ಸೋಮವಾರ, ಜನವರಿ 17, 2022
20 °C

ಪ್ರಜಾವಾಣಿ ಸಂವಾದ – ‘ಮೇಕೆದಾಟು: ರಾಜಕೀಯರಹಿತ ಒಗ್ಗಟ್ಟು ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೇಕೆದಾಟು ಯೋಜನೆ ವಿಷಯದಲ್ಲಿ ರಾಜಕೀಯರಹಿತವಾಗಿ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. 2–3 ದಿನಗಳಲ್ಲಿ ಯೋಜನೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಮುಖ್ಯಮಂತ್ರಿ ತೆರೆದಿಡಲಿದ್ದಾರೆ’ ಎಂದು ಬಿಜೆಪಿ ಶಾಸಕ ಎಂ.ಸತೀಶ್ ರೆಡ್ಡಿ ಹೇಳಿದರೆ, ‘ಈ ವಿಷಯದಲ್ಲಿ ಬಿಜೆಪಿಯವರು ಸುಮ್ಮನಿದ್ದಾರೆ. ಅವರನ್ನು ಜಾಗೃತಗೊಳಿಸಲು ನಾವು ಪಾದಯಾತ್ರೆಯನ್ನು ಕೈಗೊಂಡಿದ್ದೇವೆ’ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.

‘ಈ ವಿಷಯದಲ್ಲಿ ರಾಜಕೀಯ ಬೆರೆಸದೆ ತಕ್ಷಣ ಯೋಜನೆ ಆರಂಭಿಸಬೇಕು. ಕುಡಿಯುವ ನೀರಿನ ಯೋಜನೆ ತಡೆಯಲು ಕಾನೂನಿನ ಅಡ್ಡಿ ಇಲ್ಲ’ ಎಂದು ವಿಧಾನಪರಿಷತ್‌ ಜೆಡಿಎಸ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ‌ ಪ್ರತಿಪಾದಿಸಿದರು. ‘ತಜ್ಞರ ಸಲಹೆ ಪಡೆದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಕೈಗೆತ್ತಿಕೊಳ್ಳಬೇಕು’ ಎಂದು ರೈತ ನಾಯಕಿ, ಮಂಡ್ಯದ ನಂದಿನಿ ಜಯರಾಂ ಸಲಹೆ ನೀಡಿದರು.

‘ಮೇಕೆದಾಟು ರಾಜಕೀಯ’ ಕುರಿತು ‘ಪ್ರಜಾವಾಣಿ’ ಗುರುವಾರ ಆಯೋಜಿಸಿದ್ದ ಫೇಸ್‌ಬುಕ್‌ ಸಂವಾದದಲ್ಲಿ ಅವರೆಲ್ಲರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

‘ರಾಜಕೀಯರಹಿತ ಪಾದಯಾತ್ರೆ ಮಾಡಬಹುದಿತ್ತು’

ಕಾವೇರಿ ಕೊಳ್ಳದಿಂದ ನಮ್ಮ ಪಾಲಿನ ನೀರು ಪಡೆಯಲು ಯಾವುದೇ ಸಮಸ್ಯೆ ಇಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಸ್ಪಷ್ಟ ಆದೇಶವಿದೆ. ಹೀಗಾಗಿ, ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಏನು ಅಧಿಕಾರ ಇದೆ? ಪ್ರಾಧಿಕಾರದಿಂದ ಒಪ್ಪಿಗೆ ಪಡೆಯುವ ಅಗತ್ಯವೇನಿದೆ? ಈ ಬಗ್ಗೆ ರಾಜಕಾರಣ ಬೇಡ. ನಾವು (ಜೆಡಿಎಸ್‌) ಸಹ ವಿಧಾನಸೌಧದಿಂದ ರಾಜಭವನಕ್ಕೆ ಪಾದಯಾತ್ರೆಯಲ್ಲಿ ತೆರಳಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದೇವೆ. ರಾಜ್ಯ– ಕೇಂದ್ರ ಎರಡೂ ಕಡೆ ಒಂದೇ ಸರ್ಕಾರ ಇದ್ದಾಗ ಯೋಜನೆಗೆ ಅನುಮತಿ ನೀಡದೇ ಇದ್ದರೆ ಹೇಗೆ? ಕಾಂಗ್ರೆಸ್‌ ಪಕ್ಷದ ಪಾದಯಾತ್ರೆಯ ಆಶಯ, ಉದ್ದೇಶ ಒಳ್ಳೆಯದೇ. ಆದರೆ, ಎಲ್ಲ ಪಕ್ಷಗಳ ಜೊತೆ ಮಾತನಾಡಬೇಕಿತ್ತು. ರಾಜಕೀಯರಹಿತ ಪಾದಯಾತ್ರೆ ಮಾಡಬಹುದಿತ್ತು.

– ಕೆ.ಟಿ. ಶ್ರೀಕಂಠೇಗೌಡ, ವಿಧಾನ ಪರಿಷತ್‌ ಜೆಡಿಎಸ್‌ ಸದಸ್ಯ

‘ರಾಷ್ಟ್ರೀಯ ಜಲನೀತಿ ಅಗತ್ಯ’

ಜಲ, ನೆಲ, ಧರ್ಮ, ಜಾತಿ ಇಂಥ ಎಲ್ಲ ವಿಷಯಗಳನ್ನು ಜ್ವಲಂತವಾಗಿ ಇಟ್ಟುಕೊಳ್ಳುವುದು ಎಲ್ಲ ಪಕ್ಷಗಳ ರಾಜಕೀಯ ನಡೆ. ಆದರೆ, ರಾಜಕೀಯ ಪಕ್ಷಗಳು ಸಾಮಾನ್ಯ ಜನರಿಗೆ ಏನು ಕೊಟ್ಟಿವೆ. ಯಾವ ರೀತಿ ಅನುಕೂಲ ಮಾಡಿಕೊಟ್ಟಿವೆ ಎನ್ನುವುದು ಮುಖ್ಯ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಹೀಗಾಗಿ, ರಾಜ್ಯಗಳ ಮಧ್ಯೆ ನೀರಿನ ಹಂಚಿಕೆ ವಿಷಯದಲ್ಲಿ ಎಲ್ಲ ರಾಜ್ಯಗಳ ಒಪ್ಪಿಗೆ ಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ಕಾರಣಕ್ಕೆ ರಾಷ್ಟ್ರೀಯ ಜಲನೀತಿ ಅಗತ್ಯ. ಯೋಜನೆ ಬೇಕೊ, ಬೇಡವೊ ಎಂದು ಹೇಳಬೇಕಾದವರು ಜಲ ತಜ್ಞರು. ಅದನ್ನು ಸರ್ಕಾರಗಳು ಕಾರ್ಯರೂಪಕ್ಕೆ ತರುವ ಬದ್ಧತೆ, ಮುತ್ಸದ್ದಿತನ ಪ್ರದರ್ಶಿಸಬೇಕು. ದೇಶಗಳ ನಡುವಿನ ಜಲವಿವಾದಕ್ಕೆ ಅಂತ್ಯಕಾಣಲು ಸಾಧ್ಯವಿದ್ದರೆ, ರಾಜ್ಯಗಳ ನಡುವಿನ ವ್ಯಾಜ್ಯ ಪರಿಹರಿಸಲು ಯಾಕೆ ಸಾಧ್ಯ ಇಲ್ಲ.

– ನಂದಿನಿ ಜಯರಾಂ, ರೈತ ನಾಯಕಿ, ಮಂಡ್ಯ

‘ಶೀಘ್ರದಲ್ಲಿಯೇ ಎಲ್ಲ ಮಾಹಿತಿ ಬಹಿರಂಗ’

ಎಲ್ಲರೂ ಒಗ್ಗಟ್ಟಾಗಿ ಯೋಜನೆ ಜಾರಿಗೊಳಿಸಲು ಪ್ರಯತ್ನಿಸಬೇಕಾಗಿದೆ. ಈ ವಿಷಯದಲ್ಲಿ ತಮಿಳುನಾಡು ಸರ್ಕಾರವು ಹಿಂದೆಯೂ ತಗಾದೆ  ತೆಗೆದಿದೆ. ಇಂಥ ವಿಷಯದಲ್ಲಿ ಅಲ್ಲಿನ ಎಲ್ಲ ಪಕ್ಷಗಳು ಒಂದಾಗುತ್ತಿವೆ. ಈ ವಿಷಯದಲ್ಲಿ ರಾಜಕೀಯ ಮಾಡಿದರೆ ಈ ಯೋಜನೆಗೆ ಅನುಮತಿ ಸಿಗುವುದೇ ಕಷ್ಟ. ಕಾಂಗ್ರೆಸ್‌ ಪಾದಯಾತ್ರೆ ರಾಜಕೀಯಪ್ರೇರಿತ. ಕಾಂಗ್ರೆಸ್‌ನವರು ಏಕಾಏಕಿ ನಡಿಗೆ ಹೊರಟಿದ್ದಾರೆ. ಆದರೆ, ಯೋಜನೆ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಬದ್ಧರಾಗಿದ್ದಾರೆ. ನೆಲ, ಜಲ ವಿಷಯದಲ್ಲಿ ರಾಜಿ ಇಲ್ಲ. ಈ ವಿಷಯದಲ್ಲಿ ರಾಜಕೀಯ ಬೇಡ. ಯೋಜನೆಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ಶೀಘ್ರದಲ್ಲಿಯೇ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬಿಡುಗಡೆ ಮಾಡಲಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್‌ನಿಂದ ನಾವು ಕಲಿಯಬೇಕಿಲ್ಲ.

– ಎಂ.ಸತೀಶ್ ರೆಡ್ಡಿ, ಬಿಜೆಪಿ ಶಾಸಕ

‘ಚುನಾವಣೆಗಾಗಿ ಪಾದಯಾತ್ರೆ ಅಲ್ಲ’

ಬಿಜೆಪಿಯವರದ್ದು ಡಬ್ಬಲ್‌ ಎಂಜಿನ್‌ ಸರ್ಕಾರ. ರಾಜ್ಯದಲ್ಲಿ ಅವರು ಅಧಿಕಾರಕ್ಕೆ ಬಂದ ಬಳಿಕ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಒಂದೇ ಒಂದು ಪತ್ರ ಬರೆದಿಲ್ಲ. ಅವರು ಅಧಿಕಾರ ವಹಿಸಿಕೊಂಡ ಬಳಿಕ ಏನೇನು ಮಾಡಿದ್ದಾರೆ ಎನ್ನುವುದನ್ನು ಜನರ ಮುಂದಿಡಲಿ. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಪ್ರಧಾನಿ ಜೊತೆಗೆ ಮಾತನಾಡಲು ಹೆದರುತ್ತಾರೆ. ಹಾಗೆಂದು, ನಾವು ಚುನಾವಣೆಗಾಗಿ ಪಾದಯಾತ್ರೆ ಹಮ್ಮಿಕೊಂಡಿಲ್ಲ. ನೀರಿಗಾಗಿ ನಮ್ಮ ನಡಿಗೆ. ಯೋಜನೆಗೆ ಸಂಬಂಧಿಸಿ ಪ್ರಧಾನಿ ಜತೆ ಮಾತನಾಡಲು ಬಿಜೆಪಿಯವರಿಗೆ ಧೈರ್ಯ ಇಲ್ಲದಿದ್ದರೆ ನಾವು ಸಾಥ್‌ ನೀಡುತ್ತೇವೆ. ಎಲ್ಲ ವಿಷಯಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದೆ. ಯೋಜನೆಗೆ ಕಾನೂನು ಅಡಚಣೆ ಇಲ್ಲ. ತಾಂತ್ರಿಕ ಅಡಚಣೆಗಳನ್ನು ನಿವಾರಿಸಬೇಕು.

– ರಿಜ್ವಾನ್ ಅರ್ಷದ್, ಕಾಂಗ್ರೆಸ್ ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು