ಶನಿವಾರ, ನವೆಂಬರ್ 28, 2020
18 °C
ಇನ್ನಾದರೂ ಸಂಗೀತ ಕೇಳಬೇಕು: ಪಂಡಿತ್ ರಾಜೀವ್ ತಾರಾನಾಥ್

‘ಪ್ರಜಾವಾಣಿ ದಸರಾ ಸಂಗೀತೋತ್ಸವ’ಕ್ಕೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪ್ರಜಾವಾಣಿ ದಸರಾ ಸಂಗೀತೋತ್ಸವ–2020 ನಿಮಿತ್ತ, ಮೈಸೂರಿನಿಂದ ಚಾಲನೆ ಪಡೆದ ಆನ್‌ಲೈನ್ ದಸರಾ ಸಂಗೀತೋತ್ಸವವು ಸೋಮವಾರ ಇಲ್ಲಿ ಸಮಾರೋಪಗೊಂಡಿತು.

‘ಕೊರೊನಾದಂಥ ಸಂಕಷ್ಟ ಸಮಯದಲ್ಲಿ, ಸಂಗೀತವು ನೊಂದ ಮನಸ್ಸಿಗೆ ಔಷಧವಾಗಬಲ್ಲುದು’ ಎಂಬ ಆಶಯದೊಂದಿಗೆ ಅ. 17ರಂದು ಸಂಗೀತೋತ್ಸವಕ್ಕೆ ಪಂಡಿತ್ ರಾಜೀವ್ ತಾರಾನಾಥ್ ಚಾಲನೆ ನೀಡಿದ್ದರು.

ಅಂದಿನಿಂದ 10 ದಿನಗಳ ಕಾಲ, ಖ್ಯಾತ ಸಂಗೀತಗಾರರ ಗಾಯನ ಹಾಗೂ ವಾದ್ಯಸುಧೆಯ ರಸದೌತಣವನ್ನು ಒದಗಿಸಿದ ಉತ್ಸವಕ್ಕೆ ಸೋಮವಾರ ರಾಜೀವ್‌ ತಾರಾನಾಥ್ ಅವರೇ ‘ಭೈರವಿ’ ರಾಗದಲ್ಲಿ ಸರೋದ್ ನುಡಿಸುವ ಮೂಲಕ ತೆರೆ ಎಳೆದರು. ಭೀಮಾಶಂಕರ ಬಿದನೂರು ಅವರು ತಬಲಾ ಸಾಥ್ ನೀಡಿದರು.

ಕಾರ್ಯಕ್ರಮ ನಿರೂಪಿಸಿದ ಲೇಖಕ ಸಿ. ನಾಗಣ್ಣ, ‘ಪ್ರಜಾವಾಣಿಯು ಕೋವಿಡ್‌ ಸಮಯದಲ್ಲಿ ಕೈಗೊಂಡ ಆನ್‌ಲೈನ್ ದಸರಾ ಸಂಗೀತೋತ್ಸವವು ಚರಿತ್ರಾರ್ಹವಾದ ಸಾಧನೆ. 10 ದಿನಗಳಲ್ಲಿ ಸಂಗೀತದ ಸುಧೆಯು ಕಡಲಾಗಿ ಹರಿದಿದೆ. ನಿತ್ಯ 25ರಿಂದ 30 ಸಾವಿರ ಮಂದಿ ಇದನ್ನು ವೀಕ್ಷಿಸಿದ್ದಾರೆ. ಪಂಡಿತ್ ಪ್ರವೀಣ್ ಗೋಡಖಿಂಡಿ ಅವರ ವೇಣುವಾದನಕ್ಕೆ 1 ಲಕ್ಷಕ್ಕೂ ಅಧಿಕ ವೀಕ್ಷಕರಿದ್ದರು’ ಎಂದು ಹೇಳಿದರು.

ಪಂಡಿತ್ ರಾಜೀವ್ ತಾರಾನಾಥ್ ಮಾತನಾಡಿ, ‘ಹಾಥರಸ್‌ನಲ್ಲಿ ಏನಾಯಿತೆಂದು ಎಲ್ಲರಿಗೂ ಗೊತ್ತಿದೆ. ಇವನ ಮನೆ
ಸುಡು, ಅವನನ್ನು ಕೊಲ್ಲು ಎನ್ನುವುದನ್ನು ಬಿಡಬೇಕು. ಇನ್ನಾದರೂ ಸಂಗೀತ ಕೇಳಬೇಕು’ ಎಂದು ಕರೆ ನೀಡಿದರು.

‘ಇಂದಿನ ಸಾಂಸ್ಕೃತಿಕ ಬಡ ಸ್ಥಿತಿಯಲ್ಲಿ ಸಂಗೀತವನ್ನು ಇಡೀ ಜಗತ್ತಿಗೆ ಹೇಳಿಕೊಡುತ್ತೇವೆ. ನಾವು ಹೀಗೆ, ನಾವು ಹಾಗೆ ಎಂದು ಮಾತನಾಡಿದರೆ ಆಗುವುದಿಲ್ಲ. ಕೇಳುಗರು ತಲೆದೂಗಿದಾಗ ಅದು ಸಂಗೀತ, ಸಂಸ್ಕೃತಿ. ನಮ್ಮ ಸಂಸ್ಕೃತಿಯನ್ನು ನೋಡಿ ಎಲ್ಲರೂ ತಲೆದೂಗುತ್ತಾರೆ’ ಎಂದು ಹೇಳಿದರು.

‘ಕೊರೊನಾದಿಂದ ಕತ್ತಲೆ ಕವಿದಿದೆ. ‘ಪ್ರಜಾವಾಣಿ’ ಧೈರ್ಯ ಮಾಡಿ ಈ ಕತ್ತಲೆ ಕಾಲದಲ್ಲಿ ಸಂಗೀತ ಸರಣಿಯನ್ನು ಆಯೋಜಿಸಿ ಅದರಿಂದ ಸ್ವಲ್ಪವಾದರೂ ಬೆಳಕು, ತೃಪ್ತಿ ನೀಡುವ ‘ನಮ್ಮದು’ ಎಂಬ ಹೆಮ್ಮೆ ಉಳಿಸಿದೆ’ ಎಂದು ಶ್ಲಾಘಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು