ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ನೂರಾರು ಎಕರೆ ಜಮೀನು ಜಲಾವೃತ, ನಾಲ್ವರ ಸಾವು

ಫೋಟೊ ತೆಗೆಯಲು ಹೋಗಿ ನೀರಿನಲ್ಲಿ ಮುಳುಗಿದ ಆಟೋ ಚಾಲಕ
Last Updated 16 ಜುಲೈ 2022, 18:50 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶನಿವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ನಾಲ್ವರು ಸಾವಿಗೀಡಾಗಿದ್ದಾರೆ. ಮಳೆಯಿಂದಾಗಿ ಹಲವೆಡೆ ಕೃಷಿ ಜಮೀನುಗಳು ಜಲಾವೃತಗೊಂಡು ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿಯಲ್ಲಿ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಪರಮೇಶ್ವರ ನಾಯ್ಕ್ (35) ಸಾವಿಗೀಡಾಗಿದ್ದಾರೆ. ಪರಮೇಶ್ವರ ಚನ್ನಗಿರಿ ತಾಲ್ಲೂಕಿನ ರಾಜಗೊಂಡನಹಳ್ಳಿಯವರು.

ತುಮಕೂರು ನಗರದಹೆಗಡೆ ಕಾಲೊನಿಯರೈಲ್ವೆ ಅಂಡರ್‌ಪಾಸ್ ಸಮೀಪ ಫೋಟೊ ತೆಗೆಯುವಾಗ ಜಾರಿಬಿದ್ದು ಆಟೋರಿಕ್ಷಾ ಚಾಲಕ ಅಮ್ಜದ್ ಖಾನ್ (42) ಸಾವಿಗೀಡಾಗಿದ್ದಾರೆ. ನೀರಿಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಅಂಡರ್‌ಪಾಸ್‌ನಲ್ಲಿ ಇಳಿದಾಗ ಅವರು ಕೊಚ್ಚಿಕೊಂಡು ಹೋಗಿದ್ದಾರೆ.

ಕೊಡಗು ಜಿಲ್ಲೆಯ ಶನಿವಾರಸಂತೆ ಹೋಬಳಿಯ ಸುಳುಗಳಲೆ ಕಾಲೊನಿಯಲ್ಲಿ ಮನೆಯ ಸ್ನಾನದ ಕೋಣೆಯ ಗೋಡೆ ಕುಸಿದು ಗಾಯಗೊಂಡಿದ್ದ ವಸಂತಮ್ಮ ಎಂಬುವರು ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾಗಿದ್ದಾರೆ. ಬೆಳಗಾವಿ ನಿಪ್ಪಾಣಿ ತಾಲ್ಲೂಕಿನ ಮಾಂದೂರು ಗ್ರಾಮದ ಬಳಿ ದೂಧಗಂಗಾ ನದಿಯಲ್ಲಿ ಮೀನು ಹಿಡಿಯಲು ಹೋದ ಶಿವಾಜಿ ಕೊರವಿ (54) ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಶಿವಮೊಗ್ಗದ ನವಲೆ ಶಾಂತಿನಗರದಲ್ಲಿ ಮನೆ ಗೋಡೆ ಕುಸಿದು ತಾಯಿ, ಮಗಳು ಗಾಯಗೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಹರಿಹರ ತಾಲ್ಲೂಕುಗಳಲ್ಲಿ ತುಂಗಭದ್ರಾ ನದಿ ಪ್ರವಾಹ ಸ್ಥಿತಿ ಮುಂದುವರಿದಿದೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿಯ ಬಿಕ್ಕರಣೆ ಬಳಿ ಹೊಳೆಯಲ್ಲಿ ಮೃತದೇಹವೊಂದು ತೇಲಿಹೋಗಿದೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಯಾವುದೇ ಮೃತದೇಹ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಸಮೀಪದ ಸೂಳೆಮುರ್ಕಿ ಕ್ರಾಸ್‍ನಲ್ಲಿ ಗುಡ್ಡ ಕುಸಿದು ಹೊನ್ನಾವರ–ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ–69ರ ಸಂಪರ್ಕ ಕಡಿತಗೊಂಡಿದೆ. ಶಿರಸಿ ತಾಲ್ಲೂಕಿನ ಮೊಗಳ್ಳಿ ಗ್ರಾಮ ಜಲದಿಗ್ಬಂಧನಕ್ಕೆ ತುತ್ತಾಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಸುಣಧೋಳಿ, ಅವರಾದಿ ಸೇತುವೆಗಳ ಮೇಲೆ ನೀರು ಹರಿದಿದ್ದು, 15 ಹಳ್ಳಿಗಳಿಗೆ ಮುಖ್ಯರಸ್ತೆಯಿಂದ ಸಂಪರ್ಕ ಕಡಿತಗೊಂಡಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕಾವೇರಿ ನದಿಯಂಚಿನ ನೂರಾರು ಎಕರೆ ಕಬ್ಬು, ಅಡಿಕೆ, ಬಾಳೆ, ತೆಂಗಿನ ತೋಟಗಳು ಮುಳುಗಿವೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ತೋಟ, ಗದ್ದೆಗಳು ಜಲಾವೃತವಾಗಿವೆ.

ವಿಜಯನಗರ ಜಿಲ್ಲೆಯಲ್ಲಿ ತಾವರಗುಂದಿ, ನಿಟ್ಟೂರು ಗ್ರಾಮದಲ್ಲಿ ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ಹಾವೇರಿ ತಾಲ್ಲೂಕಿನಲ್ಲಿ ತುಂಗಭದ್ರಾ, ವರದಾ ನದಿಯ ಪ್ರವಾಹಕ್ಕೆ ಸಾವಿರಾರು ಎಕರೆ ಜಮೀನಿನಲ್ಲಿರುವ ಬೆಳೆಗಳು ಜಲಾವೃತವಾಗಿವೆ. ಉಡುಪಿ ಜಿಲ್ಲೆಯ ಕೊಲ್ಲೂರು, ಗೋಳಿಹೊಳೆ, ಕಾಲ್ತೋಡು, ಹೇರೂರು, ಶಿರೂರು ಗ್ರಾಮಗಳಲ್ಲಿ ಸುಮನಾ ನದಿ ಹಾಗೂ ಸೌಪರ್ಣಿಕಾ ನದಿ ತೀರದ ಭತ್ತದ ಗದ್ದೆಗಳು, ತೋಟಗಳು ಮುಳುಗಡೆಯಾಗಿವೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮಕರಬ್ಬಿ–ಬ್ಯಾಲಹುಣ್ಣಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ರಾಯಚೂರು ಜಿಲ್ಲೆಯಲ್ಲಿ ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಬಹುತೇಕ ಮುಳುಗಡೆ ಆಗಿದೆ. ರಾಯಚೂರು ತಾಲ್ಲೂಕಿನ ಗುರ್ಜಾಪುರ ಬಳಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನ ಗೇಟ್‌ಗಳನ್ನು ತೆರೆಯಲು ಶನಿವಾರ ಕೇರಳದಿಂದ ತಜ್ಞರ ತಂಡ ಬಂದಿದ್ದು, 4 ಕ್ರೇನ್ ಮತ್ತು ಇನ್ನಿತರ ಸಾಧನಗಳನ್ನು ಬಳಸಿದರೂ ಪ್ರಯೋಜನ ಆಗಲಿಲ್ಲ. ಒಟ್ಟು 194 ಪೈಕಿ 94 ಗೇಟ್‌ಗಳನ್ನು ಮಾತ್ರ ಈವರೆಗೆ ತೆರೆಯಲಾಗಿದೆ.

ಹಾನಿ ವೀಕ್ಷಣೆ: ಕೆಸರಿನಲ್ಲಿ ಕಾಲು ಸಿಲುಕಿ ಸಚಿವ ಪರದಾಟ

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರು ಅರೇನೂರು ಬಳಿ ಹಾನಿ ವೀಕ್ಷಣೆಗೆ ಬಂದಿದ್ದ ಸಂದರ್ಭದಲ್ಲಿ ಕೆಸರಿನಲ್ಲಿ ಅವರ ಕಾಲುಗಳು ಸಿಲುಕಿದ್ದ ಘಟನೆ ನಡೆಯಿತು. ಬಳಿಕ ಸಿಬ್ಬಂದಿ ಅವರನ್ನು ಎತ್ತಿ ಪಕ್ಕಕ್ಕೆ ಕರೆದೊಯ್ದರು. ಹಾನಿ ಪ್ರದೇಶ ವೀಕ್ಷಿಸಿದ ಸಚಿವರು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಮೆಟ್ಟೂರು ಜಲಾಶಯ ಭರ್ತಿ

ಚಾಮರಾಜನಗರ: ರಾಜ್ಯದ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳಿಂದ ನದಿಗೆ ಹೆಚ್ಚುವರಿ ನೀರು ಬಿಡುತ್ತಿರುವುದರಿಂದ ನೆರೆಯ ತಮಿಳುನಾಡಿನ ಮೆಟ್ಟೂರು ಜಲಾಶಯ ಶನಿವಾರ ಭರ್ತಿಯಾಗಿದೆ.

ಸಾಮಾನ್ಯವಾಗಿ ಅಕ್ಟೋಬರ್‌ ನವೆಂಬರ್‌ ಅವಧಿಯಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ ಈ ಬಾರಿ ಜುಲೈನಲ್ಲೇ ತುಂಬಿದೆ. ಜಲಾಶಯದ 16 ಗೇಟ್‌ಗಳಿಂದಲೂ ನೀರು ನದಿಗೆ ಬಿಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT