ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿ ಅಕ್ರಮ ತಡೆಗೆ ಕ್ರಮ: ಕಂದಾಯ ಸಚಿವ ಅಶೋಕ

ಸಂಪೂರ್ಣ ಪಾರದರ್ಶಕ ವ್ಯವಸ್ಥೆ ಜಾರಿಗೆ ಸಿದ್ಧತೆ
Last Updated 25 ಜುಲೈ 2022, 19:56 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಉಪ ನೋಂದಣಿ ಕಚೇರಿಗಳಲ್ಲಿ ನಡೆಯುತ್ತಿರುವ ಲಂಚಾವತಾರದ ಕುರಿತು ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ ಬೆನ್ನಲ್ಲೇ, ಅಕ್ರಮಗಳ ತಡೆಗೆ ಬಿಗಿ ಕ್ರಮಗಳನ್ನು ಕೈಗೊಳ್ಳಲು ಕಂದಾಯ ಇಲಾಖೆ ಮುಂದಾಗಿದೆ. ದಲ್ಲಾಳಿಗಳ ಹಾವಳಿ ತಡೆಗಾಗಿ ಕಚೇರಿಯೊಳಗೆ ನೌಕರರಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ.

ಬೆಂಗಳೂರಿನ 43 ಉಪ ನೋಂದಣಿ ಕಚೇರಿಗಳಲ್ಲಿ ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ದಿಢೀರ್‌ ತಪಾಸಣೆ ನಡೆಸಿದ್ದರು. ದಲ್ಲಾಳಿಗಳ ಕೆಲಸವನ್ನು ಆದ್ಯತೆಯ ಮೇಲೆ ಮಾಡುತ್ತಿರುವುದು, ಭ್ರಷ್ಟಾಚಾರ, ತೆರಿಗೆ ವಂಚನೆಗೆ ಸಹಕಾರ ಸೇರಿದಂತೆ ಹಲವು ಬಗೆಯ ಅಕ್ರಮಗಳು ಕಂಡುಬಂದಿದ್ದವು. ಈ ಕುರಿತು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ವರದಿಯನ್ನು ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ವಿಚಾರಣೆ ಆರಂಭಿಸಿದ್ದಾರೆ.

ಈ ಸಂಬಂಧ ‘ಪ್ರಜಾವಾಣಿ’ ಸೋಮವಾರದ ಸಂಚಿಕೆಯಲ್ಲಿ ‘ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿನ ಅಕ್ರಮಕ್ಕೆ ಕಡಿವಾಣ ಬೀಳಲಿ’ ಎಂಬ ಶೀರ್ಷಿಕೆಯಡಿ ಸಂಪಾದಕೀಯವನ್ನೂ ಬರೆದಿತ್ತು.

ಸುದ್ದಿಗಾರರಿಗೆ ಈ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್‌. ಅಶೋಕ, ‘ರಾಜ್ಯದ ಉಪ ನೋಂದಣಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸುವುದು ಸೇರಿದಂತೆ ಅಕ್ರಮ ತಡೆಗೆ ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ನೋಂದಣಿ ಮತ್ತು ಮುದ್ರಾಂಕ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ’ ಎಂದರು.

‘ನಗರದ ಉಪ ನೋಂದಣಿ ಕಚೇರಿಗಳಲ್ಲಿನ ಲೋಪಗಳ ಕುರಿತು ಲೋಕಾಯುಕ್ತ ಪೊಲೀಸರು ವರದಿ ನೀಡಿದ್ದಾರೆ. ಅನಧಿಕೃತ ವ್ಯಕ್ತಿಗಳು ಕಚೇರಿಯೊಳಗೆ ಇರುವುದನ್ನು ತಪ್ಪಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುತಿನ ಚೀಟಿ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನಗದು ಘೋಷಣೆ, ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಿಂದ ಹೊರಹೋಗುವ ಮುನ್ನ ಕಡತದಲ್ಲಿ ಕಾರಣ ದಾಖಲಿಸುವುದನ್ನೂ ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ‘ಸರ್ವರ್‌’ ಪದೇ ಪದೇ ಡೌನ್‌ಆಗುತ್ತಿರುವ ಕುರಿತು ದೂರುಗಳಿವೆ. ಈ ಬಗ್ಗೆಯೂ ಲೋಕಾಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ವರ್‌ ನಿರ್ವಹಣೆ ಒಂದು ಕಂಪನಿಯ ಬಳಿ ಇದ್ದರೆ, ಸೇವೆ ಒದಗಿಸುವವರು ಇತರರು. ಎರಡೂ ಕೆಲಸಗಳನ್ನು ಒಂದೇ ಸಂಸ್ಥೆಗೆ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.

ಇದಕ್ಕಾಗಿ ₹ 406 ಕೋಟಿ ವೆಚ್ಚದ ಯೋಜನೆಯ ಅನುಷ್ಠಾನಕ್ಕೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಆಸ್ತಿಗಳ ಖರೀದಿಗೆ ಸಂಬಂಧಿಸಿದ ದಾಖಲೆಗಳ ನೋಂದಣಿ ಪ್ರಕ್ರಿಯೆಯಲ್ಲಿ ‘ಪ್ಯಾನ್‌’ ಸಂಖ್ಯೆ ನಮೂದಿಸದೇ ತೆರಿಗೆ ವಂಚನೆಗೆ ಸಹಕರಿಸುತ್ತಿರುವ ಆರೋಪದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಅಕ್ರಮಗಳನ್ನು ತಡೆಯುವುದಕ್ಕಾಗಿ ಪಾರದರ್ಶಕ ವ್ಯವಸ್ಥೆ ರೂಪಿಸಲು ಸರ್ಕಾರ ಮುಂದಾಗಿದೆ. ತಂತ್ರಾಂಶದ ನೆರವಿನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಇನ್ನೂ ಸರಳೀಕರಣ ಮಾಡಲಾಗುವುದು ಎಂದರು.

₹ 5,000 ಕೋಟಿ ಸಂಗ್ರಹ: 2022–23ನೇ ಆರ್ಥಿಕ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ನೋಂ ದಣಿ ಮತ್ತು ಮುದ್ರಾಂಕ ಶುಲ್ಕದಿಂದ ₹ 5,000 ಕೋಟಿ ಸಂಗ್ರಹವಾಗಿದೆ. ಇದು ಇಲಾಖೆಯಲ್ಲಿ ಈವರೆಗಿನ ದಾಖಲೆಗಳನ್ನು ಮೀರಿರುವ ವರಮಾನ ಸಂಗ್ರಹ ಎಂದು ಅಶೋಕ ತಿಳಿಸಿದರು.

‘ಈ ವರ್ಷ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ರೂಪದಲ್ಲಿ ₹ 14,000 ವರಮಾನ ಸಂಗ್ರಹಿಸುವ ಗುರಿ ಇದೆ. ಮೊದಲ ಮೂರು ತಿಂಗಳಲ್ಲೇ ಗುರಿಗಿಂತ ₹ 1,000 ಕೋಟಿ ಹೆಚ್ಚು ಸಂಗ್ರಹವಾಗಿದೆ. ಈ ಬಾರಿ ಗುರಿಗಿಂತಲೂ ಹೆಚ್ಚಿನ ವರಮಾನ ಸಂಗ್ರಹ ಆಗಲಿದೆ’ ಎಂದರು.

ನೋಂದಣಿ: ಶೇ 10ರ ರಿಯಾಯಿತಿ ವಿಸ್ತರಣೆ:ಸ್ಥಿರಾಸ್ತಿಗಳ ನೋಂದಣಿಗಾಗಿ ಮುದ್ರಾಂಕ ಶುಲ್ಕ ನಿಗದಿಗೆ ಮಾರ್ಗಸೂಚಿ ದರದಲ್ಲಿ ಶೇಕಡ 10ರಷ್ಟು ರಿಯಾಯ್ತಿ ಸೌಲಭ್ಯವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

‘ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌ ಮತ್ತು ಇತರೆ ಸ್ಥಿರಾಸ್ತಿಗಳ ನೋಂದಣಿಗೆ ಮುದ್ರಾಂಕ ಶುಲ್ಕ ನಿಗದಿಗೆ ಮಾರ್ಗ ಸೂಚಿ ದರದ ಶೇ 10 ರಷ್ಟು ರಿಯಾಯ್ತಿಯನ್ನು ಮಾರ್ಚ್‌ ಜುಲೈ 23ರವರೆಗೆ ನೀಡಲಾಗಿತ್ತು. ಈ ಅವಧಿ ಪೂರ್ಣಗೊಂಡಿದ್ದು, ಇನ್ನೂ ಮೂರು ತಿಂಗಳು ವಿಸ್ತರಿಸಿ ಹೊಸ ಆದೇಶ ಹೊರಡಿಸಲಾಗುವುದು’ ಎಂದರು.

‘ಅನುಮತಿ ಇಲ್ಲದೆ ಕಚೇರಿಯಿಂದ ಹೊರಗಿದ್ದರೆ ಕ್ರಮ’

ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯ ಅವಧಿಯಲ್ಲಿ ಅನುಮತಿ ಇಲ್ಲದೇ ಹೊರಗಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮ ಜರುಗಿಸುವಂತೆ ಎಲ್ಲ ಇಲಾಖಾ ಮುಖ್ಯಸ್ಥರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸುತ್ತೋಲೆ ಹೊರಡಿಸಿದ್ದಾರೆ.

‘ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಲ್ಲಿ ಇತ್ತೀಚಿನ ದಿನಗಳಲ್ಲಿ ಸಮಯಪ್ರಜ್ಞೆ, ಕಾರ್ಯನಿಷ್ಠೆಯ ಕೊರತೆಯನ್ನು ಅವಲೋಕಿಸಲಾಗಿದೆ. ಪ್ರತಿದಿನವೂ ಬೆಳಿಗ್ಗೆ 10 ಗಂಟೆಗೆ ಹಾಜರಾಗಿ, ಕಚೇರಿಯ ಅವಧಿ ಪೂರ್ಣವಾಗುವವರೆಗೂ ಅಧಿಕಾರಿಗಳು, ನೌಕರರು ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಇದ್ದು ಕರ್ತವ್ಯನಿರ್ವಹಿಸಬೇಕು. ಈ ಅವಧಿಯಲ್ಲಿ ಅನ್ಯ ಕರ್ತವ್ಯದ ಮೇಲೆ ಹೊರ ಹೋಗಬೇಕಾಗಿದ್ದಲ್ಲಿ ಮೇಲಧಿಕಾರಿಗಳ ಅನುಮತಿ ಪಡೆಯವುದು ಕಡ್ಡಾಯ’ ಎಂದು ಸೋಮವಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

‘ನಿಗದಿಯ ಅವಧಿಗಿಂತ ವಿಳಂಬವಾಗಿ ಹಾಜರಾಗುವ, ಕಚೇರಿ ಅವಧಿಯಲ್ಲಿ ಸ್ವಸ್ಥಾನದಲ್ಲಿ ಇಲ್ಲದ, ಚಲನವಲನ ದಾಖಲಾತಿ ಪುಸ್ತಕದಲ್ಲಿ ನಮೂದಿಸಿ, ಮೇಲಧಿಕಾರಿಗಳ ಅನುಮತಿ ಪಡೆಯದ ನೌಕರರು, ಅಧಿಕಾರಿಗಳ ವಿರುದ್ಧ ಸಕ್ಷಮ ಪ್ರಾಧಿಕಾರವು ಸೂಕ್ತ ಶಿಸ್ತುಕ್ರಮ ಜರುಗಿಸಬೇಕು’ ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT