ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ಒತ್ತಾಸೆಯಿದೆ; ಆಗಲ್ಲ ಎನ್ನಲಾರೆ: ಸಿದ್ದರಾಮಯ್ಯ

ನಾಮಪತ್ರ ಸಲ್ಲಿಸಲು ಬಂದಾಗ ಚಪ್ಪಾಳೆ ಹೊಡೆಯಿರಿ
Last Updated 13 ನವೆಂಬರ್ 2022, 20:55 IST
ಅಕ್ಷರ ಗಾತ್ರ

ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ನೀಡಿದರು.

‘ನಾನು ಈಗ ನಾಮಪತ್ರ ಸಲ್ಲಿಸಲು ಬಂದಿಲ್ಲ. ಹೈಕಮಾಂಡ್‌ ಒಪ್ಪಿಗೆ ಸೂಚಿಸಿ ನಾಮಪತ್ರ ಸಲ್ಲಿಸಲು ಮತ್ತೆ ಇಲ್ಲಿಗೆ ಬಂದಾಗ ಜೋರು ಚಪ್ಪಾಳೆ ಹೊಡೆಯಿರಿ. ಕೋಲಾರದಲ್ಲೇ ಸ್ಪರ್ಧಿಸಬೇಕೆಂಬ ಎಲ್ಲರ ಒತ್ತಾಸೆ ಇದ್ದು, ಆಗಲ್ಲ ಎನ್ನಲಾರೆ’ ಎಂದು ಹೇಳಿದರು. ಮುಖಂಡರು, ಕಾರ್ಯಕರ್ತರು ಜೋರು ಚಪ್ಪಾಳೆ ಮೂಲಕ ಸಂಭ್ರಮಿಸಿದರು.

ಕ್ಷೇತ್ರದಲ್ಲಿ ಸ್ಪರ್ಧೆಗೆ ಅಖಾಡ ಸಿದ್ಧಮಾಡಿಕೊಳ್ಳಲು ಹಾಗೂ ಜನರ ನಾಡಿಮಿಡಿತ ಅರಿಯಲು ದಿನವಿಡೀ ದೇಗುಲ, ಮಸೀದಿ, ಚರ್ಚ್‌ಗೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ವಾಲ್ಮೀಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ, ಬಿ.ಆರ್‌. ಅಂಬೇಡ್ಕರ್, ಕೈವಾರ ತಾತಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಆನಂತರ ಕನಕ ಮಂದಿರಕ್ಕೆ ಭೇಟಿ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಬಹಳ ದೂರವಿರುವುದರಿಂದ ಬಾದಾಮಿಯಲ್ಲಿ ಮತ್ತೊಮ್ಮೆ ಸ್ಪರ್ಧೆಯನ್ನು ತಳ್ಳಿ ಹಾಕಿದರು.

‘ಕೆ.ಎಚ್‌.ಮುನಿಯಪ್ಪ ಜೊತೆ ಮಾತನಾಡಿದ್ದು ಕೋಲಾರದಲ್ಲಿ ಸ್ಪರ್ಧೆಗೆ ಸ್ವಾಗತ ಕೋರಿದ್ದಾರೆ. ಶಾಸಕ ಕೆ.ಶ್ರೀನಿವಾಸಗೌಡ ಕೂಡ ಕ್ಷೇತ್ರ ಬಿಡಲು ಸಿದ್ಧರಿದ್ದಾರೆ. ಕೋಲಾರದಿಂದಲೇ ಸ್ಪರ್ಧೆಗೆ ಎಲ್ಲರ ಪ್ರೀತಿಯ ಒತ್ತಡ ಹೆಚ್ಚಿದೆ. ಕ್ಷೇತ್ರ ಆಯ್ಕೆ ಬಗ್ಗೆ ಹೈಕಮಾಂಡ್ ಜೊತೆಯೂ ಚರ್ಚಿಸಿದ್ದೇನೆ. ನಾನು ಬಯಸುವ ಕ್ಷೇತ್ರ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ, ಅಂತಿಮ ಸೂಚನೆ ಹೈಕಮಾಂಡ್‌ನಿಂದಲೇ ಬರಬೇಕು’ ಎಂದರು. 2013ರಲ್ಲಿ ವರುಣಾದಿಂದ ಗೆದ್ದು ಮುಖ್ಯಮಂತ್ರಿ ಪಟ್ಟಕ್ಕೇರಿದಿರಿ, ಮತ್ತೆ ಅಲ್ಲಿಂದಲೇ ಸ್ಪರ್ಧಿಸುವ ಸಾಧ್ಯತೆ ಇದೆಯೇಎಂಬ ಮಾಧ್ಯಮದವರ ಪ್ರಶ್ನೆಗೆ ‘ಬಾದಾಮಿಯಿಂದ ಗೆದ್ದು ವಿರೋಧ ಪಕ್ಷದ ‌ನಾಯಕನಾಗಲಿಲ್ಲವೇ? ಕೋಲಾರದಿಂದ ನಿಂತು ಗೆಲ್ಲಬಹುದಲ್ಲವೇ’ ಎಂದು ಮರು ಪ್ರಶ್ನೆ ಹಾಕಿದರು.

ಒಂದಾಗದ ಬಣಗಳು
ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಿದರೂಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಮತ್ತು ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ನೇತೃತ್ವದ ಬಣಗಳನ್ನು ಒಂದುಗೂಡಿಸಲು ಸಾಧ್ಯವಾಗಲಿಲ್ಲ.

ಎರಡೂ ಬಣಗಳು ಪ್ರತ್ಯೇಕವಾಗಿಯೇ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದವು. ನಗರದ ಅಂಬೇಡ್ಕರ್‌ ಪ್ರತಿಮೆ ಬಳಿ ಸ್ವಾಗತ ಕೋರಿದ ಮುನಿಯಪ್ಪ ಅವರ ಬೆಂಬಲಿಗರು ನಂತರ ಮತ್ತೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ರಮೇಶ್‌ ಕುಮಾರ್ ಅವರ ಬೆಂಬಲಿಗರು ಸಿದ್ದರಾಮಯ್ಯ ಬೆಂಗಳೂರಿಗೆ ತೆರಳುವವರೆಗೂ ಜೊತೆಯಲ್ಲಿಯೇ ಇದ್ದರು.

ಹೈಕಮಾಂಡ್‌ ಬುಲಾವ್‌ ಮೇರೆಗೆ ಮುನಿಯಪ್ಪ ಗುಜರಾತ್‌ಗೆ ತೆರಳಿದ್ದಾರೆ.ಮುನಿಯಪ್ಪ ಅವರ ಪುತ್ರಿ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್‌ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

ಮಿಂಚಿನ ಸಂಚಲನ
ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಬಂದಿದ್ದಾರೇನೋ ಎಂಬಂತೆ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಓಡಾಡಿ ಮಿಂಚಿನ ಸಂಚಲನ ಸೃಷ್ಟಿಸಿದರು. ಚುನಾವಣಾ ಪ್ರಚಾರಕ್ಕಾಗಿ ಸಿದ್ಧಪಡಿಸಿರುವ ವಿಶೇಷ ಬಸ್‌ ನಲ್ಲಿ ಕೋಲಾರಕ್ಕೆ ಬಂದರು. ಮೊದಲು ನಗರದ ಶಕ್ತಿ ದೇವತೆ ಕೋಲಾರಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದೇಗುಲವನ್ನು ₹4 ಲಕ್ಷ ವೆಚ್ಚದಲ್ಲಿ ಹೂವುಗಳಿಂದ ಸಿಂಗರಿಸಲಾಗಿತ್ತು.

ಆನಂತರ ಮೆಥೋಡಿಸ್ಟ್ ಚರ್ಚ್‌ನಲ್ಲಿ ಕ್ರೈಸ್ತ ಸಮುದಾಯದವರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕ್ಲಾಕ್ ಟವರ್‌ ಬಳಿಯ ದರ್ಗಾಕ್ಕೆ ತೆರಳಿ ಮುಸ್ಲಿಂ ಸಮುದಾಯದವರ ಪ್ರಾರ್ಥನೆಯಲ್ಲಿ ಭಾಗಿಯಾದರು.

ತಪ್ಪಿದ ಅನಾಹುತ: ಕ್ಲಾಕ್ ಟವರ್ ಹಾಗೂ ಮಸೀದಿ ಬಳಿ ಸಿದ್ದರಾಮಯ್ಯ ಅವರಿಗೆ ಹಾಕಲು ಮುಸ್ಲಿಂ ಸಮುದಾಯವರು ತಂದಿದ್ದ ಹೂವಿನ ಬೃಹತ್‌ ಹಾರ ಕ್ರೇನ್‌ನಿಂದ ಕಳಚಿ ಬಿತ್ತು. ಸ್ಪಲ್ಪ ಅಂತರದಲ್ಲಿ ಸಿದ್ದರಾಮಯ್ಯ ಪಾರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT