ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ನಷ್ಟವೇ ಹೆಚ್ಚು: ಪ್ರಧಾನಿ ಮೋದಿ

ಅವರದು ಅವಕಾಶವಾದಿ, ಸ್ವಾರ್ಥ ರಾಜಕಾರಣ – ದಾವಣಗೆರೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
Last Updated 25 ಮಾರ್ಚ್ 2023, 19:13 IST
ಅಕ್ಷರ ಗಾತ್ರ

ದಾವಣಗೆರೆ: ‘ಅವಕಾಶವಾದಿ, ಸ್ವಾರ್ಥ ರಾಜಕಾರಣಕ್ಕೆ ಹೆಸರಾದ ಕಾಂಗ್ರೆಸ್‌ ಸರ್ಕಾರಗಳು, ಕರ್ನಾಟಕಕ್ಕೆ ಈವರೆಗೆ ಅನುಕೂಲಕ್ಕಿಂತ ಹೆಚ್ಚು ನಷ್ಟ ಉಂಟು ಮಾಡಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದರು.

ಬಿಜೆಪಿಯ ವಿಜಯಸಂಕಲ್ಪ ಯಾತ್ರೆಯ ಸಮಾರೋಪವಾದ ‘ಮಹಾಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನೇತೃತ್ವದಲ್ಲಿ ರಚನೆಯಾಗಿದ್ದ ಸಮ್ಮಿಶ್ರ ಸರ್ಕಾರವೂ ರಾಜ್ಯದ ಅಭಿವೃದ್ಧಿಗೆ ಚಿಂತಿಸಲಿಲ್ಲ. ಇದುವರೆಗೂ ಕರ್ನಾಟಕ ವನ್ನು ತಮ್ಮ ತಿಜೋರಿ ಭರ್ತಿಗೆ ಬಳಸಿಕೊಂಡಿರುವ ಕಾಂಗ್ರೆಸ್‌ ನಾಯ ಕರು ಪ್ರತಿ ಚುನಾವಣೆ ಸಂದರ್ಭ ಸುಳ್ಳು ಭರವಸೆಗಳನ್ನು ನೀಡುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಮೂದಲಿಸಿದರು.

‘ಸುಳ್ಳು ಗ್ಯಾರಂಟಿ ಕಾರ್ಡ್‌ ನೀಡುತ್ತಲೇ ಜನರನ್ನು ಮರುಳು ಮಾಡಿರುವ ಕಾಂಗ್ರೆಸ್‌, ಈಚೆಗೆ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಒಂದನ್ನೂ ಈಡೇರಿಸುವ ಗೋಜಿಗೆ ಹೋಗಿಲ್ಲ. ಅಂಥ ಸುಳ್ಳರಿಗೆ ಕರ್ನಾಟಕದಲ್ಲಿ ಕಾಲಿಡಲೂ ಅವಕಾಶ ನೀಡಬೇಡಿ’ ಎಂದು ಮತದಾರರನ್ನು ಕೋರಿದರು.

‘ನೆಚ್ಚಿನ ಮುಖಂಡನಿಗೆ ಟಿಕೆಟ್‌ಗೆ ಒತ್ತಾಯಿಸಲು ಬೆಂಗಳೂರಿಗೆ ಬಂದಿದ್ದ ಕಾರ್ಯಕರ್ತರೊಬ್ಬರ ಕೆನ್ನೆಗೆ ಕಾಂಗ್ರೆಸ್‌ ಮುಖಂಡರೊಬ್ಬರು ಹೊಡೆದಿರುವ ಘಟನೆ ಶುಕ್ರವಾರ ನಡೆದಿದೆ. ಕಾರ್ಯಕರ್ತನ ಕಪಾಳಕ್ಕೆ ಬಡಿದಿರುವ ಆ ನಾಯಕ, ರಾಜ್ಯದ ಜನಸಾಮಾನ್ಯರ ರಕ್ಷಣೆ ಮಾಡುತ್ತಾರಾ’ ಎಂದರು.

ಕಾಂಗ್ರೆಸ್‌ ನಾಯಕರು ನರೇಂದ್ರ ಮೋದಿಯ ‘ಸಮಾಧಿ’ಯ ಕನಸು ಕಾಣುತ್ತಿದ್ದಾರೆ. ಆದರೆ, ಕರ್ನಾಟಕದ ಮತದಾರರು ‘ಮೋದಿಯ ಕಮಲವನ್ನು ಅರಳಿಸುವ ಪಣ ತೊಟ್ಟಿದ್ದಾರೆ. ಈಗ ಇಡೀ ಭಾರತ ಕರ್ನಾಟಕದತ್ತ ನೋಡುತ್ತಿದ್ದು, ಯುವಜನರ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಬೇಕು. ‘ಡಬಲ್‌ ಎಂಜಿನ್‌’ ಸರ್ಕಾರಕ್ಕೆ ಒತ್ತು ನೀಡುವಂತೆ ಕೋರಿದರು’ ಎಂದು ಕಾರ್ಯಕರ್ತರಿಗೆ ಸೂಚಿಸಿದರು.

‘ನಾನು ಮತ್ತೆ ನಿಮ್ಮ ಸೇವೆ ಮಾಡಲು ರಾಜ್ಯದಲ್ಲೂ ಬಿಜೆಪಿಗೆ ಆದ್ಯತೆ ನೀಡಬೇಕು ಎನ್ನುವ ಮೂಲಕ 2024ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಿರುವುದನ್ನು ಮೋದಿ ಸೂಚ್ಯವಾಗಿ ತಿಳಿಸಿದರು.

ಕಾಂಗ್ರೆಸ್ ಅಧ್ಯಕ್ಷರ ಊರಿನಿಂದಲೇ ವಿಜಯೋತ್ಸವ: ‘ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕರ್ಮಭೂಮಿ ಕಲಬುರಗಿಯಲ್ಲೇ ಬಿಜೆಪಿಯ ಮೇಯರ್‌ ಆಯ್ಕೆಯಾಗಿದ್ದಾರೆ. ಅಲ್ಲಿಂದಲೇ ಬಿಜೆಪಿ ವಿಜಯೋತ್ಸವ ಆರಂಭವಾಗಿದೆ. ವಿಧಾನಸಭೆಯಲ್ಲೂ ‍‍ಗೆಲುವು ದೊರೆಯಲಿದೆ ಎಂಬುದಕ್ಕೆ ಈ ಸಮಾವೇಶವೇ ಸಾಕ್ಷಿ’ ಎಂದರು.

ಕಾರ್ಯಕರ್ತರ ಪ್ರತಿಕ್ರಿಯೆ ಕೋರಿದ ಪ್ರಧಾನಿ, ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಪ್ರತಿ ಬೂತ್‌ನಲ್ಲೂ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.

ಪ್ರಧಾನಿಯತ್ತ ನುಗ್ಗಲೆತ್ನಿಸಿದ ಯುವಕ

ದಾವಣಗೆರೆ: ಹೆಲಿಪ್ಯಾಡ್‌ನಿಂದ ಸಮಾವೇಶದ ಸ್ಥಳಕ್ಕೆ ತೆರೆದ ವಾಹನದಲ್ಲಿ ಸಾಗುತ್ತಿದ್ದ ಪ್ರಧಾನಿ ಮೋದಿ ಅವರತ್ತ ಯುವಕನೊಬ್ಬ ಧಾವಿಸಿದ ಘಟನೆ ನಡೆಯಿತು. ಪ್ರಧಾನಿ ಆಗಮಿಸುತ್ತಿದ್ದಂತೆಯೇ ನೂಕುನುಗ್ಗಲು ಉಂಟಾಗಿ ಬ್ಯಾರಿಕೇಡ್‌ ನೆಲಕ್ಕುರುಳಿತ್ತು. ಆಗ ಕೊಪ್ಪಳ ಮೂಲದ ಬಸವರಾಜ್‌ ಎಂಬ ಯುವಕ ಪ್ರಧಾನಿ ವಾಹನದತ್ತ ಧಾವಿಸಲು ಯತ್ನಿಸಿದ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಭದ್ರತಾ ಲೋಪವಾಗಿಲ್ಲ ಎಂದು ಎಸ್ಪಿ ಹೇಳಿದರು.

ವೈಟ್‌ಫೀಲ್ಡ್ ಮೆಟ್ರೊ ಸೇವೆಗೆ ಚಾಲನೆ

ಬೆಂಗಳೂರು: ಬಹುನಿರೀಕ್ಷಿತ ವೈಟ್‌ಫೀಲ್ಡ್ ಮೆಟ್ರೊ ರೈಲು ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.

ಉದ್ಘಾಟನೆ ಬಳಿಕ ಅವರು ಮೆಟ್ರೊ ಸಿಬ್ಬಂದಿಯಿಂದ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಪಡೆದು ಪ್ರಯಾಣಿಸಿದರು. ಸಿಬ್ಬಂದಿ, ವಿದ್ಯಾರ್ಥಿಗಳೊಂದಿಗೆ ಕುಳಿತು ಮಾತುಕತೆ ನಡೆಸಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಜತೆಯಲ್ಲಿದ್ದರು.

ಸತ್ಯಸಾಯಿ ಗ್ರಾಮ ದೇಶಕ್ಕೆ ಮಾದರಿ: ಪ್ರಧಾನಿ ಶ್ಲಾಘನೆ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ₹ 400 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಶನಿವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.

‘ಸಂಪೂರ್ಣ ಉಚಿತವಾಗಿ ವೈದ್ಯಕೀಯ ಶಿಕ್ಷಣ ನೀಡುವ ದೇಶದ ಮೊದಲ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಈ ಕಾಲೇಜು ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶಗಳ ಬಾಗಿಲು ತೆರೆಯಲಿದೆ.‌ಉಚಿತ ಶಿಕ್ಷಣದ ಮೂಲಕ ದೇಶದಲ್ಲಿ ಆಮೂಲಾಗ್ರ ಪರಿವರ್ತನೆ ತರಲಿದೆ’ ಎಂದು ಪ್ರಧಾನಿ ಆಶಿಸಿದರು. ಇದಕ್ಕೂ ಮುನ್ನ ಮುದ್ದೇನಹಳ್ಳಿಯ ಸರ್‌ ಎಂ.ವಿಶ್ವೇಶ್ವರಯ್ಯ ಸಮಾಧಿ ಸ್ಥಳ, ಮನೆ ಹಾಗೂ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT