ವರದಿ ಪರಿಣಾಮ | ಕಳಪೆ ಆಹಾರ ಪೂರೈಕೆ: ನೋಟಿಸ್ ಜಾರಿ

ಬೆಂಗಳೂರು: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಅಕ್ಕಿ, ಬೇಳೆ ಪೂರೈಸಿದ ಕಾರಣ ವೈಟ್ ಪೆಟಲ್ಸ್ ಸಂಸ್ಥೆಗೆ ಕಾರ್ಮಿಕ ಇಲಾಖೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸೂಚನೆ ನೀಡಿದ್ದಾರೆ.
ಕಾರ್ಮಿಕರಿಗೆ ಕಳಪೆ ಆಹಾರ ಪೂರೈಸಿರುವುದು ಮತ್ತು ಈ ಕಿಟ್‌ಗಳ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ‘ಪ್ರಜಾವಾಣಿ‘ಯಲ್ಲಿ ವರದಿ ಪ್ರಕಟವಾಗಿತ್ತು.
‘ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಿತರಣೆಯಾದ ಕಿಟ್‌ಗಳಲ್ಲಿ ಕಳಪೆ ಗುಣಮಟ್ಟದ ಅಕ್ಕಿ–ಬೇಳೆ ಪೂರೈಕೆಯಾಗಿದೆ. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದಂತೆ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಪೂರೈಸಲಾಗುತ್ತಿರುವ ಕಿಟ್‌ಗಳು ಗುಣಮಟ್ಟದಿಂದ ಕೂಡಿವೆ. ಆದಾಗ್ಯೂ, ಕಳಪೆ ದಿನಸಿ ವಿತರಿಸಿದ್ದರೆ ನೇರವಾಗಿ ಕಾರ್ಮಿಕ ಸಹಾಯವಾಣಿ 155214ಗೆ ಕರೆ ಮಾಡಬಹುದು’ ಎಂದೂ ಸಚಿವರು ಹೇಳಿದ್ದಾರೆ.
‘ಸುಪ್ರೀಂಕೋರ್ಟ್, ಹೈಕೋರ್ಟ್ ಮತ್ತು ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಈ ಕಿಟ್‌ಗೆ ಅಕ್ಕಿಯನ್ನು ಭಾರತೀಯ ಆಹಾರ ನಿಗಮದಿಂದ, ಉಳಿದ ಆಹಾರ ಪದಾರ್ಥಗಳನ್ನು ಮಾರುಕಟ್ಟೆಯ ಸ್ಪರ್ಧಾತ್ಮಕ ದರಗಳಿಗೆ ಅನುಗುಣವಾಗಿ ಅರ್ಹ ಸಂಸ್ಥೆಗಳಿಂದ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಬೇರೆಲ್ಲ ಆರೋಪವು ಸತ್ಯಕ್ಕೆ ದೂರವಾಗಿದೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ನಗದು ವರ್ಗಾವಣೆ:
‘ಸರ್ಕಾರದ ಆದೇಶದಂತೆ, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಲಾ ₹3 ಸಾವಿರ ಸಹಾಯಧನ ನೀಡುವ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಂಡಿದ್ದು, ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ. ಒಟ್ಟು, 17.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಈವರೆಗೆ 15.40 ಲಕ್ಷ ಕಾರ್ಮಿಕರಿಗೆ ಸಹಾಯಧನ ವರ್ಗಾಯಿಸಲಾಗಿದೆ. ಉಳಿದ 2.40 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿದ್ದು, ಅವರ ಖಾತೆಗಳನ್ನು ಚಾಲನೆಗೊಳಿಸಿದ ತಕ್ಷಣವೇ ₹3 ಸಾವಿರ ಜಮಾ ಮಾಡಲಾಗುವುದು’ ಎಂದು ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.