ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಬಡವರ ತುತ್ತು ಅನ್ನಕ್ಕೂ ಕುತ್ತು! ವರದಿ ಪ್ರತಿಕ್ರಿಯೆಗಳು

Last Updated 12 ಮಾರ್ಚ್ 2023, 12:54 IST
ಅಕ್ಷರ ಗಾತ್ರ

ಬಡವರ ತುತ್ತು ಅನ್ನಕ್ಕೂ ಕುತ್ತು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಮಾರ್ಚ್‌ 12) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ಹಸಿದವರ ಅನ್ನಕ್ಕೆ ಕನ್ನ ಹಾಕಬಾರದು’

ಬಡವರಿಗೆ ಸಹಾಯವಾಗುವ ಯೋಜನೆಗಳು ಬಂದರೆ ಪಕ್ಷಾತೀತವಾಗಿ ಬೆಂಬಲಿಸಬೇಕು. ಆದರೆ ರಾಜಕೀಯ ನಾಯಕರ ಹೆಸರು ಇದೆ ಎನ್ನುವ ಕಾರಣಕ್ಕೆ ಗುಣಮಟ್ಟ ಅಥವಾ ಅನುದಾನ ಕಡಿತಗೊಳಿಸಿ, ಹಸಿದವರ ಅನ್ನಕ್ಕೆ ಕನ್ನ ಹಾಕಬಾರದು. ಆಡಳಿತ ಪಕ್ಷಗಳು ಇಂತಹ ಯೋಜನೆಗಳಿಗೆ ಪ್ರೋತ್ಸಾಹ ನೀಡಬೇಕು. ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಬೇಕು.

–ಆಂಜನೇಯ ಭೂಮನಗುಂಡ, ರಾಯಚೂರು

==

‘ಮೊದಲು ಅನ್ನಕೊಡಿ ಸ್ವಾಮಿ’

ಬಡವರು, ನಿರ್ಗತಿಕರು, ವ್ಯಾಪಾರಿಗಳು ಹೆಚ್ಚಾಗಿ ಇಂದಿರಾ ಕ್ಯಾಂಟೀನ್ ಮೇಲೆಯೇ ಅವಲಂಬಿತರಾಗಿದ್ದಾರೆ. ಅವರ ಹೊಟ್ಟೆಗೆ ಮೋಸ ಮಾಡದಿರಿ. ಕೋಟಿ ಕೋಟಿ ಹಣವನ್ನು ಲಪಟಾಯಿಸುವ ಬದಲು ಕ್ಯಾಂಟೀನ್‌ನ ಸಮಗ್ರ ನಿರ್ವಹಣೆಗೆ ಹೆಚ್ಚು ಅನುದಾನ ನೀಡಬೇಕು. ಸಾರ್ವಜನಿಕರನ್ನು ಬೇಕಾಬಿಟ್ಟಿಯಾಗಿ ನಡೆಸಿಕೊಳ್ಳುತ್ತಿರುವ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ.

ಸುನೀಲ್ ಐ. ಎಸ್., ಹಂಪಿ

==

‘ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್’

ನಿರ್ಗತಿಕರು, ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಮತ್ತು ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟಿನ್ ಅನುಕೂಲವಾಗಿದೆ. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ರಾಜಕೀಯ ಮಾಡದೇ ಕೂಡಲೇ ವಸ್ತುಸ್ಥಿತಿ ಗಮನಿಸಿ ಅಗತ್ಯ ವಸ್ತುಗಳನ್ನು ಪೂರೈಸಬೇಕು. ಶುಚಿ–ರುಚಿಯ ಕಡೆಗೆ ಗಮನ ಹರಿಸಿ. ಬಾಕಿ ಉಳಿದಿರುವ ಮೊತ್ತವನ್ನು ಕೂಡಲೇ ಪಾವತಿಸಿಬೇಕು. ಸರ್ಕಾರ ಯಾವುದೇ ಕುಂದು ಕೊರತೆಯಾಗದಂತೆ ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡುವಂತಾಗಲಿ.

ಸಿದ್ಧಾರ್ಥ್ ಹೊಸಮನಿ, ವಿಜಯಪುರ

==

‘ಬಡವರು, ಕಾರ್ಮಿಕರ ಹಸಿವು ನೀಗಲಿ’

ಇಂದಿರಾ ಕ್ಯಾಂಟಿನ ಯಾವುದೇ ಪಕ್ಷದ ಅವಧಿಯಲ್ಲಿ ಆರಂಭವಾಗಿದ್ದರೂ ಬಡವರ, ಕೂಲಿಕಾರ್ಮಿಕರ, ದಿನಗೂಲಿ ನೌಕರರ ಪಾಲಿಗೆ ಅದೊಂದು ಹಸಿವು ನೀಸುವ ಆಶ್ರಯ ತಾಣವಾಗಿದೆ. ಹಸಿವಿನ ಮುಂದೆ ನಾಯಕ, ಪಕ್ಷ ಎಲ್ಲವೂ ನಗಣ್ಯ. ಕಡಿಮೆ ದರದಲ್ಲಿ ಹೊಟ್ಟೆ ತುಂಬುವುದು ಎಲ್ಲದಕ್ಕಿಂತ ಮುಖ್ಯ. ಆದರೆ, ಈಗ ಕ್ಯಾಂಟೀನ್‌ಗಳು ಮುಚ್ಚುವ ಹಂತ ತಲುಪಿವೆ. ಕೆಲವೆಡೆ ಗುಣಮಟ್ಟದ ಆಹಾರ ಸರಬರಾಜು ಆಗುತ್ತಿಲ್ಲ ಎಂಬ ವರದಿ ಕೊಂಚ ಬೇಸರ ತಂದಿದೆ. ಯೋಜನೆಯ ಅನುಷ್ಠಾನದಲ್ಲಿ ನಮ್ಮ ಮುಂದಿರುವ ಬಡವರ ಬಗೆಗಿನ ಕಾಳಜಿ ನಮ್ಮದಾಗಬೇಕೇ ವಿನಃ ಬೇರಾವುದೇ ಪ್ರತಿಷ್ಠೆಯಲ್ಲ. ಒಂದು ಹೊತ್ತಿನ ಊಟಕ್ಕೂ ಪರಿತಪಿಸುವ ಅನೇಕ ಬಡವರ ನಮ್ಮ ಮುಂದಿರುವಾಗ ಅವರುಗಳ ಕುರಿತು ಆಲೋಚಿಸಬೇಕು. ಇಂದಿರಾ ಕ್ಯಾಂಟೀನ್‌ಗಳನ್ನು ಬಲಪಡಿಸಿ, ಬಡವರ ಹಸಿವು ನೀಗಿಸುವತ್ತ ಗಮನ ಹರಿಸಬೇಕಿದೆ.

ಸುರೇಶ್ ಕಲಾಪ್ರಿಯಾ, ಗಂಗಾವತಿ

==

‘ಊಟದ ಬೆಲೆ ಶಕ್ತಿ ಕೇಂದ್ರದಲ್ಲಿ ಕೂತಿರುವವರಿಗೆ ಅರ್ಥವಾಗಬೇಕು’

ಇಂದಿರಾ ಕ್ಯಾಂಟೀನ್‌ಗಳು ಆರಂಭದಲ್ಲಿ ಜನಸ್ನೇಹಿಯಾಗಿತ್ತು. ದೂರದ ಹಳ್ಳಿಗಳಿಂದ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಕಡಿಮೆ ದರದಲ್ಲಿ ಅನ್ನ ಸಿಗುತ್ತಿತ್ತು. ಬದಲಾದ ಸರ್ಕಾರಗಳು ಹಂತ-ಹಂತವಾಗಿ ಅನ್ನಪೂರ್ಣೆಯಂತಿದ್ದ ಇಂದಿರಾ ಕ್ಯಾಂಟೀನ್ ಸೊರಗುವಂತೆ ಮಾಡಿರುವುದು ಅಕ್ಷಮ್ಯ ಅಪರಾಧ. ಒಂದು ಹೊತ್ತಿನ ಊಟದ ಬೆಲೆ ಶಕ್ತಿ ಕೇಂದ್ರದಲ್ಲಿ ಕೂತಿರುವವರಿಗೆ ಅರ್ಥವಾಗಬೇಕಿದೆ. ಮತ್ತಷ್ಟು ಸಿದ್ದತೆಯೊಂದಿಗೆ ಇಂದಿರಾ ಕ್ಯಾಂಟೀನ್‌ಗೆ ಮರುಜನ್ಮ ಸಿಗಬೇಕು.

ರಾಮಚಂದ್ರ ಮಂಚಲದೊರೆ, ಗುಬ್ಬಿ

==

‘ಬಡವರ ತುತ್ತಿಗೂ ಕನ್ನ’

ಹೊಸಪೇಟೆಯಲ್ಲಿ ನೂರು ಹಾಸಿಗೆ ಆಸ್ಪತ್ರೆಯ ಒಳಾಂಗಣದಲ್ಲಿ ಇಂದಿರಾ ಕ್ಯಾಂಟೀನ್ ಇದೆ. ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಕಡಿಮೆ ದರದಲ್ಲಿ ತಿಂಡಿ, ಊಟ ಸಿಗುತ್ತಿತ್ತು. ಆದರೆ, ಈ ಸರ್ಕಾರದ ಜಿದ್ದಾಜಿದ್ದಿಯಲ್ಲಿ ಬಡವರ ತುತ್ತಿಗೂ ಕನ್ನ ಬಿದ್ದಿದೆ. ರಾಜಕೀಯ ಪಕ್ಷಗಳ ಒಳಜಗಳದಿಂದ ಅನುದಾನದ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಬಡವರ ಹೊಟ್ಟೆಗಳಿಗೆ ಪೆಟ್ಟು ಬಿದ್ದಿದೆ. ಆಸ್ಪತ್ರೆ, ಸಾರ್ವಜನಿಕ ಸ್ಥಳ, ಶಾಲಾ–ಕಾಲೇಜುಗಳಿರುವಲ್ಲಿಯೇ ಈ ಕ್ಯಾಂಟೀನ್ ಇರುವುದರಿಂದ ಎಲ್ಲರಿಗೂ ಅನುಕೂಲಕರವಾಗಿತ್ತು. ಇಲ್ಲಿ ಕೆಲಸ ಮಾಡುವವರಿಗೂ ಸರಿಯಾಗಿ ಸಂಬಳ ನೀಡದ ಕಾರಣ ಕ್ಯಾಂಟೀನ್‌ಗೆ ಬೀಗ ಹಾಕಲಾಗಿದೆ.

ಮುಬೀನಾ ಪಿ, ವಿಜಯನಗರ

==

‘ಗುಣಮಟ್ಟದ ಆಹಾರ ನೀಡಿ’

ಬಡವರ ಹಸಿವನ್ನು ನೀಗಿಸಿದ ಇಂದಿರಾ ಕ್ಯಾಂಟೀನ್‌ಗಳು ಮುಚ್ಚಿರುವುದರಿಂದ ಅನೇಕ ಜನರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಮುಚ್ಚಿರುವ ಕ್ಯಾಂಟೀನ್‌ಗಳನ್ನು ಮತ್ತೆ ಪ್ರಾರಂಭಿಸಿ ಗುಣಮಟ್ಟದ ಊಟ ಮತ್ತು ಉಪಹಾರವನ್ನು ನೀಡಬೇಕು.

ಹಾಲೇಶ್ ಎನ್, ವಿಜಯನಗರ

==

‘ಅನುದಾನ ಬಿಡುಗಡೆಗೊಳಿಸಿ’

2014ರಲ್ಲಿ ಪ್ರಾರಂಭವಾದ ಇಂದಿರಾ ಕ್ಯಾಂಟೀನ್‌ಗಳು ಕಡಿಮೆ ದರದಲ್ಲಿ ಹಸಿವು ನಿಗಿಸುವ ದಾಸೋಹವಾಗಿ ಮಾರ್ಪಡಿಸಲಾಗಿತ್ತು. ಅಂದಿನ ಸರ್ಕಾರ ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟಿನ್‌ ಸ್ಥಾಪನೆ ಮಾಡಿತ್ತು. ಆದರೆ, ಈಗಿನ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಅನುದಾನ ಬಿಡುಗಡೆ ಮಾಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡಬೇಕು. ಬಡವರ ತಿನ್ನುವ ಅನ್ನದ ಮೇಲೆ ಮಾಡಬಾರದು.

ಸಂಜೀವ ದುಮಕನಾಳ, ಹುಬ್ಬಳ್ಳಿ

==

‘ಅನ್ನದ ಹೆಸರಲ್ಲಿ ರಾಜಕೀಯ ಬೇಡ’

ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುವವರು ಕಾಲೇಜು ವಿದ್ಯಾರ್ಥಿಗಳು, ನಿರುದ್ಯೋಗಿಗಳು, ರಸ್ತೆ ಬದಿ ವ್ಯಾಪಾರ ಮಾಡುವವರು, ಮೂಟೆ ಹೊರುವವರು, ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಮಾತ್ರ. ಇವರೆಲ್ಲರೂ ದಿನಗೂಲಿಯನ್ನೇ ನೆಚ್ಚಿಕೊಂಡುರುವವರು. ಆದ್ದರಿಂದ ಈ ಕ್ಯಾಂಟಿನ್‌ಗಳನ್ನು ಮುಚ್ಚುವುದು ಬೇಡ. ಸರ್ಕಾರ
ಇಂದಿರಾ ಕ್ಯಾಂಟೀನ್ ಎಂಬ ಹೆಸರನ್ನು ಬೇಕಾದರೆ ಬದಲಾಯಿಸಲಿ. ಆದರೆ, ಅನ್ನ ದಾಸೋಹ ಮುಂದುವರಿಯಲಿ. ಅನ್ನದ ಹೆಸರಲ್ಲಿ ರಾಜಕೀಯ ಬೇಡ.

ಸತೀಶ್ ಎ.ಸಿ. ಅಂತರವಳ್ಳಿ

==

‘ಬಡಪಾಯಿಗಳ ಗೋಳು ಸರ್ಕಾರಕ್ಕೆ ತಟ್ಟಲಿದೆ’

ಹಸಿದವರಿಗೆ ಅನ್ನ ಕೊಡದ ಸರ್ಕಾರ, ಯಾರು ಹಸಿವಿನಿಂದ ಬಳಲಬಾರದೆಂಬ ಆಶಯದೊಂದಿಗೆ ಪ್ರಾರಂಭವಾಗಿರುವ ಇಂದಿರಾ ಕ್ಯಾಂಟೀನ್‌ಗಳು ಈ ದುಸ್ಥಿತಿಗೆ ಬರಲು ರಾಜ್ಯ ಸರ್ಕಾರವೇ ಕಾರಣ. ಬಸವರಾಜ ಬೊಮ್ಮಾಯಿ ಅವರ ತಂದೆಯ ಮುಖಕ್ಕೆ ಮಸಿ ಬಳಿದಂತಾಗಿದೆ. ಸರ್ಕಾರಕ್ಕೆ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗದಿದ್ದರೆ, ಸರ್ಕಾರೇತರ ಸಂಸ್ಥೆಗಳಿಗೆ ಈ ಕ್ಯಾಂಟೀನ್‌ಗಳನ್ನು ಹಸ್ತಾಂತರಿಸಲಿ. ಬಡವರ ಹಸಿವನ್ನು ನೀಗಿಸಲು ನಮ್ಮದು ಒಂದು ಪಾಲಿರಲಿ.

ಎಚ್.ಸಿ.ಗುಡ್ಡಪ್ಪ, ಅಧ್ಯಕ್ಷರು, ಎಚ್.ಡಿ. ದೇವೇಗೌಡ ಪ್ರತಿಷ್ಠಾನ, ದಾವಣಗೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT