ಸೋಮವಾರ, ಮೇ 16, 2022
29 °C
‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಹರಿದ ಪ್ರಶ್ನೆಗಳ ಹೊಳೆ, ಎಲ್ಲರ ಗೊಂದಲಗಳಿಗೂ ಪರಿಹಾರ ಸೂಚಿಸಿದ ಡಾ.ಸಿ.ಆರ್‌. ಚಂದ್ರಶೇಖರ್‌

ಫೋನ್‌ ಇನ್‌ ಕಾರ್ಯಕ್ರಮ: ನಿಯಮಿತ ಆರೋಗ್ಯ ತಪಾಸಣೆ ಎಲ್ಲರಿಗೂ ಅಗತ್ಯವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

l ಮಾನಸಿಕ ರೋಗ ಖಾತ್ರಿ ಮಾಡಿಕೊಳ್ಳಲು ನಿಯಮಿತ ತಪಾಸಣೆ ಅಗತ್ಯವೆ?

–‘ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂಬುದು ದೊಡ್ಡ ಮಿಥ್ಯೆಯಾಗಿದ್ದು, ಏನಾದರೂ ಸಮಸ್ಯೆಯಾಗಿರುವುದು ಗಮನಕ್ಕೆ ಬಂದರಷ್ಟೇ ವೈದ್ಯರ ಸಲಹೆಯ ಮೇರೆಗೆ ತಪಾಸಣೆಗೆ ಒಳಗಾಗಬೇಕು‌. ಇಷ್ಟು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಎಂದು ಹಲವರು ಹೇಳುತ್ತಿರುತ್ತಾರೆ. ಇದರಿಂದ ವೈದ್ಯರ ಶುಲ್ಕ, ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ದುಡ್ಡು ಸುರಿದಂತಾಗುತ್ತದೆಯೇ ಹೊರತು, ಮತ್ತೇನೂ ಸಾಧಿಸಿದಂತಾಗುವುದಿಲ್ಲ. ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವ ಅಗತ್ಯವೂ ಇಲ್ಲ. ನಿತ್ಯ ಹಿತವಾದ, ಮಿತವಾದ ಆಹಾರ ಸೇವಿಸಬೇಕು. ಮನಸ್ಸನ್ನು ಉಲ್ಲಾಸವಾಗಿ ಇಟ್ಟುಕೊಳ್ಳಬೇಕು. ದೈಹಿಕ ವ್ಯಾಯಾಮ ಮಾಡಬೇಕು. ದೇಹಕ್ಕೆ ಏನಾದರೂ ಆಗಿದ್ದರೆ ತಂತಾನೇ ಸೂಚನೆ ಕೊಡುತ್ತದೆ. ಆ ಬಳಿಕ ವೈದ್ಯರನ್ನು ಕಾಣಬೇಕು. ಹಾಗೆ ತಪಾಸಣೆ ಮಾಡಿಸಿಕೊಂಡರೆ ಏನಾದರೂ ಸಮಸ್ಯೆ ಇದೆ ಎಂಬ ವರದಿ ಬರುತ್ತದೆ. ಅದು ಇನ್ನಷ್ಟು ಚಿಂತೆಗೆ ಈಡು ಮಾಡುತ್ತದೆ. ನಮ್ಮ ಸಾಮರ್ಥ್ಯವಿರುವಷ್ಟು ಕೆಲಸ ಮಾಡುತ್ತಾ ಮಾನಸಿಕ ನೆಮ್ಮದಿಯಿಂದ ಇದ್ದರೆ ಯಾವ ಕಾಯಿಲೆಯೂ ಬರುವುದಿಲ್ಲ.

l ಮಕ್ಕಳನ್ನು ಮೊಬೈಲ್‌ ಗೀಳಿನಿಂದ ಬಿಡಿಸುವುದು ಹೇಗೆ?

–ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಶಾಲೆಗಳನ್ನು ಮುಚ್ಚಿದ್ದರಿಂದ ಆನ್‌ಲೈನ್‌ ಪಾಠ ಶುರುವಾಯಿತು. ಆಗಿನಿಂದ ಮಕ್ಕಳ ಕೈಗೆ ಮೊಬೈಲ್ ಸಿಗುವುದು ಸಾಮಾನ್ಯವಾಯಿತು. ಮೊಬೈಲ್ ನೋಡುವ ರೂಢಿ ಇಟ್ಟುಕೊಂಡ ಮಕ್ಕಳನ್ನು ಒಮ್ಮೆಲೇ ಅದರಿಂದ ಹೊರತರಲು ಸಾಧ್ಯವಾಗುವುದಿಲ್ಲ. ಮೊಬೈಲ್ ಕೊಡುವ ಸಂದರ್ಭದಲ್ಲಿ ಕೇವಲ ಅರ್ಧಗಂಟೆಯಲ್ಲಿ ವಾಪಸ್ ಮಾಡಬೇಕು ಎಂದು ತಾಕೀತು ಮಾಡಿಯೇ ಅವರ ಕೈಗೆ ಕೊಡಬೇಕು. ಎಷ್ಟು ಹೇಳಿದರೂ ಮಗು ಕೇಳದೆ ಇದ್ದಾಗ ನೀವು ನಿಮ್ಮ ಪ್ರಯತ್ನ ಬಿಡಬಾರದು. ಅವರನ್ನು ಬೇರೆ ಚಟುವಟಿಕೆಯಲ್ಲಿ ತೊಡಗಿಸಬೇಕು.

l ಕೋವಿಡ್‌ ನಂತರ ಮಾನಸಿಕ ಒತ್ತಡ ಹೆಚ್ಚಾಗಿದೆಯೇ?

–ದೀರ್ಘ ಅವಧಿಯ ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಜನರು ಮಾನಸಿಕ ಕ್ಷೋಭೆಯಿಂದ ಬಳಲುತ್ತಿರುವುದು ನಿಜ. ಬಹುತೇಕ ಜನರು ಉದ್ಯೋಗ ಕಳೆದುಕೊಂಡರು, ವೇತನ ಕಡಿತಗೊಂಡಿತು. ಇದನ್ನು ಸಮಾಧಾನವಾಗಿ ನಿಭಾಯಿಸಬೇಕು. ಬರುವ ವರಮಾನದಲ್ಲಿಯೇ ಜೀವನ ನಡೆಸುವುದನ್ನು ಕಲಿತುಕೊಳ್ಳಬೇಕು. ಇದು ಅನಿವಾರ್ಯವೂ ಹೌದು. ನಿನ್ನೆಯ ಬಗ್ಗೆ ಚಿಂತಿಸದೇ, ನಾಳಿನ ಬಗ್ಗೆ ಯೋಚಿಸದೇ, ಈ ದಿನವನ್ನು ಖುಷಿಯಾಗಿ ಕಳೆಯಿರಿ. ಒತ್ತಡ ತಾನಾಗೇ ನಿವಾರಣೆಯಾಗುತ್ತದೆ.

l ಓದಲು ಹೇಳುವುದೂ ಒತ್ತಡವಾಗುತ್ತದೆಯೇ?

–ಉತ್ತಮ ಅಂಕ ಪಡೆಯಲು ಮಕ್ಕಳ ಮೇಲೆ ಯಾವುದೇ ಕಾರಣಕ್ಕೂ ಒತ್ತಡ ಹೇರಬೇಡಿ. ಎಲ್ಲರ ಬುದ್ಧಿಮಟ್ಟ ಒಂದೇ ರೀತಿ ಇರುವುದಿಲ್ಲ. ರ‍್ಯಾಂಕ್ ಪಡೆದ ಮಕ್ಕಳು ಕ್ಲರ್ಕ್ ಆಗಿ, ಸಾಧಾರಣ ದರ್ಜೆಯಲ್ಲಿ ಪಾಸಾದವರು ಶಿಕ್ಷಣ ಮಂತ್ರಿಯೇ ಆದ ಉದಾಹರಣೆಗಳು ನಮ್ಮಲ್ಲಿವೆ. ಹೀಗಾಗಿ, ಉತ್ತಮ ಅಂಕ ಗಳಿಸಬೇಕು ಎಂಬುದು ಪೋಷಕರು ಆಸೆಯಾಗಿರಬೇಕೇ ಹೊರತು ಅದಕ್ಕಾಗಿ ನಿರಂತರ ಒತ್ತಡ ಹೇರಬಾರದು.

l ‘ನನಗೆ ಮನೆ ನಿಭಾಯಿಸುವ ಜತೆಗೆ, ಹೊರಗಿನ ಕೆಲಸವನ್ನೂ ಮಾಡುವುದು ಅನಿವಾರ್ಯ. ಋತುಚಕ್ರವೂ ಸರಿಯಾಗಿರುವುದಿಲ್ಲ. ಇದರಿಂದ ಬಹಳ ಗೊಂದಲಕ್ಕೀಡಾಗಿದ್ದೇನೆ. ಪದೇಪದೇ ಎದೆ ಚುಚ್ಚುತ್ತದೆ. ಪರಿಹಾರವೇನು?’ ಎಂದು ಕೊಪ್ಪಳದಿಂದ ಮಹಿಳೆಯೊಬ್ಬರು ಕರೆ ಮಾಡಿ ಪ್ರಶ್ನಿಸಿದರು.

–‘50 ಕೆ.ಜಿ ಭಾರ ಹೊರುವ ಸಾಮರ್ಥ್ಯ ಇದ್ದವರಿಗೆ 100 ಕೆ.ಜಿ ಹೊರಿಸುವುದು ಕಷ್ಟ. ಬದಲಾಗಿ 50 ಕೆ.ಜಿ.ಯನ್ನೇ ಎರಡು ಸಾರಿ ಹೊತ್ತುಕೊಳ್ಳಿ. ಹೀಗೆ ನಿಮ್ಮ ಕೆಲಸ ವಿಪರೀತ ಅನ್ನಿಸಿದಾಗ ಅದನ್ನು ಸುಲಭ ಮಾಡಿಕೊಳ್ಳುವುದು ಹೇಗೆ ಎಂಬ ಕೌಶಲ ಬೇಕಾಗುತ್ತದೆ. ಅದೂ ಸಾಧ್ಯವಾಗದಿದ್ದರೆ ನಿರಾಕರಿಸಿ. ನೀವು ಪ್ರಯತ್ನ ಮಾಡುತ್ತ ಹೋದಂತೆ ಮನಸ್ಸಿನ ಒತ್ತಡ ಹೆಚ್ಚುತ್ತಲೇ ಹೋಗುತ್ತದೆ. ಇದರಿಂದ ನಿದ್ರಾಹೀನತೆ, ಖಿನ್ನತೆ ಉಂಟಾಗುವುದು ಸಹಜ. ಸೂಕ್ತ ಸಮಯಕ್ಕೆ ಮನೋವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ. ನೀವು ದುಡಿಯುವುದು ಆರೋಗ್ಯವಾಗಿರಲು ಹೊರತು; ಆರೋಗ್ಯ ಕೆಡಿಸಿಕೊಳ್ಳಲು ಅಲ್ಲ ಎಂಬುದನ್ನು ನಿಮಗೆ ನೀವೇ ಪದೇಪದೇ ಹೇಳಿಕೊಳ್ಳಿ.

l ಕೋವಿಡ್ ನಂತರ ಸಮೂಹ ಸನ್ನಿಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿದೆಯೇ?

–‘ನಮ್ಮ ದೇಶಕ್ಕೆ ಈಗ ಮೂರು ಬಗೆಯ ಆರೋಗ್ಯ ಬೇಕಾಗಿದೆ. ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಹಾಗೂ ಸಾಮಾಜಿಕ ಆರೋಗ್ಯ. ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ. ಕೆಟ್ಟ ಆಲೋಚನೆ ಬಿಟ್ಟುಬಿಡಿ. ಮಾತು– ವರ್ತನೆಯಲ್ಲಿ ಸಹಜತೆ ಕಂಡುಕೊಳ್ಳಿ. ಇದು ಮಾನಸಿಕವಾಗಿ ನಿಮ್ಮನ್ನು ಗಟ್ಟಿ ಮಾಡುತ್ತದೆ. ವಾಕಿಂಗ್‌, ವ್ಯಾಯಾಮ, ಯೋಗ ಮಾಡಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಕೆಲಸ ಮಾಡಿ– ಮಿತಿಮೀರಿದ್ದನ್ನು ನೇರವಾಗಿ ನಿರಾಕರಿಸಿ. ಎಲ್ಲಕ್ಕಿಂತ ಮುಖ್ಯವಾಗುವುದು ಸಾಮಾಜಿಕ ಆರೋಗ್ಯ. ಪರಸ್ಪರ ಕ್ಷೇಮ– ಕುಶಲ ವಿಚಾರಿಸುವುದೇ ಈಗ ಕಡಿಮೆಯಾಗಿದೆ. ಸ್ವಾರ್ಥ ಹೆಚ್ಚಾಗಿದೆ. ಇದೇ ಸಾಮಾಜಿಕ ಅನಾರೋಗ್ಯ. ವ್ಯಕ್ತಿ ಒಳ್ಳೆಯವನಾದರೆ ಸಮಾಜವೂ ಒಳ್ಳೆಯದಾಗುತ್ತದೆ. ಇದೇ ಸಾಮಾಜಿಕ ಆರೋಗ್ಯದ ಗುಟ್ಟು.

ಮಿದುಳಿನ ‘ಫ್ರೆಷರ್‌ ಪಾಯಿಂಟ್‌’ ನಿಷ್ಕ್ರಿಯ ಮಾಡಬೇಡಿ‌

* ಮುಂಚೆ ತುಂಟನಾಗಿದ್ದ ಮಗ ಈಗ ಸೋಮಾರಿಯ ಹಾಗೆ ಆಡುತ್ತಿದ್ದಾನೆ. ಪರಿಹಾರವೇನು?

–ಪ್ರತಿಯೊಬ್ಬರ ಮಿದುಳಿನಲ್ಲೂ ‘ಫ್ರೆಷರ್‌ ಪಾಯಿಂಟ್‌’ ಇರುತ್ತದೆ. ಅದು ನಮ್ಮೊಳಗೆ ಖುಷಿ, ಸಂತೋಷ, ಉಲ್ಲಾಸವನ್ನು ಉಂಟು ಮಾಡುವಂಥದ್ದು. ಮಿದುಳಿನ ಮೇಲೆ ಪದೇ ಪದೇ ಒತ್ತಡ ಹೇರುವುದರಿಂದ ಫ್ರೆಷರ್‌ ಪಾಯಿಂಟ್‌ ನಿಷ್ಕ್ರಿಯವಾಗುವ ಸಾಧ್ಯತೆ ಇರುತ್ತದೆ. ಎಷ್ಟೋ ಜನ ತಮ್ಮ ವೃತ್ತಿ ಪರಿಸರದಲ್ಲಿನ ಅತಿಯಾದ ಒತ್ತಡ ಹಾಗೂ ಅತಿಯಾದ ಗಳಿಕೆಯ ಹಂಬಲದಲ್ಲಿ ತಮ್ಮ ಆನಂದಮಯ ದಿನಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಈ ‘ಉತ್ತೇಜಕ ಬಿಂದು’ವನ್ನು ಯಾವತ್ತೂ ನಿಷ್ಕ್ರಿಯವಾಗಲು ಬಿಡಬೇಡಿ. ಮಾಡುವುದನ್ನು ಖುಷಿಯಾಗಿಯೇ ಮಾಡಿ ಅಥವಾ ಯಾವುದರಲ್ಲಿ ಖುಷಿ ಇದೆಯೋ ಅದನ್ನೇ ಮಾಡಿ. ಗೊಣಗಿಕೊಂಡು ಮಾಡುವ ಯಾವ ಕೆಲಸವೂ ಖುಷಿ ಕೊಡುವುದಿಲ್ಲ.

ಮಕ್ಕಳ ವಿಚಾರಕ್ಕೆ ಬಂದರೆ ಇದು ಇನ್ನೂ ಗಂಭೀರ. ಈಗೀಗ ತಂದೆ– ತಾಯಿಗೆ ಮಕ್ಕಳ ತುಂಟಾಟ ನೋಡುವ ಪುರುಸೊತ್ತೂ ಇಲ್ಲ. ಮನೆಯ ಕೆಲಸದಲ್ಲೋ, ಸಿನಿಮಾ– ಧಾರಾವಾಹಿ ನೋಡುವಲ್ಲೋ, ಪ್ರಯಾಣದಲ್ಲೋ ಮಕ್ಕಳನ್ನು ತಮ್ಮಿಂದ ದೂರ ಇಡುತ್ತಾರೆ. ಅದಕ್ಕಾಗಿ ಅವರ ಕೈಗೆ ಮೊಬೈಲ್‌ ಕೊಟ್ಟು ಬಿಡುತ್ತಾರೆ. ಹೀಗಾಗಿ, ಮಗುವಿಗೆ ಮೊಬೈಲೇ ತಂದೆ, ಮೊಬೈಲೇ ತಾಯಿ, ಗೆಳೆಯ, ಆಟ, ಊಟ ಎಲ್ಲವೂ ಆಗಿಬಿಡುತ್ತದೆ. ಇದು ಮಕ್ಕಳ ಮಿದುಳಿನ ಮೇಲೆ ನೇರ ಪರಿಣಾಮ ಬೀರುವಂಥದ್ದು. ಅವರ ತುಂಟತನ, ನೆನಪಿನಶಕ್ತಿ, ಪ್ರತಿರೋಧದ ಸಾಮರ್ಥ್ಯವನ್ನೇ ಕುಗ್ಗಿಸುತ್ತದೆ. ಹೀಗಾಗಿ, ಎಂಥದ್ದೇ ಒತ್ತಡವಿದ್ದರೂ ಅವರೊಂದಿಗೆ ಬೆರೆತು ಮನಸ್ಸನ್ನು ಹಗುರ ಮಾಡಿಕೊಳ್ಳಿ. ಅವರ ಮನಸ್ಸೂ ಉಲ್ಲಸಿತವಾಗುತ್ತದೆ.

ರಾಜ್ಯದಲ್ಲಿರುವುದು ಮುನ್ನೂರೇ ಮನೋವೈದ್ಯರು!

ಸದ್ಯಕ್ಕೆ ರಾಜ್ಯದಲ್ಲಿ ಇರುವುದು ಕೇವಲ 300 ಮನೋ ವೈದ್ಯರು ಮತ್ತು 300 ಮನೋ ವಿಜ್ಞಾನಿಗಳು. ಮನೋರೋಗ ವಿಜ್ಞಾನಕ್ಕೆ ಸಂಬಂಧಿಸಿದ 250ಕ್ಕೂ ಹೆಚ್ಚು ಉಪಯುಕ್ತ ಪುಸ್ತಕಗಳೂ ಕನ್ನಡದಲ್ಲಿವೆ. 6.5 ಕೋಟಿ ಜನಸಂಖ್ಯೆ ಇರುವ ಇಷ್ಟು ದೊಡ್ಡ ರಾಜ್ಯದಲ್ಲಿ ಮನೋವೈದ್ಯರು, ವಿಜ್ಞಾನಿಗಳ ಸಂಖ್ಯೆ ನೋಡಿದರೆ ಬಹಳ ಕಡಿಮೆ. ನಮ್ಮಲ್ಲಿ ಮೊದಲಿನಿಂದಲೂ ಮನೋರೋಗಗಳ ಬಗ್ಗೆ ನಿರ್ಲಕ್ಷ್ಯ ಹೆಚ್ಚು. ಮಾಟ– ಮಂತ್ರವಾದಿಗಳನ್ನು ನಂಬಿ, ಮನೋ ವೈದ್ಯರನ್ನು ನಂಬದಂಥವರು ಇನ್ನೂ ಇದ್ದಾರೆ. ಆದರೆ, ಮಾನಸಿಕ ರೋಗವನ್ನು ಎಷ್ಟು ಬೇಗ ಗುರುತಿಸಿ ಚಿಕಿತ್ಸೆ ಪಡೆಯುತ್ತಾರೋ ಅಷ್ಟು ಬೇಗ ಅದನ್ನು ನಿವಾರಣೆ ಮಾಡಲು ಸಾಧ್ಯವಿದೆ.

‌ಮಕ್ಕಳ ರಮಿಸುವ ಕಲೆ ಕಲಿತುಕೊಳ್ಳಿ

‘ಹಠ ಮಾಡುವುದು ಮಕ್ಕಳಿಗೆ ಬಂದ ಪ್ರಕೃತಿದತ್ತ ಸ್ವಭಾವ. ಅವರನ್ನು ರಮಿಸುವುದೂ ಒಂದು ಕಲೆ. ಆ ಕಲೆಯನ್ನು ಕಲಿತುಕೊಂಡರೆ ಮಕ್ಕಳನ್ನು ಸುಲಭವಾಗಿ ಮಾನಸಿಕ ಒತ್ತಡದಿಂದ ಪಾರು ಮಾಡಬಹುದು’ ಎಂದು ಡಾ.ಸಿ.ಆರ್‌. ಚಂದ್ರಶೇಖರ್‌ ಕಿವಿಮಾತು ಹೇಳಿದರು.

‘ಚಿಣ್ಣರನ್ನು ಮೊಬೈಲ್‌ ಆಕರ್ಷಿಸುವ ಕಾರಣ ಅವರು ಹಠ ಮಾಡುತ್ತಾರೆ. ಹಾಗೆಂದು ಪಾಲಕರು ಸೋಲಬಾರದು. ಪುಟಾಣಿಗಳೊಂದಿಗೆ ಮಾತನಾಡಿ, ಆಟವಾಡಿ, ಹಾಡಿ, ಕತೆ ಹೇಳಿ, ರಂಗವಲ್ಲಿ ಬಿಡಿಸುವಂತಹ, ಹಬ್ಬಗಳಲ್ಲಿ ತಳಿರು– ತೋರಣ ಕಟ್ಟುವಂತಹ ಕೌಶಲಗಳಲ್ಲಿ ಅವರನ್ನು ತೊಡಗಿಸಿ. ಆಗ ತಾನಾಗೇ ಮೊಬೈಲ್‌ ಗೀಳು ನಿಲ್ಲುತ್ತದೆ’ ಎಂದರು.‌‌

‘ಯಾವುದೇ ವಯಸ್ಸಿನವರಿಗೂ ಮಾನಸಿಕ ಕಾಯಿಲೆ ಬರಬಹುದು. ಅರ್ಧ ತಾಸಿಗಿಂತ ಹೆಚ್ಚಾಗಿ ಮೊಬೈಲ್‌ ಸ್ಕ್ರೀನ್‌ ನೋಡುವುದರಿಂದ ಮಿದುಳಿನ ಕ್ರಿಯಾಶೀಲತೆ ಕಡಿಮೆ ಆಗುತ್ತದೆ. ಹೀಗಾಗಿ, ಮಕ್ಕಳು ಚಿಕ್ಕಪುಟ್ಟ ವಿಷಯಗಳಿಗೂ ಒತ್ತಡಕ್ಕೆ ಒಳಗಾಗುತ್ತಾರೆ. ವಿವಿಧ ರೀತಿಯ ಮಾನಸಿಕ ರೋಗಗಳಿಗೆ ಒಳಗಾಗಬಹುದು’ ಎಂದೂ ಎಚ್ಚರಿಸಿದರು.

‘ಚಿಕ್ಕಮಕ್ಕಳ ಮನಸ್ಸಿನ ಮೇಲೆ ಮೊಬೈಲ್‌ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮೊಬೈಲನ್ನು ಹೇಗೆ ಬಳಸಬೇಕು, ಎಷ್ಟು ಬಳಸಬೇಕು, ಅವರು ಏನನ್ನೂ ತಡಕಾಡುತ್ತಾರೆ ಎಂಬುದರ ಬಗ್ಗೆ ಪಾಲಕರು– ಶಿಕ್ಷಕರು ನಿಗಾ ವಹಿಸಬೇಕು’ ಎಂದರು.

‘ಕೋವಿಡ್‌ ನಂತರದ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ಸ್ವಾಸ್ಥ್ಯ ಬಹಳ ಮುಖ್ಯವಾಗಿದೆ. ನಮ್ಮ ಆಸೆ, ಆಕಾಂಕ್ಷೆಗಳು ಮಿತಿಮೀರಿದ್ದರಿಂದಲೇ ಒತ್ತಡ, ಖಿನ್ನತೆ, ತೊಳಲಾಟಗಳು ಶುರುವಾಗುತ್ತವೆ. ಇನ್ನೊಬ್ಬರಂತೆ ನಮ್ಮ ಬದುಕು ಇಲ್ಲವಲ್ಲ ಎಂಬ ನಕಾರಾತ್ಮಕ ಆಲೋಚನೆಗಳಿಂದ ಮಾನಸಿಕ ರೋಗಿಯಾಗುವ ಸಂಭವ ಹೆಚ್ಚು. ಅದರಿಂದ ಹೊರಬರುವುದು ಬಹಳ ಸುಲಭ. ಆಕಾಂಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಿ. ಸಕಾರಾತ್ಮಕ ಆಲೋಚನೆ ಮಾಡಿ. ಬೇಡವಾದ ವಿಷಯ ಚರ್ಚಿಸಬೇಡಿ. ಧ್ಯಾನ, ಸಂಗೀತ ಆಲಿಕೆ, ಹರಟೆಗಳಿಂದ ಮಾನಸಿಕ ಸ್ವಾಸ್ಥ್ಯ ಸಿಗುತ್ತದೆ’‌ ಎಂದರು.

ಶಿಕ್ಷಣ ಇಲಾಖೆಯೇ ಮುಂದಾಗಲಿ

ಕೋವಿಡ್‌ ನಂತರದ ದಿನಗಳಲ್ಲಿ ಮಾನಸಿಕ ಆರೋಗ್ಯದ ತರಬೇತಿ ಎಲ್ಲರಿಗೂ ಬೇಕಾಗಿದೆ. ಇದಕ್ಕೆ ಮಕ್ಕಳು, ಶಿಕ್ಷಕರೂ ಹೊರತಾಗಿಲ್ಲ. ಹಾಗಾಗಿ, ಶಾಲೆ– ಕಾಲೇಜುಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸುವಂಥ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆಯೇ ಹಮ್ಮಿಕೊಳ್ಳಬೇಕು ಎಂದು ಡಾ.ಸಿ.ಆರ್. ಚಂದ್ರಶೇಖರ್‌ ಸಲಹೆ ನೀಡಿದರು.

‘ಆನ್‌ಲೈನ್‌ ತರಗತಿಗಳ ಒಳಿತು– ಕೆಡಕುಗಳ ಬಗ್ಗೆ ಈಗಾಗಲೇ ಸಂಶೋಧನೆಗಳು ಆರಂಭವಾಗಿವೆ. ಡಿ.ಇಸಿ, ಬಿ.ಇಡಿ ತರಬೇತಿಯಲ್ಲೂ ‘ಮೆಂಟಲ್‌ ಎಬಿಲಿಟಿ’ ಪಾಠಗಳು ಇರುತ್ತವೆ. ಇದನ್ನೂ ಈಗ ಎಲ್ಲ ತರಗತಿಗಳಲ್ಲೂ ಮಾಡುವುದು ಉತ್ತಮ’ ಎಂದೂ ಹೇಳಿದರು.

ಪುಸ್ತಕ ಪ್ರಕಾಶಕ ಡಾ.ಎಸ್.ಎಸ್. ಹಿರೇಮಠ ಅವರೂ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು