ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಆಳುತ್ತಿರುವ ಪ್ರಧಾನಿ ಗೆಳೆಯರು: ರಣದೀಪ್ ಸಿಂಗ್ ಸುರ್ಜೆವಾಲ ವಾಗ್ದಾಳಿ

Last Updated 14 ನವೆಂಬರ್ 2021, 20:48 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂದು ಸಂವಿಧಾನದ ಮೇಲೆ ದಾಳಿಯಾಗುತ್ತಿದೆ. ಹಿರಿಯ ನಾಯಕರ ತತ್ವ, ನೀತಿ, ಮೌಲ್ಯಗಳು ಅಪಾಯಕ್ಕೆ ಸಿಲುಕಿವೆ. ಪರಿಶಿಷ್ಟರು, ಶೋಷಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮಹಿಳೆಯರ ಹಕ್ಕು ಕಸಿಯಲಾಗುತ್ತದೆ. ಅದರ ರಕ್ಷಣೆಗಾಗಿ ಈ ದೇಶಕ್ಕೆ ಕಾಂಗ್ರೆಸ್ ಅಗತ್ಯವಾಗಿದೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಪ್ರತಿಪಾದಿಸಿದರು.

ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರತಿ ಮಹಿಳೆ, ಯುವಕರು, ಪರಿಶಿಷ್ಟರು, ಬಡವರು, ಹಿಂದುಳಿದವರನ್ನು ತಲುಪುವ ಉದ್ದೇಶದಿಂದ ಈ ಅಭಿಯಾನ ಕೈಗೊಂಡಿದ್ದೇವೆ’ ಎಂದರು.

‘ಅಧಿಕಾರದಲ್ಲಿರುವ ಕೆಲವು ದುಷ್ಟ ಶಕ್ತಿಗಳ ದಾಳಿಯಿಂದ ಕೆಲವರ ಬಳಿ ಮಾತ್ರ ಹಕ್ಕು, ಅಧಿಕಾರ ಉಳಿಯಲಿದೆ. ಉದ್ಯಮಿಗಳು, ಪ್ರಧಾನಿ ನರೇಂದ್ರ ಮೋದಿ ಗೆಳೆಯರು ಈ ದೇಶ ಆಳುತ್ತಾರೆ. ನಾವೆಲ್ಲರೂ ಅವರ ಹಿತಾಸಕ್ತಿಗೆ ಬಲಿಯಾಗಬೇಕಾಗುತ್ತದೆ. ಹೀಗಾಗಿ, ಕಾಂಗ್ರೆಸ್ ಅನಿವಾರ್ಯವಾಗಿದೆ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಬಿಜೆಪಿಯವರಿಗೆ ಭ್ರಷ್ಟಾಚಾರ ಎಂಬುದು ನೀರು ಕುಡಿದಷ್ಟು ಸಲೀಸಾಗಿದೆ. ಹಣ, ಅಧಿಕಾರ ಇದ್ದರೆ ಏನನ್ನು ಬೇಕಾದರೂ ಮಾಡ‌ಬಹುದು ಎಂಬುದು ಅವರ ಧೋರಣೆ. ಇಂಥ ಬಿಜೆಪಿಯನ್ನು 2023ರ ಚುನಾವಣೆಯಲ್ಲಿ ಅಧಿಕಾರದಿಂದ ಕಿತ್ತೊಗೆಯಬೇಕು’ ಎಂದರು.

‘ಕೋಮುವಾದಿ ಬಿಜೆಪಿಯಿಂದ ದೇಶದ ಒಗ್ಗಟ್ಟು, ಏಕತೆ ಉಳಿಸಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಹೊಸ ರಕ್ತ ಬರಬೇಕು, ಹೊಸ ಚಿಂತನೆಗಳು ಬರಬೇಕು, ಬದ್ಧತೆ ಬರಬೇಕು. ಇದಕ್ಕಾಗಿ ಹೊಸಬರನ್ನು ಪಕ್ಷಕ್ಕೆ ಸೇರಿಸಬೇಕು. ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರಬೇಕು’ ಎಂದರು.

‘ನೈಜ ಸದಸ್ಯತ್ವಕ್ಕೆ ಮಾತ್ರ ಗಮನ ನೀಡಬೇಕು. ಎಲ್ಲೋ ಕುಳಿತು ಸದಸ್ಯರ ಹೆಸರು ಬರೆದುಕೊಂಡು ಬರದೆ, ಪ್ರತಿ ಮನೆಗೆ ತೆರಳಿ ಐದು ರೂಪಾಯಿ ಪಡೆದು, ಪಕ್ಷದ ಬಗ್ಗೆ ಅರಿವು ಮೂಡಿಸಿ, ಪಕ್ಷಕ್ಕೆ ಕರೆತರುವ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ನೀವೆಲ್ಲ ಕಬ್ಬಿಣದಂತೆ. ಕಬ್ಬಿಣದಲ್ಲಿ ಕತ್ತರಿ ಮಾಡಬಹುದು. ಸೂಜಿಯನ್ನೂ ಮಾಡಬಹುದು. ಬಿಜೆಪಿಯವರು ಈ ದೇಶ ಹಾಗೂ ಸಮಾಜವನ್ನು ತುಂಡರಿಸುವ ಕತ್ತರಿಯಂತೆ ಕೆಲಸ ಮಾಡುತ್ತಿದ್ದಾರೆ. ನಾವು ಸೂಜಿಯಂತೆ ಸಮಾಜವನ್ನು ಒಂದು ಮಾಡೋಣ’ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

‘ಕನಿಷ್ಠ 50 ಲಕ್ಷ ಸದಸ್ಯರನ್ನು ಮಾಡುವ ಗುರಿ ಹೊಂದಬೇಕು. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಇತರ ಘಟಕಗಳು ತಲಾ 1 ಲಕ್ಷ ಸದಸ್ಯತ್ವ ಮಾಡಬೇಕು. ಮನೆ, ಮನೆಗೂ ತೆರಳಿ ಹೃದಯ ಗೆಲ್ಲಬೇಕು’ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಮುಖಂಡ ವೀರಪ್ಪ ಮೊಯಿಲಿ ಇದ್ದರು. ಆರಂಭದಲ್ಲಿ ಜವಾಹರಲಾಲ್‌ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

‘ಡೀಕೆ‌... ಡೀಕೆ...’; ‘ಹೌದು ಹುಲಿಯಾ’

‘ಡೀಕೆ‌... ಡೀಕೆ...’ ಎಂದು ಕೂಗಿದ ಕಾರ್ಯಕರ್ತರ ವಿರುದ್ಧ ಗರಂ ಆದ ಡಿ.ಕೆ. ಶಿವಕುಮಾರ್, ‘ಹೀಗೆ ಕೂಗುವವರು ಹೊರಗೆ ಹೋಗಿ. ಯಾವ ಡೀಕೆ..?’ ಎಂದು ಗದರಿದರು. ‘ನೀವು ಪಕ್ಷಕ್ಕೆ ದ್ರೋಹ ಮಾಡುತ್ತಿದ್ದೀರಿ. ವ್ಯಕ್ತಿ ಪೂಜೆ ಮಾಡಬೇಡಿ‌. ಇಲ್ಲಿ ಯಾವ ಹೆಸರೂ ಇರಬಾರದು. ಕೇವಲ ಕಾಂಗ್ರೆಸ್ ಎಂಬುದೊಂದೇ ಇರಬೇಕು’ ಎಂದರು.

‘ಕೋವಿಡ್‌ ಬಂದಾಗ ಚಪ್ಪಾಳೆ ತಟ್ಟಿ, ಗಂಟೆ ಹೊಡಿರಿ, ಜಾಗಟೆ ಬಾರಿಸಿ, ದೀಪ ಹಚ್ಚಿ ಎಂದು ಮೋದಿ ಹೇಳಿದರು. ಇವರಿಗಿಂತ ಮೌಢ್ಯದ ಪ್ರತಿಪಾದಕ ಇನ್ನೊಬ್ಬರಿಲ್ಲ‘ ಎಂದು ಸಿದ್ದರಾಮಯ್ಯ ಹೇಳಿದಾಗ, ಕಾರ್ಯಕರ್ತನೊಬ್ಬ ‘ಹೌದು ಹುಲಿಯಾ’ ಎಂದು ಕೂಗಿದ್ದು ಕೇಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT