ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ ವಿರುದ್ಧ ವಿಚಾರಣೆ ರದ್ದು

ಬೆಂಗಳೂರು: ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ಸೀಟು ಹಂಚಿಕೆಗೆ ಲಂಚ ಪಡೆದ ಆರೋಪದ ಸಂಬಂಧ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ ಹಾಗೂ ಇತರರ ವಿರುದ್ಧ ಸಿಸಿಬಿ ಪೊಲೀಸರ ದೋಷಾರೋಪ ಪಟ್ಟಿ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಡೆಸುತ್ತಿದ್ದ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಅಪ್ಪಾಜಿಗೌಡ, ಎಂ.ಜಿ.ಗೋಪಾಲ್, ಡಾ. ನಿಸರ್ಗ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಬಿ.ಎ.ಪಾಟೀಲ, ಈ ಆದೇಶ ಹೊರಡಿಸಿದ್ದಾರೆ.
‘ಸಿಸಿಬಿಗೆ ಪೊಲೀಸ್ ಠಾಣೆಯ ಸ್ಥಾನಮಾನ ಇಲ್ಲ. ಕಾನೂನು ಪ್ರಕಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ದೋಷಾರೋಪ ಪಟ್ಟಿ ಸಲ್ಲಿಸಬೇಕು. ಆಗ ಮಾತ್ರ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆ ನಡೆಸಬೇಕು. ಈ ನಿಯಮ ಉಲ್ಲಂಘಿಸಿರುವ ಕಾರಣ ಅರ್ಜಿದಾರರ ವಿರುದ್ಧದ ವಿಚಾರಣೆ ರದ್ದುಪಡಿಸಲು ಅರ್ಹವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
‘ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 2014–15ನೇ ಸಾಲಿನಲ್ಲಿ ಮೊದಲನೇ ವರ್ಷದ ಎಂಬಿಬಿಎಸ್ ಪದವಿ ಸೀಟನ್ನು ನನ್ನ ಮಗನಿಗೆ ಹಂಚಿಕೆ ಮಾಡಲಾಗಿದೆ. ಅದಕ್ಕಾಗಿ ₹47 ಲಕ್ಷವನ್ನು ಅಪ್ಪಾಜಿಗೌಡ, ಡಾ.ಎಂ.ಜಿ. ಗೋಪಾಲ್, ಡಾ. ನಿಸರ್ಗ ಅವರು ಪಡೆದಿದ್ದರು. ಆದರೆ ಸೀಟನ್ನು ಬೇರೊಬ್ಬರಿಗೆ ಹಂಚಿಕೆ ಮಾಡಿ ವಂಚನೆ ಮಾಡಿದ್ದಾರೆ’ ಎಂದು ಕೆ.ಆರ್ ಚೌದರಿ ಎಂಬುವರು ದೂರು ಸಲ್ಲಿಸಿದ್ದರು.
ಈ ದೂರು ಆಧರಿಸಿ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಕೋರಿ ಅಪ್ಪಾಜಿಗೌಡ ಹಾಗೂ ಇನ್ನಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಎಸಿಎಂಎಂ ನ್ಯಾಯಾಲಯ ತಿರಸ್ಕರಿಸಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.