ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡರ ಪ್ರತಿಮೆ ಅನಾವರಣ | ಪ್ರತಿಮಾ ‘ಮತ’: ಮೋದಿ ರಥ

ವಾಲ್ಮೀಕಿ, ಕನಕದಾಸರು, ಒನಕೆ ಓಬವ್ವಗೆ ನಮನ
Last Updated 11 ನವೆಂಬರ್ 2022, 19:55 IST
ಅಕ್ಷರ ಗಾತ್ರ

ಬೆಂಗಳೂರು: ಆರು ತಿಂಗಳ ಮೊದಲೇ ರಾಜ್ಯಕ್ಕೆ ನಿಯಮಿತವಾಗಿ ಭೇಟಿ ನೀಡಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಪರ ಒಲವು ಹೆಚ್ಚಿಸಲು ಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರತಿಮಾ ಪಥ’ದಲ್ಲಿ ಸಾಗುವ ಮೂಲಕ ಮತ್ತೊಂದು ಸುತ್ತಿನ ಮತಾಕರ್ಷಣೆಯತ್ತ ಇನ್ನೊಂದು ಹೆಜ್ಜೆ ಮುಂದಿಟ್ಟರು. ಮಹನೀಯರ ಪ್ರಭಾವಳಿಯ ನೆರಳಿನಲ್ಲಿ ಒಂದೇ ಭೇಟಿಯಲ್ಲಿ ಹಲವು ಸಮುದಾಯಗಳನ್ನು ಬಿಜೆಪಿಯತ್ತ ಸೆಳೆಯುವ ಕಸರತ್ತನ್ನು ಶುಕ್ರವಾರ ನಡೆಸಿದರು.

ಅರ್ಧ ದಿನದ ಭೇಟಿಯಲ್ಲೇ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ, ಭಕ್ತ ಕನಕದಾಸರು ಮತ್ತು ಮಹರ್ಷಿ ವಾಲ್ಮೀಕಿಯವರ ಪ್ರತಿಮೆಗಳಿಗೆ ಮಾಲಾರ್ಪಣೆ, ವೀರವನಿತೆ ಒನಕೆ ಓಬವ್ವ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಎಲ್ಲ ಸಮುದಾಯಗಳನ್ನೂ ತಲುಪುವ ಪ್ರಯತ್ನವನ್ನು ಪ್ರಧಾನಿ ಮಾಡಿದರು. ಮಾತಿನುದ್ದಕ್ಕೂ ಮಹನೀಯರನ್ನು ಸ್ಮರಿಸುತ್ತಾ, ಚುನಾವಣಾ ಅಖಾಡವನ್ನು ಹಸನುಗೊಳಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದರು.

ವಿಶೇಷ ವಿಮಾನದ ಮೂಲಕ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ, ನೇರವಾಗಿ ಶಾಸಕರ ಭವನದ ಆವರಣಕ್ಕೆ ಬಂದರು. ಕನಕದಾಸರು ಮತ್ತು ವಾಲ್ಮೀಕಿ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿದರು. ಕನಕದಾಸರ ಜನ್ಮದಿನವಾದ ಪ್ರಯುಕ್ತ ಅವರ ಪ್ರತಿಮೆಗೆ ಗೌರವ ಸಲ್ಲಿಸುವುದರ ಜತೆಯಲ್ಲೇ ವಾಲ್ಮೀಕಿ ಪ್ರತಿಮೆಗೂ ಪುಷ್ಪನಮನ ಸಲ್ಲಿಸುವ ಮೂಲಕ ಒಂದೇ ಬಾರಿ ಕುರುಬರು ಹಾಗೂ ವಾಲ್ಮೀಕಿ ನಾಯಕ ಸಮುದಾಯವರ ಮನಗೆಲ್ಲಲು ಯತ್ನಿಸಿದರು. ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖೇನ, ಛಲವಾದಿ ಸಮುದಾಯದವರ ಲಕ್ಷ್ಯ ಸೆಳೆಯುವ ಕೆಲಸವನ್ನೂ ಮಾಡಿದರು.

ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುನ್ನ ಕುರುಬ ಸಮಾಜದವರು ನೀಡಿದ ಕಂಬಳಿಯನ್ನು ಹೆಗಲ ಮೇಲೆ ಹಾಕಿಕೊಂಡು ಸಾಗಿದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಕುರುಬ ಸಮಾಜದ ಚುನಾಯಿತ ಪ್ರತಿನಿಧಿಗಳ ಜತೆಗೂಡಿ ಕನಕದಾಸರ ಪ್ರತಿಮೆಗೆ ಗೌರವ ಸಲ್ಲಿಸಿದರು. ನಂತರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಸಚಿವ ಬಿ. ಶ್ರೀರಾಮುಲು ಮತ್ತು ಇತರ ನಾಯಕರ ಜತೆಗೂಡಿ ವಾಲ್ಮೀಕಿ ಪ್ರತಿಮೆಗೆ ಗೌರವ ಅರ್ಪಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ಹಾಗೂ ಭಾರತ ಗೌರವ ಕಾಶಿ ದರ್ಶನ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದ ಮೋದಿ, ಅಲ್ಲಿಂದ ನೇರವಾಗಿ ದೇವನಹಳ್ಳಿಯ ಕೆಂಪೇಗೌಡ ಅಂತರ
ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದರು. ಅಲ್ಲಿ ಹೊಸದಾಗಿ ನಿರ್ಮಿಸಿರುವ ಟರ್ಮಿನಲ್‌–2 ಉದ್ಘಾಟಿಸಿದರು.

ಬಳಿಕ ವಿಮಾನ ನಿಲ್ದಾಣದ ಬಳಿ ನಿರ್ಮಿಸಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಚಿವರಾದ ಆರ್‌. ಅಶೋಕ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಡಾ.ಕೆ. ಸುಧಾಕರ್‌ ಮತ್ತು ಹಲವು ಶಾಸಕರು ಜತೆಗಿದ್ದರು. ಅನಾವರಣಗೊಂಡ ಪ್ರತಿಮೆಗೆ ಜಲಾಭಿಷೇಕ ಮಾಡುವ ಮೂಲಕ ಒಕ್ಕಲಿಗ ಸಮುದಾಯದ ಜನರನ್ನು ಭಾವನಾತ್ಮಕವಾಗಿ ತಲುಪುವ ಪ್ರಯತ್ನವನ್ನೂ ಪ್ರಧಾನಿ ಮಾಡಿದರು.

ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪ್ರಾಬಲ್ಯ ಹೊಂದಿವೆ. ಬಿಜೆಪಿ ಶಕ್ತಿ ಇಲ್ಲಿ ಕಡಿಮೆ ಇದೆ. ಹಳೆ ಮೈಸೂರು ಭಾಗದ ಒಕ್ಕಲಿಗರ ಮತಗಳನ್ನು ಬಿಜೆಪಿಯತ್ತ ಸೆಳೆದು, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ಬಲ ಕುಗ್ಗಿಸುವ ಪ್ರಯತ್ನಕ್ಕೂ ಈ ಸಮಾರಂಭವನ್ನು ಬಳಸಿಕೊಂಡರು.

ಭುವನಹಳ್ಳಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲೂ ಮಾತಿನು ದ್ದಕ್ಕೂ ಕೆಂಪೇಗೌಡರನ್ನು ಕೊಂಡಾಡಿದ ಪ್ರಧಾನಿ, ಕನಕದಾಸ, ವಾಲ್ಮೀಕಿ, ಒನಕೆ ಓಬವ್ವ ಅವರನ್ನೂ ಸ್ಮರಿಸಿದರು. ಒಕ್ಕಲಿಗರು ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬಲಗೊಳಿಸುವತ್ತ ದೃಷ್ಟಿ ನೆಟ್ಟುಕೊಂಡೇ ತಮ್ಮ ವಾಗ್ಝರಿಯನ್ನು ಪ್ರದರ್ಶಿಸಿದರು.

ಸಾಮಾಜಿಕ ಸೌಕರ್ಯಕ್ಕೆ ಬಲ: ಮೋದಿ
ದೇಶದಲ್ಲಿ ಭೌತಿಕ ಮೂಲಸೌಕರ್ಯ ಅಭಿವೃದ್ಧಿಯ ಜತೆಯಲ್ಲೇ ಸಾಮಾಜಿಕ ಸೌಕರ್ಯವನ್ನೂ ಬಲಪಡಿಸುವ ಕೆಲಸವನ್ನು ‘ಡಬ್ಬಲ್‌ ಎಂಜಿನ್‌’ ಸರ್ಕಾರ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭುವನಹಳ್ಳಿಯಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹಿಂದಿನ ಸರ್ಕಾರಗಳಿಗೆ ಹೊಸ ಆಲೋಚನೆಗಳೇ ಹೊಳೆಯುತ್ತಿರಲಿಲ್ಲ. ಸದಾ ಹಳೆಯ ಯೋಚನೆ ಮತ್ತು ಹಳೆಯ ಯೋಜನೆಗಳಲ್ಲೇ ಇರುತ್ತಿದ್ದವು. ಹಿಂದಿನ ಸರ್ಕಾರಗಳು ವೇಗವನ್ನು ಐಷಾರಾಮಿ ಎಂದು, ಮಾನದಂಡವನ್ನು ಸವಾಲು ಎಂದು ಭಾವಿಸಿದ್ದವು. ವೇಗವನ್ನು ನಿರೀಕ್ಷೆ ಮತ್ತು ಮಾನದಂಡವನ್ನು ಭಾರತದ ಶಕ್ತಿಯನ್ನಾಗಿ ನಾವು ಪರಿವರ್ತಿಸಿದ್ದೇವೆ’ ಎಂದರು.

ಎಂಟು ವರ್ಷಗಳ ಅವಧಿಯಲ್ಲಿ ದೇಶದಲ್ಲಿ 3.5 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿದ್ದು, ಕರ್ನಾಟಕದಲ್ಲಿ 8 ಲಕ್ಷ ಮನೆಗಳ ನಿರ್ಮಾಣವಾಗಿದೆ. 7 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದ್ದು, ಕರ್ನಾಟಕದಲ್ಲಿ 30 ಲಕ್ಷ ಮನೆಗಳಿಗೆ ಈ ಪ್ರಯೋಜನ ದೊರಕಿದೆ. ಆಯುಷ್ಮಾನ್‌ ಭಾರತ್ ಯೋಜನೆಯಡಿ ನಾಲ್ಕು ಕೋಟಿ ಜನರು ಉಚಿತ ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ 30 ಲಕ್ಷ ಜನರು ಕರ್ನಾಟಕದವರು ಎಂದು ಅಂಕಿಅಂಶ ನೀಡಿದರು.

ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯಲ್ಲಿ 2.7 ಕೋಟಿ ರೈತರ ಖಾತೆಗಳಿಗೆ ಸಹಾಯಧನ ವರ್ಗಾಯಿಸಲಾಗಿದೆ. ಕರ್ನಾಟಕದ 55 ಲಕ್ಷ ರೈತರಿಗೆ ₹ 11,000 ಕೋಟಿ ನೆರವು ಒದಗಿಸಲಾಗಿದೆ ಎಂದರು.

ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಇಲ್ಲಿನ 2 ಲಕ್ಷ ಬೀದಿಬದಿ ವ್ಯಾಪಾರಿಗಳು ನೆರವು ಪಡೆದಿದ್ದಾರೆ ಎಂದರು.

ವಿಮಾನ ಪ್ರಯಾಣ ಕ್ಷೇತ್ರದಲ್ಲಿ ಭಾರತವು ಅತಿವೇಗದ ಬೆಳವಣಿಗೆ ದರ ಹೊಂದಿರುವ ಮಾರುಕಟ್ಟೆಯಾಗಿದೆ. ಎರಡನೇ ಟರ್ಮಿನಲ್‌ ಉದ್ಘಾಟನೆಯೊಂದಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ಬೆಂಗಳೂರಿನ ಜನರ ಹಿಂದಿನ ನಿರೀಕ್ಷೆಯನ್ನು ತಮ್ಮ ಸರ್ಕಾರ ಸಾಕಾರಗೊಳಿಸಿದೆ ಎಂದು ಹೇಳಿದರು.

ರೈಲ್ವೆ ಕ್ಷೇತ್ರದಲ್ಲೂ ಗಣನೀಯ ಬದಲಾವಣೆ ಆಗಿದೆ. ಕಾಮಗಾರಿಗಳಿಗೆ ವೇಗ ನೀಡಲಾಗಿದೆ. ನಿಲ್ದಾಣಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸಮನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿನ ಸರ್‌.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ ಪ್ರವೇಶಿಸಿದರೆ ಹೊರ ಜಗತ್ತಿಗೆ ಹೋದ ಅನುಭವವಾಗುತ್ತದೆ ಎಂದರು.

ಭಾರತ್‌ ಗೌರವ್‌ ರೈಲು ಭಾರತದ ನಂಬಿಕೆ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳನ್ನು ಬೆಸೆಯುತ್ತಿದೆ. ಅಂತಹ ರೈಲು ಸೇವೆಯನ್ನು ಕರ್ನಾಟಕದಲ್ಲೂ ಈಗ ಆರಂಭಿಸಲಾಗಿದೆ ಎಂದು ಹೇಳಿದರು.

*
ಭಾರತದ ಪಾಲಿಗೆ ಮೋದಿ ವಿಕಾಸ ಪುರುಷ. ಜಗತ್ತು ಕೋವಿಡ್‌ನಿಂದ ಆರ್ಥಿಕವಾಗಿ ಮುಗ್ಗರಿಸಿತು. ಆದರೆ, ದೇಶವು ಆರ್ಥಿಕವಾಗಿ ಕುಸಿಯದಿರಲು ಅವರ ದೂರದೃಷ್ಟಿಯೇ ಕಾರಣ
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT