ಭಾನುವಾರ, ಅಕ್ಟೋಬರ್ 17, 2021
23 °C

ಪ್ರಜಾವಾಣಿ ಕ್ಲಬ್‌ಹೌಸ್‌ 'ಆಲದ ಮರ': ಇದ್ದರೆ ಸಮರ್ಥ ಸಾರಥಿ, ಪರಿಷತ್‌ಗೆ ಕೀರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲದಮರ (ಪ್ರಜಾವಾಣಿ ಕ್ಲಬ್‌ಹೌಸ್‌): ಕನ್ನಡ ಸಾಹಿತ್ಯ ಪರಿಷತ್‌ನ ಚುಕ್ಕಾಣಿ ಹಿಡಿಯುವವರ ಆಯ್ಕೆ ಪ್ರಕ್ರಿಯೆಯಿಂದ ಹಿಡಿದು, ಸದಸ್ಯತ್ವದವರೆಗೆ ಸಮಗ್ರ ಬದಲಾವಣೆ ಆಗಬೇಕು ಎಂಬ ಆಶಯ ಭಾನುವಾರ ‘ಆಲದ ಮರ’ದಡಿ ಸೇರಿದ ಸಾಹಿತಿಗಳು, ಚಿಂತಕರಿಂದ ವ್ಯಕ್ತವಾಯಿತು. 

ಪರಿಷತ್‌ನಿಂದಾಗಿ ಸಾಹಿತ್ಯ, ಭಾಷೆ, ಹಿತಾಸಕ್ತಿಗಳ ಮೇಲಾಗಿರುವ ಪರಿಣಾಮದಿಂದ ಹಿಡಿದು ಅಲ್ಲೂ ಸೃಷ್ಟಿಯಾಗಿರುವ ರಾಜಕಾರಣ, ಸ್ವಜನಪಕ್ಷಪಾತ, ಹಿಟ್ಲರ್‌ ಪ್ರವೃತ್ತಿಯಂತಹ ರಾಡಿಯನ್ನೂ ಗಣ್ಯರು ತೆರೆದಿಟ್ಟರು. 

ಆಗಬೇಕಾಗಿರುವುದೇನು?: ಸಾಹಿತಿ ಬಸವರಾಜ ಕಲ್ಗುಡಿ ಮಾತನಾಡಿ, ‘ಕನ್ನಡ ಜ್ಞಾನ ಪ್ರಸಾರದ ವ್ಯವಸ್ಥೆಯಾಗಬೇಕು. ತಾಲ್ಲೂಕು ಮಟ್ಟದಲ್ಲೂ ಪರಿಷತ್‌ನ ಒಳ್ಳೆಯ ಗ್ರಂಥಾಲಯ ಇರಬೇಕು. ಸಾಹಿತ್ಯ ಸಮ್ಮೇಳನದಂತಹ ಜಾತ್ರೆಯ ದುಡ್ಡನ್ನು ಜ್ಞಾನ ಪ್ರಸಾರಕ್ಕೆ ಬಳಸಬೇಕು. ಅಧ್ಯಕ್ಷರು, ಪದಾಧಿಕಾರಿಗಳನ್ನು ನಾಡಿನ ಧೀಮಂತ ಸಾಹಿತಿ ಗಣ್ಯರು ಶಿಫಾರಸು ಮಾಡಬೇಕು’ ಎಂದು ಆಶಿಸಿದರು. 

‘ಮುಂದಿನ ತಲೆಮಾರಿಗೆ ಬೇಕಾದ ಭಿನ್ನ ಆಲೋಚನೆಗಳು ಬರಬೇಕು. ಯುವ ಸಮುದಾಯವನ್ನು ಒಳಗೊಳ್ಳಬೇಕು. ಪರಿಷತ್‌ನ ಕಾರ್ಯಕ್ರಮಗಳು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಬರಬೇಕು’ ಎಂದವರು ಉಪನ್ಯಾಸಕಿ ಪ್ರಜ್ಞಾ ಮತ್ತಿಹಳ್ಳಿ. 

ಇದೇ ಮಾತಿಗೆ ಧ್ವನಿಗೂಡಿಸಿ ಮಾತನಾಡಿದ ಕವಯಿತ್ರಿ ಭುವನಾ ಹಿರೇಮಠ, ‘ಪರಿಷತ್‌ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬೇಕು. ಅದಕ್ಕಾಗಿ ಪರಿಷತ್‌ನ ಸಂರಚನೆಯಲ್ಲಿ ಬದಲಾಗಬೇಕು’ ಎಂದರು.

ಪರಿಷತ್‌ನ ನಿಲುವುಗಳ ದಾಖಲೆ ಪ್ರಸ್ತುತಪಡಿಸಿ ಮಾತನಾಡಿದ ಕವಿ, ಸಂಘಟಕ ಆರ್‌.ಜಿ.ಹಳ್ಳಿ ನಾಗರಾಜ್‌, ‘ಸಾಹಿತ್ಯದ ಅಭಿರುಚಿ ಇಲ್ಲದವರು, ರಾಜಕೀಯ ಹಿನ್ನೆಲೆ ಇರುವವರು ಈ ಪರಿಷತ್‌ ಪದಾಧಿಕಾರಿಗಳಾಗಿ ಬರುತ್ತಿದ್ದಾರೆ. ಅಧ್ಯಕ್ಷರು ತಮಗೆ ಬೇಕಾದಂತೆ ನಿಯಮ ಬದಲಾಯಿಸುತ್ತಿದ್ದಾರೆ. ಇದೆಲ್ಲಾ ನಿಲ್ಲಬೇಕು. ಪರಿಷತ್ ತನ್ನದೇ ಆದ ಮಾದರಿ ಕನ್ನಡ ಶಾಲೆಗಳನ್ನು ತೆರೆಯಬಹುದಿತ್ತು’ ಎಂದರು.

ಶಶಿ ಪಟ್ಟಣ್‌ ಮಾತನಾಡಿ, ‘ಸಾಹಿತ್ಯ ಪರಿಷತ್‌ ಸಭೆಗೂ ವಿಧಾನಸಭಾ ಅಧಿವೇಶನಕ್ಕೂ ವ್ಯತ್ಯಾಸವೇ ಇಲ್ಲವಾಗಿದೆ. ಒಳ್ಳೆಯ ಆಶಯ ಇರುವವರು ಮುಂದಕ್ಕೆ ಬರಬೇಕಾಗಿದೆ’ ಎಂದರು.

ಒಟ್ಟಾರೆ ಆಯ್ಕೆ ವ್ಯವಸ್ಥೆ ಬಗ್ಗೆ ಗುದ್ದು ನೀಡಿ ಮಾತನಾಡಿದವರು ಕಥೆಗಾರ ಬೊಳುವಾರು ಮಹಮದ್‌ ಕುಂಞಿ. 

‘ಪರಿಷತ್‌ನ ಪ್ರಾಥಮಿಕ ಸದಸ್ಯತ್ಯ ಪಡೆಯಬೇಕಾದರೆ ಕನಿಷ್ಠ ಏಳನೇ ತರಗತಿ ಪಾಸಾಗಿರಬೇಕು. ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ಪದಾಧಿಕಾರಿ ಆಗಬೇಕಾದರೆ ಕನ್ನಡ ಮಾಧ್ಯಮದಲ್ಲೇ ಓದಿದ್ದು, ಕನಿಷ್ಠ ಪದವಿ ಶಿಕ್ಷಣ ಪಡೆದಿರಬೇಕು. ರಾಜ್ಯಾಧ್ಯಕ್ಷರಾಗಬಯಸುವವರು ಕನ್ನಡ ನಾಡು, ನುಡಿ ಬಗ್ಗೆ ಆಳವಾದ ಜ್ಞಾನ ಹೊಂದಿದ್ದು ಸ್ನಾತಕೋತ್ತರ ಪದವಿ ಪಡೆದಿರಬೇಕು. ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆಯನ್ನು ತಾಲ್ಲೂಕು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಮತ ನೀಡಿ ಆರಿಸಬೇಕು. ತಾಲ್ಲೂಕು ಮಟ್ಟದ ಅಧ್ಯಕ್ಷರ ಮತಕ್ಕೆ ಒಂದು ಅಂಕ, ಜಿಲ್ಲಾ ಮಟ್ಟದ ಅಧ್ಯಕ್ಷರ ಮತಕ್ಕೆ ಎರಡು ಅಂಕ ನಿಗದಿಪಡಿಸಬೇಕು. ಹೀಗಾದಾಗ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಕೊಳಕು ರಾಜಕಾರಣವನ್ನು ತಡೆಯಬಹುದು’ ಎಂದರು.

ವಿಜ್ಞಾನ ಸಾಹಿತ್ಯ ಬೆಳೆಸಬೇಕು, ಪುಸ್ತಕಗಳ ಮರು ಮುದ್ರಣವಾಗಬೇಕು, ಡಿಜಿಟಲ್‌ ವ್ಯವಸ್ಥೆ ಬರಬೇಕು, ಮಕ್ಕಳ ಸಾಹಿತ್ಯ ಪ್ರಕಟಣೆಗಳು ಆಗಬೇಕು ಎಂದು ಚರ್ಚೆಯಲ್ಲಿ ಭಾಗವಹಿಸಿದ ಬೈರೇಗೌಡ, ಡಾ.ಸಾತ್ವಿಕ್‌ ಎನ್‌.ವಿ., ವೆಂಕೋಬರಾವ್‌, ಗೀತಾ, ವಿಜಯಕುಮಾರ್‌ ಸಹಿತ ಹಲವರು ಆಶಿಸಿದರು.

ಪ್ರಜಾವಾಣಿ ಸಹ ಸಂಪಾದಕ ಬಿ.ಎಂ. ಹನೀಫ್‌, ದಾವಣಗೆರೆ ಬ್ಯೂರೋ ಮುಖ್ಯಸ್ಥ ವಿಶಾಖ ಎನ್‌. ಹುಬ್ಬಳ್ಳಿ ಬ್ಯೂರೋ ಮಖ್ಯಸ್ಥರಾದ ರಶ್ಮಿ ಎಸ್‌. ಸಂವಾದ ನಡೆಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು