ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Facebook Live: ರಾಜಕೀಯದಲ್ಲಿ ಧರ್ಮಕೇಂದ್ರಗಳ ಹಸ್ತಕ್ಷೇಪ ಸರಿಯೆ? 

Last Updated 28 ಜೂನ್ 2021, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಮಠಗಳು ತಮ್ಮ ವೈಯಕ್ತಿಕ ಹಾಗೂ ವ್ಯಾಪಾರಿ ಹಿತಾಸಕ್ತಿ ರಕ್ಷಿಸಿಕೊಳ್ಳಲು ರಾಜಕಾರಣಿಗಳೊಂದಿಗೆ ಸಖ್ಯ ಬೆಳೆಸುತ್ತಿವೆ. ಇದು ಸರಿಯಲ್ಲ. ರಾಜಕೀಯದಲ್ಲಿ ಧರ್ಮ ಕೇಂದ್ರಗಳ ಹಸ್ತಕ್ಷೇಪ ಸಲ್ಲದು.ವಿಧಾನಸೌಧವನ್ನು ಅವಲಂಬಿಸಿರುವ ಧಾರ್ಮಿಕ ಸಂಸ್ಥೆಗಳಿಂದ ಸಮಾಜ ಸುಧಾರಣೆ ಸಾಧ್ಯವಿಲ್ಲ.ಜಾತಿ ಕೇಂದ್ರಿತವಾದ ಮಠೀಯ ನಾಯಕತ್ವವು ಸ್ವಹಿತ, ಜಾತಿಯ ಹಿತಾಸಕ್ತಿ ಕಾಯುತ್ತದೆ. ಸಾಮಾನ್ಯರ ಹಿತ ಕಾಯುವಂತಹದ್ದಾಗಿರುವುದಿಲ್ಲ. . .’

'ರಾಜಕೀಯದಲ್ಲಿ ಧರ್ಮಕೇಂದ್ರಗಳ ಹಸ್ತಕ್ಷೇಪ ಸರಿಯೇ’ ಎಂಬ ವಿಷಯ ಕುರಿತು ‘ಪ್ರಜಾವಾಣಿ’ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

‘ಮಠಾಧಿಪತಿಗಳು– ಉದ್ಯಮಿಗಳಮಧ್ಯೆ ವ್ಯತ್ಯಾಸವೇ ಇಲ್ಲ’
‘ಕೇಂದ್ರ ಸರ್ಕಾರದ ಪ್ರಕ್ರಿಯೆಗಳ ಮೇಲೆ ರಾಜ್ಯ ಸರ್ಕಾರಗಳ ಇರುವಿಕೆ ರೂಪುಗೊಳ್ಳುತ್ತಿರುತ್ತದೆ. ಅದಕ್ಕನುಗುಣವಾಗಿ ಸಾಮಾಜಿಕ ಸಂರಚನೆಯಲ್ಲಿ ಬದಲಾವಣೆ ಆಗುತ್ತಾ ಹೋಗುತ್ತದೆ. ರಾಜಕೀಯ ಹಸ್ತಕ್ಷೇಪವು ಕರ್ನಾಟಕಕ್ಕೆ ಹೆಚ್ಚು ಸೂಕ್ತವಾಗುತ್ತದೆ. ಕೇಂದ್ರ ಸರ್ಕಾರದ ವಿಚಾರಕ್ಕೆ ಇದು ಅನ್ವಯವಾಗುವುದಿಲ್ಲ. ಅಲ್ಲಿ ಧಾರ್ಮಿಕ ಸಂಸ್ಥೆಗಳು ಶರೀರ ಸಮೇತವಾಗಿಯೇ ಸರ್ಕಾರದ ಅಸ್ತಿತ್ವದ ಮೇಲೆ ಆಸೀನವಾಗಿವೆ’.

‘ಹಿಂದೂ ರಾಷ್ಟ್ರೀಯವಾದದ ಪರಿಕಲ್ಪನೆ ರಾಷ್ಟ್ರ ಮತ್ತು ರಾಜ್ಯದಲ್ಲಿ ಜಾತಿ, ಧರ್ಮಗಳು ತಲೆ ಎತ್ತುವುದಕ್ಕೆ ಹಾಗೂ ಮಾತನಾಡುವುದಕ್ಕೆ ಪರೋಕ್ಷವಾಗಿ ಕಾರಣವಾಗಿದೆ.ಈಗಿರುವ ಧರ್ಮಸಂಸ್ಥೆಗಳು ವಾಣಿಜ್ಯ ಸಂಸ್ಥೆಗಳಾಗಿ ಪರಿವರ್ತನೆ ಆಗಿವೆ. ಮಠಾಧೀಶರು ಹುಸಿ ಆಲೋಚನಾ ಕ್ರಮದೊಂದಿಗೆ ರಾಜಕೀಯ ಪ್ರವೇಶಿಸಿದಾಗ ಅವರ ಅಸಾಮರ್ಥ್ಯ ಗೋಚರವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಧರ್ಮ ಸಹಿಷ್ಣುತೆ ಎಂಬ ಪದವೇ ಅಪಾಯಕಾರಿ. ಮಠಾಧಿಪತಿ ಹಾಗೂ ಉದ್ಯಮಿಗಳಿಗೆ ವ್ಯತ್ಯಾಸವೇ ಕಾಣುತ್ತಿಲ್ಲ. ಧಾರ್ಮಿಕ ಕೇಂದ್ರಗಳು ವಿಧಾನಸೌಧದ ಎದುರು ಜೋಳಿಗೆ ಹಾಕಿ ನಿಂತುಬಿಟ್ಟಿವೆ’.

‘ರಾಜಕೀಯ ವ್ಯವಸ್ಥೆಯು ಧಾರ್ಮಿಕ ವ್ಯವಸ್ಥೆಯ ನಾಯಕತ್ವವನ್ನು ಭ್ರಷ್ಟಗೊಳಿಸಿದೆ. ಸ್ಥಳೀಯ ರಾಜಕೀಯದ ಮೇಲೆ ಹಿಡಿತ ಸಾಧಿಸುವುದು ಮಠಗಳಿಗೆ ಮುಖ್ಯವಾಗಿವೆ. ಇದಕ್ಕಾಗಿ ಮೀಸಲಾತಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಮೀಸಲಾತಿಯು ಮುಳುಗುವ ಹಡಗು ಇದ್ದ ಹಾಗೆ. ಅದಕ್ಕಾಗಿ ಗುದ್ದಾಡುವುದು ವ್ಯರ್ಥ ಪ್ರಯತ್ನ’.
-ಅರವಿಂದ ಮಾಲಗತ್ತಿ,ಲೇಖಕ, ಸಂಸ್ಕೃತಿ ಚಿಂತಕ

‘ಪ್ರಭಾವಿ ಜಾತಿಗಳೇ ಮೀಸಲಾತಿ ಕೇಳುತ್ತಿವೆ’
‘12ನೇ ಶತಮಾನದ ಆರಂಭದಲ್ಲಿ ಕಾಳಮುಖರು, ಲಕುಲೀಶ ಪಾಶುಪತರು ಅರಮನೆಯ ರಾಜ ವ್ಯವಹಾರಗಳಲ್ಲೂ ಪ್ರಭಾವ ಬೀರುತ್ತಿದ್ದರು. ಅಂತಹ ಸಮಯದಲ್ಲೇ ಕಾಯಕ ಜೀವಿಗಳ ಚಳವಳಿ ಶುರುವಾಗಿತ್ತು. ಈ ಚಳವಳಿ ಜನ್ಮತಾಳಲು ಧಾರ್ಮಿಕ ಸಂಸ್ಥೆಗಳ ಹಸ್ತಕ್ಷೇಪ ಮುಖ್ಯ ಕಾರಣವಾಗಿತ್ತು’.

‘ಮಠಗಳು ಹಾಗೂ ದೇವಸ್ಥಾನಗಳು ಮಹಿಳೆಯರು ಹಾಗೂ ತಳ ಸಮುದಾಯದವರಿಗೆ ವಿದ್ಯಾಭ್ಯಾಸ ನಿರಾಕರಿಸುತ್ತಲೇ ಇವೆ. ಈಗಲೂ ಪ್ರಭಾವಿ ಧಾರ್ಮಿಕ ಕ್ಷೇತ್ರಗಳು ಶೈಕ್ಷಣಿಕ ಕ್ಷೇತ್ರದ ಮೇಲೆ ಹಿಡಿತ ಹೊಂದಿವೆ. ರಾಜಕೀಯದಲ್ಲಿ ಧಾರ್ಮಿಕ ಕ್ಷೇತ್ರಗಳ ಹಸ್ತಕ್ಷೇಪ ಒಪ್ಪತಕ್ಕದ್ದಲ್ಲ.ಮಾನವ ಕುಲ ಒಂದೇ ಎಂಬುದನ್ನು ನಾವು ಎತ್ತಿಹಿಡಿಯಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಈಗ ಪ್ರಭಾವಿ ಜಾತಿಗಳೇ ಮೀಸಲಾತಿ ಕೇಳುತ್ತಿವೆ. ಪ್ರಭಾವಿ ಧಾರ್ಮಿಕ ಕೇಂದ್ರಗಳ ಗುರುಗಳು ಮಾತ್ರ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿಕೊಂಡು ತಮಗೆ ಬೇಕಾದ ಸ್ಥಾನಮಾನ ಗಳಿಸಿಕೊಳ್ಳುತ್ತಿದ್ದಾರೆ’.

‘ಜನಪರ ಚಳವಳಿಗಳು ಈಗಲೂ ಜೀವಂತವಾಗಿವೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಒಂದಾಗಿ ಕೆಲ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ. ದಲಿತ ಮಹಿಳೆಯರ ವಿಚಾರದಲ್ಲಿ ಇದು ಹೆಚ್ಚಾಗುತ್ತಿದೆ. ಜನಪರ ಚಳವಳಿಗಳ ಮೂಲಕ ಇವುಗಳನ್ನೆಲ್ಲಾ ಹೊರಗೆಡಹುವ ಕೆಲಸ ಮಾಡಲಾಗುತ್ತಿದೆ. ಕೋವಿಡ್‌ ಸಮಯದಲ್ಲಿ ಸಾಮಾಜಿಕ ಜಾಲತಾಣಗಳನ್ನೇ ವೇದಿಕೆ ಆಗಿಟ್ಟುಕೊಂಡು ಹೋರಾಟ ನಡೆದಿದೆ. ಸಾಮಾನ್ಯ ಸಂಸ್ಥೆಗಳಿಗಿರುವ ನಿಯಮಗಳನ್ನು ಪ್ರಭಾವಿ ಮಠಗಳಿಗೂ ಅನ್ವಯಿಸಿದರೆ ಅವುಗಳ ಪ್ರಭಾವ, ಪರಸ್ಪರ ಅವಲಂಬನೆ ಕಡಿಮೆಯಾಗುತ್ತವೆ’.
-ಎಂ.ಎನ್‌.ಸುಮನಾ,ಹಿರಿಯ ವಕೀಲೆ, ಸಾಮಾಜಿಕ ಕಾರ್ಯಕರ್ತೆ

***

‘ರಾಜಕೀಯ ಹಸ್ತಕ್ಷೇಪ ಧರ್ಮಕೇಂದ್ರಕ್ಕೆ ಅವಮಾನ’
‘ಧರ್ಮ ಎಲ್ಲರ ಒಳಿತು ಬಯಸುವಂತಹದ್ದು. ಇಡೀ ಮನುಕುಲವನ್ನೇ ಒಳಗೊಳ್ಳುವುದು. ಅದಕ್ಕೆ ಸೀಮಿತ ಚೌಕಟ್ಟಿಲ್ಲ. ಧರ್ಮ ಮತ್ತು ರಾಜಕೀಯ ಪರಸ್ಪರ ವಿರೋಧಿಗಳಲ್ಲ. ಹಾಗಂತ ಧರ್ಮದ ಮೇಲೆ ರಾಜಕೀಯ ಸವಾರಿ ಮಾಡಬಾರದು. ರಾಜಕೀಯದಲ್ಲಿಧರ್ಮದ ಹಸ್ತಕ್ಷೇಪ ಸಲ್ಲದು. ರಾಜಕಾರಣಿಗಳು ದಾರಿ ತಪ್ಪಿದರೆ ಧರ್ಮ ಮಾರ್ಗದರ್ಶನ ನೀಡಬೇಕು’.

‘ಇತ್ತೀಚಿನ ದಿನಗಳಲ್ಲಿ ಧರ್ಮ ಕೇಂದ್ರಗಳು ರಾಜಕೀಯ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿರುವುದು ಕಂಡುಬರುತ್ತಿದೆ. ತಮ್ಮ ಜನಾಂಗಕ್ಕೆ ಇಂತಿಷ್ಟು ಮಂತ್ರಿ ಸ್ಥಾನ ಕೊಡಬೇಕೆಂದು ಒತ್ತಡ ಹೇರಲಾಗುತ್ತಿದೆ. ರಾಜಕೀಯದಲ್ಲಿ ಧರ್ಮ ಕೇಂದ್ರಗಳ ನೇರ ಹಸ್ತಕ್ಷೇಪಕ್ಕೆ ಇದೊಂದು ಉದಾಹರಣೆ. ಇದು ಧರ್ಮ ಕೇಂದ್ರಕ್ಕೆ ಅವಮಾನ ಮಾಡಿಕೊಂಡ ಹಾಗೆ’.

‘ಮಠಾಧೀಶರಾದವರು ಎಲ್ಲಾ ಧರ್ಮದವರನ್ನೂ ಸಮಾನವಾಗಿ ಕಾಣಬೇಕು. ಸ್ವಾಮೀಜಿಯ ಸ್ಥಾನವು ರಾಜಕೀಯ ಸ್ಥಾನಮಾನಕ್ಕಿಂತಲೂ ದೊಡ್ಡದು. ಅದನ್ನು ಎಲ್ಲರೂ ಅರಿತುಕೊಳ್ಳಬೇಕು. ಮಠಾಧೀಶರು ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂಬ ಕಟ್ಟಳೆಗಳೇನಿಲ್ಲ. ಹಾಗೆ ಸ್ಪರ್ಧಿಸುವವರು ಮಠ ಹಾಗೂ ಕಾವಿಯನ್ನು ತ್ಯಜಿಸಬೇಕು. ಅದನ್ನು ಕೇಳುವಂತಹ ಭಕ್ತ ವರ್ಗವೂ ತಯಾರಾಗಬೇಕು. ಧರ್ಮ ಕ್ಷೇತ್ರವನ್ನು ದುರುಪಯೋಗಪಡಿಸಿಕೊಂಡು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದರೆ ಅದು ಆತ್ಮ ವಂಚನೆಗೆ ಸಮ. ಸ್ವಾಮಿಗಳಾದವರು ರಾಜಕಾರಣ ಮಾಡುವ ಅಗತ್ಯವೇ ಇಲ್ಲ. ನಾವು ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಮುನ್ನಡೆಯಬೇಕು’.
-ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,ಸಾಣೇಹಳ್ಳಿ ಮಠ, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT