ಬುಧವಾರ, ಮೇ 18, 2022
23 °C
ಮೀಸಲಾತಿ ಬಗ್ಗೆ ಪ್ರಧಾನಿಗೆ ಬದ್ಧತೆ ಇಲ್ಲ –ಸಿದ್ದರಾಮಯ್ಯ ಟೀಕೆ

ಬಡವರಿಗೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಡುವುದು ಅನಿವಾರ್ಯ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ’ಸಂವಿಧಾನ ನೀಡಿದ್ದ ಮೀಸಲಾತಿಯನ್ನು, ಕೇಂದ್ರ ಸರ್ಕಾರವು ಖಾಸಗೀಕರಣದ ಮೂಲಕ ಕಿತ್ತುಕೊಳ್ಳುತ್ತಿದೆ. ಮೀಸಲಾತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬದ್ಧತೆ ಇಲ್ಲ. ಹೀಗಾಗಿ, ಬಡವರಿಗೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಡುವುದು ಅನಿವಾರ್ಯ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಸುತ್ತೂರಿನಲ್ಲಿ ಹೇಳಿದರು.‌

‘ಅಹಿಂದ ತರಹದ ಸಮಾವೇಶ ಮಾಡುವ ವಾತಾವರಣ ಸೃಷ್ಟಿಯಾಗಿದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿರೋಧ ಇಲ್ಲ. ಆದರೆ, ಕುಲಶಾಸ್ತ್ರೀಯ ಅಧ್ಯಯನದ ವರದಿ ತೆಗೆದುಕೊಂಡು, ಶಿಫಾರಸು ಮಾಡಬೇಕು. ನಾಯಕರು, ಕುರುಬರು, ಉಪ್ಪಾರರು, ಗೊಲ್ಲರು, ಬೆಸ್ತರ ಸಂಖ್ಯೆಗೆ ಅನುಗುಣವಾಗಿ ಎಸ್‌.ಟಿ ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇ 25ಕ್ಕೆ ಹೆಚ್ಚಿಸಬೇಕು. ಇಲ್ಲದಿದ್ದರೆ, ಯಾವುದೇ ಪ್ರಯೋಜನವಾಗುವುದಿಲ್ಲ’ ಎಂದರು.

‘ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ, ಇಡೀ ಕುರುಬ ಸಮುದಾಯ ಮೋದಿಗೆ ಬೆಂಬಲ ನೀಡುತ್ತದೆ ಎಂದು ಯಾರೋ ಒಬ್ಬರು ಹೇಳಿದರೆ ಆಗುವುದಿಲ್ಲ. ಅದನ್ನು ಚುನಾವಣೆಯಲ್ಲಿ ಜನರು ತೀರ್ಮಾನಿಸುತ್ತಾರೆ’ ಎಂದು ಹೇಳಿದರು.

‘ಪ್ರಧಾನಿ ಮೋದಿ ಅವರು ರಸ್ತೆಗೆ ಮೊಳೆ ಹೊಡೆಸುವ ಮೂಲಕ, ರೈತರಿಗೆ ಕಿರುಕುಳ ಕೊಡುತ್ತಿದ್ದಾರೆ. ಅಲ್ಲಿ ಮಗು ಜಿಗುಟು
ತ್ತಾರೆ, ಇತ್ತ ಸಂಸತ್ತಿನಲ್ಲಿ ತೊಟ್ಟಿಲನ್ನೂ ತೂಗುತ್ತಾರೆ. ಮೊದಲು ರೈತರ ಬೇಡಿಕೆಗಳನ್ನು ಈಡೇರಿಸಲಿ’ ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಸುತ್ತೂರಿನಲ್ಲಿ ಮಾಸಿಕ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ‘ಅಂತರ್‌ಧರ್ಮೀಯ ವಿವಾಹಗಳು ಸಮಾಜದಲ್ಲಿ ಹೆಚ್ಚಾಗಬೇಕು. ಆದರೆ, ಸರ್ಕಾರವೇಕೋ ಲವ್‌ ಜಿಹಾದ್‌ ನಿಷೇಧ ಕಾಯ್ದೆ ಜಾರಿಗೆ ಸಜ್ಜಾಗಿ, ಇಂತಹ ವಿವಾಹಗಳನ್ನು ತಡೆಯುವ ಪ್ರಯತ್ನ ಮಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.‌

‘ಶ್ರೀಗಳು ಕೊಟ್ಟ ಐದು ರೂಪಾಯಿ

‘ನನ್ನ ಹತ್ತನೇ ವಯಸ್ಸಿನಲ್ಲಿ, ಸುತ್ತೂರು ಮಠದ ಹಿಂದಿನ ಸ್ವಾಮೀಜಿ, ಶಿವರಾತ್ರಿ ರಾಜೇಂದ್ರ ಶ್ರೀಗಳ ಎದುರು ವೀರಮಕ್ಕಳ ಕುಣಿತ ಮಾಡಿದ್ದೆ. ಆಗ ಅವರು ಮೆಚ್ಚಿ ಐದು ರೂಪಾಯಿ ಕೊಟ್ಟಿದ್ದರು. ಅದರಲ್ಲಿ ಕುರಿ ತೆಗೆದುಕೊಂಡು ಸಾಕಿದ್ದೆ. ನಂತರ, ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ಮಠದಲ್ಲಿ ಊಟ ಮಾಡಿದ್ದೆ’ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು