ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣದಿಂದ ಬಹುತ್ವ ಭಾರತೆಡೆಗೆ ನಡೆಯಬೇಕಿದೆ- ರಂಜಾನ್ ದರ್ಗಾ

‘ಕವಿ ಮೂಡ್ನಾಕೂಡು ಜೊತೆಗೊಂದು ದಿನ’ ಕಾರ್ಯಕ್ರಮ
Last Updated 28 ಮಾರ್ಚ್ 2023, 6:12 IST
ಅಕ್ಷರ ಗಾತ್ರ

ಗದಗ: ‘ವರ್ಣ ಭಾರತದ ಅಂತಿಮ ಸತ್ಯವೇ ಫ್ಯಾಸಿಸಂ. ನಾವಿಂದು ಪ್ರಭುತ್ವಭಾವದ ವರ್ಣ (ಜಾತಿ) ಭಾರತದಲ್ಲಿದ್ದೇವೆ. ಫ್ಯಾಸಿಸಂ ಲಕ್ಷಣಗಳೆಲ್ಲವೂ ನಮ್ಮ ಮನೆ ಬಾಗಿಲಿಗೇ ಬಂದು ನಿಂತಿವೆ. ಆದ್ದರಿಂದ, ನಾವೆಲ್ಲರೂ ವರ್ಣ ಭಾರತದಿಂದ ಬಹುತ್ವ ಭಾರತೆಡೆಗೆ ನಡೆಯಬೇಕಿದೆ’ ಎಂದು ಸಾಹಿತಿ ರಂಜಾನ್‌ ದರ್ಗಾ ಅಭಿಪ್ರಾಯಪಟ್ಟರು.

ಲಡಾಯಿ ಪ್ರಕಾಶನ, ದಲಿತ ಸಾಹಿತ್ಯ ಪರಿಷತ್ತು, ದಲಿತ ಕಲಾ ಮಂಡಳಿ ಹಾಗೂ ಬಸವದಳ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ನಡೆದ ‘ಕವಿ ಮೂಡ್ನಾಕೂಡು ಜೊತೆಗೊಂದು ದಿನ’ ಕಾರ್ಯಕ್ರಮದಲ್ಲಿ ಅವರು ‘ಬಹುತ್ವ ಭಾರತ ಮತ್ತು ಬೌದ್ಧ ತಾತ್ವಿಕತೆ’ ನಾಲ್ಕನೇ ಆವೃತ್ತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

‘ಪ್ರಸ್ತುತ ದಿನಗಳಲ್ಲಿ ಜನರು ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ದೇಶದಲ್ಲಿ ಫ್ಯಾಸಿಸಂ ಅನುಷ್ಠಾನಕ್ಕೆ ಬೇಕಿರುವ ಎಲ್ಲ ರೀತಿಯ ಪ್ರಯೋಗಗಳು ಕಳೆದ 10 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಅದೇರೀತಿಯ ಪರೀಕ್ಷೆ ಕೂಡ ಈಚೆಗೆ ನಡೆದಿದೆ’ ಎಂದು ಆರೋಪ ಮಾಡಿದರು.

‘ಬಡವರು, ಮಧ್ಯಮ ವರ್ಗದ ಮುಸ್ಲಿಮರ ಶೇ 4 ಮೀಸಲಾತಿಯನ್ನು ಕಸಿದು, ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿರುವುದು ಕೂಡ ಫ್ಯಾಸಿಸಂ ಪ್ರಯೋಗದ ಒಂದು ಭಾಗ. ಇದನ್ನು ನೋಡಿದಾಗ ನಮ್ಮ ಸಮಾಜ ಜೀವಂತವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ’ ಎಂದು ಕಿಡಿಕಾರಿದರು.

‘ನನ್ನದು ಹೋರಾಟದ ಬದುಕು. ಬಾಲ್ಯದಿಂದಲೂ ನಾನು ಧರ್ಮ, ಜಾತಿಗೆ ಅಂಟಿಕೊಂಡು ಬೆಳೆಯಲಿಲ್ಲ. ಆದರೆ, ಒಂದು ಸಮುದಾಯಕ್ಕೆ ಅನ್ಯಾಯ ಆಗುತ್ತಿರುವಾಗ ಯಾವೊಬ್ಬ ಲಿಂಗಾಯತ ಸ್ವಾಮೀಜಿಯಾಗಲೀ, ಚಿಂತಕನಾಗಲಿ ಈ ಬಗ್ಗೆ ಮಾತನಾಡಲಿಲ್ಲ. ಈಗ ಯೊರೊಬ್ಬರೂ ಮಾತನಾಡದಿರಬಹುದು. ಆದರೆ, ನಾಳೆ ಈ ಸನ್ನಿವೇಶವನ್ನು ಅವರು ಕೂಡ ಅನುಭವಿಸುತ್ತಾರೆ. ಈ ಮೀಸಲಾತಿ ಬಹಳ ದಿನಗಳ ಕಾಲ ಇರುವುದಿಲ್ಲ’ ಎಂದು ಅವರು ಹೇಳಿದರು.

‘ಸಮಾಜ ವಿಭಜಿತಗೊಂಡಿರುವುದರಿಂದಲೇ ಮುಸ್ಲಿಮರ ಶೇ 4 ಮೀಸಲಾತಿ ಕಸಿದುಕೊಂಡಿದ್ದಾರೆ. ಮುಸ್ಲಿಮರು ಧ್ವನಿ ಎತ್ತದಿರುವುದು ಇನ್ನೂ ವಿಚಿತ್ರ. ಇಷ್ಟು ನಿರ್ಲಿಪ್ತ ಸಮಾಜವನ್ನು ಹಿಂದೆಂದೂ ಕಂಡಿಲ್ಲ. ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ನಮ್ಮನ್ನು ನಿಯಂತ್ರಣ ಮಾಡುತ್ತಿರುವ ಶಕ್ತಿ ಯಾವುದು ಎಂಬುದನ್ನು ನಾವು ಎಲ್ಲೀವರೆಗೆ ಗುರುತಿಸುವುದಿಲ್ಲವೋ ಅಲ್ಲೀವರೆಗೆ ಇದೇ ರೀತಿ ಬದುಕಬೇಕಾಗುತ್ತದೆ’ ಎಂದು ಹೇಳಿದರು.

‘ಅಸ್ಪೃಶ್ಯತೆ ಬೇರು ಜಾತಿ ವ್ಯವಸ್ಥೆಯಲ್ಲಿದೆ. ಜಾತಿ ವ್ಯವಸ್ಥೆಯ ಬೇಕು ವರ್ಣಾಶ್ರಮ ಧರ್ಮದಲ್ಲಿದೆ. ವರ್ಣಾಶ್ರಮ ಧರ್ಮದ ಬೇರು ಬ್ರಾಹ್ಮಣ ವಾದದೊಳಗಿದೆ. ಬ್ರಾಹ್ಮಣ ವಾದದ ಬೇರು ಅವರ ರಾಜಕೀಯ ಅಧಿಕಾರದಲ್ಲಿದೆ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ನಾಲಗೆ ಮೇಲೆ ಬಸವಣ್ಣ, ಮೆದುಳಿನಲ್ಲಿ ಮನು ಇರುವ ಜನರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಬಸವಣ್ಣ ಮತ್ತೇ ಈ ಸಮಾಜದಲ್ಲಿ ಪ್ರಮುಖ ಸ್ಥಾನ ಪಡೆಯಲು ಸಾಧ್ಯವಾಗುವುದು ದಲಿತರು, ಹಿಂದುಳಿದವರಿಂದ ಮಾತ್ರ’ ಎಂದು ವ್ಯಾಖ್ಯಾನಿಸಿದರು.

‘ನವಭಾರತ ನಿರ್ಮಾಣ ಆಗಬೇಕಾದರೆ ಗಾಂಧೀಜಿ ಅವರ ಸಾತ್ವಿಕ ಸಂಯಮ. ಅಂಬೇಡ್ಕರ್‌ ಅವರ ಸಾತ್ವಿಕ ಕೋಪ ಇರಬೇಕು. ಎರಡರಲ್ಲೂ ಸಾತ್ವಿಕ ಸತ್ವ ಇದೆ. ಅಂಬೇಡ್ಕರ್‌ ಅವರಿಗೆ ಮಾತ್ರ ಗಾಂಧೀಜಿ ಅವರನ್ನು ಟೀಕೆ ಮಾಡುವ ಹಕ್ಕು ಇತ್ತು. ಗಾಂಧೀಜಿ ಪ್ರಭಾವಕ್ಕೆ ಅವರು ಒಳಗಾಗದ ಕಾರಣದಿಂದಲೇ ನಮ್ಮ ದೇಶದಲ್ಲಿ ಅನೇಕ ಕ್ರಾಂತಿಕಾರಕ ಬದಲಾವಣೆಗಳಾದವು. ಆದರೆ, ಗಾಂಧೀಜಿ ಇಲ್ಲದಿದ್ದರೆ ಸವರ್ಣೀಯರು ಅಂಬೇಡ್ಕರ್‌ ಅವರನ್ನು ಉಳಿಸಿಕೊಳ್ಳುತ್ತಿರಲಿಲ್ಲ ಎಂಬುದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿದರು.

ಡಾ. ಎಚ್‌.ಎಸ್‌.ಅನುಪಮಾ ಮೂಚಿ ಅವರ ‘ನನ್ನ ಎಲುಬಿನ ಹಂದರದೊಳಗೊಂದು ಮಂದಿರ ಇದೆ’ ಕವಿತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೀರಪ್ಪ ತಾಳದವರ ಸಂವಿಧಾನ ಪ್ರಸ್ತಾವನೆ ಓದಿದರು. ಸುಭಾಷ ರಾಜಮಾನೆ ‘ಬಹುತ್ವ ಭಾರತ ಮತ್ತು ಬೌದ್ಧ ತಾತ್ವಿಕತೆ’ ಪುಸ್ತಕ ಕುರಿತು ಮಾತನಾಡಿದರು. ಅರ್ಜುನ ಗೊಳಸಂಗಿ ಮೊದಲ ಗೋಷ್ಠಿ ನಿರ್ವಹಿಸಿದರು.

**

ಬುದ್ಧನನ್ನು ನಾವು ವ್ಯಕ್ತಿಯಾಗಿ ಅಲ್ಲ; ಪ್ರಜ್ಞೆಯಾಗಿ ಗ್ರಹಿಸಬೇಕು. ಮೂಡ್ನಾಕೂಡು ಅವರ ಚಿಂತನೆಗಳ ರೀತಿ, ಪದ್ಯಗಳ ರೀತಿ ಬೆಳೆಯುವ ಪುಸ್ತಕ ಇದು. ಬುದ್ಧ ಪ್ರಜ್ಞೆಯ ನಡಿಗೆ ಈ ಪುಸ್ತಕದ ವಿಶೇಷತೆಯಾಗಿದೆ.
–ಸುಭಾಷ ರಾಜಮಾನೆ, ಸಾಹಿತಿ

*

ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಬೌದ್ಧ ಕತೆಗಳು, ಸನ್ನಿವೇಶಗಳು, ತತ್ವದಲ್ಲಿರುವ ಉಪಕತೆಗಳನ್ನು ಬಳಸಿಕೊಳ್ಳುತ್ತಲೇ ಆಧುನೀಕತೆಗೆ ತಂದಿದ್ದಾರೆ. ‘ಬಹುತ್ವ ಭಾರತ... ’ ಪುಸ್ತಕದಲ್ಲಿನ ಅಂಕಣಗಳು ಜೀವಂತವಾಗಿವೆ.
–ರಂಜಾನ್‌ ದರ್ಗಾ, ಸಾಹಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT