ಬುಧವಾರ, ಅಕ್ಟೋಬರ್ 21, 2020
26 °C

PV Web Exclusive | ಮೂಗಿಗಿಂತ ಮೂಗುತಿ ಭಾರ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಭೂಲೋಕಕ್ಕೆ ಬಂದು ಐದು ದಿನ ಸಂಭ್ರಮದಿಂದ ಕಾಲ ಕಳೆಯುವ ಗಣಪತಿಯನ್ನು ಒಬ್ಬ ಕೇಳಿದನಂತೆ. ‘ನೀನು ಇಲ್ಲಿರುವುದು ಐದೇ ದಿನ. ಆದರೂ ಎಷ್ಟು ಸಂಭ್ರಮದಿಂದ ಇರುತ್ತೀಯ. ಇದು ಹೇಗೆ?’ ಎಂದು. ಅದಕ್ಕೆ ಗಣಪತಿ ‘ನನಗೆ ಭೂಲೋಕದ ಈ ಬದುಕು ಎಷ್ಟು ಮತ್ತು ಏನು ಎನ್ನುವುದು ಗೊತ್ತು’ ಎಂದು ಉತ್ತರಿಸಿದನಂತೆ. ‘ಹೌದಾ ಏನು ಗೊತ್ತು ನಿನಗೆ’ ಎಂಬ ಮರು ಪ್ರಶ್ನೆ ಆತನಿಂದ. ‘ಯಾರು ತಲೆ ಮೇಲೆ ನನ್ನನ್ನು ಹೊತ್ತುಕೊಂಡು ಮೆರೆಸುತ್ತಾರೋ ಅವರೇ ಒಂದು ದಿನ ನನ್ನನ್ನು ನೀರಿನಲ್ಲಿ ಮುಳುಗಿಸುತ್ತಾರೆ ಎನ್ನುವುದು ನನಗೆ ಗೊತ್ತು. ಅದಕ್ಕೆ ನಾನು ಇದ್ದಷ್ಟು ದಿನ ಸುಖವಾಗಿ ಇರುತ್ತೇನೆ’ ಎಂದು ಗಣಪತಿ ಉತ್ತರ ನೀಡಿದನಂತೆ.

ಇದೊಂದು ಕಾಲ್ಪನಿಕ ಕತೆ. ಆದರೆ ನಮ್ಮ ಶಾಸಕರಿಗೆ ಇದರ ನೀತಿ ಅರ್ಥವಾಗಬೇಕು. ಶಾಸಕ ಸ್ಥಾನ ಸಿಕ್ಕ ತಕ್ಷಣ ಅವರನ್ನು ಜನರು ತಲೆ ಮೇಲೆ ಹೊತ್ತು ಕುಣಿಸುತ್ತಾರೆ ನಿಜ. ಆದರೆ ಒಂದು ದಿನ ಅದೇ ಜನ ಮುಳುಗಿಸುತ್ತಾರೆ ಎನ್ನುವ ಸತ್ಯವೂ ಶಾಸಕರಿಗೆ ಗೊತ್ತಿರುವುದು ಒಳ್ಳೆಯದು. ಇಲ್ಲವಾದರೆ ಮುಳುಗುವುದು ಅನಿವಾರ್ಯವಾಗುತ್ತದೆ.

ಶಾಸಕನಾಗಿ ತಮ್ಮನ್ನು ಜನರು ಆಯ್ಕೆ ಮಾಡಿರುವುದು ಜನರ ಸೇವೆ ಮಾಡುವುದಕ್ಕಾಗಿಯೇ ವಿನಾ ತಮ್ಮ ದೊಡ್ಡಸ್ತಿಕೆಯ ಪ್ರದರ್ಶನಕ್ಕೆ ಅಲ್ಲ ಎನ್ನುವುದು ಶಾಸಕರಿಗೆ ಗೊತ್ತಿರಬೇಕು. ಇತ್ತೀಚೆಗೆ ರಾಜಸ್ಥಾನ ಸರ್ಕಾರ ಒಂದು ಆದೇಶವನ್ನು ಹೊರಡಿಸಿ ‘ಶಾಸಕರು ಮತ್ತು ಸಂಸತ್ ಸದಸ್ಯರು ಯಾವುದೇ ಸರ್ಕಾರಿ ಕಚೇರಿಗೆ ಆಗಮಿಸಿದರೆ ಅವರು ಬಂದ ತಕ್ಷಣ ಎದ್ದು ನಿಂತು ಗೌರವ ಸೂಚಿಸಬೇಕು. ಅವರು ಹೊರಡುವಾಗಲೂ ಇದೇ ರೀತಿ ನಡೆದುಕೊಳ್ಳಬೇಕು’ ಎಂದು ಆದೇಶಿಸಿದೆ. ಸರ್ಕಾರಿ ಕಚೇರಿಗಳಿಗೆ ಬರುವ ಎಲ್ಲ ಜನ ಸಾಮಾನ್ಯರಿಗೂ ಇಂತಹ ಗೌರವ ಸಿಗಬೇಕು ಎಂದು ಯಾವುದೇ ಸರ್ಕಾರ ಆದೇಶ ನೀಡಿದ ಉದಾಹರಣೆ ಇಲ್ಲ. ಶಾಸಕರಾಗಲಿ, ಸಂಸತ್ ಸದಸ್ಯರಾಗಲಿ, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯಾಗಲಿ ಎಲ್ಲರೂ ಕೃತಜ್ಞರಾಗಿರಬೇಕಾಗಿರುವುದು ಈ ದೇಶದ ಜನರಿಗೆ. ಈ ಎಲ್ಲ ಸೌಲಭ್ಯಗಳನ್ನೂ ಕೊಟ್ಟವರು ಜನಸಾಮಾನ್ಯರು ಎಂಬ ಕನಿಷ್ಠ ಜ್ಞಾನ ನಮ್ಮ ಆಳುವವರಿಗೆ ಇಲ್ಲವಾದರೆ ಪ್ರಜಾಪ್ರಭುತ್ವ ಉಳಿಯುವುದು ಕಷ್ಟ. ನಿಜವಾದ ಅರ್ಥದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಸಾರ್ವಜನಿಕರು ಬಂದ ತಕ್ಷಣ ಎದ್ದು ನಿಂತು ಅವರಿಗೆ ಗೌರವ ಸೂಚಿಸಿ ಯಾವುದೇ ಕಿರುಕುಳ ನೀಡದೇ, ಲಂಚ ಕೇಳದೆ ಅವರ ಕೆಲಸವನ್ನು ಮಾಡಿ ಕಳಿಸಬೇಕು.

ಎಲ್ಲ ಕಡೆಗೂ ತಮಗೆ ಗೌರವ ಸಿಗಬೇಕು ಎನ್ನುವ ಬಯಕೆ ಕೇವಲ ರಾಜಸ್ಥಾನ ಶಾಸಕರಿಗೆ ಇದೆ ಎಂದಲ್ಲ. ಕರ್ನಾಟಕದ ಶಾಸಕರೂ ಇಂತಹ ಬೇಡಿಕೆಯನ್ನು ಇಟ್ಟಿದ್ದಾರೆ. ದೇಶದ ಎಲ್ಲ ಜನಪ್ರತಿನಿಧಿಗಳಿಗೂ ಜನಪರ ಕಾರ್ಯಕ್ರಮಗಳ ಪ್ರಾಮಾಣಿಕ ಅನುಷ್ಠಾನಕ್ಕಿಂತ ಎಲ್ಲರಿಗೂ ತಮ್ಮ ಗೌರವವನ್ನು ಒತ್ತಾಯಪೂರಕವಾಗಿಯಾದರೂ ಕಾಯ್ದುಕೊಳ್ಳುವ ಬಗ್ಗೆಯೇ ಗಮನ ಜಾಸ್ತಿ. ಶಾಸಕರಾದವರು ತಮ್ಮ ಸರಳ ನಡೆನುಡಿಯ ಮೂಲಕ, ಕಾರ್ಯದಕ್ಷತೆ ಮತ್ತು ಕ್ಷಮತೆಯಿಂದ ಜನರಿಗೆ ಹತ್ತಿರವಾಗಬೇಕೇ ವಿನಾ ಅಧಿಸೂಚನೆ, ಕಾಯ್ದೆಗಳ ಮೂಲಕ ಶಿಷ್ಟಾಚಾರ ಪಾಲನೆಗೆ ಒತ್ತುಕೊಡುವುದು ಸಲ್ಲ. ತಾವು ಜನ ಸಾಮಾನ್ಯರಿಗಿಂತ ಮೇಲೆ ಹಾಗೂ ಹೆಚ್ಚು ಗೌರವ ಆದರಗಳನ್ನು ಪಡೆಯುವ ಸಮುದಾಯ. ತಮ್ಮದು ಪ್ರತ್ಯೇಕ ಮತ್ತು ಮೇಲಿನ ಸ್ತರದ ಸಮಾಜ ಎನ್ನುವ ರೀತಿಯಲ್ಲಿ ನಡೆದುಕೊಳ್ಳುವುದು ಯಾವ ಕಾರಣಕ್ಕೂ ಸರಿಯಾದ ಕ್ರಮ ಅಲ್ಲ.

ಸರ್ಕಾರಿ ಸಮಾರಂಭಗಳಿಗೆ ಶಾಸಕರನ್ನು ಆಹ್ವಾನಿಸುವ ಮತ್ತು ಅಲ್ಲಿ ಅವರನ್ನು ನಡೆಸಿಕೊಳ್ಳುವ ಬಗ್ಗೆ ಕರ್ನಾಟಕ ಸರ್ಕಾರ ಈವರೆಗೆ 70ಕ್ಕೂ ಹೆಚ್ಚು ಆದೇಶಗಳನ್ನು ಹೊರಡಿಸಿದೆಯಂತೆ. ಈ ಆದೇಶಗಳ ಸಂಖ್ಯೆಯನ್ನು ನೋಡಿದರೇ ಗೊತ್ತಾಗುತ್ತದೆ ಶಾಸಕರಿಗೆ ಅಧಿಕಾರದ ಮತ್ತು ಗೌರವ, ಘನತೆಯ ಬಗ್ಗೆ ಎಂತಹ ಹಪಹಪಿತನ ಇದೆ ಎನ್ನುವುದು.

ಕರ್ನಾಟಕದ ವಿಧಾನ ಮಂಡಳ ಹಕ್ಕುಬಾಧ್ಯತಾ ಸಮಿತಿ ಇತ್ತೀಚೆಗೆ ವರದಿಯೊಂದನ್ನು ನೀಡಿ ಯಾವ ಯಾವ ಕಡೆ ಶಾಸಕರಿಗೆ ಎಷ್ಟೆಷ್ಟು ಗೌರವ ನೀಡಬೇಕು ಎಂಬ ಶಿಫಾರಸುಗಳನ್ನು ಮಾಡಿದೆ. ತಿರುಪತಿ ದೇವಾಲಯಕ್ಕೆ ಹೋದಾಗ ದರ್ಶನಕ್ಕೆ ಮತ್ತು ವಸತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ರಾಜ್ಯದ ಎಲ್ಲ ದೇವಾಲಯಗಳಲ್ಲಿಯೂ ಇದೇ ರೀತಿಯ ಶಿಷ್ಟಾಚಾರವನ್ನು ಪಾಲಿಸಬೇಕು. ದೇವರಿಗೆ ಶಾಸಕನೂ ಒಂದೆ, ಭಿಕ್ಷುಕನೂ ಒಂದೆ. ದೇವಾಲಯಗಳು ಭಕ್ತಿ ಮತ್ತು ಶ್ರದ್ಧಾ ಕೇಂದ್ರಗಳು. ಅಲ್ಲಿಯೂ ಶಾಸಕರು ತಮ್ಮ ಅಧಿಕಾರದ ಪ್ರದರ್ಶನಕ್ಕೇ ಒತ್ತು ನೀಡುತ್ತಾರೆ ಎಂದರೆ ಅವರನ್ನು ಬಹುಶಃ ದೇವರೂ ಕ್ಷಮಿಸಲಿಕ್ಕಿಲ್ಲ.

ಎಲ್ಲ ಅಧಿಕಾರಗಳೂ ತಮ್ಮ ಕೈಯಲ್ಲಿಯೇ ಇರಬೇಕು ಎನ್ನುವುದು ಶಾಸಕರ ಬಯಕೆ. ಆಶ್ರಯ ಮನೆಗಳನ್ನು ನೀಡುವುದು, ರಸ್ತೆ ಮಾಡಿಸುವುದು, ಶೌಚಾಲಯ ಕಟ್ಟುವುದು ಮುಂತಾದ ಕೆಲಸಗಳು ಶಾಸಕರ ಆದ್ಯತೆಯಾಗಬೇಕಿಲ್ಲ. ಶಾಸಕರ ಕೆಲಸ ಶಾಸನವನ್ನು ರೂಪಿಸುವುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಶಾಸನದ ಬಗ್ಗೆ ಶಾಸಕರು ಗಂಭೀರವಾಗಿ ಚರ್ಚೆ ನಡೆಸಿದ ಉದಾಹರಣೆಗಳಿಲ್ಲ. ವಿಧಾನ ಮಂಡಲದ ಅಧಿವೇಶನದಲ್ಲಿಯೂ ಬಹುತೇಕ ಶಾಸಕರು ‘ನಮ್ಮ ಗ್ರಾಮಕ್ಕೆ ಒಂದು ರಸ್ತೆ ಮಾಡಿಸಲು ಸಾಧ್ಯವಾಗದಿದ್ದರೆ, ಒಂದು ಮನೆ ಮಂಜೂರು ಮಾಡಲು ಆಗದಿದ್ದರೆ, ನೀರು ಒದಗಿಸಲು ಆಗದಿದ್ದರೆ ನಾವು ಶಾಸಕರಾಗಿ ಯಾಕೆ ಇರಬೇಕು’ ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ಬಹುತೇಕ ಶಾಸಕರು ತಮ್ಮ ಆದ್ಯ ಕರ್ತವ್ಯವಾದ ಶಾಸನ ಮಾಡುವ ಕಾರ್ಯದ ಬಗ್ಗೆ ಅಜ್ಞಾನಿಗಳೇ ಆಗರುತ್ತಾರೆ. ಮನೆ ಕೊಡಿಸುವುದು, ರಸ್ತೆ ಮಾಡಿಸುವುದು, ನೀರು ಕೊಡುವುದು ಮುಂತಾದ ಜವಾಬ್ದಾರಿಗಳನ್ನು ಬಯಸಿದಂತೆಯೇ ಜನ ಕಲ್ಯಾಣದ, ಜನೋಪಯೋಗಿಯಾದ ಶಾಸನಗಳನ್ನು ರೂಪಿಸುವ ಕಡೆಗೂ ಅವರು ಗಮನ ಹರಿಸುವ ಅಗತ್ಯ ಇದೆ. ಜೊತೆಗೆ ತಮಗೆ ಸಿಕ್ಕ ಅಧಿಕಾರವನ್ನು ದರ್ಪದ, ಘನತೆಯ, ಅಹಂಕಾರದ ಪ್ರದರ್ಶನಕ್ಕೆ ಬಳಸದೆ ಜನರ ಸೇವೆಗೆ ಬಳಸುವುದೂ ತುರ್ತಾಗಿದೆ. ಇಲ್ಲವಾದರೆ ಗಣಪತಿ ಹೇಳಿದಂತೆ ಈಗ ತಲೆ ಮೇಲೆ ಹೊತ್ತವರೇ ಒಂದು ದಿನ ನೀರಿನಲ್ಲಿಯೂ ಮುಳುಗಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು