ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ದೀಪಾವಳಿ ಕಥೆ–ಕವನ ಸ್ಪರ್ಧೆ: ಮುನವ್ವರ್‌ ಕಥಾ,ಕಾವ್ಯಾಗೆ ಕವನ ಪ್ರಶಸ್ತಿ

ಫಲಿತಾಂಶ ಪ್ರಕಟ
Last Updated 19 ಅಕ್ಟೋಬರ್ 2021, 19:48 IST
ಅಕ್ಷರ ಗಾತ್ರ

ಬೆಂಗಳೂರು: 2021ನೇ ಸಾಲಿನ ಪ್ರತಿಷ್ಠಿತ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ ಮತ್ತು ‘ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ’ಗಳ ಫಲಿತಾಂಶ ಪ್ರಕಟವಾಗಿದೆ. ಮುನವ್ವರ್‌ ಜೋಗಿಬೆಟ್ಟು ಅವರ ‘ಜಿನ್ನ್‌’ ಕಥಾಸ್ಪರ್ಧೆಯಲ್ಲಿ ಹಾಗೂ ಕಾವ್ಯಾ ಕಡಮೆ ಅವರ ‘ಮುಕ್ತಿಯೆಂಬೋ ಬನದ ಧ್ಯಾನ’ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದುಕೊಂಡಿವೆ.

ಕಥಾಸ್ಪರ್ಧೆಯಲ್ಲಿ ಸಂತೋಷ ಗುಡ್ಡಿಯಂಗಡಿ ಅವರ ‘ಮದ್ದು’ ಹಾಗೂ ದಯಾನಂದ ಅವರ ‘ಬೈಬಲ್‌ ಬಂಪ್‌’ ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನಕ್ಕೆ ಆಯ್ಕೆಯಾಗಿವೆ. ಅಮರೇಶ್‌ ಗಿಣಿವಾರ ಅವರ ‘ಹಸಿಬೆ’, ಆನಂದ ಗೋಪಾಲ ಅವರ ‘ದೇವತೆಗಳೆ ಹರಸಿರಿ’, ಮಂಜುನಾಥ ಹಿಲಿಯಾಣ ಅವರ ‘ಜಲಬಾಂಬು..!’ ಮತ್ತು ದೀಪಾ ಹಿರೇಗುತ್ತಿ ಅವರ ‘ಅಶ್ವಮೇಧ’ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಕವನ ಸ್ಪರ್ಧೆಯಲ್ಲಿ ಎಂ.ಎಸ್‌.ಸಿದ್ಧಾರ್ಥ ಅವರ ‘ನಿಷಾದಿನಿ’ ಮತ್ತು ಕಲ್ಮೇಶ ತೋಟದ ಅವರ ‘ಕಾರಹುಣಿವಿ ಕರಿ’ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಮೆಹಬೂಬ್‌ ಮುಲ್ತಾನಿ ಅವರ ‘ಅಮರತ್ವದ ಶಾಲೆ’, ಅಶ್ಫಾಕ್‌ ಪೀರ್‌ ಅವರ ‘ಗಜಲ್‌’ ಮತ್ತು ಅಂಜನಾ ಹೆಗಡೆ ಅವರ ‘ಹಚ್ಚೆ ಹಾಕುವವನಿಗೆ...!’ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ. ಸಾಹಿತಿ ಮೊಗಳ್ಳಿ ಗಣೇಶ್‌ ಹಾಗೂ ಕಥೆಗಾರ್ತಿ ಎಂ.ಎಸ್‌.ವೇದಾ ಅವರು ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ ಹಾಗೂ ಕವಯತ್ರಿ
ಎಚ್‌.ಎಸ್‌. ಮುಕ್ತಾಯಕ್ಕ ಅವರು ಕವನ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಬಹುಮಾನದ ವಿವರ

ಕಥಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಕಥೆಗಳಿಗೆ ಕ್ರಮವಾಗಿ ಪ್ರಥಮ ₹20 ಸಾವಿರ, ದ್ವಿತೀಯ
₹15 ಸಾವಿರ ಹಾಗೂ ತೃತೀಯ ₹10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಲಭಿಸಲಿದೆ. ಕವನ ಸ್ಪರ್ಧೆ ಮೊದಲ ಮೂರು ಸ್ಥಾನ ಪಡೆದ ಕವನಗಳಿಗೆ ಕ್ರಮವಾಗಿ ಪ್ರಥಮ ₹5,000, ದ್ವಿತೀಯ ₹3,000 ಹಾಗೂ ತೃತೀಯ ₹2,500 ನಗದು ಹಾಗೂ ಪ್ರಶಸ್ತಿ ಪತ್ರ ದೊರೆಯಲಿದೆ.

ತೀರ್ಪುಗಾರರ ಟಿಪ್ಪಣಿ

ಆಯ್ಕೆಗಳಲ್ಲಿ ವಿರೋಧಾಭಾಸ ಗಳಿರಲಿಲ್ಲ. ಆಯ್ದ ಕಥೆಗಳ ಸ್ಥಾನಮಾನದಲ್ಲಿ ಮಾತ್ರ ಕೊಂಚ ವ್ಯತ್ಯಾಸವಿತ್ತು. ಈಗ ಕಾಲ ಬಿಗಡಾಯಿಸಿದೆ. ಅತ್ಯುನ್ನತ ಕಥೆಗಾರರೇ ಬರೆದರೂ ‘ಇದು ಯಾಕೊ ಸಾಲದು’ ಎನಿಸುತ್ತಿದೆ. ಕಂಬನಿ, ವಿದಾಯ, ಸದಾಶಯದ ಕಥೆಗಳು ಎದುರಿಗಿದ್ದವು.

- ಮೊಗಳ್ಳಿ ಗಣೇಶ್‌

ಈಗ ಎಲ್ಲೆಲ್ಲು ಬೆಲೆ ಹೆಚ್ಚಳದ ಕಾಲ. ದೇಶ ಸರ್ವೋದಯ ಸಾಮ್ರಾಜ್ಯೋದಯ ವಾಗುವತ್ತ ಸಾಗಿರುವ ಅತಿ ಸೂಕ್ಷ್ಮ ಕಾಲ. ಒಂದು ಕಥೆ ಕ್ರಾಂತಿ ಮಾಡುವುದೇ..? ಕಥೆ ಎಂದಾಗ ಅಲ್ಲೊಂದು ಮೌನ ಮೂಡಬೇಕು, ಕಸಿವಿಸಿಯಾಗಬೇಕು, ತಿರಸ್ಕಾರ, ಸಿಟ್ಟು ಉಂಟಾಗಬೇಕಲ್ಲವೇ? ಅಂತಹ ಸಂಗತಿಗಳು ಕೆಲವು ಕಥೆಗಳಲ್ಲಿ ತೆಳ್ಳನೆ ಬಂದುಹೋಗುತ್ತವೆ.

-ಎಂ.ಎಸ್‌. ವೇದಾ

ಲೋಕವನ್ನು ಕಾಡುತ್ತಿರುವ ಅನೇಕ ಸಂಗತಿಗಳನ್ನು ಸ್ಪರ್ಧೆಗೆ ಬಂದಿದ್ದ ಕವಿತೆಗಳು ಸ್ಪರ್ಶಿಸಿದ್ದವು. ಅದು ಮೆಚ್ಚುಗೆಯ ಅಂಶ. ಈ ಕವಿಗಳು ಕಾವ್ಯಕ್ರಿಯೆಯನ್ನು ಗಂಭೀರವಾಗಿ ಸ್ವೀಕರಿಸಿರುವ ರೀತಿ ಅಭಿನಂದನೀಯ. ಕವಿಗಳು ಗಹನವಾದುದನ್ನು ಹೇಳಲು ಅಷ್ಟೇ ಸಂಕೀರ್ಣವಾದ ಕಾವ್ಯಶಿಲ್ಪವನ್ನು ಕಟ್ಟುವುದರ ಕುರಿತು ನಮಗೆ ಮೆಚ್ಚುಗೆ ಇದೆ.

-ಚಿಂತಾಮಣಿ ಕೊಡ್ಲೆಕೆರೆ

ಕವಿತೆಗಳ ವಸ್ತುವೈವಿಧ್ಯ, ಹೊಸಭಾವ ಆಸಕ್ತಿ ಹುಟ್ಟಿಸುತ್ತದೆ, ಮೆಚ್ಚುಗೆಗೂ ಕಾರಣವಾಗುತ್ತದೆ. ಕಾವ್ಯವೆಂಬುದು ಒಂದು ಇನ್‌ಸ್ಟಂಟ್‌ ಕಾಫಿ ಅಲ್ಲ. ಕಾವ್ಯ ಕಟ್ಟುವ ಕಲೆ, ಬಳಸುವ ಭಾಷೆ, ಛಂದಸ್ಸು ಅತೃಪ್ತಿಗೂ ಕಾರಣವಾಗುತ್ತದೆ.

-ಎಚ್‌.ಎಸ್‌. ಮುಕ್ತಾಯಕ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT