ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅತ್ಯಾಚಾರ ಮತ್ತು ಆಡಳಿತ ವ್ಯವಸ್ಥೆ

ಅತ್ಯಾಚಾರ ಅಪರಾಧವನ್ನು ಕ್ಷುಲ್ಲಕೀಕರಿಸುವಂತಹ ಬೆಳವಣಿಗೆಯು ಅತ್ಯಾಚಾರವನ್ನು ಮಾಮೂಲು ಕ್ರಿಯೆಯಂತೆ ಸಹಜವಾಗಿಸುವ ಸಂಸ್ಕೃತಿಗೆ ದ್ಯೋತಕ
Last Updated 28 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಅತ್ಯಾಚಾರ ಎಂಬುದು ವ್ಯಕ್ತಿಯ ಮೇಲೆ ಮಾತ್ರ ಎಸಗುವ ಅಪರಾಧವಲ್ಲ, ಪ್ರಭುತ್ವದ ವಿರುದ್ಧ ಎಸಗುವಂತಹ ಅಪರಾಧವೂ ಹೌದು. ಹೀಗಾಗಿ, ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವುದು ಸರ್ಕಾರದ ಜವಾಬ್ದಾರಿಯೂ ಹೌದು. ಆದರೆ ಬಿಲ್ಕಿಸ್ ಬಾನು ಪ್ರಕರಣದಲ್ಲಿ 11 ಮಂದಿ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ್ದು ವ್ಯತಿರಿಕ್ತ ನಡೆ. ಬಿಡುಗಡೆಗೊಂಡವರಿಗೆ ಹೂವಿನ ಹಾರ ಹಾಕಿ, ಕಾಲಿಗೆ ನಮಸ್ಕರಿಸಿ, ಸಿಹಿ ತಿನ್ನಿಸಿ ಸ್ವಾಗತಿಸುವ ಗೌರವಪೂರ್ವಕ ಸಂಭ್ರಮಾಚರಣೆ ಬೇರೆ. ಈ ವಿದ್ಯಮಾನಕ್ಕೆ ಪ್ರತಿಕ್ರಿಯಿಸಿ, ‘ನ್ಯಾಯ ಹೀಗೆ ಅಂತ್ಯವಾಗುತ್ತದೆಯೇ?’ ಎಂದು ಬಿಲ್ಕಿಸ್ ಬಾನು ಕೇಳಿದಂತಹ ಪ್ರಶ್ನೆಯು ನಾವು ಕಟ್ಟಿಕೊಂಡಿರುವ ನ್ಯಾಯಸೌಧವನ್ನು ನುಚ್ಚುನೂರು ಮಾಡುವಂತಹದ್ದು.

ಅತ್ಯಾಚಾರ ಎಂಬುದು ಒಂದು ನೆಲೆಯಲ್ಲಿ ಹೇಯ ಕೃತ್ಯ. ಮನುಷ್ಯತ್ವ, ಮಾನವೀಯ ಭಾವ ಇರುವವರು ಎಸಗಬಾರದ ದುಷ್ಕೃತ್ಯ. ಆದರೆ ಮತ್ತೊಂದು ನೆಲೆಯಲ್ಲಿ ಅತ್ಯಾಚಾರವನ್ನು ಮಾಮೂಲು ಕ್ರಿಯೆಯಂತೆ ಸಹಜವಾಗಿಸುವ ಅತ್ಯಾಚಾರ ಸಂಸ್ಕೃತಿಯನ್ನು ನಮ್ಮ ಸುತ್ತಲೂ ಕಾಣುತ್ತಲೇ ಇದ್ದೇವೆ.

ನಿರ್ಭಯಾ ಪ್ರಕರಣದಲ್ಲಿ, ತಾನು ಎಸಗಿದ ಅತ್ಯಾಚಾರವನ್ನು ಅತ್ಯಾಚಾರಿ (ಮುಕೇಶ್ ಸಿಂಗ್) ಸಮರ್ಥಿಸಿಕೊಂಡಿದ್ದು ಇಂತಹದೇ ಸಂಸ್ಕೃತಿಯ ಭಾಗ. ಗಂಡಾಳಿಕೆಯ ಮನಃಸ್ಥಿತಿ ಹೆಣ್ಣಿನ ಮೇಲೆ ನಡೆಸುವ ಆಕ್ರಮಣಗಳು ಸಹಜವೆಂದು ಸಾಮಾಜಿಕವಾಗಿ ನಂಬಿಸುವ ಯತ್ನ ಇದು.

ಮಹಿಳೆಯ ಮೇಲಿನ ಅತ್ಯಾಚಾರದ ಪಿಡುಗನ್ನು ನಿಗ್ರಹಿಸಲು ಸದ್ಯಕ್ಕೆ ಯಾವುದೇ ‘ಲಸಿಕೆ’ ಕಂಡುಹಿಡಿಯ ಲಾಗದಂತಹ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವಾತಾವರಣ ಮುಂದುವರಿಯುತ್ತಲೇ ಇದೆ. ರಾಜಕೀಯ ಗುರಿಗಳಿಗಾಗಿ ಮಹಿಳೆಯರ ದೇಹಗಳೇ ರಣಾಂಗಣಗಳಾಗಿ, ಅತ್ಯಾಚಾರವೆಂಬುದು ಅಸ್ತ್ರವಾಗುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಹಾಗೆಯೇ ಆ ಅಪರಾಧವನ್ನು ಕ್ಷುಲ್ಲಕವಾಗಿಸುತ್ತಾ ಅದನ್ನು ಸಹಜವೆನಿಸುವಂತೆ ಮಾಡುವ ಕ್ರಿಯೆ ಬಿಲ್ಕಿಸ್ ಬಾನು ಪ್ರಕರಣದ ಅತ್ಯಾಚಾರಿಗಳ ಬಿಡುಗಡೆಯಲ್ಲಿ ಮತ್ತೊಮ್ಮೆ ಅನುರಣಿಸಿದೆ.

ದುಷ್ಟತನವೂ ಸಹಜವಾಗಿಬಿಡುವ ಪರಿಕಲ್ಪನೆಯ (ಬೆನಾಲಿಟಿ ಆಫ್ ಈವಿಲ್) ಬಗ್ಗೆ ಜರ್ಮನ್- ಅಮೆರಿಕನ್ ತತ್ವಜ್ಞಾನಿ ಹನ್ನಾ ಅರೆಂಡ್ಟ್ ಬರೆಯುತ್ತಾರೆ. ನಾಜಿ ಜರ್ಮನಿಯ ಯುದ್ಧಾಪರಾಧಿ ಐಕ್‌ಮನ್‌ ವಿಚಾರಣೆ ಬಗ್ಗೆ 1961ರಲ್ಲಿ ‘ದಿ ನ್ಯೂಯಾರ್ಕರ್’ ನಿಯತಕಾಲಿಕೆಗೆ ವರದಿ ಮಾಡಿದ್ದ ಹನ್ನಾ ಈ ಪರಿಕಲ್ಪನೆಯ ಕುರಿತು ವಿಸ್ತರಿಸಿ ಬರೆದಾಗ ಬಹಳಷ್ಟು ಚರ್ಚೆಗಳಾಗುತ್ತವೆ. ‘ಐಕ್‌ಮನ್ ಇನ್ ಜೆರುಸಲೇಂ: ಎ ರಿಪೋರ್ಟ್ ಆನ್ ದಿ ಬೆನಾಲಿಟಿ ಆಫ್ ಈವಿಲ್’ ಎಂಬ ಶೀರ್ಷಿಕೆಯ ಪುಸ್ತಕವನ್ನೂ 1963ರಲ್ಲಿ ಹನ್ನಾ ಬರೆಯುತ್ತಾರೆ. ಮತ್ತೊಬ್ಬರ ದೃಷ್ಟಿಕೋನದಿಂದ ಆಲೋಚಿಸುತ್ತಾ ಆಲೋಚನಾಶಕ್ತಿ ಕಳೆದುಕೊಳ್ಳುವಂತಹ ಸಾಧಾರಣ ಜನರ ಅಸಾಧಾರಣ ಅಪರಾಧಗಳ ವಿರೋಧಾಭಾಸಗಳನ್ನು ಹನ್ನಾ ವಿಶ್ಲೇಷಿಸುತ್ತಾರೆ.

ಘೋರ ಅಪರಾಧಗಳನ್ನು ಎಸಗುವವರು ಹಿಂಸಾಪ್ರವೃತ್ತಿಯ ಅಮಾನುಷ ರಾಕ್ಷಸರಾಗಿರಬೇಕೆಂದೇನೂ ಇಲ್ಲ. ಯಾವುದೇ ಪ್ರತಿರೋಧ, ನೈತಿಕವಾಗಿ ಹೇಸಿಗೆ ಅಥವಾ ರಾಜಕೀಯ ಆಕ್ರೋಶಗಳ್ಯಾವುವೂ ಇಲ್ಲದೆ ವ್ಯವಸ್ಥಿತವಾಗಿ ಘಟಿಸುವಂತಹ ಮಾನವೀಯತೆಯ ಮೇಲಿನ ಅಪರಾಧಗಳು ಸಾಮಾಜಿಕವಾಗಿ ಅಂಗೀಕೃತ ವಾಗಿ ದಿನನಿತ್ಯದ ಯಾವುದೋ ಮಾಮೂಲು ಸಂಗತಿ ಗಳಂತಾಗಿಬಿಡುವ ಬಗೆಯನ್ನು ಹನ್ನಾ ಅವರು ಈ ಪರಿಕಲ್ಪನೆಯ ಮೂಲಕ ವಿವರಿಸಲು ಯತ್ನಿಸಿದ್ದರು.

ಹೆಣ್ಣಿನ ಮೇಲಿನ ಅತ್ಯಾಚಾರವು ದಿನನಿತ್ಯದ ಮಾಮೂಲು ಸಂಗತಿ ಎಂಬಂತೆ ಪರಿಗಣಿತವಾಗುತ್ತಿರುವುದನ್ನು ಗಮನಿಸಿದಲ್ಲಿ ಹನ್ನಾ ಅವರ ಈ ವಾದ ಎಷ್ಟೊಂದು ಪ್ರಸ್ತುತ ಎಂದೆನಿಸುತ್ತದೆ. ಅತ್ಯಾಚಾರದ ಬಗ್ಗೆ ನಿಯಮಿತವಾಗಿ ನಮ್ಮ ರಾಜಕಾರಣಿಗಳು ಮಾತನಾಡುವ ರೀತಿಯಂತೂ ಈ ಅಪರಾಧದ ಅಮಾನುಷತೆಯನ್ನು ಕುಗ್ಗಿಸಿ ತಪ್ಪಿತಸ್ಥ ಭಾವನೆಯನ್ನೂ ಇಲ್ಲವಾಗಿಸುವಂತಹದ್ದು.

‘ಬಿಲ್ಕಿಸ್ ಅತ್ಯಾಚಾರಿಗಳು ಉತ್ತಮ ಸಂಸ್ಕಾರ ಹೊಂದಿದ ಬ್ರಾಹ್ಮಣರು’ ಎಂದು ಶಾಸಕರೊಬ್ಬರು ಹೇಳುವಂತಹ ಮನಃಸ್ಥಿತಿಗೆ, ಅಸ್ತಿತ್ವದಲ್ಲಿರುವ ಇಂತಹ ಸಂಸ್ಕೃತಿಯು ಕಾರಣ. ಮಾನವೀಯತೆಗೆ, ಮಾನವ ನೋವಿಗೆ ಆಡಳಿತ ವ್ಯವಸ್ಥೆಯು ಕುರುಡುಗಣ್ಣಾಗಿದ್ದಾಗ ಇಂತಹ ಅಪರಾಧಗಳು ಸಹಜವಾಗಿಬಿಡುವ ವಿದ್ಯಮಾನಕ್ಕೆ ಕಾರಣವಾಗುತ್ತದೆ. ವಿವಾಹದೊಳಗಿನ ಅತ್ಯಾಚಾರ ಅಥವಾ ಯಾವುದೋ ಸಂಭ್ರಮಾಚರಣೆ ಗಳು, ಪಾರ್ಟಿಗಳಲ್ಲಿ ನಡೆಯುವ ಅತ್ಯಾಚಾರಗಳು ಅಪರಾಧ ಎನಿಸದೆ ಅದು ಪುರುಷನಿಗೆ ದತ್ತ ಅಧಿಕಾರ ಎನಿಸಿಬಿಡುತ್ತವೆ.

ಅತ್ಯಾಚಾರ ಎಂಬುದು ಎಷ್ಟು ಮಾಮೂಲು ವಿದ್ಯಮಾನ ಎಂದರೆ, ಭಾರತದಲ್ಲಿ ಈಗಲೂ ಪ್ರತೀ 16 ನಿಮಿಷಕ್ಕೆ ಒಬ್ಬಳು ಮಹಿಳೆ ಅತ್ಯಾಚಾರಕ್ಕೆ ಒಳಗಾಗು ತ್ತಿದ್ದಾಳೆ. ಮನೆ, ಶಾಲೆ, ಕಾಲೇಜು, ಬೀದಿ, ಪಾರ್ಕ್, ಪೊಲೀಸ್ ಠಾಣೆ, ಕಡೆಗೆ ಧಾರ್ಮಿಕ ಕೇಂದ್ರಗಳಾದ ಮಠಗಳೂ ಈ ಅಪರಾಧ ಘಟಿಸುವ ನೆಲೆಗಳಾಗಬಹುದು. ಆದರೆ ಇಂತಹ ಅಪರಾಧಗಳಿಗೆ ಸಂವೇದನಾ ರಹಿತರಾಗಿ ಪ್ರತಿಕ್ರಿಯಿಸುವುದಂತೂ ನಿಂತಿಲ್ಲ. ಇಂತಹ ಅಪರಾಧಗಳಿಗೆ ಗುರಿಯಾದ ಮನುಷ್ಯರು ಹಾಗೂ ಅವರ ದುರಂತಗಳು ಗಣನೆಗೇ ಬಾರದೆ ಜಾರಿ ಹೋಗುತ್ತವೆ.

ಅತ್ಯಾಚಾರ ಅಪರಾಧಗಳು ಸಾಮಾನ್ಯವಾದ ಸಂಗತಿಗಳು ಎಂಬಂತೆ ಸಹಜ ವಿದ್ಯಮಾನಗಳಾಗಿ ಸಮಾಜದಲ್ಲಿ ಬೆರೆತುಹೋಗುತ್ತಿರುವುದು ನಾಗರಿಕ ಸಮಾಜದ ನ್ಯಾಯ ವ್ಯವಸ್ಥೆಯ ಕುಸಿತಕ್ಕೆ ದ್ಯೋತಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT