ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಹಗರಣ: ಹೈಕೋರ್ಟ್​ಗೆ ಪಿಐಎಲ್​ ಸಲ್ಲಿಸುತ್ತೇವೆ ಎಂದ ಖರ್ಗೆ

Last Updated 12 ಸೆಪ್ಟೆಂಬರ್ 2022, 10:15 IST
ಅಕ್ಷರ ಗಾತ್ರ

ಬೆಂಗಳೂರು:‌ ‘ಪಿಎಸ್‌ಐ ನೇಮಕಾತಿ ಹಗರಣದ ತನಿಖೆಗೆ ಆಗ್ರಹಿಸಿ ಪಕ್ಷದ ಕಾನೂನು ಘಟಕ ಪಕ್ಷದ ವತಿಯಿಂದ ಹೈಕೋರ್ಟ್​ನಲ್ಲಿ ಪಿಐಎಲ್​ ಸಲ್ಲಿಸುವ ಬಗ್ಗೆ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ತಿಳಿಸಿದರು.

‘ಪಿಎಸ್‌ಐ ನೇಮಕಾತಿ ಸಲುವಾಗಿ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಜೊತೆ ಒಪ್ಪಂದ ಮಾಡಿಕೊಂಡಿದ್ದು ಒಟ್ಟು ₹ 30 ಲಕ್ಷದ ಪೈಕಿ ₹ 15 ಲಕ್ಷ ಮುಂಗಡವಾಗಿ ವಿಧಾನಸೌಧದಲ್ಲಿಯೇ ಕೊಟ್ಟಿದ್ದೆ’ ‌ಪರಸಪ್ಪ ಮೇಗೂರು ಎಂಬುವರು ಹೇಳಿದ ವಿಡಿಯೊ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಅವರು ಸೋಮವಾರ ಮಾತನಾಡಿದರು.

‘ನನಗೆ ತಿಳಿದಿರುವ ಮಾಹಿತಿ ಪ್ರಕಾರ, ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ವ್ಯಕ್ತಿಯೊಬ್ಬರು ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ನಮ್ಮ ಕಾನೂನು ಘಟಕ ಪಕ್ಷದ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲು ಮುಂದಾಗಿದ್ದೆವು. ಇದೀಗ, ಇದನ್ನು ಅದನ್ನು ಬದಲಿಸಿ, ಪಿಐಎಲ್‌ ಹಾಕಲು ನಿರ್ಧರಿಸಿದ್ದೇವೆ‘ ಎಂದರು.

‘ಸರ್ಕಾರ ಈ ವಿಚಾರವಾಗಿ ಸದನದಲ್ಲಿ ಉತ್ತರಿಸಬೇಕು‘ ಎಂದು ಆಗ್ರಹಿಸಿದ ಅವರು, ‘ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಐಪಿಎಸ್ ಜೈಲಿಗೆ ಹೋಗಿರುವುದನ್ನು ಸಾಧನೆ ಎಂದು ಹೇಳಿಕೊಳ್ಳುತ್ತಿದ್ದೀರಿ. ಲಂಚ ಕೊಟ್ಟವರು ಹಾಗೂ ತೆಗೆದುಕೊಂಡವರು ಸತ್ಯಾಂಶ ಒಪ್ಪಿಕೊಂಡರೂ ಅವರಿಗೆ ನೊಟೀಸ್ ಯಾಕೆ ನೀಡಿಲ್ಲ? ನಾನು ಸಾರ್ವಜನಿಕ ವಲಯದಲ್ಲಿದ್ದ ಸಾಕ್ಷಿ ಮುಂದಿಟ್ಟರೆ ನನಗೆ ನೊಟೀಸ್ ನೀಡುತ್ತೀರಿ. ಇವರಿಗೆ ನೊಟೀಸ್ ನೀಡಲು ಆಗುವುದಿಲ್ಲವೇ?‘ ಎಂದು ಸರ್ಕಾರವನ್ನು ಪ್ರಶ್ನಿಸಿದರು.

‘ಪರಸಪ್ಪ ಅವರು ಒಂದು ವಿಡಿಯೊದಲ್ಲಿ ನನ್ನ ಮಗ ಪಿಎಸ್ಐ ಆಗಲು ಬಯಸಿದಾಗ ಶಾಸಕರ ಆಪ್ತರು ಬಂದು ನಾವು ನಿಮ್ಮ ಕೆಲಸ ಮಾಡುತ್ತೇವೆ ಎಂದು ಕಾರಟಗಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಒಂದು ಮೊತ್ತಕ್ಕೆ ಡೀಲ್ ಮಾಡಿ, 2020 ಆಗಸ್ಟ್‌ನಲ್ಲಿ ಕನಕಗಿರಿ ಶಾಸಕರು ಶಾಸಕರ ಭವನಕ್ಕೆ ಕರೆಸಿಕೊಂಡರು. ಅಲ್ಲಿ ಸಿಬ್ಬಂದಿ ಹೆಚ್ಚಾಗಿರುವ ಕಾರಣ, ಶಾಸಕರ ಕಾರಿನಲ್ಲೇ ಕರೆದುಕೊಂಡು ಹೋಗುತ್ತಾರೆ. ವ್ಯವಹಾರ ಮಾಡಿ ₹ 30 ಲಕ್ಷಕ್ಕೆ ಡೀಲ್ ನಿರ್ಧರಿಸುತ್ತಾರೆ ಎಂದು ಪರಸಪ್ಪ ಅವರೇ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ. ಈ ಡೀಲ್ ನಿಗದಿಯಾದ ನಂತರ ಮುಂಗಡವಾಗಿ ₹ 15 ಲಕ್ಷ ನೀಡುತ್ತಾರೆ. ನಾವು ಯಾವಾಗಲೂ ಹೇಳುವಂತೆ ವಿಧಾನಸೌಧ ವ್ಯಾಪಾರಸೌಧವಾಗಿದೆ. ಶಾಸಕರ ಭವನದಲ್ಲಿ ಡೀಲ್ ಮಾಡಿದ್ದಾರೆ ಎಂದರೆ ಇವರಿಗೆ ನಾಚಿಕೆ ಆಗುವುದಿಲ್ಲವೇ? ಕೆಲಸ ಆಗದ ನಂತರ ಹಣ ಕೇಳಿದಾಗ ನಾನು ಹಣವನ್ನು ಸರ್ಕಾರಕ್ಕೆ ಕೊಟ್ಟಿರುವುದಾಗಿ ಹೇಳುತ್ತಾರೆ. ಈ ಸರ್ಕಾರ ಎಂದರೆ ವಿಧಾನಸೌಧ ಅಲ್ಲವೇ‘ ಎಂದು ಪ್ರಶ್ನಿಸಿದರು.

‘ಈ ಪ್ರಕರಣದಲ್ಲಿ ಇಷ್ಟೆಲ್ಲಾ ಆದರೂ ಶಾಸಕರಿಗೆ ನೋಟಿಸ್ ಹೋಗಿಲ್ಲ. ಸ್ವಯಂಪ್ರೇರಿತ ಪ್ರಕರಣ ದಾಖಲಾಗಿಲ್ಲ. ಶಾಸಕರನ್ನು ಕರೆದು ಮುಖ್ಯಮಂತ್ರಿ ಪ್ರಶ್ನೆ ಮಾಡಿಲ್ಲ. ಬೊಮ್ಮಾಯಿ ಅವರು ದೊಡ್ಡಬಳ್ಳಾಪುರದಲ್ಲಿ ಧೈರ್ಯ, ತಾಕತ್ತು, ಧಮ್ಮಿನ ವಿಚಾರವಾಗಿ ಮಾತನಾಡಿದರು. ನಿಮಗೆ ಧಮ್ಮಿದ್ದರೆ ಶಾಸಕರನ್ನು ಕರೆಸಿ, ಪರೀಕ್ಷೆ ಬರೆದ ಯುವಕರು, ನಿರುದ್ಯೋಗಿ ಯುವಕರ ಮುಂದೆ ಈ ವಿಚಾರ ಪ್ರಸ್ತಾಪಿಸಿ. ಶಾಸಕರು ಯಾಕೆ ₹ 15 ಲಕ್ಷ ಪಡೆದರು? ಸರ್ಕಾರಿ ಹುದ್ದೆಗಳನ್ನು ಯಾಕೆ ಮಾರಾಟ ಮಾಡಿದ್ದಾರೆ ಎಂದು ಯುವಕರ ಮುಂದೆ ಹೇಳಿ. ನಿಮ್ಮ ಯೋಗ್ಯತೆಗೆ ಒಬ್ಬರಿಗೆ ಕೆಲಸ ನೀಡಲು ಆಗಿಲ್ಲ, ನೀವು ಧಮ್ಮು ತಾಕತ್ತು ಬಗ್ಗೆ ಮಾತನಾಡುತ್ತೀರಾ’ ಎಂದು ಬೊಮ್ಮಾಯಿ ವಿರುದ್ಧ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ಬಳಿ ವಿಧಿವಿಜ್ಞಾನ ಅತ್ಯಾಧುನಿಕ ತಂತ್ರಜ್ಞಾನ ಇದ್ದು ಯಾರು ಪ್ರಾಮಾಣಿಕರು, ಯಾರು ಅಲ್ಲ ಎಂದು ನಮಗೆ ತಿಳಿಯುತ್ತದೆ ಎಂದು ಗೃಹ ಸಚಿವರು ಮತ್ತು ಪೊಲೀಸ್ ಮಹಾನಿರ್ದೇಶಕರು ಹೇಳುತ್ತಾರೆ. ಪ್ರಾಮಾಣಿಕರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದೂ ಹೇಳಿದ್ದಾರೆ. ಆನಂತರ ಮರು ಪರೀಕ್ಷೆ ಎಂದು ಹೇಳಿ ಅವರನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ. ಹೀಗಾಗಿ ನ್ಯಾಯಯುತವಾಗಿ ಪರೀಕ್ಷೆ ಬರೆದವರು ಹೋರಾಟ ಮಾಡುತ್ತಿದ್ದಾರೆ. ಈ ಸರ್ಕಾರ ಏನು ಮಾಡುತ್ತಿದೆ? ನಿಮ್ಮ ಧಮ್ಮು ತಾಕತ್ತು ಈ ಯುವಕರ ಮುಂದೆ ತೋರಿಸಿ’ ಎಂದೂ ಆಗ್ರಹಿಸಿದರು.

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಮಾತನಾಡಿ, ‘ಸೆ.5ರಂದು ಶಾಸಕರಾದ ಬಸವರಾಜ ದಡೇಸೂರು ಅವರು ಹಾಗೂ ಕುಸ್ಗಿಯ ನಿವೃತ್ತ ಕಾನ್‌ಸ್ಟೆಬಲ್‌ ಪರಸಪ್ಪ ಅವರ ನಡುವಣ ಸಂಭಾಷಣೆ ವೈರಲ್ ಆಗಿದೆ. 6ರಂದು ಮತ್ತೊಂದು ಆಡಿಯೋ ಬಿಡುಗಡೆ ಆಗಿದ್ದು, ಪರಸಪ್ಪ ಅವರು ಪಿಎಸ್ಐ ನೇಮಕಾತಿಗೆ ₹ 15 ಲಕ್ಷ ನೀಡಿರುವುದಾಗಿ ಹೇಳಿದರು. ಈ ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದು ಶಾಸಕರು ಒಪ್ಪಿಕೊಂಡಿದ್ದರು. ಒಂದು ವಾರ ಕಳೆದರೂ ಸರ್ಕಾರ ಈ ವಿಷಯವನ್ನು ಯಾವುದೇ ತನಿಖೆಗೆ ಒಪ್ಪಿಸಿಲ್ಲ‘ ಎಂದರು.

‘ನನ್ನ ಕನಕಗಿರಿ ಕ್ಷೇತ್ರದಲ್ಲಿ 15 ಮಂದಿ ಯುವಕರು ನೇಮಕಾತಿಗಾಗಿ ಹಣ ನೀಡಿದ್ದಾರೆ ಎಂಬ ಚರ್ಚೆ ಆಗುತ್ತಿದೆ. ಅವರು ಬಡವರಾಗಿದ್ದು, ಮಾಧ್ಯಮಗಳ ಮುಂದೆ ಬಂದು ಹೇಳಲು ಹೆದರುತ್ತಿದ್ದಾರೆ. ಹೀಗಾಗಿ ಇದು ಪೂರ್ಣ ಪ್ರಮಾಣದ ತನಿಖೆ ಆಗಬೇಕು. ರಾಜ್ಯದಲ್ಲಿ ನೂರಾರು ಮಂದಿ ಈ ವಿಚಾರವವನ್ನು ಹೇಳಲು ಆಗುತ್ತಿಲ್ಲ. ಬಿಜೆಪಿಯವರು ತಮ್ಮ ಶೇ 40 ಕಮಿಷನ್ ಮುರಿದುಕೊಂಡು ಉಳಿದ ಮತ್ತವನ್ನಾದರೂ ನೀಡಿ ಎಂದು ಮನವಿ ಮಾಡುತ್ತೇನೆ‘ ಎಂದರು.

‘ರಾಜ್ಯದಲ್ಲಿ ಭ್ರಷ್ಚಾಚಾರ ನಿಗ್ರಹ ಕಾನೂನು ಇದೆ. ಈ ಕಾನೂನು ಪ್ರಕಾರ ಸ್ವಯಂ ಒಪ್ಪಿಗೆ ಮಾತುಗಳು ಸೆಕ್ಷನ್ 7A ಹಾಗು 8ರ ಅಡಿಯಲ್ಲಿ ಬರುತ್ತದೆ. ಸಾರ್ವಜನಿಕ ಪ್ರತಿನಿಧಿ ಅಲ್ಲದಿದ್ದರೂ ಯಾವುದೇ ವ್ಯಕ್ತಿ ಕೆಲಸ ಮಾಡಿಸಿಕೊಡುವುದಾಗಿ ಹಣ ಪಡೆದರೆ ಅದು ಅಪರಾಧವಾಗುತ್ತದೆ. ಹೀಗಾಗಿ ಈ ಆಡಿಯೋ ವಿಚಾರವಾಗಿ ಸುಮೋಟೋ ಪ್ರಕರಣ ದಾಖಲಿಸಬೇಕಿತ್ತು. ಈ ಕಾನೂನು ಅಡಿಯಲ್ಲಿ 3 ವರ್ಷದಿಂದ 7 ವರ್ಷದವರೆಗೂ ಶಿಕ್ಷೆ ವಿಧಿಸಬಹುದು. ಹೀಗಾಗಿ ಕೂಡಲೇ ಇವರ ವಿರುದ್ಧ ಪ್ರಕರಣ ದಾಖಲಿಸಬೇಕು. ಹೀಗಾಗಿ ಲೋಕಯುಕ್ತ ಸಂಸ್ಥೆ ಹಾಗೂ ಸರ್ಕಾರ ಗಮನಿಸಬೇಕು. ಜತೆಗೆ ಲೋಕಪಾಲ ಮಟ್ಟದಲ್ಲಿ ಈ ವಿಚಾರವನ್ನು ತೆಗೆದುಕೊಂಡು ಶಾಸಕರನ್ನು ಅನರ್ಹಗೊಳಿಸಲು ಮುಂದಾಗಬೇಕು‘ ಎಂದು ಕೆಪಿಸಿಸಿ ಕಾನೂನು ವಿಭಾಗದ ಮುಖ್ಯಸ್ಥ ಪೊನ್ನಣ್ಣ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT