ಬುಧವಾರ, ಆಗಸ್ಟ್ 10, 2022
25 °C
40 ವರ್ಷಗಳಲ್ಲಿ ಆಗದ ಕೆಲಸ 40 ತಿಂಗಳಿನಲ್ಲಿ ಪೂರ್ಣ: ಪ್ರಧಾನಿ ಮೋದಿ ಘೋಷಣೆ

ನಾಡ ಪ್ರಗತಿಗೆ ಕೇಂದ್ರದ ಹೆಗಲು: ಪ್ರಧಾನಿ ಮೋದಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಹೆಗಲಿಗೆ ಹೆಗಲು ಕೊಡಲಿದೆ. ಕರ್ನಾಟಕದ ಅಭಿವೃದ್ಧಿಗೆ ವೇಗ ತುಂಬುವುದೇ ‘ಡಬಲ್‌ ಎಂಜಿನ್‌’ ಸರ್ಕಾರದ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ನಗರದ ಕೊಮ್ಮಘಟ್ಟದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ₹ 33,000 ಕೋಟಿ ವೆಚ್ಚದ ರೈಲ್ವೆ, ರಸ್ತೆ ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಕಾಮಗಾರಿ ಪೂರ್ಣಗೊಂಡಿರುವ ಯೋಜನೆಗಳನ್ನು ಸಾರ್ವಜನಿಕ ಬಳಕೆಗೆ ಅರ್ಪಿಸಿ ಅವರು ಮಾತನಾಡಿದರು.

ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಈ ವಿಚಾರದಲ್ಲಿ ತಮ್ಮ ಸರ್ಕಾರ ನುಡಿದಂತೆ ನಡೆಯಲಿದೆ ಎಂದು ಭರವಸೆ ನೀಡಿದರು.

‘ಡಬಲ್‌ ಎಂಜಿನ್‌ ಸರ್ಕಾರ (ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಕಡೆ ಬಿಜೆಪಿ ಆಡಳಿತ) ಇದ್ದರೆ ಪ್ರಗತಿ ಕೆಲಸಗಳಿಗೆ ವೇಗ ದೊರೆಯುತ್ತದೆ ಎಂದು ನಾನು ಈ ಹಿಂದೆ ಕರ್ನಾಟಕದ ಜನರಿಗೆ ಭರವಸೆ ನೀಡಿದ್ದೆ. ಅದು ಸಾಕಾರಗೊಳ್ಳುತ್ತಿರುವುದಕ್ಕೆ ಇಲ್ಲಿ ಮೊದಲ ಸಾಕ್ಷ್ಯ ಕಣ್ಣ ಮುಂದಿದೆ’ ಎಂದರು.

₹ 15,767 ಕೋಟಿ ವೆಚ್ಚದ ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್‌ಆರ್‌ಪಿ) ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ‘40ವರ್ಷಗಳಿಂದ ಚರ್ಚೆಯಲ್ಲೇ ಇದ್ದ ಈ ಯೋಜನೆಗೆ ನಮ್ಮ ಸರ್ಕಾರ ಚಾಲನೆ ನೀಡಿದೆ. 40 ತಿಂಗಳಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಿ, ಇಲ್ಲಿನ ಜನರ ಬಹುದಿನದ ಕನಸನ್ನು ಸಾಕಾರಗೊಳಿಸುತ್ತೇವೆ’ ಎಂದು ಘೋಷಿಸಿದರು.

ಉನ್ನತ ಶಿಕ್ಷಣ, ಸಂಶೋಧನೆ, ಕೌಶಲಾಭಿವೃದ್ಧಿ, ಆರೋಗ್ಯ ಸೇವೆ, ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಪೂರಕವಾದ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಐದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಮತ್ತು ಏಳು ರೈಲ್ವೆ ಕಾಮಗಾರಿಗಳಿಗೆ ಚಾಲನೆ ದೊರಕಿದೆ. ಜೀವನ ನಿರ್ವಹಣೆಯನ್ನು ಸುಲಭಗೊಳಿಸುವುದರ ಜತೆಯಲ್ಲೇ ವ್ಯಾಪಾರ, ವಹಿವಾಟು ನಡೆಸುವುದನ್ನೂ ಸುಲಭಗೊಳಿಸುವತ್ತ ಕೇಂದ್ರ ಸರ್ಕಾರ ಹೊಂದಿರುವ ದೂರದೃಷ್ಟಿಗೆ ಇದು ಸಾಕ್ಷಿ ಎಂದರು.

ಯಲಹಂಕ– ಪೆನುಕೊಂಡ ರೈಲ್ವೆ ಮಾರ್ಗದ ಅಭಿವೃದ್ಧಿಯು ಅಂತರರಾಜ್ಯ ಸಂಪರ್ಕ ಸುಧಾರಣೆಗೆ ಕಾರಣವಾಗಲಿದೆ. ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿ 1,200 ಕಿ.ಮೀ. ಉದ್ದದ ರೈಲ್ವೆ ಮಾರ್ಗಗಳ ನಿರ್ಮಾಣ, ಸುಧಾರಣೆ ನಡೆದಿದೆ ಎಂದು ಪ್ರಧಾನಿ ಹೇಳಿದರು.

ತ್ವರಿತ ಅನುಷ್ಠಾನಕ್ಕೆ ಕ್ರಮ: ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ, ಬೆಂಗಳೂರು ಉಪನಗರ ವರ್ತುಲ ರಸ್ತೆ, ‘ಮಲ್ಟಿ ಮಾಡೆಲ್‌ ಲಾಜಿಸ್ಟಿಕ್‌ ಪಾರ್ಕ್‌’ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಮೋದಿ, ‘ಈ ಎಲ್ಲ ಕಾಮಗಾರಿಗಳೂ ತ್ವರಿತವಾಗಿ ಪೂರ್ಣಗೊಳ್ಳಲಿವೆ. ರಸ್ತೆ, ರೈಲು, ವಿಮಾನ ಮತ್ತು ಜಲಸಾರಿಗೆ ಮಾರ್ಗಗಳನ್ನು ಬೆಸೆಯುವ ಕೆಲಸ ಆಗಲಿದೆ’ ಎಂದರು.

ಮಲ್ಟಿ ಮಾಡೆಲ್‌ ಲಾಜಿಸ್ಟಿಕ್‌ ಪಾರ್ಕ್‌ ಅಭಿವೃದ್ಧಿಯು ಕರ್ನಾಟಕವನ್ನು ಹಲವು ರಾಜ್ಯಗಳ ಜತೆ ಬೆಸೆಯಲಿದೆ. ಈ ಯೋಜನೆಯಿಂದ ರಾಜ್ಯದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಸರಕು ಸಾಗಣೆಯ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಿದೆ ಎಂದು ಹೇಳಿದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಎಸ್‌.ಟಿ. ಸೋಮಶೇಖರ್‌, ವಿ. ಸೋಮಣ್ಣ, ಸಂಸದರಾದ ಡಿ.ವಿ. ಸದಾನಂದ ಗೌಡ, ಪಿ.ಸಿ. ಮೋಹನ್‌, ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

‘ಖಾಸಗಿ ಕ್ಷೇತ್ರದ ಬಗ್ಗೆ ಅನಗತ್ಯ ಟೀಕೆ ಸಲ್ಲದು’

‘ಈಗಲೂ ಖಾಸಗಿ ಕ್ಷೇತ್ರವನ್ನು ಟೀಕಿಸುವುದರಲ್ಲೇ ಮಗ್ನರಾಗಿರುವ ಅಧಿಕಾರಶಾಹಿ ಮನಸ್ಥಿತಿಯ ಜನರು ಹೇಗೆ ತಮ್ಮ ಯೋಚನಾ ಕ್ರಮವನ್ನು ಬದಲಿಸಿಕೊಳ್ಳಬೇಕು ಎಂಬ ಪಾಠವನ್ನು ಬೆಂಗಳೂರು ನಗರ ಕಲಿಸುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಖಾಸಗಿ ಕ್ಷೇತ್ರವನ್ನು ಟೀಕಿಸುವವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ದೇಶದ ಪ್ರಗತಿಯಲ್ಲಿ ಸಕ್ರಿಯವಾಗಿ ಕೈಜೋಡಿಸುತ್ತಿರುವುದಕ್ಕೆ ಖಾಸಗಿ ಕ್ಷೇತ್ರವನ್ನು ನಾನು ಅಭಿನಂದಿಸುತ್ತೇನೆ. ಸಾರ್ವಜನಿಕ ಕ್ಷೇತ್ರದಂತೆ ಖಾಸಗಿ ಕ್ಷೇತ್ರವೂ ಈ ದೇಶದ ಆಸ್ತಿ’ ಎಂದರು.

ಸರ್ಕಾರಿ– ಖಾಸಗಿ ಸಹಭಾಗಿತ್ವದ (ಪಿಪಿಪಿ) ಯೋಜನೆಗಳಿಗೆ ಚಾಲನೆ ನೀಡುವಾಗ ಈ ವಿಷಯ ಪ್ರಸ್ತಾಪಿಸಿದ ಪ್ರಧಾನಿ, ‘ನಮ್ಮ ಸರ್ಕಾರವು ಉದ್ಯೋಗ ಸೃಜಿಸುವವರು, ಆಸ್ತಿ ಸೃಜಿಸುವವರ ಪರವಾಗಿದೆ. ಎಂಟು ವರ್ಷಗಳಿಂದಲೂ ಅದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ’ ಎಂದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ:

‘ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು, ಬೆಂಗಳೂರಿನ ಜನತೆಗೆ ವಿಶೇಷವಾದ ನಮಸ್ಕಾರಗಳು. ಕರ್ನಾಟಕ ರಾಜ್ಯದ ಜನತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಮರ್ಪಿಸುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ’ ಎಂದು ಪ್ರಧಾನಿ ತಮ್ಮ ಭಾಷಣದ ಆರಂಭದಲ್ಲಿ ಕನ್ನಡದಲ್ಲೇ ಹೇಳಿದರು.

ನರೇಂದ್ರ ಮೋದಿ ಕನ್ನಡದಲ್ಲಿ ಮಾತು ಆರಂಭಿಸುತ್ತಿದ್ದಂತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನರು ಕರತಾಡನ, ಶಿಳ್ಳೆ, ಹರ್ಷೋದ್ಘಾರದೊಂದಿಗೆ ‘ಮೋದಿ... ಮೋದಿ...’ ಎಂದು ಘೋಷಣೆ ಮೊಳಗಿಸಿ ಸಂಭ್ರಮಿಸಿದರು.

ಮೋದಿಯಂಥ ಮುತ್ಸದ್ದಿ ಕಂಡಿಲ್ಲ: ಬೊಮ್ಮಾಯಿ

ಬೆಂಗಳೂರು: ‘ದೇಶದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಂಥಹ ಮತ್ತೊಬ್ಬ ಮುತ್ಸದ್ದಿಯನ್ನು ನನ್ನ ಜೀವನದಲ್ಲಿ ಕಂಡಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೊಮ್ಮಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲಿರುತ್ತದೆ. ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ತಲೆಮಾರಿನ ಮೇಲಿರುತ್ತದೆ. ಮೋದಿ ಎರಡನೇ ಸಾಲಿಗೆ ಸೇರಿದ ನಾಯಕ’ ಎಂದರು.

ದೇಶ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈಗ ದೇಶವನ್ನು ಮುನ್ನಡೆಸುತ್ತಿರುವ ಮೋದಿಯವರು, ಮುಂದಿನ 25 ವರ್ಷಗಳಿಗಾಗಿ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿದ್ದಾರೆ. ಅವರ ಆಶಯದಂತೆ ಮುನ್ನಡೆದರೆ 2047ರ ವೇಳೆಗೆ ಭಾರತ ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಲಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು