ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಅಕ್ರಮ: ಸಚಿವ ಅಶ್ವತ್ಥನಾರಾಯಣ ಸಂಬಂಧಿ ದರ್ಶನ್ ಗೌಡ ಸೇರಿ ನಾಲ್ವರ ಬಂಧನ

ಮತ್ತೆ ಮೂರು ಎಫ್‌ಐಆರ್ ದಾಖಲು
Last Updated 6 ಜೂನ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮ ಸಂಬಂಧ ಮತ್ತೆ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಹೆಡ್‌ ಕಾನ್‌ಸ್ಟೆಬಲ್ ಸೇರಿ ನಾಲ್ವರನ್ನು ಸಿಐಡಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.

‘ಕಲಾಸಿಪಾಳ್ಯ ಠಾಣೆ ಹೆಡ್‌ ಕಾನ್‌ಸ್ಟೆಬಲ್ ಎಚ್‌.ಬಿ. ಹರೀಶ್, ನೆಲಮಂಗಲ ಠಾಣೆ ಕಾನ್‌ಸ್ಟೆಬಲ್ಎ ಚ್‌.ಜಿ. ಮೋಹನ್‌ಕುಮಾರ್, ಅಭ್ಯರ್ಥಿಗಳಾದ ವಿ. ದರ್ಶನ್ ಗೌಡ ಹಾಗೂ ದಿಲೀಪ್‌ಕುಮಾರ್ ಬಂಧಿತರು. ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಪಿಎಸ್‌ಐ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗಲು ಬಯಸಿದ್ದ ನಾಲ್ವರು ಆರೋಪಿಗಳು, ಮಧ್ಯವರ್ತಿಗಳ ಮೂಲಕ ಲಕ್ಷಾಂತರ ರೂಪಾಯಿ ನೀಡಿ ತಮ್ಮ ಒಎಂಆರ್ ಪ್ರತಿ ತಿದ್ದಿಸಿದ್ದರು. ನಾಲ್ವರ ಹೆಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿತ್ತು. ಇವರ ಒಎಂಆರ್ ಅಸಲಿ ಪ್ರತಿ ಹಾಗೂ ಕಾರ್ಬನ್ ಪ್ರತಿ ಪರಿಶೀಲಿಸಿದಾಗ, ಅಕ್ರಮ ಎಸಗಿದ್ದು ಪತ್ತೆಯಾಗಿದೆ’ ಎಂದೂ ತಿಳಿಸಿವೆ.

‘ಅಕ್ರಮ ಎಸಗಿದ್ದ 22 ಅಭ್ಯರ್ಥಿಗಳ ವಿರುದ್ಧ ಈ ಹಿಂದೆ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಹಾಗೂ ನೌಕರರು ಸೇರಿ 35ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಬಂಧಿಸಲಾಗಿರುವ ನಾಲ್ವರು ಆರೋಪಿಗಳ ವಿರುದ್ಧ ರಾಮಮೂರ್ತಿನಗರ, ಕೋರಮಂಗಲ ಹಾಗೂ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ’ ಎಂದೂ ಹೇಳಿವೆ.

ಮೊದಲ ವಿಚಾರಣೆಗೆ ಹಾಜರು: ‘ಆರೋಪಿಗಳಾದ ಹರೀಶ್, ದಿಲೀಪ್‌ಕುಮಾರ್, ಮೋಹನ್‌ಕುಮಾರ್ ಹಾಗೂ ದರ್ಶನ್ ಗೌಡ ಈ ಹಿಂದೆ ವಿಚಾರಣೆಗಾಗಿ ಹಾಜರಾಗಿದ್ದರು. ಅವರ ಒಎಂಆರ್ ಕಾರ್ಬನ್ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಸಂಗ್ರಹಿಸಿ ವಾಪಸು ಕಳುಹಿಸಲಾಗಿತ್ತು’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಒಎಂಆರ್ ಕಾರ್ಬನ್ ಪ್ರತಿಗಳನ್ನು ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ವರದಿ ಇತ್ತೀಚೆಗೆ ಬಂದಿದ್ದು, ಆರೋಪಿಗಳ ಅಕ್ರಮಕ್ಕೆ ಪುರಾವೆ ಸಿಕ್ಕಿತು. ಹೀಗಾಗಿಯೇ ಪ್ರತ್ಯೇಕ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ಹೇಳಿವೆ.

‘5ನೇ ರ‍್ಯಾಂಕ್ ಪಡೆದಿದ್ದ ದರ್ಶನ್’: ‘ಆರೋಪಿ ವಿ. ದರ್ಶನ್ ಗೌಡ, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 5ನೇ ರ‍್ಯಾಂಕ್ ಪಡೆದಿದ್ದ. ಈತ ಸಹ ಲಕ್ಷಾಂತರ ರೂಪಾಯಿ ನೀಡಿ ಅಕ್ರಮ ಎಸಗಿದ್ದಾರೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಮಾಗಡಿ ತಾಲ್ಲೂಕಿನ ದರ್ಶನ್ ಗೌಡ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರ ಸಂಬಂಧಿ. ಸಿಐಡಿ ಮೇಲೆ ಪ್ರಭಾವ ಬೀರಿದ್ದ ಸಚಿವ, ಸಂಬಂಧಿ ದರ್ಶನ್‌ನನ್ನು ಪ್ರಕರಣದಿಂದ ಬಚಾವ್ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿತ್ತು.

‘2ನೇ ರ‍್ಯಾಂಕ್’: ‘ಕುಣಿಗಲ್ ನಿವಾಸಿ ಹರೀಶ್, ಕಾನ್‌ಸ್ಟೆಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿ, ಹೆಡ್‌ ಕಾನ್‌ಸ್ಟೆಬಲ್ ಆಗಿದ್ದ. ಪಿಎಸ್ಐ ಆಗಲು ಲಕ್ಷಾಂತರ ಹಣ ಕೊಟ್ಟು, ಸೇವಾನಿರತರ ಮೀಸಲಾತಿಯಡಿ 2ನೇ ರ‍್ಯಾಂಕ್ ಗಳಿಸಿದ್ದ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT