ಬುಧವಾರ, ಮಾರ್ಚ್ 22, 2023
23 °C

ಪೆಂಡಾಲ್‌ ಬಗ್ಗೆ ಜೋಷಿ ಹೇಳಿಕೆ ಅತ್ಯಂತ ಹಾಸ್ಯಾಸ್ಪದ: ಪುರುಷೋತ್ತಮ ಬಿಳಿಮಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಪೆಂಡಾಲ್‌ ಹಾಕಲು ಪರಿಚಿತರಾದ ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ಆರ್ಡರ್‌ ಕೊಡಿಸಿದಿದ್ದಕ್ಕೆ ತಮ್ಮನ್ನು ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಷಿ ಅವರಿಗೆ ಲೇಖಕ ಪುರುಷೋತ್ತಮ ಬಿಳಿಮಲೆ ಪತ್ರದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಪೆಂಡಾಲ್‌ ಬಗ್ಗೆ ಹೇಳಿದ ಮಾತುಗಳು ಅತ್ಯಂತ ಹಾಸ್ಯಾಸ್ಪದವಾದದ್ದು. ಅವರದನ್ನು ಸಾಬೀತು ಪಡಿಸಬೇಕು. ಸಾಬೀತು ಪಡಿಸಲಾಗದಿದ್ದರೆ ಪರಿಷತ್ತಿನ ಅಧ್ಯಕ್ಷ ಪೀಠಕ್ಕೆ ಅವರು ಯೋಗ್ಯರಲ್ಲ ಎಂದೇ ಭಾವಿಸಬೇಕಾಗುತ್ತದೆ. ಸಾರ್ವಜನಿಕ ಸಂಘ ಸಂಸ್ಥೆಗಳ ಜವಾಬ್ದಾರಿ ಹೊತ್ತವರು ಲಜ್ಜೆಗೆಟ್ಟು ಯಾವ ನೀಚ ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಮಹೇಶ್‌ ಜೋಷಿಯವರ ಮಾತುಗಳೇ ಸಾಕ್ಷಿ ಎಂದು ಬಿಳಿಮಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಷಿಯವರು ನನ್ನ ಮೇಲೆ ಮಾಡಿದ ಆರೋಪಗಳನ್ನು ಗಮನಿಸಿದೆ. ಪರಿಷತ್ತಿನ ಕಾರ್ಯ ವಿಧಾನಗಳ ಬಗ್ಗೆ ನಾನು ಅಸಮಾಧಾನ ಸೂಚಿಸಿದ್ದು ನಿಜ. ಹಾವೇರಿ ಸಮ್ಮೇಳನದಲ್ಲಿ ಎಲ್ಲ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ದೊರಕಿಲ್ಲ ಎಂಬ ಅನೇಕರ ಮಾತಿಗೆ ನಾನೂ ಧನಿಗೂಡಿಸಿದ್ದೇನೆ. ಇದು ಪ್ರಜಾಪ್ರಭುತ್ವ ನನಗೆ ತಂದುಕೊಟ್ಟ ಹಕ್ಕು, ಮತ್ತು ಹೀಗೆ ಬರೆಯುವುದು ನನ್ನ ಕರ್ತವ್ಯ ಎಂದು ನಾನು ನಂಬಿದ್ದೇನೆ. ಇದರ ಹೊರತಾಗಿ ನಾನು ಜೋಷಿಯವರ ಸಹಿತವಾಗಿ ಯಾರ ವೈಯಕ್ತಿಕ ವಿಚಾರಗಳ ಬಗ್ಗೆಯೂ ಬರೆದಿಲ್ಲ. ಅವರು ಹಾವೇರಿ ಸಮ್ಮೇಳನಕ್ಕೆ ನನ್ನನ್ನು ಕರೆದಿದ್ದರು. ನನ್ನದೇ ಕಾರಣಗಳಿಗಾಗಿ ಬರಲಾಗುವುದಿಲ್ಲ ಎಂದು ಹೇಳಿದ್ದೇನೆ. ಅದಕ್ಕೆ ಅವರು ಇಷ್ಟೊಂದು ಆರೋಪಗಳನ್ನು ಮಾಡುವ ಅಗತ್ಯ ಇರಲಿಲ್ಲ ಎಂದು ಬಿಳಿಮಲೆ ಹೇಳಿದ್ದಾರೆ. 

ನಾನು ಮತ್ತು ನನ್ನಂಥ ಹಲವರು ಪರಿಷತ್ತಿನ ಬಗ್ಗೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಗೊತ್ತಿಲ್ಲದ ಜೋಷಿಯವರು ವೈಯಕ್ತಿಕವಾಗಿ ಮಾನಹಾನಿಯಾಗುವಂಥ ಮಾತುಗಳನ್ನು ಆಡಿದ್ದಾರೆ. ಈ ಮಾತುಗಳ ಮೂಲಕ ಅವರು ಸಾಹಿತ್ಯ ಪರಿಷತ್ತು ಇವತ್ತು ಎಂಥವರ ಕೈಯಲ್ಲಿದೆ ಎಂಬುದನ್ನು ಮತ್ತೆ ಸಾರ್ವಜನಿಕರಿಗೆ ತಿಳಿಯಪಡಿಸಿದ್ದಾರೆ. ಇಂಥದ್ದರ ವಿರುದ್ಧವಾಗಿ ಪ್ರತ್ಯೇಕ ಸಮ್ಮೇಳನಗಳನ್ನು ಸಂಘಟಿಸಿಕೊಳ್ಳಬೇಕಾದ್ದು ಇವತ್ತಿನ ತುರ್ತು ಅಗತ್ಯ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು