ಶುಕ್ರವಾರ, ಮಾರ್ಚ್ 5, 2021
30 °C

PV Web Exclusive| ಜೋಳದರಾಶಿ ಗುಡ್ಡದ ಮೇಲೆ ವಿವೇಕಾನಂದರೋ? ಕೃಷ್ಣದೇವರಾಯರೋ?

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇಲ್ಲಿನ ಜೋಳದರಾಶಿ ಗುಡ್ಡದ ಮೇಲೆ ಸ್ವಾಮಿ ವಿವೇಕಾನಂದರ ಪುತ್ಥಳಿ ಪ್ರತಿಷ್ಠಾಪನೆಯಾಗುವುದೋ ಅಥವಾ ಶ್ರೀ ಕೃಷ್ಣದೇವರಾಯ ಅವರದೋ?

ಈಗ ಈ ಪ್ರಶ್ನೆ ಸ್ಥಳೀಯರನ್ನು ಬಹುವಾಗಿ ಕಾಡುತ್ತಿದೆ. ಕಾರಣ ಈ ವಿಷಯದ ಸುತ್ತ ಸೃಷ್ಟಿಯಾಗಿರುವ ವಿವಾದ ಹಾಗೂ ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಬಿಸಿಬಿಸಿ ಚರ್ಚೆ.

₹10 ಕೋಟಿಯಲ್ಲಿ ಜೋಳದರಾಶಿ ಗುಡ್ಡದಲ್ಲಿ ಮೂಲಸೌಕರ್ಯ, ₹14 ಕೋಟಿಯಲ್ಲಿ ಶ್ರೀ ಕೃಷ್ಣದೇವರಾಯನ ಕಂಚಿನ ಪುತ್ಥಳಿ ಹಾಗೂ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಡಿ. 17ರಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಭೂಮಿ ಪೂಜೆ ನೆರವೇರಿಸಿದ್ದರು. ಬಳಿಕ ಅದಕ್ಕೆ ಸ್ವಾಮಿ ವಿವೇಕಾನಂದ ಮೆಮೊರಿಯಲ್‌ ಟ್ರಸ್ಟ್‌ನವರು ಆಕ್ಷೇಪ ವ್ಯಕ್ತಪಡಿಸಿದ್ದರು. ಪುತ್ಥಳಿ ಪ್ರತಿಷ್ಠಾಪನೆಯ ವಿಷಯ ವಿವಾದದ ಸ್ವರೂಪ ಪಡೆದುಕೊಂಡಿದ್ದರ ಕುರಿತು ‘ಪ್ರಜಾವಾಣಿ’ಯು ಡಿ. 25ರಂದು ‘ಜೋಳದರಾಶಿ ಗುಡ್ಡದ ಸುತ್ತ ವಿವಾದ’ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಯಾರ ಪುತ್ಥಳಿ ಪ್ರತಿಷ್ಠಾಪಿಸಿದರೆ ಉತ್ತಮ ಎನ್ನುವ ಅಭಿಪ್ರಾಯದೊಂದಿಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ.

‘ದೇಶ–ವಿದೇಶಗಳಲ್ಲಿ ಭಾರತ ಹಾಗೂ ಅದರ ಸಂಸ್ಕೃತಿಯ ಹಿರಿಮೆಯನ್ನು ಸಾರಿರುವ ಸ್ವಾಮಿ ವಿವೇಕಾನಂದರ ಪುತ್ಥಳಿ ಪ್ರತಿಷ್ಠಾಪಿಸುವುದು’ ಸೂಕ್ತ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೆ ಕೆಲವರು, ‘ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಶ್ರೀಮಂತಿಕೆಯ ಮೂಲಕ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ್ದ ಶ್ರೀ ಕೃಷ್ಣದೇವರಾಯನ ಪುತ್ಥಳಿ ಸ್ಥಾಪಿಸುವುದು ಸೂಕ್ತ ಎಂದು ವಾದ ಮುಂದಿಟ್ಟಿದ್ದಾರೆ.

ಈ ಕುರಿತು ಸಚಿವ ಆನಂದ್‌ ಸಿಂಗ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ, ವಿವೇಕಾನಂದ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಡಿ. ಹನುಮಂತಪ್ಪ, ‘ಸಚಿವರಿಗೆ ವಿಷಯ ಮನವರಿಕೆ ಮಾಡಿಕೊಡಲಾಗಿದೆ. ಗುಡ್ಡದ ಮೇಲೆ ವಿವೇಕಾನಂದರ ಪ್ರತಿಮೆ ಪ್ರತಿಷ್ಠಾಪನೆಗೊಳ್ಳುವುದು ಖಚಿತ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅನೇಕ ಸಭೆ, ಸಮಾರಂಭಗಳಲ್ಲಿ ಸಚಿವ ಆನಂದ್‌ ಸಿಂಗ್‌ ಅವರು, ‘ವಿವೇಕಾನಂದರ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು’ ಎಂದು ಹೇಳಿದ್ದರು. ಆದರೆ, ವಿಜಯನಗರ ಜಿಲ್ಲೆ ಘೋಷಣೆ ಆಗಿದ್ದು, ವಿಜಯನಗರ ಸಾಮ್ರಾಜ್ಯದ ದೊರೆ ಕೃಷ್ಣದೇವರಾಯನ ಪುತ್ಥಳಿ ಸ್ಥಾಪಿಸಿದರೆ ಅದು ಅರ್ಥಪೂರ್ಣವಾಗುತ್ತದೆ ಎಂದು ಕೆಲವರು ತಿಳಿಸಿದ್ದರಿಂದ ಅವರು ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿದರು. ಅಷ್ಟೇ ಅಲ್ಲ, ಕೃಷ್ಣದೇವರಾಯನ ಪ್ರತಿಮೆ ಪ್ರತಿಷ್ಠಾಪಿಸುವ ಕುರಿತು ಘೋಷಣೆ ಕೂಡ ಮಾಡಿದರು ಎಂದು ಮೂಲಗಳು ತಿಳಿಸಿವೆ. ಆದರೆ, ವಿವೇಕಾನಂದ ಟ್ರಸ್ಟ್‌ನವರು ವಿರೋಧ ವ್ಯಕ್ತಪಡಿಸಿರುವುದರಿಂದ ವಿಷಯ ಕಗ್ಗಂಟಾಗಿದೆ. ಸಚಿವರು ಮುಂದೇನು ಮಾಡುತ್ತಾರೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಹೇಗೆ ಬಂತು ಜೋಳದರಾಶಿ ಹೆಸರು?

ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ಗುಡ್ಡಕ್ಕೆ ಜೋಳದರಾಶಿ ಗುಡ್ಡ ಎನ್ನುವ ಹೆಸರಿಲ್ಲ. ಜನಪದ ಐತಿಹ್ಯದಿಂದ ಆ ಹೆಸರು ಬಂದಿದೆ ಎನ್ನುತ್ತಾರೆ ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ.
‘ತಂದೆ, ಇಬ್ಬರು ಸಹೋದರರ ನಡುವೆ ಸಮಾನವಾಗಿ ಕೃಷಿ ಜಮೀನು ಹಂಚಿಕೆ ಮಾಡಿದ್ದ. ಅಣ್ಣ ಉಳುಮೆ ಬಗ್ಗೆ ನಿರ್ಲಕ್ಷ್ಯ ತೋರಿದ್ದ. ಆತನ ತಮ್ಮ ಕಷ್ಟಪಟ್ಟು ಒಕ್ಕಲುತನ ಮಾಡುತ್ತಿದ್ದ. ಒಂದು ದಿನ ಇಬ್ಬರ ಫಸಲು ಕೈ ಸೇರುತ್ತದೆ. ತಮ್ಮನ ಜೋಳದರಾಶಿ ಹೆಚ್ಚಿದ್ದರೆ, ಅಣ್ಣನದು ಬಹಳ ಕಡಿಮೆ ಇರುತ್ತದೆ. ತಮ್ಮ ಮನೆಯಲ್ಲಿದ್ದಾಗ ಅಣ್ಣ ಆತನ ಜೋಳವನ್ನು ತೆಗೆದುಕೊಂಡು ತನ್ನ ಜೋಳಕ್ಕೆ ಸೇರಿಸಿಕೊಂಡು ಹೆಚ್ಚಿಸಿಕೊಳ್ಳುತ್ತಾನೆ. ಆಗ ಆ ಜೋಳದರಾಶಿ ಕಲ್ಲು, ಬಂಡೆ ಆಗಿ ಗುಡ್ಡವಾಗಿ ಬದಲಾಗುತ್ತದೆ ಎನ್ನುವುದು ಜನಪದರ ನಂಬಿಕೆ. ಆ ಹೆಸರೇ ಪ್ರಚಲಿತದಲ್ಲಿದೆ’ ಎಂದು ವಿವರಿಸಿದರು.

‘ಬಳ್ಳಾರಿ ತಾಲ್ಲೂಕಿನಲ್ಲಿ ಜೋಳದರಾಶಿ ಎಂಬ ಗ್ರಾಮ ಇದೆ. ಅಲ್ಲಿ ಹೆಚ್ಚಾಗಿ ಜೋಳ ಬೆಳೆಯುವುದರಿಂದ ಆ ಊರಿಗೆ ಜೋಳದರಾಶಿ ಎಂಬ ಹೆಸರು ಬಂದಿದೆ. ಇನ್ನು, ನಾಟಕ, ಗಮಕದ ಮೂಲಕ ಜೋಳದರಾಶಿ ದೊಡ್ಡನಗೌಡರು ಖ್ಯಾತಿ ಗಳಿಸಿದ್ದಾರೆ. ಆದರೆ, ಜೋಳದರಾಶಿ ಗುಡ್ಡಕ್ಕೂ, ಜೋಳದರಾಶಿ ಗ್ರಾಮಕ್ಕೂ, ಜೋಳದರಾಶಿ ದೊಡ್ಡನಗೌಡರಿಗೂ ಯಾವುದೇ ರೀತಿಯ ಸಂಬಂಧವಿಲ್ಲ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು