ ಸಾವಿರಾರು ಜನ ಮೃತಪಟ್ಟಿದ್ದರು. ಒಂದೆಡೆ ಪ್ಲೇಗ್‌, ಕಾಲರಾ, ಮಲೇ
ರಿಯಾ, ದಢಾರ್‌ ಸೋಂಕುಗಳು ಇನ್ನೊಂದೆಡೆ ಜಲಕ್ಷಾಮ. ಇದರಿಂದಾಗಿ ಜಿಲ್ಲೆಯ ಬಹುಪಾಲು ಗ್ರಾಮಗಳು ಪೂರ್ಣ ಖಾಲಿ ಆದವು ಎಂದು ‘ದಿ ಇಂಡಿಯನ್‌ ಮೆಡಿಕಲ್ ಗೆಜೆಟೀ–1940’ ದಾಖಲಿಸಿದೆ.

ಪ್ಲೇಗ್‌ ಬಂದಿದ್ದು ಹೇಗೆ?: 1897ರ ದಶಕದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಪ್ಲೇಗ್‌ ಭುಗಿಲೆದ್ದಿತು. ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಸೈನಿಕರಿಗೆ ಅಂಟಿಕೊಂಡ ಸೋಂಕು; ಅವರ ಮೂಲಕ ಭಾರತಕ್ಕೆ ನುಗ್ಗಿತು. 19ನೇ ಶತಮಾನದ ಕೊನೆಯಲ್ಲಿ ಹೈದರಾಬಾದ್‌ ರಾಜ್ಯಕ್ಕೆ ಕಾಲಿಟ್ಟಿತು. ಆಗ ಕೂಡ ಬಾಂಬೆ ಪ್ರೆಸೆಡೆನ್ಸಿ (ಮಹಾರಾಷ್ಟ್ರ)ಗೆ ಸುಮಾರು 30 ಸಾವಿರ ಮಂದಿ ವಲಸೆ ಹೋಗಿದ್ದರು. ಅವರು ಮರಳಿದಾಗ ಪ್ಲೇಗ್‌ ಅನ್ನೂ ಭಾಗಕ್ಕೆ ತಂದರು. ಹೀಗಾಗಿ,ಈ ಭಾಗದ ಜನ ಅದನ್ನು ‘ಬಾಂಬೆ ಫ್ಲ್ಯೂ’ ಎಂದೂ ಗುರುತಿಸಿದ್ದರು ಎನ್ನುತ್ತಾರೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞೆ ಸಂಗೀತಾ ಕಟ್ಟಿಮನಿ.

‘ನಿಜಾಮ್‌ ಆಡಳಿತ ಕೂಡ ಆಗಲೂ ವೈದ್ಯಕೀಯ ಸೌಕರ್ಯ ಕಲ್ಪಿಸಲು ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಪ್ರತಿ ಹಳ್ಳಿಗಳು ಹಾಗೂ ನಗರದಗಳ ಹೊರಗೆ ಕ್ವಾರಂಟೈನ್‌ ಕೇಂದ್ರಗಳನ್ನು ತೆರೆದು, ರೋಗಿಗಳನ್ನು ಇರಿಸಲಾಗಿತ್ತು’ ಎಂದು ಇತಿಹಾಸಕಾರರು ತಿಳಿಸುತ್ತಾರೆ.

‘ದಿ ಗ್ರೇಟ್‌ ಡಿವೈಡ್‌’

ಭಾರತದಲ್ಲಿ ಜನಗಣತಿಯಲ್ಲಿ 1921ರ ಅವಧಿಯನ್ನು ‘ಗ್ರೇಟ್ ಡಿವೈಡ್ (ಮಹಾಕುಸಿತ)’ ವರ್ಷ ಎಂದು ಆಗಿನ ಚುನಾವಣಾ ಕಮಿಷನರ್‌ ಬಣ್ಣಿಸಿದ್ದಾರೆ. ಸಾಂಕ್ರಾಮಿಕ ರೋಗಗಳು ಮತ್ತು ಭೀಕರ ಬರಗಾಲ ಈ ದಶಕವನ್ನು ತಲ್ಲಣಿಸುವಂತೆ ಮಾಡಿತ್ತು. ಈಗ ಮಳೆ ಬಾರದೇ ಬರಗಾಲ ಉಂಟಾಗುತ್ತದೆ. ಆದರೆ, ಆಗ ಅತಿವೃಷ್ಠಿಯ ಕಾರಣವಾಗಿಯೇ ಹೆಚ್ಚು ಜೀವ ಹಾನಿ ಆಗುತ್ತಿತ್ತು. ಪ್ರತಿ ದಶಕದ ಗಣತಿಯಲ್ಲಿ ಜನಸಂಖ್ಯೆ ಏರುತ್ತ ಸಾಗಿದ್ದರೆ 1921ರಲ್ಲಿ ವಿರುದ್ಧವಾಗಿ ‘ಮೈನಸ್‌’ ಆಗಿದ್ದು ಐತಿಹಾಸಿಕ ಪೆಟ್ಟು. 1931ರ ನಂತರದಲ್ಲಿ ಜನಸಂಖ್ಯಾ ಪ್ರಮಾಣ ಮತ್ತೆ ಏರುಗತಿಯಲ್ಲಿ ಸಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಲ್ಲಿ ಗಣನೀಯ ಸುಧಾರಣೆ ಕಂಡ ಕಾರಣ, ನಂತರ ಬಂದ ಸಾಂಕ್ರಾಮಿಕಗಳು ಅಷ್ಟಾಗಿ ಬಾಧಿಸಲಿಲ್ಲ. ‌

–ಸಂಗೀತಾ ಕಟ್ಟಿಮನಿ ಅರ್ಥಶಾಸ್ತ್ರಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT