ಮಂಗಳವಾರ, ಜೂನ್ 22, 2021
21 °C
ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿ– ವಿರೋಧ ಪಕ್ಷದ ನಾಯಕ ಆಗ್ರಹ

ಮೋದಿ ಮನೆ ಮುಂದೆ ಧರಣಿ ಕೂರಲಿ: ಸಿಎಂ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಲಸಿಕೆ‌ ಪಡೆಯುವುದನ್ನು ಪ್ರೋತ್ಸಾಹಿಸಬೇಕಾದ ಕೇಂದ್ರ ಸರ್ಕಾರ, ಅದರ ಬೆಲೆ ಏರಿಸಿ ಜನತೆ ಅದನ್ನು ಪಡೆಯದಂತೆ ಮಾಡಲು ಹೊರಟಿದೆ. ಪ್ರಧಾನಿ ಅವರೇ, ‘ಟೀಕಾ ಉತ್ಸವ್’ನಂಥ ಬಾಯಿ ಬಡಾಯಿ ಬಿಟ್ಟಾಕಿ, ಮೊದಲು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಔಷಧಿ,‌ ಆಮ್ಲಜನಕ, ವೆಂಟಿಲೇಟರ್ ಕೊಡಿ ಎಂದು‌ ಪ್ರಧಾನಿಯನ್ನು ಬೇಡುತ್ತಿರುವುದು ಕಂಡಾಗ‌ ಕನಿಕರ ಮೂಡುತ್ತಿದೆ. ಬಿಜೆಪಿಯ 25 ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ? ಅವರನ್ನು ದೆಹಲಿಗೆ ಅಟ್ಟಿ ರಾಜ್ಯದ ನ್ಯಾಯಬದ್ಧ ಪಾಲಿಗಾಗಿ ಪ್ರಧಾನಿ ಮನೆ ಮುಂದೆ ಧರಣಿ ಕುಳಿತುಕೊಳ್ಳುವಂತೆ ಮಾಡಿ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.

‘ಅನ್ನಭಾಗ್ಯ ಯೋಜನೆ ಎಂದರೆ ಉರ್ಕೊಳ್ಳುತ್ತಿದ್ದ ಮತ್ತು ಆ ಯೋಜನೆಗೆ ಕಲ್ಲು ಹಾಕಲು ಪ್ರಯತ್ನಿಸುತ್ತಿರುವ ರಾಜ್ಯದ ಬಿಜೆಪಿ ನಾಯಕರು, ಈಗ ಪ್ರಧಾನಿ ಘೋಷಿಸಿರುವ ಎರಡು ತಿಂಗಳ ಕಾಲ ಐದು ಕಿಲೋ ಅಕ್ಕಿ ನೀಡುವ ಯೋಜನೆಯನ್ನು ಕೊಂಡಾಡುತ್ತಿರುವುದು ತಮಾಷೆಯಾಗಿದೆ’ ಎಂದೂ ವ್ಯಂಗ್ಯವಾಡಿದ್ದಾರೆ.

‘ಕೊರೊನಾದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಜನರಿಗೆ ಪ್ರತಿ ತಿಂಗಳು ಉಚಿತವಾಗಿ ಹತ್ತು ಕಿಲೋ ಅಕ್ಕಿ ನೀಡಬೇಕೆಂದು ಆರಂಭದಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ಪ್ರಧಾನಿ ಈಗಲಾದರೂ ಎಚ್ಚೆತ್ತುಕೊಳ್ಳಿ. ಕೊರೊನಾ‌ ಕಷ್ಟ ಕೊನೆಯಾಗುವವರೆಗಾದರೂ ಹತ್ತು ಕಿಲೋ ಅಕ್ಕಿ ನೀಡಿ ಪುಣ್ಯ ಕಟ್ಕೊಳ್ಳಿ’.

‘ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸಲು ಶತಪ್ರಯತ್ನ ಮಾಡುತ್ತಿರುವ ರಾಜ್ಯ ಸರ್ಕಾರ ಹಲವು ಜಿಲ್ಲೆಗಳಲ್ಲಿ ತಿಂಗಳಿಗೆ ಐದು‌ ಕಿಲೋ ಅಕ್ಕಿ ಬದಲಿಗೆ ಎರಡು ಕಿಲೋ ಅಕ್ಕಿ ನೀಡುತ್ತಿದೆ. ಈ ಅನ್ಯಾಯವನ್ನು ತಕ್ಷಣ ಸರಿಪಡಿಸಿ, ಬಡವರ ಶಾಪಕ್ಕೆ ಈಡಾಗಬೇಡಿ’ ಎಂದೂ ಕುಟುಕಿದ್ದಾರೆ.

ಕೇಂದ್ರದ ಉಚಿತ ಪಡಿತರ: ಸಂಕೇಶ್ವರ ಅಸಮಾಧಾನ
ಹುಬ್ಬಳ್ಳಿ: ‘ಕೇಂದ್ರ ಸರ್ಕಾರ ದೇಶದ ಜನತೆಗೆ ಉಚಿತ ಪಡಿತರ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ಇದು ದೇಶಕ್ಕೆ ಗಂಡಾಂತರವಾಗಿದ್ದು, ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದು ಉದ್ಯಮಿ ವಿಜಯ‌ ಸಂಕೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಪದೇ ಪದೇ ತಪ್ಪು ಮಾಡುತ್ತಿದೆ. ಕೊರೊನಾ ಮೊದಲ ಅಲೆಯ ಲಾಕ್‌ಡೌನ್ ಸಂದರ್ಭ ಹಾಗೂ ನಂತರದ‌ ಮೂರು ತಿಂಗಳು ಬಡವರಿಗೆ ಉಚಿತ ಪಡಿತರ ನೀಡಿತ್ತು. ಎರಡನೇ‌ ಅಲೆ ಎದ್ದಿರುವ ಈ ಸಂದರ್ಭದಲ್ಲೂ ದೇಶದ 80 ಕೋಟಿ ಮಂದಿಗೆ ಉಚಿತ ಪಡಿತರ ನೀಡಲು ನಿರ್ಧರಿಸಿದೆ. ಇದರಿಂದ ಕಾರ್ಮಿಕರು‌ ಕೆಲಸಕ್ಕೆ ಬರದೆ ಮನೆಯಲ್ಲೇ ಉಳಿಯುತ್ತಾರೆ.‌ ಇದು ಕೈಗಾರಿಕಾ ಕ್ಷೇತ್ರದ ಮೇಲೆ‌ ಗಂಭೀರ‌ ಪರಿಣಾಮ ಉಂಟು ಮಾಡುತ್ತದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜನರಿಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಆದರೆ, ಉಚಿತ ಪಡಿತರ ವ್ಯವಸ್ಥೆಯಿಂದಾಗಿ ಅವರು ಕಾರ್ಯಕ್ಷೇತ್ರಗಳನ್ನು ಬಿಟ್ಟು ಮನೆಗಳಿಗೆ ತೆರಳುತ್ತಾರೆ. ಕೈಗಾರಿಕಾ ಕ್ಷೇತ್ರದಲ್ಲಿನ ಉತ್ಪಾದನೆಯಲ್ಲಿ ಕುಂಠಿತವಾಗುತ್ತದೆ. ನಮ್ಮಂತ ವಿಚಿತ್ರ ದೇಶದಲ್ಲಿ ಇಂತಹ‌ ಸೌಲಭ್ಯ ನೀಡುವುದು ಸರಿಯಲ್ಲ’ ಎಂದರು.

ʼಅಂತ್ಯಕ್ರಿಯೆಯಲ್ಲಿ 5 ಮಂದಿಯಷ್ಟೇ ಭಾಗವಹಿಸಬೇಕುʼ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಜನರು ಗುಂಪು ಸೇರುವುದಕ್ಕೆ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಅಂತ್ಯಕ್ರಿಯೆಯಲ್ಲಿ 5 ಮಂದಿಯಷ್ಟೇ ಭಾಗವಹಿಸಬೇಕೆಂದು ಆದೇಶಿಸಿದೆ.

‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮುಖ್ಯ ಆಯುಕ್ತರು, ಪೊಲೀಸ್‌ ಆಯುಕ್ತರು, ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಇತರ ಇಲಾಖೆಯ ಮುಖ್ಯಸ್ಥರು ಮತ್ತು ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು’ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಸುತ್ತೋಲೆ ಹೊರಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು