ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ನೋಂದಣಿಗೆ ಆರಂಭದಲ್ಲೇ ವಿಘ್ನ

ರಾಜ್ಯದ ಎರಡು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಆರಂಭ
Last Updated 4 ನವೆಂಬರ್ 2020, 17:54 IST
ಅಕ್ಷರ ಗಾತ್ರ

ಯಲಹಂಕ (ಬೆಂಗಳೂರು): ರಾಜ್ಯದಲ್ಲಿ ಆಸ್ತಿ ನೋಂದಣಿ ವ್ಯವಹಾರವನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಆರಂಭಿಸಿರುವ ‘ಕಾವೇರಿ ಆನ್‌ಲೈನ್‌ ಸರ್ವಿಸಸ್’ ನೋಂದಣಿ ವ್ಯವಸ್ಥೆಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಾಲ ಹೋಬಳಿ ಹಾಗೂ ತುಮಕೂರು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನ.2ರಿಂದ ಪ್ರಾಯೋಗಿಕವಾಗಿ ಈ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ, ಈ ಮೂರು ದಿನಗಳಲ್ಲಿ ಒಂದೇ ಒಂದು ನೋಂದಣಿಯೂ ಆಗಿಲ್ಲ.

‘ಪಿಡಿಇಎಸ್‌ (ಪ್ರಿ ಡಾಟಾ ಎಂಟ್ರಿ ಸಿಸ್ಟಂ) ಮೂಲಕ ದಾಖಲೆಗಳನ್ನು ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ನೋಂದಣಿ ಮುದ್ರಾಂಕ ಶುಲ್ಕವನ್ನೂ ಆನ್‌ಲೈನ್‌ನಲ್ಲಿಯೇ ಪಾವತಿಸಬೇಕು. ನೋಂದಣಿ ಮಾಡಿಸಲು ಹೋದರೆ ಸರ್ವರ್‌ ಡೌನ್‌ ಎಂದು ಬರುತ್ತದೆ. ಜೊತೆಗೆ, ಶುಲ್ಕ ಪಾವತಿಸಿದ ನಂತರ ತೊಂದರೆಯಾದರೆ ಮರುಪಾವತಿಯಾಗುವ ಖಾತರಿಯೂ ಇಲ್ಲ’ ಎಂದು ಬೆಟ್ಟಹಲಸೂರು ಗ್ರಾಮದ ನಿವಾಸಿ ಶಿವಣ್ಣ ಹೇಳಿದರು.

‘ಆನ್‌ಲೈನ್‌ನಲ್ಲಿ ಹೇಗೆ ನೋಂದಣಿ ಮಾಡಿಸಬೇಕು, ದಾಖಲೆಗಳ ಅಪ್‌ಲೋಡ್‌ ಹೇಗೆ ಮಾಡಬೇಕು ಎಂದು ಸಾರ್ವಜನಿಕರಿಗೆ ಮಾಹಿತಿಯನ್ನೇ ನೀಡಿಲ್ಲ. ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಿ, ತಂತ್ರಾಂಶ ಪೂರ್ಣ ಸಿದ್ಧಗೊಂಡ ನಂತರ ಸೇವೆ ಆರಂಭಿಸಬೇಕಾಗಿತ್ತು’ ಎಂದು ಅವರು ಸಲಹೆ ನೀಡಿದರು.

‘ದಾಖಲೆಗಳನ್ನು ಸಮರ್ಪಕವಾಗಿ ಅಪ್‌ಲೋಡ್‌ ಮಾಡಿದರೆ, ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧರಿದ್ದೇವೆ. ಆದರೆ, ಸರ್ವರ್‌ ಸಮಸ್ಯೆಯಿಂದ ದಾಖಲೆಗಳು ಅಪ್‌ಲೋಡ್ ಆಗುತ್ತಿಲ್ಲ. ಜಾಲ ಹೋಬಳಿಗೆ ಬರುತ್ತಿದ್ದ ಜನ, ಈಗ ಯಲಹಂಕ, ಬ್ಯಾಟರಾಯನಪುರ, ಹೆಬ್ಬಾಳ ಕಚೇರಿಗೆ ತೆರಳಿ ನೋಂದಣಿ ಮಾಡಿಸುತ್ತಿದ್ದಾರೆ’ ಎಂದು ಕಚೇರಿಯ ಪ್ರಥಮ ದರ್ಜೆ ಸಹಾಯಕ ಜೆ. ರವಿಕುಮಾರ್ ಹೇಳಿದರು.

‘ಈ ಕಚೇರಿಗಳಲ್ಲಿನ ಸಿಬ್ಬಂದಿಗೆ ಈ ಕುರಿತು ತರಬೇತಿ ನೀಡಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಕಚೇರಿಗಳ ಎದುರು ಮಾಹಿತಿ ಫಲಕಗಳನ್ನೂ ಹಾಕಲಾಗಿದೆ. ನ.20ರ ವೇಳೆಗೆ ತಾಂತ್ರಿಕ ದೋಷಗಳು ಪರಿಹಾರಗೊಂಡು ಸೇವೆ ಸರಾಗವಾಗಲಿದೆ’ ಎಂದು ಸಹಾಯಕ ನೋಂದಣಿ ಪರಿವೀಕ್ಷಕರಾದ ಸವಿತಾ ಲಕ್ಷ್ಮಿ ತಿಳಿಸಿದರು.

‘ಸಮಸ್ಯೆ ತಿಳಿಯಲೆಂದೇ ಈ ಪ್ರಯೋಗ’

‘ಯಾವ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ನೋಡುವ ಉದ್ದೇಶದಿಂದಲೇ ಕೇವಲ ಎರಡು ಕಚೇರಿಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಈ ಸೇವೆ ಆರಂಭಿಸಲಾಗಿದೆ’ ಎಂದು ನೋಂದಣಿ ಮಹಾಪರಿವೀಕ್ಷಕ ಮತ್ತು ಮುದ್ರಾಂಕಗಳ ಆಯುಕ್ತ ಕೆ.ಪಿ. ಮೋಹನ್‌ರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘2018ರಲ್ಲಿಯೇ ಈ ‘ಕಾವೇರಿ ಆನ್‌ಲೈನ್‌ ಸರ್ವಿಸ್’ ಸೇವೆ ಆರಂಭಿಸಲಾಗಿತ್ತು. ಆಗ ಹೆಚ್ಚು ಜನ ಈ ಸೇವೆಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಕೊರೊನಾ ಪರಿಸ್ಥಿತಿ ಇರುವುದರಿಂದ ಮತ್ತು ವ್ಯವಹಾರ ಸರಳೀಕರಣಗೊಳಿಸುವ ಉದ್ದೇಶದಿಂದ ಮತ್ತೆ ಆರಂಭಿಸಲಾಗಿದೆ’ ಎಂದರು.

‘ಜಾಲ, ತುಮಕೂರು ಹಾಗೂ ಕಲಬುರ್ಗಿಯ ಚಿಂಚೋಳಿಯನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಚಿಂಚೋಳಿಯಲ್ಲಿ ನ.10ರಿಂದ ಈ ಸೇವೆ ಆರಂಭವಾಗಲಿದೆ. ಯಾವುದೇ ಹೊಸ ಯೋಜನೆ ಪ್ರಾರಂಭಿಸಿದಾಗ ತಾಂತ್ರಿಕ ತೊಂದರೆಗಳು ಉಂಟಾಗುವುದು ಸಹಜ. ಅವುಗಳನ್ನು ಸರಿಪಡಿಸಲಾಗುವುದು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT