ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಗೆ ಅವಕಾಶ ನೀಡುವ ಕುರಿತು ರೈತರು ಆಲೋಚಿಸುವುದು ಉಚಿತ: ಕುಮಾರಸ್ವಾಮಿ

Last Updated 26 ಡಿಸೆಂಬರ್ 2020, 10:11 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಕಾಯ್ದೆಗೆ ಅವಕಾಶ ನೀಡುವ ಬಗ್ಗೆ ರೈತರು ಒಮ್ಮೆ ಆಲೋಚಿಸುವುದು ಉಚಿತವೆಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈ ವಿಚಾರವಾಗಿ ಶನಿವಾರ ಸರಣಿ ಟ್ವೀಟ್‌ ಮಾಡಿರುವ ಅವರು, 'ಭಾರತೀಯ ಕೃಷಿರಂಗ ವಿಷವರ್ತುಲದಲ್ಲಿದೆ ಎಂಬುದು ಸಾರ್ವತ್ರಿಕ ಆರೋಪ. ಕೃಷಿ ರಂಗದ ಕಲ್ಯಾಣವಾಗುತ್ತದೆ ಎಂದರೆ ಯಾವುದೇ ಪ್ರಯೋಗಕ್ಕೆ ನಾವೂ ಸಿದ್ಧರಿರುವುದು ಅಗತ್ಯ ಕೂಡ. ಹಾಗಾಗಿ ರೈತರು ಕಾಯ್ದೆಗೆ ಅವಕಾಶ ನೀಡುವ ಬಗ್ಗೆಯೂ ಒಮ್ಮೆ ಆಲೋಚಿಸುವುದು ಉಚಿತವೂ ಆಗಿದೆ ಎಂಬುದು ನನ್ನ ಅಭಿಪ್ರಾಯ. ಆದರೆ, ಸರ್ಕಾರ, ಹೋರಾಟಗಾರರ ನಡುವೆ ಸಮನ್ವಯವಿರಲಿ' ಎಂದು ಹೇಳಿದ್ದಾರೆ.

ರೈತರ ಪ್ರತಿಭಟನೆ ವಿಶ್ವದ ಗಮನ ಸೆಳೆಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕುಮಾರಸ್ವಾಮಿ, 'ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ದೇಶ ಮಾತ್ರವಲ್ಲದೇ, ವಿಶ್ವದ ಗಮನ ಸೆಳೆಯುತ್ತಿದೆ. ಕೆನಡಾ ಪ್ರಧಾನಿ ಕಳವಳದ ನಡುವೆಯೇ ಈಗ ಅಮೆರಿಕ, ಬ್ರಿಟನ್ ಸಂಸದರೂ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಏನೋ ಸಮಸ್ಯೆ ಸೃಷ್ಟಿಯಾಗಿದೆ ಎಂಬರ್ಥವನ್ನು ರೈತರ ಈ ಹೋರಾಟ ಹೊಮ್ಮಿಸುತ್ತಿದೆ' ಎಂದು ಟ್ವೀಟ್‌ ಮಾಡಿದ್ದಾರೆ.

'ಭಾರತ ಗಳಿಸಿಕೊಂಡ ಖ್ಯಾತಿ, ಸ್ಥಾನಮಾನಗಳಿಗೆ ಈ ಹೊಸ ಕಾಯ್ದೆಗಳು, ಅದರ ವಿರುದ್ಧ ನಡೆಯುತ್ತಿರುವ ಹೋರಾಟಗಳು ಚ್ಯುತಿಯುಂಟು ಮಾಡಬಾರದು ಎಂಬುದು ನನ್ನ ಅಭಿಲಾಷೆ. ಮೋದಿ ತಾವು ಪ್ರಧಾನಿಯಾದ ನಂತರ ಸ್ವತಃ ತಾವು ಗಳಿಸಿಕೊಂಡ ಹೆಸರಿಗೂ ಇದು ಕಪ್ಪುಚುಕ್ಕೆಯಾಗಬಹುದು ಎಂಬುದನ್ನು ಅವರು ಗಮನಿಸಬೇಕು. ಅದೇ ಹೊತ್ತಲ್ಲೇ ರೈತರಿಗೆ ಅನಾನುಕೂಲವೂ ಆಗಬಾರದು' ಎಂದು ಹೇಳಿದ್ದಾರೆ.

ದೇಶದ ಘನತೆಯ ವಿಚಾರದಲ್ಲಿ ಮೋದಿಯವರೂ ಎಚ್ಚರಿಕೆಯಿಂದ ವರ್ತಿಸುತ್ತಾರೆ ಎಂದಿರುವ ಎಚ್‌ಡಿಕೆ, 'ಕೇಂದ್ರ ಸರ್ಕಾರ ರೈತರಿಗೆ ಕಾರ್ಯಕ್ರಮಗಳ ಮೂಲಕ ಪರೋಕ್ಷ ಸಂದೇಶ ರವಾನಿಸುವ ಬದಲಿಗೆ ಪ್ರಧಾನಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಸಿ, ಹೋರಾಟ ಅಂತ್ಯಗೊಳಿಸುವುದು ಸೂಕ್ತ. ಇದು ದೇಶದ ಘನತೆ ದೃಷ್ಟಿಯಿಂದ ಅತ್ಯಗತ್ಯವೂ ಹೌದು. ದೇಶದ ಘನತೆಯ ವಿಚಾರದಲ್ಲಿ ಮೋದಿಯವರೂ ಎಚ್ಚರಿಕೆಯಿಂದ ವರ್ತಿಸುತ್ತಾರೆ. ಆದ್ದರಿಂದ ಸಮಸ್ಯೆ ಕೂಡಲೇ ಇತ್ಯರ್ಥವಾಗಲಿ' ಎಂದು ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

'ಕಾಯ್ದೆ ಬಗ್ಗೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರ ಮಾತುಗಳು ಭರವಸೆ ಮೂಡಿಸುವಂತಿವೆ. ಕಾಯ್ದೆಗಳ ಪ್ರಯೋಗಾತ್ಮಕ ಜಾರಿಗೆ ಅವಕಾಶ ನೀಡುವಂತೆ ಅವರು ಕೋರಿದ್ದಾರೆ. ಅಲ್ಲದೆ, ಕಾಯ್ದೆಗಳು ರೈತರಿಗೆ ಸಮಸ್ಯೆ ಸೃಷ್ಟಿಸುವಂತಿದ್ದರೆ ಸರ್ಕಾರ ಅವುಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಅವರು ಆಶ್ವಾಸನೆ ನೀಡಿದ್ದಾರೆ. ರೈತರೂ ಈ ನಿಟ್ಟಿನಲ್ಲಿ ಯೋಚಿಸಬೇಕು' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT