ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕಾಯತ್‌ ಮೇಲೆ ಹಲ್ಲೆ ನಡೆಸಿ, ಮಸಿ ಮಳಿದು ‘ಮೋದಿ... ಮೋದಿ...’ ಎಂದು ಘೋಷಣೆ

ಭಾರತ ರಕ್ಷಣಾ ವೇದಿಕೆ ಕಾರ್ಯಕರ್ತರ ಕೃತ್ಯ
Last Updated 31 ಮೇ 2022, 3:55 IST
ಅಕ್ಷರ ಗಾತ್ರ

ಬೆಂಗಳೂರು: ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಬೃಹತ್ ಹೋರಾಟ ಸಂಘಟಿಸಿ ಕೇಂದ್ರ ಸರ್ಕಾರವನ್ನೇ ಮಣಿಸಿದ್ದ ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ (55) ಮೇಲೆ ನಗರದಲ್ಲಿ ಸೋಮವಾರ ಹಲ್ಲೆ ನಡೆದಿದ್ದು, ಕೈಗೆ ತೀವ್ರ ಪೆಟ್ಟಾಗಿದೆ. ಹಲ್ಲೆ ಬಳಿಕ ಮುಖಕ್ಕೆ ಮಸಿ ಎರಚಿದ ಭಾರತೀಯ ರಕ್ಷಣಾ ವೇದಿಕೆಯ ಕಾರ್ಯಕರ್ತರು, ‘ಮೋದಿ... ಮೋದಿ...’ ಎಂದು ಘೋಷಣೆ ಕೂಗಿದ್ದಾರೆ.

ಈ ಕೃತ್ಯ ಎಸಗಿದ ಆರೋಪದಡಿ ಭಾರತೀಯ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಭರತ್‌ ಶೆಟ್ಟಿ ಸೇರಿ ಮೂವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಯಿಂದಾಗಿ ರಾಕೇಶ್ ಅವರ ಎಡಗೈಗೆ ಗಾಯವಾಗಿದ್ದು, ಮಸಿ ಎರಚಿರುವುದರಿಂದ ಕಣ್ಣಿಗೂ ಹಾನಿಯಾಗಿದೆ. ರಾಕೇಶ್‌ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ರಾಕೇಶ್ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ಹಲ್ಲೆ ಮಾಡಿ, ಮಸಿ ಎರಚುವ ಉದ್ದೇಶದಿಂದಲೇ ಆರೋಪಿಗಳು ಸಭೆಗೆ ಬಂದಿದ್ದರು. ನಾಲ್ಕು ದಿಕ್ಕುಗಳಲ್ಲಿ ಕುಳಿತಿದ್ದರು. ಪತ್ರಿಕಾಗೋಷ್ಠಿ ನಡೆಯುವಾಗ ಏಕಾಏಕಿ ದಾಳಿ ಮಾಡಿ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ವೇದಿಕೆ ಅಧ್ಯಕ್ಷ ಭರತ್ ಶೆಟ್ಟಿ, ಕಾರ್ಯಕರ್ತರಾದ ಶಿವಕುಮಾರ್ ಹಾಗೂ ದಿಲೀಪ್ ಎಂಬುವರನ್ನು ಬಂಧಿಸಲಾಗಿದೆ. ಇಬ್ಬರು ಮಹಿಳೆಯರು ಸೇರಿ ನಾಲ್ವರು ಪರಾರಿಯಾಗಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕನ್ನಡ ಭಾಷೆ ನೆಪದಲ್ಲಿ ಹಲ್ಲೆ: ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಚರ್ಚಿಸಲೆಂದು ‘ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ನೇತೃತ್ವದಲ್ಲಿ ರೈತ ಮುಖಂಡರು ‘ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ’ ಹಮ್ಮಿಕೊಂಡಿದ್ದರು.

ರಾಕೇಶ್ ಟಿಕಾಯತ್, ಯುದ್ಧವೀರ್ ಸಿಂಗ್, ಕವಿತಾ ಕುರುಗಂಟಿ, ಚುಕ್ಕಿ ನಂಜುಂಡಸ್ವಾಮಿ, ಸುರೇಶ್ ಬಾಬು ಪಾಟೀಲ ಗಜಪತಿ, ಕೆ.ಟಿ. ಗಂಗಾಧರ್, ವಕೀಲ ರವಿವರ್ಮಕುಮಾರ್ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಸೋಮವಾರ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೂ ಸಭೆ ನಡೆದಿತ್ತು. ಇದಾದ ನಂತರ, ಪತ್ರಿಕಾಗೋಷ್ಠಿ ಆರಂಭವಾಗಿತ್ತು.

ಯುದ್ಧವೀರ್ ಸಿಂಗ್ ಅವರು ಇಂಗ್ಲಿಷ್‌ನಲ್ಲಿ ಮಾತನಾಡಲಾರಂಭಿಸಿದ್ದರು. ಪತ್ರಕರ್ತರು ಕನ್ನಡದಲ್ಲಿ ಕೇಳುತ್ತಿದ್ದ ಪ್ರಶ್ನೆಗಳನ್ನು ಕವಿತಾ ಅವರು ಹಿಂದಿ ಭಾಷೆಗೆ ಅನುವಾದಿಸಿ ಯುದ್ಧವೀರ್ ಅವರಿಗೆ ತಿಳಿಸುತ್ತಿದ್ದರು.

ಮುಖಂಡರ ಹೆಸರಿನಲ್ಲಿ ಹಣ ಕೇಳಿದ್ದ ಕೋಡಿಹಳ್ಳಿ ಜೊತೆಗಿನ ಒಡನಾಟದ ಬಗ್ಗೆ ಪತ್ರಕರ್ತರು ಕವಿತಾಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಕವಿತಾ, ಹಿಂದಿಯಲ್ಲಿ ಉತ್ತರಿಸಿದ್ದರು. ಆಕ್ಷೇಪ ವ್ಯಕ್ತಪಡಿಸಿದ್ದ ಕೆಲವರು, ಕನ್ನಡದಲ್ಲಿ ಮಾತನಾಡುವಂತೆ ಹೇಳಿದ್ದರು. ‘ನನಗೆ ಕನ್ನಡ ಅರ್ಥ ಆಗುತ್ತೆ. ಆದರೆ, ಮಾತನಾಡಲು ಬರುವುದಿಲ್ಲ’ ಎಂದು ಕವಿತಾ ಸ್ಪಷ್ಟಪಡಿಸಿದ್ದರು. ನಂತರ, ಇಂಗ್ಲಿಷ್‌ನಲ್ಲಿ ಮಾತು ಮುಂದುವರಿಸಿದ್ದರು.

ಏಕಾಏಕಿ ವೇದಿಕೆ ಏರಿದ್ದ ಆರೋಪಿ ಶಿವಕುಮಾರ್, ಸುದ್ದಿವಾಹಿನಿಯೊಂದರ ಮೈಕ್‌ನಿಂದ ಟಿಕಾಯತ್ ಅವರಿಗೆ ಹೊಡೆದಿದ್ದ. ಅದೇ ಸಮಯಕ್ಕೆ ಮತ್ತೊಬ್ಬ ಆರೋಪಿ ದಿಲೀಪ್, ವೇದಿಕೆಗೆ ನುಗ್ಗಿ ರಾಕೇಶ್ ಮುಖಕ್ಕೆ ಮೇಲೆ ಮಸಿ ಎರಚಿದ್ದ. ಅಕ್ಕ–ಪಕ್ಕದಲ್ಲಿ ಕುಳಿತಿದ್ದವರಿಗೂ ಮಸಿ ತಾಗಿತು. ಆಗ, ರೈತ ಸಂಘಟನೆ ಪದಾಧಿಕಾರಿಗಳು, ಇಬ್ಬರನ್ನೂ ಹಿಡಿದು ವೇದಿಕೆಯಿಂದ ಕೆಳಗೆ ಎಳೆದುತಂದು ಥಳಿಸಿದರು.

ವೇದಿಕೆ ಮುಂಭಾಗದಲ್ಲಿದ್ದ ಭರತ್ ಶೆಟ್ಟಿ ಹಾಗೂ ಇತರೆ ಆರೋಪಿಗಳು, ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿದ್ದ ಪೋಸ್ಟರ್‌ ಪ್ರದರ್ಶಿಸಿ,
‘ಮೋದಿ... ಮೋದಿ....’ ಎಂದು ಘೋಷಣೆ ಕೂಗಿದರು. ಪದಾಧಿಕಾರಿಗಳ ಮೇಲೆ ಕುರ್ಚಿಯಿಂದ ಹಲ್ಲೆ ಮಾಡಿದರು. ಕೆಲ ನಿಮಿಷ ಮಾರಾಮಾರಿಯೇ ನಡೆಯಿತು.

ರೈತರ ಮನವಿ ಮೇರೆಗೆ ಪೊಲೀಸರೆಲ್ಲರೂ ಸಭಾಭವನದ ಹೊರಗೆ ನಿಂತಿದ್ದರು. ಗಲಾಟೆ ನಡೆಯುತ್ತಿದ್ದಂತೆ ಒಳಪ್ರವೇಶಿಸಿದ ಪೊಲೀಸರು, ಮೂವರೂ ಆರೋಪಿಗಳನ್ನು ವಶಕ್ಕೆ ಪಡೆದು ಗಸ್ತು ವಾಹನದಲ್ಲಿ ಠಾಣೆಗೆ ಕರೆದೊಯ್ದರು. ಈ ವೇಳೆಯೂ ಆರೋಪಿಗಳು, ‘ನಕಲಿ ರೈತ ಹೋರಾಟಗಾರರಿಗೆ ಧಿಕ್ಕಾರ’ ಹಾಗೂ ‘ಮೋದಿ...ಮೋದಿ’ ಎಂಬ ಘೋಷಣೆ ಕೂಗಿದರು.

‘ನನ್ನನ್ನೇ ಗುರಿಯಾಗಿಸಿ ದಾಳಿ’

- ನನ್ನನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ನಾನು ಕೈ ಅಡ್ಡ ತರದಿದ್ದರೆ, ತಲೆಯೇ ಹೋಗುತ್ತಿತ್ತು. ಇದು ವ್ಯವಸ್ಥಿತ ಸಂಚು. ಕೃತ್ಯ ಎಸಗಿರುವ ಆರೋಪಿಗಳು ಹಾಗೂ ಇದರ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು

- ರಾಕೇಶ್ ಟಿಕಾಯತ್, ಬಿಕೆಯು ಮುಖಂಡ

‘ಪ್ರಜಾಪ್ರಭುತ್ವದ ವಿನಾಶ’

ದೇಶದಲ್ಲಿ ಪತ್ರಿಕಾಗೋಷ್ಠಿಯಲ್ಲೂ ಮಾತನಾಡಲು ಆಗದ ಸ್ಥಿತಿ ನಿರ್ಮಾಣವಾಗಿದ್ದು, ಪ್ರಜಾಪ್ರಭುತ್ವದ ವಿನಾಶವಾಗುತ್ತಿದೆ. ದಾಳಿಕೋರರು ಗೂಂಡಾ ವರ್ತನೆ ತೋರಿ, ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ. ‘ಮೋದಿ ಜಿಂದಾಬಾದ್’ ಎಂಬುದಾಗಿ ಆರೋಪಿಗಳೇ ಘೋಷಣೆ ಕೂಗಿದ್ದು, ಸರ್ಕಾರವೇ ಕುಮ್ಮಕು ನೀಡಿರುವ ಅನುಮಾನವಿದೆ. ನಿಷ್ಪಕ್ಷಪಾತ ಹಾಗೂ ಪ್ರಮಾಣಿಕ ತನಿಖೆ ನಡೆಸಿ, ಷಡ್ಯಂತ್ರದ ಹಿಂದಿರುವ ಶಕ್ತಿಗಳನ್ನು ಹೊರಗೆ ತರಬೇಕು

- ಯುದ್ಧವೀರ್ ಸಿಂಗ್, ರೈತ ಮುಖಂಡ

‘ಕನ್ನಡ ನಾಡಿಗೆ ಮಾಡಿದ ಅಪಮಾನ’

ಈ ದಾಳಿ, ಕನ್ನಡ ನಾಡಿಗೆ ಮಾಡಿರುವ ಅಪಮಾನ. ಇಂಥ ಹೀನ ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು

- ಬಡಗಲಪುರ ನಾಗೇಂದ್ರ, ರೈತ ಮುಖಂಡ

‘ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ದೂರು’:

‘ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ವಂಚಕ ಎಂಬುದು ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿಯಿಂದ ತಿಳಿಯಿತು. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸಲಾಗಿದೆ’ ಎಂದು ರಾಷ್ಟ್ರೀಯ ರೈತ ಮುಖಂಡ ಯುದ್ಧವೀರ್ ಸಿಂಗ್ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೆವೆನ್ ಸ್ಟಾರ್‌ ಹಾಗೂ ಐಷಾರಾಮಿ ಹೋಟೆಲ್‌ನಲ್ಲೇ ಚಂದ್ರಶೇಖರ್ ಹೆಚ್ಚು ತಂಗುತ್ತಿದ್ದರು. ಅವರ ಮೇಲೆ ನಮಗೂ ಅನುಮಾನವಿತ್ತು’ ಎಂದರು.

‘ಚಂದ್ರಶೇಖರ್ ಕೃತ್ಯದಲ್ಲಿ ಇತರ ಮುಖಂಡರ ಹೆಸರು ಸೇರಿಸುವುದು ಸರಿಯಲ್ಲ. ಪುರಾವೆ ಇಲ್ಲದ ಈ ರೀತಿ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ’ ಎಂದೂ ತಿಳಿಸಿದರು.

ಬಿಎಸ್‌ವೈ, ವಿಜಯೇಂದ್ರ ಜೊತೆ ನಂಟು:

‘ಬಂಧಿತ ಭರತ್ ಶೆಟ್ಟಿ, ಬಿಜೆಪಿ ಮುಖಂಡರ ಜೊತೆಯೂ ಒಡನಾಟ ಹೊಂದಿದ್ದನೆಂದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಜೊತೆಯಲ್ಲಿ ಭರತ್‌ ಶೆಟ್ಟಿ ಕೆಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ. ಅದರ ಫೋಟೊಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಲಭ್ಯವಾಗಿದ್ದು, ಪರಿಶೀಲಿಸಲಾಗುತ್ತಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT