ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣ: ನಾಗರಾಜು ವಿಚಾರಣೆಗೆ ಸಿದ್ಧತೆ

Last Updated 22 ಮಾರ್ಚ್ 2021, 21:06 IST
ಅಕ್ಷರ ಗಾತ್ರ

ಬೆಂಗಳೂರು: ಸಿ.ಡಿ. ಪ್ರಕರಣ ಸಂಬಂಧ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಪರವಾಗಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದ ಮಾಜಿ ಶಾಸಕ ಎಂ.ವಿ. ನಾಗರಾಜು ಅವರನ್ನು ವಿಚಾರಣೆ ನಡೆಸಲು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದು, ಸದ್ಯದಲ್ಲೇ ನೋಟಿಸ್ ನೀಡುವ ಸಾಧ್ಯತೆ ಇದೆ.

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಅಧಿಕಾರಿಗಳು, ಇತ್ತೀಚೆಗಷ್ಟೇ ರಮೇಶ ಜಾರಕಿಹೊಳಿ ಅವರನ್ನು ಎರಡು ಬಾರಿ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಿದ್ದರು. ರಮೇಶ ಅವರ ಹೇಳಿಕೆಯಲ್ಲಿ ನಾಗರಾಜು ಹೆಸರು ಉಲ್ಲೇಖವಿದ್ದು, ಅದೇ ಕಾರಣಕ್ಕೆ ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

‘ತಮ್ಮ ಬಳಿ ಸಿ.ಡಿ ಇರುವುದಾಗಿ ಹೇಳಿದ್ದ ಕೆಲವರು, ನಾಲ್ಕು ತಿಂಗಳ ಹಿಂದೆಯೇ ನಾಗರಾಜು ಅವರ ಮೂಲಕ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಆ ವಿಷಯವನ್ನು ನಾಗರಾಜು ನನ್ನ ಗಮನಕ್ಕೆ ತಂದಿದ್ದರು. ಸ್ವಲ್ಪ ಹಣವನ್ನೂ ಕೊಟ್ಟಿದ್ದೆ. ಆದರೆ, ಅವರು ಯಾರು ಎಂಬುದು ನನಗೆ ಗೊತ್ತಿಲ್ಲ’ ಎಂಬುದಾಗಿ ರಮೇಶ ಹೇಳಿಕೆಯಲ್ಲಿ ತಿಳಿಸಿದ್ದರು. ಅದೇ ಮಾಹಿತಿ ಆಧರಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದವರು ಯಾರು? ಹಾಗೂ ಸಿ.ಡಿ. ಪ್ರಕರಣದ ಹಿಂದೆ ಯಾರಿದ್ದಾರೆ? ಎಂಬ ದಿಕ್ಕಿನಲ್ಲಿ ಎಸ್‌ಐಟಿ ತನಿಖೆ ನಡೆಸುತ್ತಿದೆ.

‘ಪ್ರಕರಣದಲ್ಲಿ ಪ್ರತಿಯೊಬ್ಬರ ಹೇಳಿಕೆಯೂ ಮಹತ್ವದ್ದಾಗಿದೆ. ಹೀಗಾಗಿ, ಹಲವರ ಪಟ್ಟಿ ಮಾಡಿ ಒಬ್ಬೊಬ್ಬರಾಗಿ ವಿಚಾರಣೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಎಂ.ವಿ. ನಾಗರಾಜು ಅವರಿಗೂ ನೋಟಿಸ್ ನೀಡಲಾಗುವುದು. ತಮ್ಮ ಬಳಿ ಇರುವ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕೋರಲಾಗುವುದು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ನಾಪತ್ತೆಯಾದವರಿಗೆ ಮೂರನೇ ನೋಟಿಸ್: ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ನಾಲ್ವರು ತಲೆಮರೆಸಿಕೊಂಡಿದ್ದು, ಅವರ ವಿಚಾರಣೆಗಾಗಿ ಮೂರನೇ ಬಾರಿ ಎಸ್‌ಐಟಿ ಅಧಿಕಾರಿ ನೋಟಿಸ್ ನೀಡಿದ್ದಾರೆ.

‘ಪ್ರಕರಣ ಗಂಭೀರವಾಗಿದ್ದು, ಮಾಹಿತಿ ಅಗತ್ಯವಿರುವುದಾಗಿ ಹೇಳಿ ನಾಲ್ವರಿಗೂ ಈಗಾಗಲೇ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಅವರು ವಿಚಾರಣೆಗೆ ಬಂದಿಲ್ಲ. ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಮೂರನೇ ಬಾರಿ ಅವರ ವಿಳಾಸಕ್ಕೆ ಹಾಗೂ ಕುಟುಂಬ
ದವರಿಗೆ ನೋಟಿಸ್‌ ಪ್ರತಿ ಕಳುಹಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಹೊರ ರಾಜ್ಯಗಳಲ್ಲಿ ಸುತ್ತಾಟ: ಪ್ರಕರಣಕ್ಕೆ ಸಂಬಂಧಪಟ್ಟ ಕೆಲವರು, ಹೊರ ರಾಜ್ಯಗಳಲ್ಲಿರುವ ಮಾಹಿತಿ ಎಸ್‌ಐಟಿಗೆ ಸಿಕ್ಕಿದೆ. ಹೀಗಾಗಿ, ವಿಶೇಷ ತಂಡಗಳು ಹೊರ ರಾಜ್ಯಗಳಲ್ಲಿ ಸುತ್ತಾಡುತ್ತಿವೆ.

’ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದಲ್ಲಿ ಶೋಧ ನಡೆಯುತ್ತಿದೆ. ನಾಪತ್ತೆಯಾದವರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ’ ಎಂದೂ ಮೂಲಗಳು ಹೇಳಿವೆ.

ಇನ್ನೂ ಸಿಗದ ಮೂಲ ವಿಡಿಯೊ

ರಮೇಶ ಜಾರಕಿಹೊಳಿ ಅವರು ಯುವತಿ ಜೊತೆಗೆ ಇದ್ದಾರೆ ಎನ್ನಲಾದ ವಿಡಿಯೊದ ಮೂಲ ಪ್ರತಿ ಇದುವರೆಗೂ ಎಸ್‌ಐಟಿಗೆ ಸಿಕ್ಕಿಲ್ಲ. ನಾಪತ್ತೆಯಾದವರು ಮತ್ತು ವಿಚಾರಣೆಗೆ ಒಳಪಡಿಸಿದ್ದ ಕೆಲ ವ್ಯಕ್ತಿಗಳ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದರೂ ಮೂಲ ವಿಡಿಯೊ ಸುಳಿವು ಸಿಕ್ಕಿಲ್ಲ.

‘ಸಂಕಲನ ಮಾಡಿದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ವಿಡಿಯೊಗಳು ಮಾತ್ರ ಸಿಕ್ಕಿವೆ. ಅವುಗಳ ಪರೀಕ್ಷೆಯಿಂದ ಮಾಹಿತಿ ಸಿಗುವುದು ಕಷ್ಟ. ಹೀಗಾಗಿ, ಮೂಲ ವಿಡಿಯೊಗಾಗಿ ಹುಡುಕಾಟ ನಡೆದಿದೆ. ಸಿಕ್ಕ ಕೂಡಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು’ ಎಂದೂ ಮೂಲಗಳು ಹೇಳಿವೆ.

ತಡೆಯಾಜ್ಞೆ ಸಮರ್ಥಿಸಿಕೊಂಡ ಡಾ.ಸುಧಾಕರ್‌

‘ವಿರೋಧಿಗಳು ನೇರವಾಗಿ ಬಂದರೆ ಎದುರಿಸಬಹುದು. ಹಿಂದಿನಿಂದ ಬರುತ್ತಾರೆ, ಹೀಗಾಗಿ ನಮ್ಮ ರಕ್ಷಣೆಗೆ ನ್ಯಾಯಾಲಯ ಮೆಟ್ಟಿಲು ಹತ್ತಿದೆವು. ಇದರಲ್ಲಿ ತಪ್ಪೇನಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಪ್ರಶ್ನಿಸಿದರು.

ರಮೇಶ ಜಾರಕಿಹೊಳಿ ಸಿ.ಡಿ.ಪ್ರಕರಣದಲ್ಲಿ ಆರು ಸಚಿವರು ನ್ಯಾಯಾಲಯಕ್ಕೆ ಮೊರೆ ಹೋದ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ನಡೆಸಿದ ಟೀಕಾ ಪ್ರಹಾರಕ್ಕೆ ಅವರು ಉತ್ತರಿಸಿದರು.

ಇಂಟರ್‌ನೆಟ್‌ನಲ್ಲಿರುವ ಚಿತ್ರವನ್ನು ಬಳಸಿ ತಮಗೆ ಬೇಕಾದಂತೆ ಮಾಡುವ ತಂತ್ರಜ್ಞಾನ ಬಂದಿದೆ. ರಮೇಶ ಅವರ ಪರಿಸ್ಥಿತಿ ಏನಾಗಿದೆ ನೋಡಿ. ಒಮ್ಮೆ ಹೋದ ಮಾನ ಬರುವುದಿಲ್ಲ. ಎಚ್‌.ವೈ.ಮೇಟಿ ವಿರುದ್ಧ ಇಂತಹದ್ದೇ ಪ್ರಕರಣ ದಾಖಲಾಗಿತ್ತು. ತನಿಖೆ ಆದ ಬಳಿಕ ಅವರನ್ನು ನಿರ್ದೋಷಿ ಎಂದು ಘೋಷಿಸಲಾಯಿತು. ಆದರೆ, ಅವರ ಜೀವನ ನಾಶ ಆಯಿತು. ಯಾರು ಕಟ್ಟಿಕೊಡುತ್ತಾರೆ ಎಂದು ಸುಧಾಕರ್‌ ಪ್ರಶ್ನಿಸಿದರು.

‘ಹಿಂದೆ ಒಬ್ಬರು ಸಚಿವರು ಮತ್ತು ಸಭಾಧ್ಯಕ್ಷರಾಗಿದ್ದವರು ತಮ್ಮ ವಿರುದ್ಧ ಸುದ್ದಿ ವಾಹಿನಿಯಲ್ಲಿ ವರದಿ ಬಂತು ಎಂದು ಹೇಳಿ, ಅಲ್ಲಿಗೆ ಹೋಗಿ ಚಪ್ಪಲಿಯಲ್ಲಿ ಹೊಡೆದು ಬಂದರು. ನಾವು ಆ ರೀತಿ ಮಾಡಲು ಆಗಲ್ಲ. ನಮ್ಮ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ’ ಎಂದೂ ಹೇಳಿದರು.

ಇದಕ್ಕೆ ಬಳಿಕ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಕೆ.ಆರ್‌. ರಮೇಶ್‌ ಕುಮಾರ್‌, ‘ನಾನು ಭೂಮಿ ಅತಿಕ್ರಮಣ ಮಾಡಿದ್ದೇನೆ ಎಂದು ಸುದ್ದಿವಾಹಿನಿಯೊಂದು ಪ್ರೋಮೊ ಹಾಕಿತು. ದೂರವಾಣಿ ಮೂಲಕ ಅದನ್ನು ಪ್ರಶ್ನಿಸಿದೆ. ಇಲ್ಲಿಗೆ ಬಂದು ಮಾತನಾಡಿ ಎಂದು ವಾಹಿನಿಯವರು ಹೇಳಿದರು. ನಾನೊಬ್ಬನೇ ವಾಹಿನಿಯ ಸ್ಟುಡಿಯೋಗೆ ಹೋದೆ. ಮುಕ್ಕಾಲು ಗಂಟೆ ಕಳೆದೂ ಯಾರೂ ನನ್ನನ್ನು ಕೇಳಲು ಬರಲಿಲ್ಲ. ನನ್ನ ಚಪ್ಪಲಿ ಅಲ್ಲಿ ಬಿಟ್ಟು ಬಂದೆ ಅಷ್ಟೇ. ಕೆಲವೊಮ್ಮೆ ಕೆಲವು ವಸ್ತು ಬಳಸಲೇಬೇಕಾಗುತ್ತದೆ’ ಎಂದರು.

ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದನ್ನು ಸಚಿವರಾದ ಎಸ್‌.ಟಿ.ಸೋಮಶೇಖರ್, ನಾರಾಯಣಗೌಡ, ಶಿವರಾಮ್‌ ಹೆಬ್ಬಾರ್‌ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT