ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಹರಿಯದ ಶಾಲಾ ಶುಲ್ಕ ಬಿಕ್ಕಟ್ಟು

ಶೇ 30 ಶುಲ್ಕ ಕಡಿತ ಆದೇಶ ಪಾಲಿಸಲೇಬೇಕು– ಶಿಕ್ಷಣ ಸಚಿವ ಸುರೇಶ್‌ ಕುಮಾರ್‌
Last Updated 10 ಫೆಬ್ರುವರಿ 2021, 17:24 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿಗೆ ಮಾತ್ರ ಅನ್ವಯಿಸುವಂತೆ ಖಾಸಗಿ ಶಾಲಾ ಶುಲ್ಕವನ್ನು ಶೇ 30ರಷ್ಟು ಕಡಿತ ಮಾಡಿರುವ ರಾಜ್ಯದ ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ವಿರೋಧ ವ್ಯಕ್ತಪಡಿಸಿರುವುದರಿಂದ ಶುಲ್ಕ ಬಿಕ್ಕಟ್ಟು ಮುಂದುವರಿದಿದೆ.

‘ಸರ್ಕಾರ ಅವೈಜ್ಞಾನಿಕವಾಗಿ ಶುಲ್ಕ ಕಡಿತ ಮಾಡಿದೆ. ಶೇ 30ರಷ್ಟು ಶುಲ್ಕ ಕಡಿತವೆಂದು ಕಾಣಿಸಿದರೂ, ಬೇರೆ ಬೇರೆ ವಿಭಾಗಗಳಲ್ಲಿಯೂ ಶುಲ್ಕ ಕಡಿತ ಮಾಡಿರುವುದರಿಂದ ಒಟ್ಟು ಶೇ 50ರಿಂದ ಶೇ 55ರಷ್ಟು ಕಡಿತ ಆಗಲಿದೆ. ಇದರಿಂದ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ. ದಾಖಲಾತಿಯೂ ಸಮರ್ಪಕವಾಗಿ ಆಗಿಲ್ಲ. ಹೀಗಾಗಿ, ಶೇ 30ರಷ್ಟು ಶುಲ್ಕ ಕಡಿತ ಜಾರಿಗೊಳಿಸಲು ಸಾಧ್ಯವಿಲ್ಲ’ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಪಟ್ಟು ಹಿಡಿದಿವೆ.

ಆದರೆ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್, ‘ಪ್ರಸಕ್ತ ಸಾಲಿನಲ್ಲಿ ಶಾಲಾ ಆಡಳಿತ ಮಂಡಳಿಗಳು
ಮಕ್ಕಳ ಹಿತದೃಷ್ಠಿಯಿಂದ ಶೇ 30ರಷ್ಟು ಶುಲ್ಕ ಕಡಿತ ಆದೇಶವನ್ನು ಪಾಲಿಸಲೇ ಬೇಕು’ ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

‘ಪೋಷಕರು ಮತ್ತು ಖಾಸಗಿ ಶಾಲಾ ಕಾಲೇಜುಗಳ ಮಧ್ಯೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ಪ್ರಸ್ತುತ ಶೈಕ್ಷಣಿಕ ವರ್ಷದ ಶುಲ್ಕ ಪಾವತಿ ವಿಚಾರದಲ್ಲಿ ಎಲ್ಲರಿಗೂ ಅನುಕೂಲವಾಗುವಂಥ ಆದೇಶವನ್ನು ಸರ್ಕಾರ ಹೊರಡಿಸಿದೆ. ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗೆ ಯಾವುದೇ ಸಮಸ್ಯೆ ಆಗಬಾರದೆಂಬ ಸದುದ್ದೇಶದಿಂದ, ಮಕ್ಕಳ ಹಿತ ಕಾಪಾಡಲು ಸಮನ್ವಯ ಸೂತ್ರ ಪಾಲಿಸಿ, ಕಳೆದ ವರ್ಷದ ಬೋಧನಾ ಶುಲ್ಕದ ಶೇ 30ರಷ್ಟು ಕಡಿತ ಮಾಡಿ, ಶೇ 70ರಷ್ಟು ಮಾತ್ರ ಸ್ವೀಕರಿಸಲು ಅವಕಾಶ ನೀಡಿದ್ದೇವೆ’ ಎಂದು ಸಚಿವರು ತಿಳಿಸಿದ್ದಾರೆ.

‘ಈ ಆದೇಶಕ್ಕೆ ಕೆಲವು ಖಾಸಗಿ ಶಾಲಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಗೊಂದಲವನ್ನು ಯಾವ ರೀತಿ ಪರಿಹರಿಸಬೇಕು ಎಂದು ಯಾರಾದರೂ ಸಲಹೆ ನೀಡಿದರೆ ಮುಕ್ತವಾಗಿ ಸ್ವೀಕರಿಸುತ್ತೇನೆ. ಇದನ್ನು ನಾವು ಮಾತುಕತೆಯಿಂದಲೇ ಬಗೆಹರಿಸಿಕೊಳ್ಳಬೇಕು. ಇಂಥ ವಿಚಿತ್ರ ಸನ್ನಿವೇಶದಲ್ಲಿ ಎಲ್ಲರೂ ಒಟ್ಟಾಗಿ, ಪೋಷಕರನ್ನೂ ಒಳಗೊಂಡು ಚರ್ಚಿಸಬೇಕಿದೆ. ಈ ವರ್ಷದ ಮಟ್ಟಿಗೆ ಎಲ್ಲರೂ ಸಹಕಾರ ನೀಡುವ ಮೂಲಕ ಮಕ್ಕಳ ಭವಿಷ್ಯವನ್ನು ಕಾಯಲು ಮುಂದಾಗಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT