ಬುಧವಾರ, ಮೇ 25, 2022
31 °C
ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಬಳಿ ಸಿಕ್ಕಿಬಿದ್ದಿದ್ದ ಕಾನ್‌ಸ್ಟೆಬಲ್

ಪಿಎಸ್ಐ ಅಕ್ರಮ ನೇಮಕಾತಿ: 10 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ ಸಿಐಡಿ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ 10 ಅಭ್ಯರ್ಥಿಗಳ ಪತ್ತೆಗೆ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಅಭ್ಯರ್ಥಿಗಳ ವಿಳಾಸಕ್ಕೆ ನೋಟಿಸ್ ಕಳುಹಿಸಿರುವ ಅಧಿಕಾರಿಗಳು, ತ್ವರಿತವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ 7 ಕೇಂದ್ರಗಳಲ್ಲಿ ಅಕ್ರಮ ಎಸಗಿದ್ದ ಆರೋಪದಡಿ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಪೈಕಿ 12 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದ 10 ಮಂದಿ ತಲೆಮರೆಸಿಕೊಂಡಿದ್ದಾರೆ.

‘ಬಂಧಿತ 12 ಅಭ್ಯರ್ಥಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಒಎಂಆರ್ ತಿದ್ದುಪಡಿ, ಬ್ಲೂಟೂತ್ ಬಳಕೆ ಹಾಗೂ ಇತರೆ ಪ್ರಕಾರದ ಅಕ್ರಮಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಹುದ್ದೆಗೆ ಆಯ್ಕೆಯಾಗಲು ಅಭ್ಯರ್ಥಿಗಳು ಏಜೆಂಟರಿಗೆ ಹಣ ನೀಡಿರುವ ಮಾಹಿತಿ ಇದೆ. ಏಜೆಂಟರು ಯಾರು ಎಂಬುದನ್ನು ತಿಳಿದುಕೊಳ್ಳಬೇಕಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ಕಮಿಷನರ್ ಕಚೇರಿ ಬಳಿ ಸಿಕ್ಕಿಬಿದ್ದ ಕಾನ್‌ಸ್ಟೆಬಲ್: ‘22 ಆರೋಪಿಗಳ ಪೈಕಿ ಒಬ್ಬರಾದ ಬಿ. ಗಜೇಂದ್ರ, ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಹೊರಟಿದ್ದ ವೇಳೆ ಕಚೇರಿ ಬಳಿಯೇ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿರುವುದು ಗೊತ್ತಾಗಿದೆ.

‘ಹೈಗ್ರೌಂಡ್ಸ್ ಠಾಣೆಯಲ್ಲಿ ಏಪ್ರಿಲ್ 30ರಂದು ಪ್ರಕರಣ ದಾಖಲಾಗುತ್ತಿದ್ದಂತೆ, ಅಂದು ಸಂಜೆಯೇ ಬಿ.ಗಜೇಂದ್ರನನ್ನು ಬಂಧಿಸಲಾಗಿದೆ. ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಒಟ್ಟು 155 ಅಂಕ (ಪತ್ರಿಕೆ–1ರಲ್ಲಿ 29 ಹಾಗೂ ಪತ್ರಿಕೆ–2ರಲ್ಲಿ 126 ಅಂಕ) ಪಡೆದಿದ್ದ ಗಜೇಂದ್ರ, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ’ ಎಂದು ಮೂಲಗಳು ಹೇಳಿವೆ.

‘ವಿಚಾರಣೆಗೆ ಹಾಜರಾಗಿದ್ದ ಗಜೇಂದ್ರ, ಒಎಂಆರ್‌ ಕಾರ್ಬನ್ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಕೊಟ್ಟು ಹೋಗಿದ್ದ. ಒಎಂಆರ್ ಕಾರ್ಬನ್ ಪ್ರತಿ ಪರಿಶೀಲಿಸಿದಾಗ, ವ್ಯತ್ಯಾಸ ಕಂಡುಬಂದಿತ್ತು. ಹೀಗಾಗಿ, ಆತನ ವಿರುದ್ಧವೂ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು’ ಎಂದೂ ತಿಳಿಸಿವೆ.

ಸಿಐಡಿ ಕಚೇರಿಗೆ ಕೇಂದ್ರ ಗೃಹ ಕಾರ್ಯದರ್ಶಿ ಭೇಟಿ

ಅರಮನೆ ರಸ್ತೆಯ ಕಾರ್ಲಟನ್‌ ಕಟ್ಟಡದಲ್ಲಿರುವ ಸಿಐಡಿ ಕಚೇರಿಗೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್‌ ಕುಮಾರ್ ಭಲ್ಲಾ ಅವರು ಮಂಗಳವಾರ ಭೇಟಿ ನೀಡಿದರು.

ಗೃಹ ಸಚಿವ ಅಮಿತ್ ಶಾ ಜೊತೆ ನಗರಕ್ಕೆ ಬಂದಿದ್ದ ಅಜಯ್‌ಕುಮಾರ್ ಅವರು, ತಾವೊಬ್ಬರೇ ಪ್ರತ್ಯೇಕವಾಗಿ ಸಿಐಡಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಸಿಐಡಿಯಲ್ಲಿರುವ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಡಿಜಿಪಿ ಪಿ.ಎಸ್ ಸಂಧು ಅವರು ಸಿಐಡಿ ಕಾರ್ಯವೈಖರಿ, ಸೈಬರ್ ಲ್ಯಾಬ್ ಹಾಗೂ ಇತರೆ ವಿಷಯಗಳ ಬಗ್ಗೆ ಅಜಯ್‌ಕುಮಾರ್ ಅವರಿಗೆ ವಿವರಿಸಿದರು. ಹಿರಿಯ ಅಧಿಕಾರಿಗಳು ಜೊತೆಗಿದ್ದರು.

ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ಬಗ್ಗೆಯೂ ಅಜಯ್‌ಕುಮಾರ್ ಮಾಹಿತಿ ಪಡೆದುಕೊಂಡಿರುವುದಾಗಿ ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು